Infinite Thoughts

Thoughts beyond imagination

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ

“ಕಷ್ಟಗಳು ಬಂದೇ ಬರುತ್ತವೆ, ಪ್ರಲಯವೇ ಘಟಿಸುತ್ತದೆ, ಕಾಲ ಕೆಳಗೆ ಬೆಂಕಿಯ ಉರಿ, ತಲೆಯ ಮೇಲೆ ಬಿಸಿಲಿನ ಜ್ವಾಲೆ, ಕೈಯಲ್ಲಿ ಅಗ್ನಿಯನ್ನು ಹಿಡಿದರೂ ಮಂದಹಾಸದೊಂದಿಗೆ ನಡೆಯುವುದಿದೆ, ಒಟ್ಟಿಗೇ ಹೆಜ್ಜೆ ಹಾಕಬೇಕಿದೆ.”

ಹೀಗೆ ಪೌರುಷದ ಕವನ ಬರೆದ ಧೀರ ಕವಿ ಮಾನ್ಯ ಅಟಲ್‌ಜಿಯವರು ಭಾರತೀಯರ ಮನಸಿನಲ್ಲಿ ಶಾಶ್ವತವಾಗಿ ನೆಲೆನಿಂತವರು.  ಕಷ್ಟದ ಹಾದಿಯಲ್ಲಿ ಹೆಜ್ಜೆಹಾಕುವುದನ್ನೇ ಕಾವ್ಯವಾಗಿಸಿದ ಕವಿಯ ಕನಸಿನಲ್ಲಿ ಸುವರ್ಣ ಚಥುಷ್ಪಥ ನಿರ್ಮಾಣದ ಕನಸಿತ್ತು ಎಂದು ನಮಗೆ ತಿಳಿದದ್ದು ಅವರು ಪ್ರಧಾನ ಮಂತ್ರಿಯಾದಾಗ. ಕಲ್ಲು ಮುಳ್ಳುಗಳನ್ನು ತುಳಿಯುತ್ತಿರುವಾಗಲೂ ಮಲ್ಲಿಗೆಯ ಕನಸನ್ನು ಕಾಣುವ ಕವಿಯ ಹೃದಯದಲ್ಲಿ ಭವ್ಯ ಭಾರತದ ಕನಸಿತ್ತು! 

ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಜೋಡಿಸುವ ಸುವರ್ಣ ಚಥುಷ್ಪಥ ದೇಶ ಕಂಡ ಅತಿ ದೊಡ್ಡ ಯೋಜನೆ. ೫೮೪೬ ಕಿಲೊಮೀಟರ್ ಉದ್ದದ ಅಂತಾರಾಷ್ಟ್ರೀಯ ಗುಣಮಟ್ಟದ ವಿಸ್ತಾರವಾದ ಹೆದ್ದಾರಿಗಳು.  ದೆಹಲಿ, ಮುಂಬೈ, ಚೆನ್ನೈ, ಕೋಲ್ಕೊತಗಳನ್ನು ಬೆಸೆದ ಈ ಯೋಜನೆ ದೇಶವನ್ನು ಜೋಡಿಸಿದೆ.  ಅಂತಹ ಉತ್ತಮ ರಸ್ತೆಗಳಿರುತ್ತವೆ ಎಂದು ದೇಶಕ್ಕೆ ಪರಿಚಯವಾದದ್ದು ಆಗ.  ಸ್ವಾತಂತ್ರ್ಯ ಬಂದು ಐದು ದಶಕಗಳ ನಂತರ.....!

ಜಗತ್ತಿನ ಮುಂದುವರಿದ ರಾಷ್ಟ್ರಗಳ ಹದ್ದಿನ ಕಣ್ಣಿನ ಪಹರೆಯನ್ನು ತಪ್ಪಿಸಿ ಪೋಖರಾನ್ ಅಣು ಪರೀಕ್ಷೆ ನಡೆಸಿದರು.  ಅದಕ್ಕಾಗಿ ಅವರು

ಅಮೇರಿಕ ಮುಂತಾದ ದೇಶಗಳ ಆರ್ಥಿಕ ಅಸಹಕಾರವನ್ನು ಎದುರಿಸಲು ಸಿದ್ಧರಾದವರು ಮತ್ತು ದೇಶವನ್ನು ಆ ದಿಕ್ಕಿನಲ್ಲಿ ಸಜ್ಜುಗೊಳಿಸಿದ ಧೀರರು..!!   ‘ಅಣ್ವಸ್ತ್ರವನ್ನು ಬೆಂಬಲಿಸುವ ಇವರು ಯುದ್ಧದಾಹಿಗಳು, ಆರೆಸ್ಸೆಸ್‌ನ ರಹಸ್ಯ ಧೋರಣೆಯನ್ನು ಜಾರಿಮಾಡುವ ಮುಖವಾಡಗಳು’ ಎನ್ನುವ ಪ್ರಗತಿಪರರ ಟೀಕೆಗಳನ್ನು ಎದುರಿಸಿದರು.  ದೃಢವಾಗಿ ಹೇಳಿದರು “ರಾಷ್ಟ್ರದ ಸುರಕ್ಷೆಯ ವಿಚಾರದಲ್ಲಿ ಚೌಕಾಸಿ ಮಾಡುವುದಿಲ್ಲ.  ನಾವಾಗಿ ಯಾರ ಮೇಲೂ ಎರಗುವವರಲ್ಲ ಆದರೆ ನೆರೆಹೊರೆಯವರಿಗೆ ನಮ್ಮನ್ನು ಎದುರಿಸುವ ಧೈರ್ಯ ಬರುವುದಕ್ಕೆ ಅವಕಾಶ ನೀಡುವುದಿಲ್ಲ”.

ಅಟಲ್‌ಜಿ ಯವರಿಗೆ ಕಾವ್ಯವೆಂದರೆ ಕೇವಲ ಕೈಲಾಗದವರ ಪ್ರಾರ್ಥನೆಯಲ್ಲ, ತ್ಯಾಗ ಪೌರುಷಗಳ ನಿರ್ವಚನ, ರಾಷ್ಟ್ರ ಭಕ್ತಿಯ ಯಶೋಗಾಥೆ. 

ಇಂದು ಅಟಲ್‌ಜಿಯವರ ಜನ್ಮದಿನದ ನೆನಪು. ‘ದಕ್ಷ ಆಡಳಿತದಿನ’ದ ಸಂದರ್ಭದಲ್ಲಿ ಅವರ ನೆನಪೂ ನಮಗೆ ಮಾರ್ಗದರ್ಶಕವಾಗಬಲ್ಲದು.

Related posts