Infinite Thoughts

Thoughts beyond imagination

ತ್ರಿವಿಧ ದಾಸೋಹದ ತ್ರಿವಿಕ್ರಮ ಜಂಗಮ

                                            ತ್ರಿವಿಧ ದಾಸೋಹದ ತ್ರಿವಿಕ್ರಮ ಜಂಗಮ 

ತುಮಕೂರು ಸಿದ್ಧಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದರು ಎನ್ನುವುದು ದುಃಖದ ಸಂಗತಿಯಾದರೂ ಅದು ವಾಸ್ತವ. ನಡೆದಾಡುವ ದೇವರು ನಮ್ಮ ಕಣ್ಣಿಂದ ಮರೆಯಾಗಿದ್ದಾರೆ. ನೂರ ಹನ್ನೊಂದು ವರ್ಷ ಬದುಕಿದ, ಅತ್ಯಂತ ಹಿರಿಯ ಮಗನನ್ನು ಕಳೆದುಕೊಂಡು ದೇಶ ಬಡವಾಗಿದೆ. ಅಕ್ಷರಶಃ ಶತಮಾನವನ್ನು ಮೀರಿ ಬಾಳಿದ ಆ ಮಾಗಿದ ಚೇತನಕ್ಕೆ ಶತ ಶತ ನಮನ.

ಮನುಷ್ಯ, ಪಶುತ್ವದಿಂದ ಮೇಲೇರಲಾರ, ಅವನ ಅಂತಹ ಪ್ರಯತ್ನಗಳೆಲ್ಲ ಡೋಂಗಿತನದ್ದೆಂದು ಹೇಳ ಹೊರಟಿರುವ ನಾಸ್ತಿಕ ವಾದಿಗಳ ವಿತಂಡ ವಾದಕ್ಕೆ ಜೀವಂತ ಉತ್ತರವಾಗಿದ್ದರು ಶ್ರೀ ಶಿವಕುಮಾರ ಸ್ವಾಮಿಗಳು. ಶರಣರು ಹೇಳಿದಂತೆ ನಡೆದು ನುಡಿದು ಸತ್ಯವನ್ನೇ ಬದುಕಿದ್ದರು. ಸ್ವಾರ್ಥದಿಂದಾಚೆ ಸಂಯಮದ ಒಂದು ಸುಂದರವಾದ ಬದುಕಿದೆ ಎನ್ನುವುದನ್ನು ಬಾಳಿ ತೋರಿಸಿದರು. ಹಸಿದು ಬಂದವನಿಗೆ ಅನ್ನ, ಆಶ್ರಯ, ಅಕ್ಷರಗಳನ್ನು ನೀಡಿ ತ್ರಿವಿಧ ದಾಸೋಹಿಯಾದರು. ಜ್ಞಾನವನ್ನರಸಿ ಬಂದವರ ಕುಲ ಗೋತ್ರಗಳನ್ನು ಕೇಳದೆ, ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಅಧ್ಯಯನಕ್ಕೆ ವ್ಯವಸ್ಥೆ ಮಾಡಿ ನಿಜಾರ್ಥದಲ್ಲಿ ಕುಲಪತಿಗಳಾದರು. ಸುತ್ತಲಿನ ಸಮಾಜದ ಎಲ್ಲರನ್ನೂ ಪ್ರೀತಿಸಿ, ಸಂತೈಸಿ, ಆಶೀರ್ವದಿಸಿ, ಬೆಳೆಸಿ ಮಾತಾಮಯಿಯಾದರು. ಮುಗ್ಧ ಶ್ರದ್ಧಾಳುಗಳಿಗೆ ದಯೆದೋರುವ ಶಿವನೇ ಆದರು.

ಅಧ್ಯಾತ್ಮವೆಂದರೆ ಧೈರ್ಯದ ಬದುಕು. ಸಂನ್ಯಾಸವನ್ನು ಸ್ವೀಕರಿದ ಮೇಲೂ ಕಾಲೇಜು ಶಿಕ್ಷಣವನ್ನು ಮುಂದುವರೆಸಿದ ಧೀರರು ಅವರು. ಕನ್ನಡ, ಸಂಸ್ಕೃತ, ಇಂಗ್ಲೀಷು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದವರು, ಹಿಂದಿಯನ್ನೂ ಬಲ್ಲವರು. ಉದಾರ ಚರಿತರು. ಅವರಿಂದ ಪ್ರಭಾವಿತರಾದ ನಾಡಿನ ಚೇತನಗಳು ಅಸಂಖ್ಯ.  ಆಚರಿಸುವವನಿಂದಾಗಿ ಧರ್ಮ ಉಳಿಯುತ್ತದೆ, ಆಡುವವನಿಂದಾಗಿ ಸತ್ಯ ಉಳಿಯುತ್ತದೆ ಎಂಬ ಪ್ರಾಚೀನ ಉಕ್ತಿಗೆ ಮೂರ್ತರೂಪವಾಗಿದ್ದವರು ಶ್ರೀ ಶಿವಕುಮಾರ ಸ್ವಾಮಿಗಳು.

ಶ್ರೀ ಸ್ವಾಮೀಜಿಯವರು ಲೌಕಿಕ ಬದುಕಿಗಾಗಿ ಹೇಳಿದ ಮಾತೂ ಲೋಕೋತ್ತರ ಮೌಲ್ಯವನ್ನು ಧ್ವನಿಸಿದೆ. “ದೇಹಕ್ಕೆ ಹಸಿವಾದರೆ ಪ್ರಸಾದ, ಮನಕ್ಕೆ ಹಸಿವಾದರೆ ಪ್ರಾರ್ಥನೆ” ಎನ್ನುವ ಅವರ ಮಾತು ಅಮರವಾಣಿ. ಮನುಷ್ಯನಿಗೆ ಹೊಟ್ಟೆ ಬಟ್ಟೆಗಳಿಗಾದರೆ ಸಾಲದು, ಮನಸು ಆತ್ಮಗಳೂ ಹಸಿದಿರುತ್ತವೆ ಎನ್ನುವ ಅಧ್ಯಾತ್ಮದ ಸತ್ಯವನ್ನು ಸರಳ ಭಾಷೆಯಲ್ಲಿ ತಿಳಿಸಿದ ಶರಣರವರು. “ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು ಬಡವರ ರಕ್ತ ಹೀರುವ ಜಿಗಣೆಯಾಗಬಾರದು” ಈ ಮಾತು ಏಕ ಕಾಲದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಎತ್ತರಿಸುತ್ತದೆ, ಸಮಾಜದ ನೆಮ್ಮದಿಯನ್ನೂ ಹೆಚ್ಚಿಸುತ್ತದೆ. “ದೇಶ ಭಕ್ತಿಯಿಲ್ಲದವನು ಜೀವಂತ ಇದ್ದರೂ ಮರಣ ಪ್ರಾಯ” ಎಂದಿದ್ದಾರೆ. ದೇಶ ಭಕ್ತಿಯೇ ಈಶ ಭಕ್ತಿ ಎನ್ನುವ ಪಾಠ ಹೇಳಿದ್ದಾರೆ. ದೇಶ ಭಕ್ತಿಯಿಂದ ದುಡಿಯುತ್ತಿರುವ ಎಲ್ಲರನ್ನೂ ಬೆನ್ನು ತಟ್ಟಿ, ಬಲ ನೀಡಿ ಮುನ್ನಡೆಸಿದ್ದಾರೆ. 

‘ಪ್ರಸಾದ ಕಾಯವ ಕೆಡಿಸಲಾಗದು’ ಎಂಬ ಅಣ್ಣ ಬಸವಣ್ಣನವರ ವಚನದಂತೆ ನೂರಾ ಹನ್ನೊಂದು ವರ್ಷ ಕಾಯವನ್ನು ಕಾಪಾಡಿಕೊಂಡು, ಕಾಯಕ ಗೈದ ಶ್ರೀ ಸ್ವಾಮಿಗಳು ತಮ್ಮ ಕಾರ್ಯಕ್ಷೇತ್ರವನ್ನೇ ಕೈಲಾಸವನ್ನಾಗಿಸಿದವರು. ಚೆನ್ನ ಬಸವಣ್ಣ ತನ್ನೊಂದು ವಚನದಲ್ಲಿ ಹೇಳುತ್ತಾನೆ;

 ಅರ್ಪಿತವ ಮಾಡುವ ಅವಧಾನವು, ಅನ್ಯವ ಸೋಂಕದ ಅವಧಾನವು, 

 ಅರಿಷಡ್ವರ್ಗಂಗಳ ಮುಟ್ಟಲೀಯದವಧಾನದ ಪರಿಯ ನೋಡಾ,

 ಪಂಚಭೂತವೆಂಬ ಭವಿಯ ಕಳೆದು ಪ್ರಸಾದಿಯಾಗಿಪ್ಪ ಪರಿಯ ನೋಡಾ,

 ಪಂಚೇಂದ್ರಿಯಂಗಳ ಗುಣವಳಿದು ಪಂಚವಿಂಶತಿ ತತ್ವದಲ್ಲಿ ಪರಿಣಾಮಿ

 ಕೂಡಲಸಂಗಮದೇವರಲ್ಲಿ ಚೆನ್ನ ಬಸವಣ್ಣ. 

ಈ ವಚನ ನಮ್ಮ ನೆನಪಿನಲ್ಲಿದ್ದರೆ ಶ್ರೀ ಶಿವಕುಮಾರ ಸ್ವಾಮಿಗಳ ಮೂರ್ತಿ ನಮ್ಮ ಮನಸಿನಲ್ಲಿ ನಿತ್ಯ ಮೂಡಿ ಬೆಳಗುತ್ತದೆ. 

  

Related posts