ಮಹಾಕವಿ ಕುವೆಂಪು ಜನ್ಮದಿನ
ನಾನು ಅವನ ಮಾತನ್ನು ನಂಬಲಾರದೆ ಹೋದೆ. ಅವನ ಮುಖದ ಕಡೆ ಪುನಃ ದುರದುರನೆ ನೋಡಿದೆ. ಸಂದೇಹ ನಿವೃತ್ತಿಯಾಗಲಿಲ್ಲ. “ನಿಜವಾಗಿಯೂ ನೀನು ಅವನೇ?” ಎಂದು ಕೇಳಿದೆ.
“ಹೌದು, ಚಂದೂ, ಅವನೇ? ಆ ಮಹಾತ್ಮನೇ! ಆ ಪ್ರತಿಭಾಶಾಲಿಯೇ! ಆ ದೇಶಭಕ್ತನೇ! ಆ ಸಮಾಜೋದ್ಧಾರಕನೇ! ಆ ಸದಾ ಬ್ರಹ್ಮಚಾರಿಯೇ!- ನಾನು, ಈ ದುರಾತ್ಮ! ಈ ಬುದ್ಧಿವಿಹೀನ! ಈ ದೇಶದ್ರೋಹಿ! ಈ ಸಮಾಜಘಾತುಕ! ಈ ವಿಷಯಲಂಪಟ!”
ಹೇಳುವಾಗ ಅವನ ದೇಹವೆಲ್ಲಾ ಕಂಪಿಸಿತು. ಕಂಠ ಗದ್ಗದವಾಯಿತು. ನಯನಗಳು ನಕ್ಷತ್ರಗಳಾದುವು. ವದನವು ತೇಜಸ್ವಿಯಾಯಿತು. ವಾಕ್ಯವನ್ನು ಮುಗಿಸಿದ ಮೇಲೆ ಬಿಕ್ಕಿ ಬಿಕ್ಕಿ ಅತ್ತನು. ನನ್ನ ಸಂದೇಹ ನಿವೃತ್ತಿಯಾಯಿತು. ಆದರೆ ಗೆಳೆಯನನ್ನು ಆ ಸ್ಥಿತಿಯಲ್ಲಿ ಕಂಡು ಹೃದಯ ಬೆಂದುಹೋಯಿತು....
ಅವನ ಕೈ ಹಿಡಿದುಕೊಂಡು, ಹಿಂದೆ ಕರೆಯುತ್ತಿದ್ದ ಅಡ್ಡ ಹೆಸರಿನಿಂದ ಸಂಬೋಧಿಸಿ “ಯೋಗಿನ್, ಇದೇನಿದು? ಮುಖದಲ್ಲಿ ಮೊದಲಿನ ತೇಜಸ್ಸಿಲ್ಲ, ಕಣ್ಣುಗಳಲ್ಲಿ ಆಗಿನ ಕಾಂತಿಯಿಲ್ಲ. ನೋಡಿದರೆ ನಿನ್ನ ಗುರುತೇ ಸಿಕ್ಕುವುದಿಲ್ಲ. ನಿನಗೇಕಪ್ಪಾ ಈ ದುರ್ಗತಿ ಬಂತು?” ಎಂದು ಕೇಳಿದೆ.
ಅದಕ್ಕವನು ಮುಖ ಕೆಳಗೆ ತಗ್ಗಿಸಿ “ನಾನು ಕ್ರೈಸ್ತನಾದೆ” ಎಂದನು.
ನನಗೆ ಅತ್ಯಾಶ್ಚರ್ಯವಾಯಿತು. ಕ್ರೈಸ್ತ ಪಾದ್ರಿಗಳನ್ನೂ ಕ್ರಿಸ್ತಮತ ಪ್ರಚಾರಕರನ್ನೂ ನಿರ್ಮೂಲ ಮಾಡಬೇಕು ಎನ್ನುತ್ತಿದ್ದವನು ಕ್ರೈಸ್ತನಾದುದು ಹೇಗೆಂದು ನನಗೆ ಗೊತ್ತಾಗಲಿಲ್ಲ.
“ಯೋಗಿನ್, ಕ್ರೈಸ್ತ ಪಾದ್ರಿಗಳ ಬೋಧನೆಗೆ ನೀನೂ ಮರುಳಾದೆಯಾ? ಅವರ ಬಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ನಿನಗೂ ಅಸಾಧ್ಯವಾಯಿತೇ?” ಎಂದೆ.
“ಚಂದೂ, ಬಡಪಾಯಿಗಳ ಬೋಧನೆಗೆ ನಾನು ಮರುಳಾಗುವನೇ! ಆ ಹುಲುಮನುಜರಿಂದ ಏನಾದೀತು?” ಎಂದನು.
“ಪಾದ್ರಿಗಳಲ್ಲದಿದ್ದರೆ ಕ್ರಿಸ್ತನಾಗಿರಬೇಕು..... ನಿನ್ನನ್ನು ಕ್ರೈಸ್ತನನ್ನಾಗಿ ಮಾಡಿದವನು! ಕ್ರಿಸ್ತನ ಆದರ್ಶವೇ ಅತ್ಯುತ್ತಮವಾದುದೆಂದು ಮನಗಂಡೆಯೇನು?” ಎಂದೆನು.
“ಏನೂ ಚಂದೂ, ಹೀಗೆನ್ನುವೆ? ವೇದಾಂತ ಕೇಸರಿಯ ಗರ್ಜನೆಯ ಮುಂದೆ ಕ್ರಿಸ್ತನ ಕೇಕೆಯಂತೆ!” ಎಂದನು. ಅವನ ಹಿಂದಿನ ಗರ್ವ ಸುಳಿಸುಳಿದು ಅಡಗಿತು.
“ಹಾಗಾದರೆ ನೀನು ಕ್ರೈಸ್ತನಾದುದು ಏಕೆ? ಜಾತಿಗೆ ಸೇರಿಸಿದವರು ಯಾರು?”
ಅದಕ್ಕವನು ದೈನ್ಯಭಾವದಿಂದ ಹೇಳಿದನು: “ಚಂದೂ, ನಾನು ಕ್ರೈಸ್ತನಾದ ರಹಸ್ಯ ಬೇರೆ! ನನ್ನನ್ನು ಕ್ರೈಸ್ತಜಾತಿಗೆ ಸೇರಿಸಿದ್ದು ಕ್ರಿಸ್ತನಲ್ಲ, ಪಾದ್ರಿಯ ಮಗಳು!”
ಅವನ ಕತೆಯನ್ನು ಇನ್ನೂ ವಿಶದವಾಗಿ ತಿಳಿಯಬೇಕೆಂದು ಇಚ್ಛಿಸಿ “ಅದೇನು ಸಂಗತಿ, ಯೋಗಿನ್?” ಎಂದೆ.
ಅಷ್ಟರಲ್ಲಿಯೆ ಮೋಟಾರು ಕೂಗಿತು. ಜನಗಳೆಲ್ಲ ಮುಂದೆ ಬಂದರು. ಮೋಟಾರು ಹೊರಡುವ ಸಮಯವಾಯಿತು. ಅವನಿಗೆ ನನ್ನ ವಿಳಾಸ ಕೊಟ್ಟು, ಕಾಗದದಲ್ಲಿ ವಿಷಯವೆಲ್ಲವನ್ನೂ ತಿಳಿಸುವಂತೆ ಹೇಳಿದೆ. ಅವನೂ ಒಪ್ಪಿದ. ಅವನ ವಿಳಾಸವನ್ನೂ ತೆಗೆದುಕೊಂಡೆ.
ಹೊರಡುವಾಗ “ಯೋಗಿನ್, ದೇವರು ನಡೆಸಿದರೆ ಮುಂದೆ ಎಲ್ಲ ಸುಖವಾಗುತ್ತದೆ. ನೀನಿನ್ನೂ ವೇದಾಂತಿ. ವೇದಾಂತಿಗೆ ವಿನಾಶವಿಲ್ಲ! ನಾನು ನಿನಗೆ ಸಹಾಯ ಮಾಡುತ್ತೇನೆ. ‘ಶುದ್ಧಿ’ ಇದೆಯಷ್ಟೆ? ನಮಸ್ಕಾರ” ಎಂದು ಕೈಮುಗಿದೆ.
ಅವನೂ ಕೈಮುಗಿದ. ಮೋಟಾರು ತುತ್ತೂರಿ ಊದುತ್ತಾ ವೇಗವಾಗಿ ಸಾಗಿತು. ಅವನು ನಿರಾಶೆಯ ದೃಷ್ಟಿಯಿಂದ ನನ್ನನ್ನೆ ನೋಡುತ್ತಾ ಬೀದಿಯಲ್ಲಿ ನಿಂತಿದ್ದನು. ತುಸು ಹೊತ್ತಿನಲ್ಲಿಯೆ ಕಣ್ಮರೆಯಾದನು. ಆದರೆ ಮನಸ್ಸಿನಿಂದ ಮಾತ್ರ ಮರೆಯಾಗಲಿಲ್ಲ"
__________________________
ಮೇಲಿನ ಎಲ್ಲಾ ಸಾಲುಗಳೂ ಕೂಡಾ ಕಥೆಯೊಂದರ ಭಾಗ - ಕಥೆಯ ಹೆಸರು "ಕ್ರಿಸ್ತನಲ್ಲ ಪಾದ್ರಿಯ ಮಗಳು".... ಈ ಕಥೆ ಇರುವ ಕಥಾ ಸಂಕಲನದ ಹೆಸರು ಸನ್ಯಾಸಿ ಮತ್ತು ಇತರ ಕಥೆಗಳು.... ಈ ಕಥೆಯನ್ನು ಬರೆದ ಕವಿಯೇ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಜೀವನದ ಕಥೆಗಳನ್ನೂ ಬರೆದರು. ಅದೇ ಕವಿ "ಗುರುವಿನೊಡನೆ ದೇವರಡಿಗೆ.." ಎಂಬ ಇನ್ನೊಂದು ಆತ್ಮವೃತ್ತಾಂತ ದಂತ ಪುಸ್ತಕವನ್ನೂ ಬರೆದರು.
ಇದೇ ಕವಿ ೨೩ ಕವನ ಸಂಕಲನಗಳನ್ನೂ, ೧೨ ನಾಟಕಗಳನ್ನೂ, ೯ ಶಿಶು ಸಾಹಿತ್ಯಕೃತಿಗಳನ್ನೂ, ೨ ಕಥಾ ಸಂಕಲನಗಳನ್ನೂ, ೨ ಅದ್ಭುತ ಕಾದಂಬರಿಗಳನ್ನೂ ೧ ಖಂಡ ಕಾವ್ಯವನ್ನೂ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಏಕಮಾತ್ರ ಮಹಾಕಾವ್ಯವನ್ನೂ ರಚಿಸಿದರು. ತಮ್ಮ ಜೀವಮಾನ ಶ್ರೇಷ್ಠ ರಚನೆಯಾದ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದರು! ಈ ಮಹಾಕಾವ್ಯ ಬರೆಯಲು ಕವಿ ಆರಿಸಿಕೊಂಡ ವಿಷಯ ರಾಮಾಯಣ! ಪುರಾಣದ ಈ ಕಥೆಯನ್ನು ಕನ್ನಡದ ಸಾಹಿತ್ಯಾಸಕ್ತ ಓದುಗರಿಗೆ ಅದ್ಭುತ ಕಾವ್ಯವನ್ನಾಗಿಸಿ ರಾಮಾಯಣದ ರಸ ದರ್ಶನವನ್ನು ಮಾಡಿಸಿದ ರಸಋಷಿ ಇವರು...! ನವಕನ್ನಡದ ವಾಲ್ಮೀಕಿಯೆನಿಸಿಕೊಂಡವರು... ವಿಶ್ವಮಾನವತೆಯನ್ನು ಸಾರಿದ ಮಹನೀಯರು... ಕನ್ನಡಿಗರೆಲ್ಲರಿಗೂ ಪ್ರಾತಃಸ್ಮರಣೀಯರು... ಯುಗದ ಕವಿ... ಜಗದ ಕವಿ... ರಾಷ್ಟ್ರ ಕವಿ ... ಹೀಗೆ ಯಾವುದೇ ಬಿರುದು ಕೊಟ್ಟರೂ ಕಡಿಮೆ ಎಂದೆನಿಸುವ ಮಹಾನುಭಾವ .... ನಮ್ಮ ಕುವೆಂಪು ....!!
ಇವತ್ತು ಅವರ ಜನುಮದಿನ. ಭಾರತ ಜನನಿಯ ತನುಜಾತೆ, ನಮ್ಮ ಕರ್ನಾಟಕ ಮಾತೆಯ ಹೆಮ್ಮೆಯ ಕುವರ ಕುವೆಂಪು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತರೇ ..... ಅವರ ವಿಚಾರಗಳಿಗೆ ಸಾವಿಲ್ಲ... ಅವರ ಕೃತಿಗಳ ಘನತೆಗೆ ಕುಂದಿಲ್ಲ... ಅವರ ಕೀರ್ತಿ ಯಾವತ್ತಿಗೂ ಅಜರಾಮರವೇ.....
ಆದರೆ...
ಇತ್ತೀಚೆಗೆ ಕೆಲ ವಿಚಾರವ್ಯಾಧಿಗಳು ತಾವು ಹೊರಹಾಕುವ ಹೊಲಸಿನ ಮಧ್ಯೆ ಕುವೆಂಪುರನ್ನು ಎಳೆತಂದು ಕೂರಿಸುವ ಚಾಳಿ ಬೆಳೆಸಿಕೊಂಡಿದ್ದಾರೆ... ಹಿಂದೂ ಧರ್ಮವನ್ನು, ಧಾರ್ಮಿಕ ನಂಬಿಕೆಗಳನ್ನು ಹೀಗಳೆಯುವ, ಪುರಾಣಗಳನ್ನೂ ಹಿಂದೂ ದೇವರುಗಳನ್ನೂ ಹೀಯಾಳಿಸುವ ತಮ್ಮ ತುರಿಕೆಗೆ ಕುವೆಂಪುರನ್ನು ಸಾಕ್ಷಿಯಾಗಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ..!! ಕುವೆಂಪು ಹಿಂದೂ ಧರ್ಮದ ದ್ವೇಷಿ, ಕುವೆಂಪು ನಾಸ್ತಿಕ, ಕುವೆಂಪು ಬ್ರಹ್ಮದ್ವೇಷಿ, ಕುವೆಂಪು ಎಡಪಂಥೀಯ ವಿಚಾರವಾದಿ ಅಂತೆಲ್ಲ ಬಿಂಬಿಸುವ ಹುನ್ನಾರ ನಡೆಸುತ್ತಿದ್ದಾರೆ... ಜಗದ ಕವಿಗೆ ಜಾತಿಯನ್ನು ಜೋತು ಹಾಕುತ್ತಿದ್ದಾರೆ...
ರಾಷ್ಟ್ರ ಕವಿಯೆನಿಸಿದ ರಸಋಷಿಯ ಘನತೆಗೆ ಇಂಥ ಎಡಬಿಡಂಗಿಗಳ ಆಟಾಟೋಪದಿಂದ ಧಕ್ಕೆಯಾಗಲಾರದು. ತಿರುಚು ಸಿದ್ಧಾಂತದ ತಿಪ್ಪೆಗುಂಡಿಯೊಳಗೆ ಅದೆಷ್ಟೇ ತಿಪ್ಪರಲಾಗ ಹಾಕಿದರೂ ವಿಶ್ವಮಾನವ ಕುವೆಂಪುವಿನ ಮೇರು ವ್ಯಕ್ತಿತ್ವಕ್ಕೆ ಚ್ಯುತಿ ಉಂಟಾಗದು.
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ !
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ !
ಅಂತ ಬಿನ್ನವಿಸಿಕೊಂಡ ಕರುನಾಡ ವಾಲ್ಮೀಕಿ ಕುವೆಂಪು ಅವರ ನೂರಾ ಹದಿನಾಲ್ಕನೆಯ ಜನುಮ ದಿನದ ಈ ಶುಭಾವಸರದಲ್ಲಿ ಆ ಮಹಾನ್ ಚೇತನವನ್ನು ನತಮಸ್ತಕನಾಗಿ ಸ್ಮರಿಸುತ್ತೇನೆ .... !