Infinite Thoughts

Thoughts beyond imagination

ಕೆಂಪಂಗಿ ಕಪಿಗಳ ಕುತಂತ್ರ ಮತ್ತೆ ಪ್ರಾರಂಭ... !

ಕೆಂಪಂಗಿ ಕಪಿಗಳ ಕುತಂತ್ರ ಮತ್ತೆ ಪ್ರಾರಂಭ... !
 
ಇದು ಇನ್ನು ಪ್ರಾರಂಭವಷ್ಟೇ.... ಇನ್ನು ಮುಂದೆ ಇದರ ವಿರಾಟ ವಿಕಟ ರೂಪ ಪ್ರಕಟವಾಗಲಿದೆ...  
 
ಅನಂತಕುಮಾರ ಹೆಗಡೆ ಎದ್ದದ್ದು, ಕೂತದ್ದು, ನಡೆದದ್ದು, ನಿಂತದ್ದು, ನಕ್ಕದ್ದು, ಮಾತಾಡಿದ್ದು, ಮಾತನಾಡದೇ ಇದ್ದದ್ದು ... ಹೀಗೆ ಎಲ್ಲವನ್ನೂ ವಿವಾದವನ್ನಾಗಿಸುವ ಹುನ್ನಾರವನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗಿದೆ.  ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಂತೂ ಇದು ಪರಾಕಾಷ್ಠೆ ತಲುಪಿತ್ತು.  ಈ ಬಾರಿ ಮತ್ತೆ ಚುನಾವಣೆ ಸಮೀಪಿಸುತ್ತಿದೆ...ಈ ಕೆಂಪರಿವೆಯ ಖದೀಮರಿಗೆ ನನ್ನ ಮುಖ ನೋಡಿದರೇ ಕೆಂಪಿರುವೆ ಕಚ್ಚಿದಂತಾಗುತ್ತದೆ..!  ಹಾಗಾಗಿ ಮತ್ತೆ ಎಡಬಿಡಂಗಿಗಳ ನವರಂಗಿಯಾಟ ಶುರುವಾಗಿದೆ...!
 
ಮೊನ್ನೆಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಮುಂದುವರಿದ ಭಾಗವಾಗಿ ಮುಂದಿನ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಾಗಿ ಕರ್ನಾಟಕದ ಬಿಜೆಪಿಯ ಶಾಸಕರು ಮತ್ತು ಸಂಸದರ ಸಭೆ ದೆಹಲಿಯಲ್ಲಿ ನಡೆಯಿತು.  ಆ ಸಭೆಯಲ್ಲಿ ನಾನೂ ಸಂಸದನ ನೆಲೆಯಲ್ಲಿ ಭಾಗವಹಿಸಿದ್ದೆ.  ಸಭೆಯಿನ್ನೂ ಪ್ರಾರಂಭವಾಗಿರಲಿಲ್ಲ, ಮುಂಚಿತವಾಗಿಯೇ ಹೋಗಿ ಸಭೆಯಲ್ಲಿ ಆಸೀನನಾಗಿದ್ದೆ.  ಈ ಸಭೆಯನ್ನು ಆಯೋಜಿಸಿದ್ದು ಕರ್ನಾಟಕ ರಾಜ್ಯ ಬಿಜೆಪಿಯಾದದ್ದರಿಂದ ಸಹಜವಾಗಿಯೇ ರಾಜ್ಯದ ಹಿರಿಯ ನಾಯಕರೇ ವೇದಿಕೆಯಲ್ಲಿರಬೇಕಿತ್ತು.  ಹಾಗಾಗಿಯೇ ನಾನು ಕೆಳಗಡೆ ವೇದಿಕೆಯ ಮುಂಭಾಗದಲ್ಲಿ ಕುಳಿತದ್ದು.  ಆದರೆ ಅಷ್ಟರಲ್ಲಿ ನನ್ನ ಬಳಿಗೆ ಖುದ್ದಾಗಿ ಬಂದ ನಮ್ಮ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಯಡಿಯೂರಪ್ಪನವರು..
 
"ಅನಂತ ... ನೀನು ಕೇಂದ್ರ ಮಂತ್ರಿಯಾಗಿ ಇಲ್ಲಿ ಕೆಳಗೆ ಯಾಕೆ ಕೂತಿದ್ದೀ... ವೇದಿಕೆ ಮೇಲೆ ಬಾ.." ಅಂತ ಖುದ್ದು ಕರೆದರು.  
 
ರಾಜ್ಯಾಧ್ಯಕ್ಷರೇ ಸೂಚಿಸಿದಂತೆ ನಾನು ವೇದಿಕೆ ಮೇಲೆ ಹೋಗಿ ಕುಳಿತೆ...  ನನಗಿದ್ದ ದೊಡ್ಡ ಅರ್ಹತೆಯೆಂದರೆ ನಾನು ಕೇಂದ್ರ ಸರಕಾರದಲ್ಲಿ ಮಂತ್ರಿ...!  ಆದರೆ ರಾಜಕೀಯವಾಗಿ ನನಗಿಂತ ತುಂಬಾ ದೊಡ್ಡವರಾದ, ರಾಜ್ಯ ವಿರೋಧ ಪಕ್ಷದ ಉಪನಾಯಕರೂ ಆದ, ನಮ್ಮ ಕರ್ನಾಟಕದ ಹಿರಿಯ ದಲಿತ ಮುಖಂಡ ಶ್ರೀ ಗೋವಿಂದ ಕಾರಜೋಳ ಅವರು ಸಭೆಗೆ ಆಗಮಿಸಿದಾಗ ಅವರಿಗೆ ಸೂಕ್ತ ಆಸನ ನೀಡದೆ, ನನಗೆ ವೇದಿಕೆಯ ಮೇಲೆ ಕುಳಿತುಕೊಳ್ಳುವುದು ಕಷ್ಟವೆನಿಸತೊಡಗಿತು.  ಕಾರಣ ವೇದಿಕೆಯಲ್ಲಿ ಆಸನವೆಲ್ಲವು ಭರ್ತಿಯಾಗಿದ್ದವು ಮತ್ತು ಆಗ ನಾನು ಸ್ವತಃ ಶ್ರೀ ಗೋವಿಂದ ಕಾರಜೋಳರಿಗೆ ವೇದಿಕೆಯ ಆಸನ ಬಿಟ್ಟುಕೊಟ್ಟು ಕೆಳಗಿಳಿದು ಬಂದು ಸಭಾಸದಸ್ಯರಿಗೆ ಮೀಸಲಿದ್ದ ಆಸನದಲ್ಲಿ ಸ್ವಯಂ-ಪ್ರೇರಿತನಾಗಿ ಕುಳಿತುಕೊಂಡೆ... 
 
ಅವತ್ತು ನಡೆದದ್ದಿಷ್ಟೇ... 
 
ಆದರೆ ಇಷ್ಟು ಚಿಕ್ಕ ಘಟನೆಗೆ ಒಂದಷ್ಟು ರೆಕ್ಕೆ ಪುಕ್ಕ ಕಟ್ಟಿ, ಒಂದಿಷ್ಟು ಬಣ್ಣ ಮೆತ್ತಿ... ರೂಪಬದಲಿಸಿ ಹಾರಿಬಿಡಲು ಸಿದ್ಧವಾಗಿ ಕೂತಿದ್ದರಲ್ಲಾ ಕೆಲಮಂದಿ... ಅವರಿಗೆ ಒಂದೇ ಏಟಿಗೆ ಎರಡು ಮೂರು ಗುರಿಗಳನ್ನು ಹೊಡೆಯುವ ಕೆಟ್ಟ ಚಾಳಿ.....!  ನಾನೇನು ಮಾತಾಡಿದರೂ... ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ- ಅಪಾರ್ಥ ಕಲ್ಪಿಸಿ, ಅದಕ್ಕೊಂದಿಷ್ಟು ತಮ್ಮ ಕಾಲ್ಪನಿಕ ಲದ್ದಿ ಸೇರಿಸಿ ಸುದ್ದಿ ಮಾಡುವ, panel discussion ನಡೆಸುವ ಇವರಿಗೆ ಇದೊಂದು ಘಟನೆ ಸುಗ್ರಾಸ ಭೋಜನ ಒದಗಿಸಿತು.  ಆದರೆ ಈ ಬಾರಿ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದು ನಡೆದದ್ದರಿಂದ, ಇದರಲ್ಲಿ ರಾಜ್ಯಾಧ್ಯಕ್ಷ ಯಡ್ಯೂರಪ್ಪನವರನ್ನೂ ಎಳೆದು ತರಲಾಯಿತು.  ಪಾಪ ... ನಿಜಕ್ಕಾದರೆ ಕೆಳಗೆ ಕುಳಿತಿದ್ದ ನನ್ನನ್ನು ವೇದಿಕೆಯ ಮೇಲೆ ಕರೆಸಿ ಕೂರಿಸಿದವರೇ ಯಡ್ಯೂರಪ್ಪ.. ಆದರೆ ಅವರೇ ನನ್ನನ್ನು ಅವಮಾನಿಸಿದರು ಅನ್ನೋ ರೀತಿಯಲ್ಲಿ ಸುದ್ದಿ ಹಬ್ಬಿಸಲಾಯಿತು...!  ಇದರಿಂದ ಈ ವಿಘ್ನ ಸಂತೋಷಿ ಎಡಚರು ಎರಡು ರೀತಿಯ ಈಡು ಹೊಡೆದರು.  ಒಂದು, ಅನಂತಕುಮಾರ ಹೆಗಡೆಯನ್ನು ತೇಜೋವಧೆ ಮಾಡುವುದು; ಇನ್ನೊಂದು, ಶ್ರೀ ಯಡ್ಯೂರಪ್ಪನವರ ಇಮೇಜನ್ನೂ ಹಾಳುಮಾಡುವುದು...!  ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ... ಒಳಗೊಳಗೇ ಅವರ ನಾಯಕರ ಮಧ್ಯೆಯೇ ಕಚ್ಚಾಟ ಇದೆ ಅಂತ ತೋರಿಸುವುದು... ರಾಜ್ಯ ರಾಜಕಾರಣದಿಂದ ಹೆಗಡೆಯವರನ್ನು ದೂರವಿಡಲಾಗುತ್ತಿದೆ ಎಂದು ಬಿಂಬಿಸುವುದು...!!!  ಇದು ಇವರ ಹಿಡನ್ ಅಜೇಂಡಾ ಆಗಿತ್ತು.... ಇದರಲ್ಲಿ ಈ ಮಂದಿ ತಕ್ಕ ಮಟ್ಟಿಗೆ ತಮ್ಮ ಕಾರ್ಯ ನಿರ್ವಹಿಸಿದರು..! 
 
ಆದರೆ ಈ ಎಡಚ ಸೋಗಲಾಡಿ ಪತ್ರಕರ್ತರ ಕಪಟ ನಾಟಕಕ್ಕೆ ನಮ್ಮವರೂ ಬಲಿಯಾಗುತ್ತಿರುವುದು ಮತ್ತು ಕೈ ಜೋಡಿಸುತ್ತಿರುವುದು ಮಾತ್ರ ನೋವಿನ ವಿಷಯ.  ಅವತ್ತಿನ ಸಭೆ ಸಾರ್ವಜನಿಕವಲ್ಲ...... ಅದು ಪಕ್ಷದ ಚುನಾವಣಾ ಸಿದ್ಧತೆಯ ಪೂರ್ವಭಾವಿ ಸಭೆ... ತೀರಾ ಆಂತರಿಕ ಸಭೆ... ಅಲ್ಲಿ ಪಕ್ಷದವರಿಗೆ ಬಿಟ್ಟರೆ ಹೊರಗಿನ ಮಂದಿಗಾಗಲೀ, ಮಾಧ್ಯಮದವರಿಗಾಗಲೀ ಪ್ರವೇಶವಿರಲಿಲ್ಲ.  ಹಾಗಾಗಿ ಅಲ್ಲಿ ನಡೆದ ಘಟನೆಯ ವಿವರಗಳನ್ನು ತಿರುಚಿ ಹೊರಗಿನವರಿಗೆ ತಲುಪಿಸಿದ್ದು ಯಾರು..?  ನಾನು ನಮ್ಮ ಪಕ್ಷದ ಹಿರಿಯ ದಲಿತ ಮುಖಂಡ ಶ್ರೀ ಗೋವಿಂದ ಕಾರಜೋಳ ಅವರಿಗೆ ವೇದಿಕೆಯ ಮೇಲಿನ ಆಸನ ಬಿಟ್ಟುಕೊಟ್ಟು ಕೆಳಗೆ ಬಂದೆ ಎಂಬ ವಾಸ್ತವವನ್ನು, ನೆಗೆಟಿವ್ ರೀತಿಯಲ್ಲಿ ಈ ಕೆಂಪಂಗಿ ಅಕ್ಷರ ವೈಭಿಚಾರಿಗಳಿಗೆ ತಿರುಚಿ ತಿಳಿಸಿದ್ದು ಯಾರು..?  ಅದರಲ್ಲಿ ಶ್ರೀ ಯಡ್ಯೂರಪ್ಪನವರ ಹೆಸರನ್ನೂ ಎಳೆತಂದು ಅವರಿಗೂ ಮುಜುಗರ ತರಿಸುವಂತೆ ವರದಿ ಬರಲು ಕಾರಣವಾದದ್ದು ಯಾರು..?  ಈ ವಿಜ್ಞ-ಸಂತೋಷಿಗಳು ಸಹ ಈ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಇನ್ನಷ್ಟು ತಮ್ಮ ಗೊಬ್ಬರ ಪಸರಿಸಲಿದ್ದಾರೆ...!  ಎಚ್ಚರ...! 
 
ಇಂಥದ್ದೇನಾದರೂ ನಡೆಯುತ್ತದಾ ಎಂದು ರಣ ಹದ್ದಿನ ರೀತಿ ಕಾದು ಕುಳಿತು ಸುದ್ದಿ ಹೆಕ್ಕಿ ಅದನ್ನು ತಿರುಚುವವರು ಹೇರಳವಾಗಿ ನಮ್ಮಲ್ಲಿ ಇದ್ದೇ ಇರುತ್ತಾರೆ... ರಾಜ್ಯ ನಾಯಕರ ನಡುವೆಯೇ ವೈಮನಸ್ಯ ತಂದಿಟ್ಟು, ಅನ್ಯೋನ್ಯ ಸಂಬಂಧಕ್ಕೆ ಹುಳಿ ಹಿಂಡಿ ಮಜಾ ತೆಗೆದುಕೊಳ್ಳುವವರೂ ಸದಾ ಇದ್ದೆ ಇರುತ್ತಾರೆ!  ಇನ್ನಂತೂ...  ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಂತೂ ಇಂಥಾ ನೂರೆಂಟು ಕಪಟ ನಾಟಕಗಳು ನಡೆಯುತ್ತಿರುತ್ತವೆ... ಪರಿವಾರ ಹಾಗು ಬಿಜೆಪಿಯ ಕಾರ್ಯಕರ್ತರ ನಡುವೆಯೇ ಸಂಶಯ ಬಿತ್ತುವ, ಅಪನಂಬಿಕೆ ಉಂಟುಮಾಡುವ ಕೆಲಸ ಇನ್ನು ರಭಸದಲ್ಲಿ ನಡೆಯುತ್ತದೆ. 
 
ಆದರೆ ಕಾರ್ಯಕರ್ತರು ಹಾಗು ಅಭಿಮಾನಿಗಳು, ವಿರೋಧಿಗಳ ಈ ರೀತಿಯ ಕುತಂತ್ರದಿಂದ ವಿಚಲಿತರಾಗದೆ, ನಮ್ಮ ಮುಂದಿನ ಗುರಿಯತ್ತ ಗಮನ ಕೇಂದ್ರೀಕರಿಸಿ, ಮುಂಬರುವ ಚುನಾವಣೆಯಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವತ್ತ ತದೇಕಚಿತ್ತರಾಗಿ ಕೆಲಸ ಮಾಡಬೇಕು... ಅದಷ್ಟೇ ನನ್ನ ವಿನಂತಿ!

Related posts