Infinite Thoughts

Thoughts beyond imagination

ಭಾರತ್ ಬಂದ್ ಎಂಬ ತಾಳ ತಪ್ಪಿದ ತಕಧಿಮಿತ...! ಕೆಂಪಂಗಿ ಕೋಡಂಗಿಗಳ ಕೊನೆಯ ಸುತ್ತಿನ ಕುಣಿತ...!

ಭಾರತ್ ಬಂದ್ ಎಂಬ ತಾಳ ತಪ್ಪಿದ ತಕಧಿಮಿತ...! 
ಕೆಂಪಂಗಿ ಕೋಡಂಗಿಗಳ ಕೊನೆಯ ಸುತ್ತಿನ ಕುಣಿತ...!

 

ಒಂದು ಲೆಕ್ಕದಲ್ಲಿ ಇವರನ್ನು ಕೋಡಂಗಿಗಳೆನ್ನುವುದೂ ಕೂಡ ತಪ್ಪೇ... ಯಾಕೆಂದರೆ ಸ್ವಭಾವತಃ ಇವರು ಕ್ರೂರಿಗಳು...ರಕ್ತ ಪಿಪಾಸುಗಳು...! ಹಾಗಾಗಿಯೇ ರಕ್ತ ವರ್ಣದ ಬಾವುಟ ಆಡಿಸುತ್ತಾ ಅಮಾಯಕರ ರಕ್ತ ಹರಿಸುತ್ತಾರೆ..!! ಸಮಾಜವಾದದ ಹೆಸರಲ್ಲಿ ಸ್ವಸ್ಥ ಸಮಾಜದ ರಕ್ತ ಹೀರುವವರು ಇವರು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಕೂಡಲೇ ಆಡಳಿತ ಯಂತ್ರದೊಳಗೆ ನುಸುಳಿಕೊಂಡು, ನೀತಿ ನಿರೂಪಣಾ ವ್ಯವಸ್ಥೆಯೊಳಗೆ ತೆವಳಿಕೊಂಡು, ಶಿಕ್ಷಣ ವ್ಯವಸ್ಥೆಯೊಳಗೆ ತೂರಿಕೊಂಡು, ಕಾರ್ಮಿಕ ಸಂಘಟನೆಗಳನ್ನು ಅಮರಿಕೊಂಡು ಇಷ್ಟು ವರ್ಷಗಳ ಕಾಲ ಜಿಗಣೆಯಂತೆ ರಕ್ತ ಹೀರಿದ ಈ ಕ್ಷುದ್ರ ಸಂತತಿ ಇವತ್ತು ಅವನತಿಯ ಹಾದಿ ಹಿಡಿದಿರುವುದು ಸ್ಪಷ್ಟವಾಗಿಯೇ ಗೋಚರಿಸುತ್ತಿದೆ. ರಾಜಕೀಯವಾಗಿ ಈ ವಿಷವೃಕ್ಷವನ್ನು ಪಶ್ಚಿಮ ಬಂಗಾಳದಲ್ಲಿ ಬುಡ ಸಮೇತ ಉರುಳಿಸಿದ್ದಾಗಿದೆ. ತ್ರಿಪುರಾದಲ್ಲಿ ಬೇರು ಸಮೇತ ಕಿತ್ತೆಸೆದಿದ್ದಾಗಿದೆ. ಇನ್ನು ಚೂರುಪಾರು ಉಳಿದಿರುವುದು ಕೇರಳದಲ್ಲಿ ಮಾತ್ರ. ಸದ್ಯದಲ್ಲೇ ಅಲ್ಲೂ ಸ್ವಚ್ಛತಾ ಕಾರ್ಯ ಚುರುಕಾಗಿ ನಡೆದು ಚುಟುಕಾಗಿ ಮುಗಿಯಲಿದೆ. ಹೀಗೆ ರಾಜಕೀಯವಾಗಿ ಮೂಲೋತ್ಪಾಟನೆಯಾಗುತ್ತಿರುವ ಈ ಬೌದ್ಧಿಕ ಅಪಭ್ರಂಶಗಳು ಇನ್ನೂ ಒಂದಷ್ಟು ಕುಟುಕು ಜೀವ ಹಿಡಿದುಕೊಂಡಿರುವುದು ಕಾರ್ಮಿಕ ಸಂಘಟನೆಗಳ ಮೂಲಕ ಮಾತ್ರ. ಆದರೆ ಮೋದೀಜಿ ಅಧಿಕಾರಕ್ಕೇರಿದ ಬಳಿಕ ಕಾರ್ಮಿಕ ಸಂಘಗಳಲ್ಲೂ ಕೆಂಬಾವುಟ ಹಾರಿಸುವುದು ಕಷ್ಟವಾಗಿಬಿಟ್ಟಿದೆ... ಉಸಿರುಗಟ್ಟತೊಡಗಿದೆ... ಹಾಗಾಗಿಯೇ ಈ ಮಂದಿಯೆಲ್ಲಾ ಒಟ್ಟಾಗಿ, ಹತಾಶರಾಗಿ ಮೋದೀಜಿಯವರ ವಿರುದ್ಧ ಮುಗಿಬೀಳುವ ಕಟ್ಟಕಡೆಯ ಪ್ರಯತ್ನವೋ ಎಂಬಂತೆ ಭಾರತದಾದ್ಯಂತ ಎರಡು ದಿನಗಳ ಮುಷ್ಕರ, ಬಂದ್ ಗೆ ಕರೆಕೊಟ್ಟರು. ಆದರೆ ನಿನ್ನೆ-ಮೊನ್ನೆ ಭಾರತವನ್ನು ಬಂದ್ ಮಾಡಲು ಹೊರಟ ಈ ಕೆಂಪಂಗಿಯ ಧೂರ್ತರು ಕೋಡಂಗಿಗಳಂತಾದರು. ಕೆಲವೊಂದಷ್ಟು ಕಾರ್ಮಿಕ ಸಂಘಟನೆಯ ಮಂದಿ ಕೆಂಪಂಗಿ ಹಾಕಿ ಕೆಂಬಾವುಟ ಆಡಿಸುತ್ತಾ ರಸ್ತೆಗಿಳಿದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಪ್ರಜ್ಞಾವಂತ ಪ್ರಜೆಗಳು ಇವರನ್ನು ಮೂಸಿಯೂ ನೋಡಲಿಲ್ಲ. ಯಾರೂ ಬಾಗಿಲು ಹಾಕಲಿಲ್ಲ, ಹಾಗಾಗಿ ಭಾರತ್ ಬಂದ್ ನಡೆಯಲೇ ಇಲ್ಲ.

 

ಕಮ್ಯುನಿಸಂ ಎಂಬ ಧರಿದ್ರ ಸಿದ್ಧಾಂತದ ಅಡಿಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಸ್ಥಾಪಿಸಿದ ಎಡಚರು ಇಂಥಾ ಸಂಘಟನೆಗಳನ್ನು ಹೆಚ್ಚಾಗಿ ಉಪಯೋಗಿಸಿದ್ದು ಕಾರ್ಖಾನೆಗಳ ಆಡಳಿತ ಮಂಡಳಿಗಳನ್ನು, ಸರಕಾರಗಳನ್ನು ಬ್ಲ್ಯಾಕ್ ಮೇಲ್ ಮಾಡಲಿಕ್ಕಾಗಿಯೇ. ತಮ್ಮ ಕಾರ್ಯ ಸಾಧನೆಗಾಗಿ, ವೈಯುಕ್ತಿಕ ಲಾಭಕ್ಕಾಗಿ ಕಾರ್ಮಿಕ ಸಂಘಟನೆಗಳನ್ನು ಉಪಯೋಗಿಸಿದ ಅಷ್ಟೂ ಕಾರ್ಮಿಕ ನಾಯಕರು ತಾವು ಯಾವತ್ತೂ ಮೈಬಗ್ಗಿಸಿ ಕೆಲಸ ಮಾಡಿದವರೇ ಅಲ್ಲ. ಬದಲಿಗೆ ಬೆವರು ಹರಿಸಿ ದುಡಿದ ಕಾರ್ಮಿಕವರ್ಗವನ್ನೇ ಶೋಷಿಸಿ, ಅವರ ಹಣದಿಂದಲೇ ಗುಪ್ತವಾಗಿ ಐಷಾರಾಮಿ ಜೀವನ ಸಾಗಿಸಿದವರು. ಸ್ಕಾಚ್ ವಿಸ್ಕಿಯ ಗ್ಲಾಸ್ ಕೈಯಲ್ಲಿ ಹಿಡಿದುಕೊಂಡು ಬಡ ಕಾರ್ಮಿಕರ ಕಲ್ಯಾಣದ ಬಗ್ಗೆ ಮಾತನಾಡುವ ಬುದ್ಧಿಜೀವಿಗಳ ವೇಷದಲ್ಲಿರುವ ನಗರ ನಕ್ಸಲರಿಗೂ ಇಂಥಾ ಕಾರ್ಮಿಕ ಸಂಘಟನೆಗಳ ನಾಯಕರಿಗೂ ಗಳಸ್ಯ ಮತ್ತು ಕಂಠಸ್ಯ ಸಂಬಂಧವಿರುವುದು ಗುಟ್ಟಿನ ವಿಷಯವಲ್ಲ.....! ಮೋದೀಜಿಯವರು ಪ್ರಧಾನಿಯಾದ ಮೇಲೆ ಈ ಗುಂಪಿನ ಅಸಹನೆ ಮಿತಿಮೀರಿದೆ. ಹಾಗಾಗಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಈ ಎಡಚ ಎಡಬಿಡಂಗಿಗಳು ಕಾಂಗಿಗಳ ಕೃಪಾಶೀರ್ವಾದದಲ್ಲಿ ಹಲವಾರು ಹೋರಾಟ, ಮುಷ್ಕರ, ಬಂದ್ ಗಳನ್ನೂ ನಡೆಸಿದರೂ, ಹಣಕೊಟ್ಟು ಜನ ಕರೆಸಿ ಮೆರವಣಿಗೆ ಮಾಡಿಸಿದರೂ, ಯಾವುದೂ ದಕ್ಕಲಿಲ್ಲ! ದಲಿತರ, ರೈತರ ಹೋರಾಟಗಳಲ್ಲೂ ಇವರದೇ ಕೆಂಪು ಬಣ್ಣದ ಹೆಜ್ಜೆ ಗುರುತುಗಳಿದ್ದವು... ನೀರು, ಭಾಷೆ, ಜಾತಿ ಮೀಸಲಾತಿ ಹೋರಾಟಗಳ ಹಿಂದೆ ಕೂಡಾ ಕೆಂಪು ಬಣ್ಣದ ನೆರಳುಗಳಿದ್ದವು. ಯಾವ ಕಾರಣಗಳನ್ನು ನೀಡಿ ಮೊನ್ನೆಯ ಕಾರ್ಮಿಕ ಮುಷ್ಕರ ಮತ್ತು ಬಂದ್ ಗೆ ಕರೆ ಕೊಡಲಾಗಿತ್ತೋ ಅದೇ ವಿಷಯಗಳನ್ನು ಹಿಡಿದುಕೊಂಡು ಎರಡು ವರ್ಷಗಳ ಹಿಂದೆಯೂ ಇದೆ ಸಂಘಟನೆಗಳವರು ವಿಫಲ ಮುಷ್ಕರ ಮತ್ತು ಬಂದ್ ನಡೆಸಿದ್ದರು! ಈಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತ್ತೊಮ್ಮೆ ಕೆಂಪಂಗಿಯ ಧೂಳು ಕೊಡವಿ ಎದ್ದುನಿಂತ ಈ ಕೋಡಂಗಿಗಳು ಕೊನೆಯ ಹತಾಶ ಪ್ರಯತ್ನವೆಂಬಂತೆ ಮೋದಿಯವರ ವಿರುದ್ಧ ಅಳಿದುಳಿದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿಕೊಂಡು ಭಾರತವನ್ನೇ ಬಂದ್ ಮಾಡುತ್ತೇವೆ ಅಂತ ಹೊರಟು ಮುಗ್ಗರಿಸಿ ಮಕಾಡೆ ಬಿದ್ದರು..!

 

ಆದರೂ ಈ ಕಮ್ಯುನಿಸ್ಟ್ ಕೋಡಂಗಿಗಳು ಮೋದೀಜಿಯವರು ಕಾರ್ಮಿಕ ವಿರೋಧಿ ಅಂತ ಕೀರಲು ಸ್ವರದಲ್ಲಿ ಕೇಕೆ ಹಾಕಿದರೆ ನಂಬುವವರು ಯಾರು!? ಮೋದೀಜಿಯವರು ಅಧಿಕಾರಕ್ಕೇರಿದ ನಂತರ ಈ ದೇಶದ ಕಾರ್ಮಿಕರಿಗಾಗಿ, ಅವರ ಏಳಿಗೆಗಾಗಿ, ಕಲ್ಯಾಣಕ್ಕಾಗಿ ಮಾಡಿದ ಕೆಲಸಗಳು ಒಂದೇ ಎರಡೇ..? ಅವರು ಪ್ರಧಾನಿಯಾದ ಕೂಡಲೇ ಮೊಟ್ಟ-ಮೊದಲು ಗಮನ ನೀಡಿದ್ದೆ ಕಾರ್ಮಿಕರ ಸಮಸ್ಯೆಗಳ ಕಡೆಗೆ... 


 • ಕಾರ್ಮಿಕರ ಭವಿಷ್ಯ ನಿಧಿ (ಪಿ. ಎಫ್ ) ಎಂಬುದು ಗೊಂದಲಗಳ ಗೂಡಾಗಿತ್ತು. ಓರ್ವ ಕಾರ್ಮಿಕ ತಾನು ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಭವಿಷ್ಯ ನಿಧಿಯ ಹಣವನ್ನು ಪಡೆಯಲು ಬಹಳ ಕಷ್ಟ ಪಡಬೇಕಿತ್ತು. ಹೊಸ ಕೆಲಸಕ್ಕೆ ಸೇರಿದಾಗ ಮತ್ತೊಮ್ಮೆ ಹೊಸ ಭವಿಷ್ಯನಿಧಿಯ ಖಾತೆ ಶುರುವಾಗುತ್ತಿತ್ತು. ಹಾಗಾಗಿ ಹಿಂದೆ ಇದ್ದ ಖಾತೆಯಲ್ಲಿ ಜಮಾ ಆದ ಹಣ ಪಡೆಯಲು ತೊಂದರೆಯಾಗಿ ಇಡೀ ದೇಶದಲ್ಲಿ ಇಪ್ಪತ್ತೇಳು ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಭವಿಷ್ಯನಿಧಿ ಯಾರೂ ಪಡೆಯುವವರಿಲ್ಲದೆ ಹಾಗೆಯೇ ನಿರುಪಯುಕ್ತವಾಗಿ ಬಿದ್ದುಕೊಂಡಿತ್ತು. ನ್ಯಾಯವಾಗಿ ಬೆವರು ಹರಿಸಿ ದುಡಿದ ಕಾರ್ಮಿಕರಿಗೆ ಸಿಗಬೇಕಿದ್ದ ಈ ಭಾರೀ ಪ್ರಮಾಣದ ಹಣದ ವಿಲೇವಾರಿ ಮಾಡಲು ಯಾವುದೇ ಸರಕಾರಗಳಾಗಲೀ, ಕಾರ್ಮಿಕ ಸಂಘಟನೆಗಳಾಗಲೀ ಪ್ರಯತ್ನವನ್ನೇ ಪಟ್ಟಿರಲಿಲ್ಲ. ಮೋದೀಜಿಯವರು ಬಂದ ಮೇಲೆ ಇದನ್ನು ಸರಿಪಡಿಸಿದರು...ಭವಿಷ್ಯನಿಧಿ ಖಾತೆಗಳನ್ನು ಡಿಜಿಟಲೀಕರಣಗೊಳಿಸಿದರು. ಯಾವುದೇ ಕಾರ್ಮಿಕ ಯಾವುದೇ ಸಂಸ್ಥೆ ತೊರೆದು ಇನ್ನೊಂದು ಸಂಸ್ಥೆಗೆ ಹೋಗಲಿ, ಆತನ ಭವಿಷ್ಯನಿಧಿಯ ಖಾತೆ ಬದಲಾಗದೆ ಹಳೆಯ ಖಾತೆಯೇ ಮುಂದುವರಿದು ಕೆಲಸ ಬದಲಿಸಿದರೂ ಭವಿಷ್ಯ ನಿಧಿ ಆತನ ಕೈತಪ್ಪದಂತೆ ಮೋದೀಜಿ ಮಾಡಿದರು . 

 • ಕಾರ್ಮಿಕರೀಗ ತಮ್ಮ ಭವಿಷ್ಯನಿಧಿಯನ್ನು ಪಡೆಯಲು ಕಚೇರಿಗಳಿಗೆ ಹೋಗಬೇಕಾದ ಪ್ರಮೇಯವೇ ಇಲ್ಲ. ಹಣವನ್ನು ಆನ್ ಲೈನ್ ಮೂಲಕವೇ ಪಡೆಯಬಹುದು. ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಆಡಳಿತ ವರ್ಗದವರ ಬಳಿ ತಮ್ಮ ಭವಿಷ್ಯನಿಧಿಯ ಬಿಡುಗಡೆಗಾಗಿ ಅಂಗಲಾಚಬೇಕಾದ ಅಗತ್ಯವೇ ಈಗಿಲ್ಲ. ಇದರ ಬಗ್ಗೆ ಯಾವ ಕಾರ್ಮಿಕ ನಾಯಕನೆನಿಸಕೊಂಡ ಕೆಂಪಂಗಿ ಕೆಂಪನು ಅದುವರೆಗೂ ಏನನ್ನೂ ಮಾಡಿರಲೇ ಇಲ್ಲ. 
  ಮೋದೀಜಿ ಅಧಿಕಾರಕ್ಕೆ ಬಂದ ಕೂಡಲೇ ಅಂದರೆ ತಾರೀಕು ೨೦೧೪ ರಲ್ಲೇ ಕಾರ್ಮಿಕ ಭವಿಷ್ಯನಿಧಿ ಗೆ ಇದ್ದ ಮಾಸಿಕ ಮಿತಿಯನ್ನು ಆರೂವರೆ ಸಾವಿರದಿಂದ ಹದಿನೈದು ಸಾವಿರಕ್ಕೆ ಏರಿಸಿದ್ದರು...! ಆದರೂ ಕಾರ್ಮಿಕ ಸಂಘಟನೆಗಳ ಎಡಬಿಡಂಗಿ ಕೆಂಪಂಗಿ ಖದೀಮರು ೨೦೧೬ ರಲ್ಲಿ ದೇಶವ್ಯಾಪಿಯಾಗಿ ಕಾರ್ಮಿಕರನ್ನು ಮೋದೀಜಿಯವರ ವಿರುದ್ಧ ಎತ್ತಿ ಕಟ್ಟಿದರು...! 

 • ಕೃಷಿ ಕಾರ್ಮಿಕರಲ್ಲದ ಕೌಶಲ್ಯ ರಹಿತ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಿಂದಿನ ಕಾಂಗ್ರೆಸ್ ಸರಕಾರವಿದ್ದಾಗ ದಿನಕ್ಕೆ ಕನಿಷ್ಠ ದಿನಗೂಲಿಯಾಗಿ ರೂ ೨೪೬ ರಂತೆ ನಿಗಧಿ ಮಾಡಲಾಗಿತ್ತು. ಮೋದೀಜಿಯವರು ಒಂದು ವರ್ಷದಲ್ಲೇ ಈ ಕನಿಷ್ಠ ದಿನಗೂಲಿಯನ್ನು ರೂ ೩೫೦ಕ್ಕೆ ಹೆಚ್ಚಿಸಿದರು...! ಕಾಂಗ್ರೆಸ್ ಸರಕಾರವಿದ್ದಾಗ ಎಂಜಲು ತಿಂದುಕೊಂಡು ಆರಾಮವಾಗಿದ್ದ ಕಾರ್ಮಿಕ ನಾಯಕರು, ಕೂಲಿ ಕಾರ್ಮಿಕರಿಗೆ ಕನಿಷ್ಠ ದಿನಗೂಲಿಯನ್ನು ಹೆಚ್ಚು ಮಾಡಿದ ಮೋದೀಜಿಯವರ ವಿರುದ್ಧ ಮುಷ್ಕರ ಮಾಡಿದರು..! 

 • ಕಾರ್ಮಿಕರಿಗೆ ಅವರ ಕುಟುಂಬ ವರ್ಗದವರಿಗೆ ಅರೋಗ್ಯ ರಕ್ಷಣೆಗೆ ಚಿಕಿತ್ಸಾ ವೆಚ್ಚ ಭರಿಸಲು ಅತ್ಯಗತ್ಯವಾಗಿರುವ ESI (Employees State Insurance) ಸರಕಾರಿ ವಿಮಾ ಸೌಲಭ್ಯಕ್ಕೆ ಇದ್ದ ವೇತನದ ಮಿತಿಯನ್ನು ಮೋದೀಜಿಯವರು ಹೆಚ್ಚಿಸಿದರು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಹದಿನೈದು ಸಾವಿರಕ್ಕಿಂತ ಹೆಚ್ಚು ಮಾಸಿಕ ಸಂಬಳ ಪಡೆಯುವವರಿಗೆ ESI ಸೌಲಭ್ಯ ಇರಲೇ ಇಲ್ಲ. ಮೋದೀಜಿಯವರು ಈ ಮಾಸಿಕ ಮಿತಿಯನ್ನು ರೂ ೨೧ ಸಾವಿರಕ್ಕೆ ಹೆಚ್ಚಿಸಿದರು... ಹಾಗಾಗಿ ಅಸಂಖ್ಯಾತ ಜನ ಕಾರ್ಮಿಕರಿಗೆ ಅವರ ಕುಟುಂಬ ವರ್ಗದವರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರಕತೊಡಗಿತು...! 

 • ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲೇ, ಅಂದರೆ ೨೦೧೫ ರಲ್ಲೇ ನೌಕರರ ಬೋನಸ್ ಕಾಯ್ದೆಗೆ ತಿದ್ದುಪಡಿ ತಂದರು. ನೌಕರರಿಗೆ ಅಲ್ಲಿಯವರೆಗೆ ಸಿಗುತ್ತಿದ್ದ ಕನಿಷ್ಠ ಬೋನಸ್ ಮಿತಿಯನ್ನು ದುಪ್ಪಟ್ಟುಗೊಳಿಸಿ ರೂ ೩,೫೦೦ ದಿಂದ ರೂ ೭,೦೦೦ ಕ್ಕೇರಿಸಿದರು. ೨೦೧೫ ರಿಂದಲೇ ಈ ಹೊಸ ಬೋನಸ್ ನೀತಿ ಜಾರಿಗೆ ಬಂತಾದರೂ ಎಡಬಿಡಂಗಿ ಕಾರ್ಮಿಕ ಮುಖಂಡರು ಮರುವರ್ಷವೇ ಮೋದೀಜಿ ವಿರುದ್ಧ ಮುಷ್ಕರ ಹೂಡಿದರು... !!

 • ಮಾತೃತ್ವ ಮತ್ತು ಶಿಶುಪಾಲನಾ ಸಂಬಳ ಸಹಿತ ರಜೆಯನ್ನು ಹೆಚ್ಚು ಮಾಡಿದ್ದೂ ಒಂದು ಸಾಧನೆಯೇ... ಇಬ್ಬರು ಮಕ್ಕಳವರೆಗೆ ಆರು ತಿಂಗಳ ಸಂಬಳ ಸಹಿತ ರಜೆ ಮತ್ತು ೭೩೦ ದಿನಗಳ ಸಂಬಳ ರಹಿತ ರಜೆಯನ್ನು ಕೇಂದ್ರ ಸರಕಾರದ ನೌಕರರಿಗೆ ಜಾರಿ ಮಾಡಿದ ಮೋದಿ ಸರಕಾರ, ಖಾಸಗಿ ಸಂಸ್ಥೆಗಳಲ್ಲೂ ಕಡ್ಡಾಯ ಮಾತೃತ್ವ ರಜೆಯನ್ನು ಘೋಷಿಸಿದೆ...! ಖಾಸಗಿ ಮಹಿಳಾ ನೌಕರರಿಗೆ ಆರು ತಿಂಗಳ ಮಾತೃತ್ವ ರಜೆ, ಮತ್ತು ಇದಕ್ಕಾಗಿ ಕಳೆದ ವರ್ಷ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಗತ್ತಿನಲ್ಲೇ ಅತ್ಯಂತ ದೀರ್ಘಾವಧಿ ಸಂಬಳ ಸಹಿತ ಮಾತೃತ್ವ ರಜೆ ನೀಡುವ ಮೊದಲ ದೇಶ ಎಂಬ ಖ್ಯಾತಿಗೂ ಪಾತ್ರವಾಯಿತು. ಖಾಸಗಿ ಸಂಸ್ಥೆಗಳಿಗೆ ಇದರಿಂದ ಆಗುವ ನಷ್ಟವನ್ನು ತುಂಬಿಕೊಡುವ ಬಗ್ಗೆಯೂ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ. ತಂದೆಗೂ ಪಿತೃತ್ವ ರಜೆ ದೊರಕಿಸುವ ಕಾನೂನು ಬಂತು..! 

 • ನೌಕರರಿಗೆ ಸಿಗುವ ಗ್ರಾಚುಯಿಟಿ ಹಣಕ್ಕೆ ಹಿಂದೆ ಹತ್ತು ಲಕ್ಷ ರೂಪಾಯಿ ಗರಿಷ್ಟ ಮಿತಿಯಿತ್ತು. ಅದನ್ನು ನಮ್ಮ ಕೇಂದ್ರ ಸರಕಾರ ಹಳೆಯ ಕಾಯ್ದೆಗೆ ತಿದ್ದುಪಡಿ ತಂದು ರೂ ಇಪ್ಪತ್ತು ಲಕ್ಷಕ್ಕೇರಿಸಿದೆ...! ಏಳನೆಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ಮೋದೀಜಿಯವರು ರೂ ಇಪ್ಪತ್ತು ಲಕ್ಷದ ವರೆಗಿನ ಗ್ರಾಚುಯಿಟಿ ಹಣಕ್ಕೆ ಆದಾಯ ತೆರಿಗೆ ಅನ್ವಯವಾಗುವುದಿಲ್ಲ ಅನ್ನುವ ಕಾನೂನು ತಂದರು. ಆದರೂ ಕೆಂಪಂಗಿ ಭೂತಗಳು ತಮ್ಮ ನರ್ತನ ಮುಂದುವರಿಸಿದವು...! 

 • ನಿವೃತ್ತರಿಗೆ ಕನಿಷ್ಠ ನಿವೃತ್ತಿ ವೇತನ ಸಿಗಲು ಕೂಡಾ ನ್ಯಾಷನಲ್ ಪೆನ್ಶನ್ ಸ್ಕೀಮ್ ನಲ್ಲಿ ತಿದ್ದುಪಡಿ ಮಾಡಿ ಕನಿಷ್ಠವೆಂದರೂ ಒಂದು ಸಾವಿರ ಪಿಂಚಣಿ (ಪಿಂಚಣಿ ನಿಧಿಯಲ್ಲಿ ಕೊರತೆಯಿದ್ದರೂ ಕೂಡ) ಸಿಗುವಂತೆ ಕಾನೂನು ತಿದ್ದುಪಡಿ ಮಾಡಲಾಯಿತು. ಅಷ್ಟೇ ಅಲ್ಲ ಈ ಕನಿಷ್ಠ ಮಿತಿಯನ್ನು ಸದ್ಯದಲ್ಲೇ ರೂ. ಎರಡು ಸಾವಿರಕ್ಕೇರಿಸಿ ಬಳಿಕ ಅದನ್ನು ರೂ. ಐದು ಸಾವಿರಕ್ಕೇರಿಸುವ ಗುರಿಯನ್ನೂ ಹೊಂದಲಾಗಿದೆ..! ಕೆಂಪಂಗಿ ಕೋಡಂಗಿಗಳು ಮುಖ ಮುಚ್ಚಿಕೊಂಡು ಕೂತಿವೆ...!
  ಕೇಂದ್ರ ಸರಕಾರಿ ನೌಕರರು ವಸತಿ ಅಥವಾ ಮನೆಕಟ್ಟಲು ಭೂಮಿ ಖರೀದಿಸುವುದಕ್ಕೆ ಇದ್ದ ಮಿತಿಯನ್ನು ರೂ. ಏಳೂವರೆ ಲಕ್ಷದಿಂದ ಏಕಕಾಲಕ್ಕೆ ರೂ ಇಪ್ಪತ್ತೈದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರ ಬಗ್ಗೆ ಕೆಂಪಂಗಿಗಳು ಎಷ್ಟು ಮಂದಿ ನೌಕರರಿಗೆ ಈ ವಿಷಯ ಮುಟ್ಟಿಸಿದ್ದಾರೆ..?

 • ಕೇಂದ್ರ ಸರಕಾರೀ ನೌಕರರಿಗೆ ಏಳನೆಯ ವೇತನ ಆಯೋಗದ ಅನ್ವಯ ಸಂಬಳದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಇದೇ ನೀತಿಯನ್ನು ರಾಜ್ಯ ಸರಕಾರಗಳೂ ಈಗ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ..! ಈ ಏರಿಕೆ ಬಗ್ಗೆ ಆ ಕಮ್ಮಿ-ನಿಷ್ಠೆ ಹೊಂದಿರುವ ನಾಯಕರು ಇದುವರೆಗೂ ಚಕಾರವೆತ್ತಿಲ್ಲ! 

 

 • ಇದು ಕೇವಲ ಪ್ರಮುಖ ಅಂಶಗಳು ಮಾತ್ರ ... ಕಾರ್ಮಿಕರ ಕಲ್ಯಾಣಕ್ಕಾಗಿ ಮೋದೀಜಿಯವರ ನೇತೃತ್ವದ ಸರಕಾರ ತೆಗೆದುಕೊಂಡ ಕ್ರಾಂತಿಕಾರಿ ಕ್ರಮಗಳು ಅಸಂಖ್ಯ! ಇಷ್ಟೆಲ್ಲವನ್ನೂ ಕಾರ್ಮಿಕರಿಗಾಗಿ ಮತ್ತು ಅವರ ಕುಟುಂಬ ವರ್ಗದವರ ಕಲ್ಯಾಣಕ್ಕಾಗಿ ಮಾಡಿರುವ ಮೋದೀಜಿಯವರ ಕಾರ್ಮಿಕ ಪರ ನೀತಿಯನ್ನು ನೋಡಿ ಕಂಗಾಲಾದ ಕಾಂಗಿಗಳು ಮತ್ತು ಎಡಬಿಡಂಗಿ ಕಮಂಗಿಗಳು ವಿಲವಿಲ ಅಂತ ಒದ್ದಾಡಿ ಹೋದವು. ಇಷ್ಟು ವರ್ಷಗಳ ಕಾಲ ಕಾರ್ಮಿಕರ ಕುತ್ತಿಗೆಗೆ ಕ್ಯಾರೆಟ್ ಕಟ್ಟಿ ಆಸೆ ತೋರಿಸಿಯೇ ತಾವು ಉದ್ಧಾರವಾದ ಕೆಂಪು ಬಾವುಟದ ಕಾರ್ಮಿಕ ನಾಯಕರು ಇನ್ನು ತಮ್ಮ ಆಟ ನಡೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ಅಂತಿಮ ಸುತ್ತಿಗೆ ಸಿದ್ಧರಾದರು. ಎಲ್ಲಾ ಕಡೆಯೂ ಬೇರು ಬುಡ ಕಿತ್ತು ಹೋಗುತ್ತಿರುವ ಸಂದರ್ಭದಲ್ಲಿ ಅಳಿದುಳಿದ ಕೊತ್ತಲದಂತಿರುವ ಕಾರ್ಮಿಕ ಸಂಘಟನೆಗಳೂ ಎಲ್ಲಿ ಕೈಬಿಟ್ಟು ಹೋಗುತ್ತವೋ ಎಂಬ ಭಯದಿಂದ ಭಾರತ್ ಬಂದ್ ಎಂಬ ಹಳೆಯ ನಾಟಕದ ಹೊಸ ಪ್ರದರ್ಶನ ಶುರು ಮಾಡಿದರು!

ಆದರೆ ... ಜನ ಕಮ್ಯುನಿಸ್ಟರ ಬಣ್ಣ ಅರಿತಾಗಿತ್ತು... ಬಂದ್ ಯಶಸ್ವಿಯಾಗಲೇ ಇಲ್ಲ...!!

ಕೆಂಪಂಗಿಯ ಕೋಡಂಗಿಗಳ ಕೊನೆಯ ಕಂತಿನ ಕುಣಿತ - ಭಾರತ್ ಬಂದ್ ಎಂಬ ತಕಧಿಮಿತಾ ಕೂಡಾ ತಾಳ ತಪ್ಪಿತು....! ಮೋರೆ ಕಪ್ಪಿಟ್ಟಿತು... ಅವಸಾನ ಕಾಲದ ಆಕ್ರಂದನ ಮುಗಿಲು ಮುಟ್ಟಿತು....!

Related posts