Infinite Thoughts

Thoughts beyond imagination

ಡಾ.ಅಂಬೇಡ್ಕರ್ ಇದ್ದಿದ್ದರೆ ತಲಾಖ್ ಇರುತ್ತಿರಲಿಲ್ಲ....!

ಡಾ.ಅಂಬೇಡ್ಕರ್ ಇದ್ದಿದ್ದರೆ ತಲಾಖ್ ಇರುತ್ತಿರಲಿಲ್ಲ....!

 

ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಕಾನೂನು ತರಲು ಮುಂದಾದಾಗ ಈ ದೇಶದ ಪ್ರಗತಿಪರರೆನ್ನಿಸಿಕೊಂಡವರು, ಮಹಿಳಾ ವಿಮೋಚನೆಯ ಮುಂಚೂಣಿಯ ನಾಯಕರು ದಿವ್ಯ ಮೌನ ವಹಿಸಿದರು.  ಕೆಲವರು ವೈಯಕ್ತಿಕವಾಗಿ ಸಿಕ್ಕಾಗ ಇದು ಸರಿಯಿದೆ ಎಂದರೂ ಬಹಿರಂಗದಲ್ಲಿ ಹೇಳುವುದಕ್ಕೆ ಹೆದರಿದರು.  ಈ ಹೆದರಿಕೆ ಇವತ್ತಿನದಲ್ಲ. ಬಹು ಹಿಂದಿನಿಂದಲೂ ಅದು ಭಾರತದಲ್ಲಿ ಪ್ರಚಲಿತವಿದೆ.  ‘ಒಬ್ಬ ಸಾಮಾನ್ಯ ಹಿಂದು ಎಂದರೆ ಹೇಡಿ......! ಒಬ್ಬ ಸಾಮಾನ್ಯ ಮುಸ್ಲಿಂ ಎಂದರೆ ಗೂಂಡಾ....!!’ ಎಂದು ಗಾಂಧೀಜಿಯವರೇ ಹೇಳಿದ್ದಾರೆ.  ಆ ಹೇಡಿತನವನ್ನು ಈಗಲೂ ಪ್ರದರ್ಶಿಸುವವರು ಇದ್ದಾರೆ.  ಹಿಂದುಗಳ ನಂಬಿಕೆ, ಶ್ರದ್ಧೆಯ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಬುದ್ಧಿಜೀವಿಗಳೂ, ಪ್ರಗತಿಪರರೂ ಮುಸ್ಲಿಮರ ನಂಬಿಕೆಯ ವಿಷಯದಲ್ಲಿ ಬಾಯಿಬಿಡುವುದಿಲ್ಲ. 

ಗಾಂಧೀಜಿಯವರ ಮಾತನ್ನು ಒಪ್ಪದ ಧೀರರು ಅಂದೂ ಅನೇಕರಿದ್ದರು.  ಅವರಲ್ಲಿ ಅಗ್ರಗಣ್ಯರು ಡಾ. ಬಾಬಾಸಾಹೇಬ ಅಂಬೇಡ್ಕರ್ ಒಬ್ಬರಾಗಿದ್ದರು..!  ಅಸ್ಪೃಶ್ಯತೆಯ ವಿರುದ್ಧ, ಮೂಢನಂಬಿಕೆಗಳ ವಿರುದ್ಧ, ಅಮಾನವೀಯವಾದ ಎಲ್ಲ ಆಚರಣೆಗಳ ವಿರುದ್ಧ ಹೋರಾಡಿದವರು.  ಅವರಿಗೆ ಅದರಲ್ಲಿ ಆಯ್ಕೆಯಿರಲಿಲ್ಲ.  ಅವರು, ಅಧ್ಯಯನ ಅವಲೋಕನ ಅಭಿವ್ಯಕ್ತಿ ಎಲ್ಲದರಲ್ಲೂ ಮುಕ್ತವಾಗಿದ್ದರು.....  ನಿರ್ಭಯರಾಗಿದ್ದರು...!  ಅವರು ಮುಸ್ಲಿಮರಲ್ಲಿರುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬರೆಯುತ್ತ ಮುಸ್ಲಿಂ ಮಹಿಳೆಯರ ಬಗ್ಗೆ ಕನಿಕರ ಪಡುತ್ತಾರೆ. 

“ಇಡೀ ಜಗತ್ತಿನಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿರುವ ವ್ಯಕ್ತಿಯೆಂದರೆ ಅದು ಮುಸ್ಲಿಂ ವಿವಾಹಿತ ಮಹಿಳೆ.  ಆಕೆಗೆ ಯಾವ ಸ್ವಾತಂತ್ರ್ಯವೂ ಇಲ್ಲ.  ಗಂಡನ ತೊತ್ತಿನ ಹೆಣ್ಣಾಕೆ.  ಆತನ ಊಟದ ಬುತ್ತಿ.  ಒಮ್ಮೆ ಮದುವೆಯಾದರೆ ಆಕೆ ಆ ಬಂಧನದಿಂದ ಪಾರಾಗಿ ಬರುವ ಸಾಧ್ಯತೆಯೇ ಇಲ್ಲ.  ಅದೇ, ಗಂಡಿಗೆ ಮೂರು ಬಾರಿ ತಲ್ಲಾಖ್ ಎಂದು ಉಚ್ಚರಿಸಿದರೆ ಹೆಂಡತಿಯಿಂದ ಬಿಡುಗಡೆ ಸಿಕ್ಕಿಬಿಡುತ್ತದೆ.  ಆಕೆಗೆ ಜೀವನಾಂಶವನ್ನೂ ಕೊಡದೆ ಆತ ಹೊರಗಟ್ಟಬಹುದು.  ಗಂಡಿಗಿರುವ ಈ ವಿಶೇಷ ಸರಳ ಸೌಕರ್ಯ ಹೆಣ್ಣಿಗೆ ಸಿಗಬೇಕಿದ್ದ ಭದ್ರತೆಯ ಭಾವನೆಯನ್ನು ಅಲುಗಾಡಿಸಿಬಿಡುತ್ತದೆ.  ಮುಸ್ಲಿಂ ಮಹಿಳೆ ಅನುಭವಿಸಬೇಕಾದ ಈ ದುರಂತಕ್ಕೂ ಆ ರಿಲಿಜನ್ನಿನ ಬಹುಪತ್ನಿ ವ್ಯವಸ್ಥೆಗೂ ನೇರ ಸಂಬಂಧವಿದೆ” ಎಂದಿದ್ದಾರೆ ಬಾಬಾಸಾಹೇಬರು. 

ನಮ್ಮ ದೇಶದ ಕಾನೂನು ಮಂತ್ರಿಗಳಾಗಿ ಅವರು ಇನ್ನಷ್ಟು ಕಾಲ ಸೇವೆ ಸಲ್ಲಿಸುವಂತಾಗಿದ್ದರೆ ತ್ರಿವಳಿ ತಲಾಖ್ ರದ್ದಾಗಿ ಎಷ್ಟೋ ವರ್ಷಗಳಾಗುತ್ತಿದ್ದವು ಎಂದುಕೊಳ್ಳಬಹುದೇನೊ!  ಅದೂ ಅಷ್ಟು ಸುಲಭವಾಗಿರಲಿಲ್ಲ.  ಏಕೆಂದರೆ ಕಾಂಗ್ರೆಸ್ ಇತ್ತಲ್ಲ....!  ಶಾಬಾನು ಪ್ರಕರಣದಲ್ಲಿ ಸುರ್ಪಿಂ ಕೋರ್ಟ್ ಕೊಟ್ಟ ತೀರ್ಮಾನವನ್ನು ನಿರಸ್ತಗೊಳಿಸಿ ಮುಸ್ಲಿಂ ಮಹಿಳಾ ಕಾನೂನನ್ನು ತಂದಿದ್ದು ಪ್ರಚಂಡ ಬಹುಮತ ಪಡೆದಿದ್ದ ರಾಜೀವ ಗಾಂಧಿಯವರ ಸರಕಾರ.  ದೇಶದ ನ್ಯಾಯಾಂಗ ನೀಡಿದ್ದ ಅಪೂರ್ವ ಅವಕಾಶವನ್ನು ಬಳಸಿಕೊಳ್ಳದೆ ಮುಸ್ಲಿಂ ಮತಾಂಧರಿಗೆ ಸರಕಾರ ಶರಣಾದದ್ದು ಈಗ ಇತಿಹಾಸ.

ಬಾಬಾಸಾಹೇಬರ ವೈಜ್ಞಾನಿಕ ಚಿಂತನೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡಿತ್ತು.  “ಮುಸ್ಲಿಂ ಮಹಿಳೆ ಮತ್ತು ಬುರ್ಕಾ” ಎನ್ನುವ ತಮ್ಮ ಲೇಖನದಲ್ಲಿ ತಮ್ಮ ವಿಚಾರಗಳನ್ನು ವಿಸ್ತಾರವಾಗಿ ಬರೆದಿದ್ದಾರೆ.  “ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸಿ, ರಸ್ತೆಯಲ್ಲಿ ನಡೆಯುವುದು ಯಾವುದೇ ವ್ಯಕ್ತಿ ನೋಡಬಹುದಾದ ಭೀಕರ ದೃಶ್ಯಗಳಲ್ಲೊಂದು.  ಇಂಥ ವಿವಿಕ್ತತೆ ಮುಸ್ಲಿಂ ಮಹಿಳೆಯ ದೈಹಿಕ ರಚನೆಯ ಮೇಲೆ ಹಾನಿಕರ ಪರಿಣಾಮವನ್ನುಂಟುಮಾಡುತ್ತದೆ.  ರಕ್ತಹೀನತೆ, ಕ್ಷಯ ಮತ್ತು ಬಾಯಿಯ ದುರ್ಗಂಧ ಮೊದಲಾದ ರೋಗಗಳಿಗೆ ಸಹಜವಾಗಿ ತುತ್ತಾಗುತ್ತಾರೆ.  ಬೆನ್ನು ಬಾಗಿ, ಮೂಳೆಗಳು ನಿಗರಿ, ಹಸ್ತ ಮತ್ತು ಪಾದಗಳು ಬಿರುಕುಬಿಟ್ಟು ಅವರ ಶರೀರ ಅಂದಗೆಡುತ್ತದೆ.  ಹೃದಯ ಮಿಡಿತದ ವ್ಯತ್ಯಾಸ ಇವರಲ್ಲಿ ಸರ್ವೇ ಸಾಮಾನ್ಯ.  ವಸ್ತಿಕುಹರದ ವಿರೂಪತೆ ಪರಿಣಾಮದಿಂದಾಗಿ ಹೆರಿಗೆ ಸಂದರ್ಭಗಳಲ್ಲಿ ಸಾವು ಸಂಭವನೀಯ ಹೆಚ್ಚಾಗಿರುತ್ತದೆ.  ಬುರ್ಕಾ ಮುಸ್ಲಿಂ ಮಹಿಳೆಯ ಮಾನಸಿಕ ಮತ್ತು ನೈತಿಕ ಸ್ಥೈರ್ಯವನ್ನು ಕುಂಠಿತಗೊಳಿಸುತ್ತದೆ.  ಹೀಗೆ ಆರೋಗ್ಯಕರವಾದ ಸಾಮಾಜಿಕ ಬದುಕಿನಿಂದ ವಂಚಿತವಾದ ಇವರ ಮನಸ್ಸು ನೈತಿಕ ಅಧಃಪತನಕ್ಕೆ ಗುರಿಯಾಗುತ್ತದೆ.  ಹೀಗೆ ಹೊಸ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಉಳಿದುಬಿಡುವುದರಿಂದ ತಮ್ಮ ಮನಸ್ಸನ್ನು ಮನೆಯಲ್ಲಿ ಸಣ್ಣಪುಟ್ಟ ಕಲಹಗಳತ್ತ ಹರಿಬಿಡುತ್ತಾರೆ.  ಇದರ ಪರಿಣಾಮದಿಂದ ಅವರ ನಡೆ-ನುಡಿಯಲ್ಲಿ ಸಂಕುಚಿತ ದೃಷ್ಟಿ ನೆಲೆಯಾಗುತ್ತದೆ.” 

 ಮುಂದುವರಿದು ಅವರು ಬರೆಯುತ್ತಾರೆ “ಬುರ್ಕಾ ಪದ್ಧತಿ ಮತ್ತು ಅದರ ಕೆಡುಕುಗಳು ಭಾರತದ ಕೆಲವು ಭಾಗಗಳಲ್ಲಿ ಹಿಂದುಗಳಲ್ಲಿಯೂ ಕಾಣಸಿಗುತ್ತವೆ.  ಆದರೆ ಮುಸ್ಲಿಮರ ಬುರ್ಕಾ ಪದ್ಧತಿಗೆ ಧಾರ್ಮಿಕ ಪಾವಿತ್ರ್ಯವಿದೆ, ಹಿಂದುಗಳಲ್ಲಿ ಅದಿಲ್ಲದಿರುವುದೇ ಪ್ರಮುಖ ವ್ಯತ್ಯಾಸ.  ಬುರ್ಕಾ ಸಮಸ್ಯೆಯ ಮೂಲ ಏನೇ ಇರಲಿ, ಇದು ಭಾರತೀಯರಿಗಿಂತ ಮುಸ್ಲಿಮರಿಗೆ ತುಂಬ ಗಹನವಾದುದು.  ಇದರಿಂದ ಮುಕ್ತವಾಗುವ ಯಾವುದೇ ಪ್ರಯತ್ನವನ್ನು ಮುಸ್ಲಿಮರು ಮಾಡಿದಂತೆ ತೋರುವುದಿಲ್ಲ.”  (ಆಕರ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು-ಭಾಷಣಗಳು: ಸಂಪುಟ-೮, ಕುವೆಂಪು ಭಾಷಾ ಭಾರತಿ ಪ್ರಕಟಣೆ)

ಹೀಗೆ ಎಲ್ಲ ವಿಷಯಗಳನ್ನೂ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸುತ್ತಿದ್ದ ಅಂಬೇಡ್ಕರ್ ಅವರು ನಮ್ಮ ದೇಶದ ಸರಕಾರದಲ್ಲಿ ಕಾನೂನು ಮಂತ್ರಿಗಳಾಗಿದ್ದರು ಎನ್ನುವುದೇ ಹೆಮ್ಮೆಯ ಸಂಗತಿಯಲ್ಲವೆ?  ಅವರ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತ ಬಂದಿರುವ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳಿಗೆ ಬಾಬಾಸಾಹೇಬರು ಪ್ರತಿಪಾದಿಸಿದ ಈ ವಿಚಾರಗಳ ಬಗ್ಗೆ ಮಾತಾಡುವ ಧೈರ್ಯವೇ ಇಲ್ಲ ಎನ್ನುವುದನ್ನೂ ನಾವು ಎಚ್ಚರಿಕೆಯಿಂದಲೇ ಗಮನಿಸಬೇಕಲ್ಲವೆ?

Related posts