Infinite Thoughts

Thoughts beyond imagination

ಸ್ವತಂತ್ರ ಭಾರತದ ಮೊದಲ ಪ್ರಧಾನಿ, ನೇತಾಜಿ!

ಸ್ವತಂತ್ರ ಭಾರತದ ಮೊದಲ ಪ್ರಧಾನಿ, ನೇತಾಜಿ! 
                                         
ಭಾರತದ ಭಾಗವಾಗಿದ್ದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ೧೯೪೩ರ ಡಿಸೆಂಬರ್ ೩೦ರಂದು ಸ್ವತಂತ್ರ ಭಾರತದ ಮೊದಲ ಸರಕಾರ ಉದಯವಾಗಿತ್ತು.  ‘ಜೈ ಹಿಂದ್’ ಘೋಷದೊಂದಿಗೆ ನೇತಾಜಿ ಸುಭಾಶ್ಚಂದ್ರ ಬೋಸ್‌ರ ನೇತೃತ್ವದಲ್ಲಿ ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತದ ಭೂ ಭಾಗದಲ್ಲಿ ಹೊಸ ಆಡಳಿತ ಆರಂಭವಾಗಿತ್ತು.  ಕೆಲವೇ ದಿನಗಳಲ್ಲಿ ಸ್ವತಂತ್ರ ನಾಣ್ಯ, ಲಾಂಛನಗಳನ್ನೊಳಗೊಂಡ ಸಾರ್ವಭೌಮ ಸರಕಾರವಾಗಿ ವಿಕಾಸಗೊಂಡಿತು.  ಜಗತ್ತಿನ ಹನ್ನೊಂದು ರಾಷ್ಟಗಳು ಅದರ ಅಸ್ತಿತ್ವವನ್ನು ಗೌರವಿಸಿದ್ದವು...!  ಸೂರ್ಯ ಮುಳುಗದ ಸಾಮ್ರಾಜ್ಯ ಎಂದುಕೊಂಡಿದ್ದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಪೂರ್ವ ಕರಾವಳಿಯಲ್ಲಿ ಮೊದಲ ಮುಳುಗನ್ನು ಅನುಭವಿಸಿತು.  ಅಖಂಡ ಭಾರತದ ಮೊದಲ ಪ್ರಧಾನಿಯಾಗಿ ನೇತಾಜಿ ಸುಭಾಶ್ಚಂದ್ರ ಬೋಸ್ ಬ್ರಿಟಿಷ್ ಸತ್ತೆಗೆ ಸವಾಲೆಸಿದಿದ್ದರು. 
 
೧೯೩೮ರಿಂದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸುಭಾಶ್ಚಂದ್ರ ಬೋಸ್‌ರದ್ದು ವೀರ ನಡೆ, ಧೀರ ವ್ಯಕ್ತಿತ್ವ.  ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಇಕ್ಕಟ್ಟಿನಲ್ಲಿತ್ತು. ಅದೇ ಸಂದರ್ಭವನ್ನು ಬಳಸಿಕೊಂಡು ಸಂಪೂರ್ಣ ಕ್ರಾಂತಿಗೆ ಹೋರಾಡಬೇಕೆಂದು ಹೇಳಿದ ಸುಭಾಶರ ಮುಂಧೋರಣೆಯನ್ನೂ, ಕೆಚ್ಚಿನ ಮನೋಭಾವವನ್ನೂ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿರಲಿಲ್ಲ!  ಬ್ರಿಟಿಷರ ಭಜನೆ ಮಾಡುತ್ತ, ಡೊಮೀನಿಯನ್ ಸ್ಟೇಟಸ್‌ಗೆ ಬೇಡಿಕೆ ಇಡುತ್ತಿದ್ದ ಪುಕ್ಕಲರ ಪಕ್ಷದ ಅಧ್ಯಕ್ಷತೆಯನ್ನು ತೊರೆದು ಬೋಸರು ೧೯೩೯ರಲ್ಲಿ ಸ್ವತಂತ್ರರಾದರು...! 
 
“ಸ್ವಾತಂತ್ರ್ಯ ಹೋರಾಟವೆಂದರೆ ಶಕ್ತಿ ಯುಕ್ತಿಗಳ ಆಧಾರದಲ್ಲಿ ವಿರೋಧಿಯನ್ನು ಗೆಲ್ಲುವುದು, ಪ್ರತಿಪಕ್ಷದ ಕರುಣೆಗಾಗಿ ಕೈಯೊಡ್ಡುವುದಲ್ಲ.  ವಿರೋಧಿ; ಮೋಸಗಾರನೂ, ನಯವಂಚಕನೂ ಆದಾಗ ಸಾತ್ವಿಕ ಪ್ರಾರ್ಥನೆಯಿಂದ ಅವನನ್ನು ಗೆಲ್ಲುತ್ತೇವೆ ಎನ್ನುವುದು ಆತ್ಮವಂಚನೆಯಾಗುತ್ತದೆ” ಇದು ನೇತಾಜಿಯವರ ನಿಲುವಾಗಿತ್ತು. 
 
“ನನಗೆ ರಕ್ತವನ್ನು ಕೊಡಿ, ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” 
 
ಎನ್ನುವುದು ಅವರ ಪ್ರಸಿದ್ಧವಾದ ಮಾತು.  ಇಂತಹ ಉಜ್ವಲ ದೇಶ ಭಕ್ತಿಯನ್ನು ಹೊಂದಿದ್ದ, ವೀರ ನೇತಾಜಿ ಕಾಂಗ್ರೆಸ್‌ನಲ್ಲಿ ಎಂತಹ ಸ್ಥಿತಿಯನ್ನು ಎದುರಿಸಿದರು ಎನ್ನುವುದನ್ನು ಹೀಗೆ ಹೇಳಿದ್ದಾರೆ......  
 
“I have to hob nob day and night with scoundrels, mostly” (ರಾತ್ರಿ ಹಗಲು ನಾನು ಆಂಗ್ಯ ಧೂರ್ತರೊಡನೆ ಹೊಡೆದಾಡಬೇಕಾಗಿದೆ, ಹೆಣಗಾಡಬೇಕಾಗಿದೆ- ಮಿತ್ರ ದಿಲೀಪಕುಮಾರ ರಾಯ್ ಅವರಿಗೆ ಬರೆದ ಪತ್ರದಲ್ಲಿ) 
 
ಮುಂದೆ ಗ್ರಹ ಬಂಧನದಲ್ಲಿದ್ದ ನೇತಾಜಿ ಆಳರಸರ ಕಣ್ಣಿಗೆ ಮಣ್ಣೆರಚಿ, ಮಾರು ವೇಷದಲ್ಲಿ ಭಾರತವನ್ನು ಬಿಟ್ಟು ಬರ್ಲಿನ್ ಸೇರಿದರು.  ಜಗತ್ತಿನ ಮುಖ್ಯ ರಾಜಕೀಯ ನೇತಾರರನ್ನು ಬಲ್ಲ ನೇತಾಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಮುಂದಾದರು.  ಹೆಣ್ಣು ಗಂಡುಗಳೆಂಬ ಭೇದವಿಲ್ಲದೆ ಸೈನಿಕರನ್ನು ಸಿದ್ಧಮಾಡಿದರು.  ಅವರ ಸಂಕಲ್ಪ ಅದೆಷ್ಟು ಶಕ್ತಿಯುತವಾಗಿತ್ತೆಂದರೆ ಎಲ್ಲ ಸಂಪತ್ತುಗಳೂ ಒದಗಿ ಬಂದು ಸ್ವಾತಂತ್ರ್ಯ ರಾಷ್ಟ್ರದ ಉದಯವಾಗಿತ್ತು.  ಆದರೆ ಕಾಂಗ್ರೆಸ್ ಅವರ ಪ್ರಯತ್ನವನ್ನು ಗೌರವಿಸಲು ಸಿದ್ಧವಿರಲಿಲ್ಲ!
 
ಸುಭಾಶ್ಚಂದ್ರ ಬೋಸರು ಭಾರತಾಂಬೆಯ ಮೇಲೆ ಪ್ರಮಾಣ ಮಾಡಿ ಸ್ವತಂತ್ರ ಭೂಮಿಯಲ್ಲಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಸುಮಾರು ಮೂರು ವರ್ಷಗಳ ನಂತರ (ಸೆಪ್ಟೆಂಬರ್ ೨, ೧೯೪೬) ದೆಹಲಿಯಲ್ಲಿ ರಚಿಸಿದ ತಾತ್ಕಾಲಿಕ ಸರಕಾರದ ಪ್ರಥಮ ಪ್ರಧಾನಿಯಾಗಿ ನೆಹರೂ ಅವರು ಸ್ವೀಕರಿಸಿದ ಪ್ರಮಾಣ ವಚನ ಹೀಗಿತ್ತು;  
 
“ದೊರೆ ಆರನೇ ಜಾರ್ಜರಿಗೂ ಅವರ ಉತ್ತರಾಧಿಕಾರಿ ಬ್ರಿಟಿಷ್ ಚಕ್ರಾಧಿಪತ್ಯದ ಸಾರ್ವಭೌಮರಿಗೂ ನಾನು ನೀಯತ್ತಾಗಿ, ವಿಧೇಯನಾಗಿ, ವಶನಾಗಿ ನಿಜ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತೇನೆ.”  
 
ಈ ಎರಡರ ನಡುವಣ ವ್ಯತ್ಯಾಸವನ್ನೂ ಅದರ ಪರಿಣಾಮವನ್ನೂ ನಾವು ಅನುಭವಿಸುತ್ತ ಬಂದಿದ್ದೆವೆ, ಆದರೆ ಇತಿಹಾಸದಲ್ಲಿ ದಾಖಲಿಸಲು ಉದ್ದೇಶಪೂರ್ವಕ ಮರೆತಿದ್ದೇವೆ. 
 
೧೯೪೫ರ ಅಗಸ್ಟ್ ೧೮ ರಂದು ವಿಮಾನ ಅಪಘಾತದಲ್ಲಿ ನೇತಾಜಿ ತೀರಿಕೊಂಡರೆಂದು ಸುದ್ದಿ ಮಾಡಲಾಯಿತು.  ಅದನ್ನೇ ನಿಜವೆಂದು ಇಂದಿಗೂ ಸಾಧಿಸಲಾಗುತ್ತಿದೆ.  ಆದರೆ ಕೆಲವು ಸಂಗತಿಗಳ ಹಿಂದಿನ ರಹಸ್ಯ ನಮಗೆ ಅರ್ಥವೇ ಆಗುವುದಿಲ್ಲ!  ನೇತಾಜಿ ಸಾವಿನ ಕುರಿತ ತನಿಖೆಗೆ ೧೯೭೦ರಲ್ಲಿ ನೇಮಿಸಿದ ಖೋಸ್ಲಾ ಕಮಿಶನ್ ಎದುರು ಸಾಕ್ಷಿ ನುಡಿದ, ನೆಹರೂರವರ ಲಿಪಿಕ ಸಹಾಯಕರಾಗಿದ್ದ ಶ್ಯಾಮಲಾಲ್ ಜೈನ್ ಹೇಳಿದ್ದು ನಮ್ಮನ್ನು ಬೆಚ್ಚಿ ಬೀಳಿಸುವಂತಿದೆ..... 
 
“ನೇತಾಜಿ ವಿಮಾನ ಅಪಘಾತದಲ್ಲಿ ತೀರಿಕೊಂಡಿರಲಿಲ್ಲ.  ಅವರನ್ನು ರಶ್ಯಾದ ಸ್ಟಾಲಿನ್ ಸೆರೆ ಹಿಡಿದಿದ್ದ.  ಸುಭಾಶರು ನಮ್ಮ ಸೆರೆಯಲ್ಲಿದ್ದಾರೆ, ಏನು ಮಾಡಲಿ ಎಂದು ಸ್ಟಾಲಿನ್, ನೆಹರೂ ಅವರಿಗೆ ಪತ್ರ ಬರೆದಿದ್ದ.  ನೆಹರೂ ಅದನ್ನು ಉಲ್ಲೇಖಿಸಿ ಬ್ರಿಟಿಷ್ ಪ್ರಧಾನಿ ಕ್ಲಿಮೆಂಟ್ ಅಟ್ಲಿಗೆ ಪತ್ರ ಬರೆದರು; 
 
“ಸುಭಾಶ್ಚಂದ್ರರು ರಷ್ಯಾದಲ್ಲಿ ಸೆರೆ ಸಿಕ್ಕಿದ್ದಾರೆ, ಅವರು ಬ್ರಿಟಿಷ್ ಯುದ್ಧ ಕೈದಿಯಾಗಿದ್ದು ಅವರನ್ನು ನೀವೇ ನೋಡಿಕೊಳ್ಳಿ” ಎಂದು ತಮಗೆ ಪ್ರತಿಸ್ಪರ್ಧಿ ಎನಿಸಿದ್ದ ಒಬ್ಬ ಅಪ್ಪಟ ದೇಶಪ್ರೇಮಿಯನ್ನು ಬಳಿ ತೆಗೆದುಕೊಂಡರು....!
 
ಇಂತಹ ಅದೆಷ್ಟು ಧೂರ್ತ ರಾಜಕೀಯ ನಡೆದುಹೋಗಿದೆಯೋ ನಮಗೆ ಗೊತ್ತಿಲ್ಲ.  ಈಗಲೂ, ನೇತಾಜಿ ನೆನಪಾದಾಗಲೆಲ್ಲ, ಯುವಕರ ರಕ್ತ ಬಿಸಿಯಾಗುತ್ತದೆ, ದೇಶ ಭಕ್ತಿ ಪುಟಿದೇಳುತ್ತದೆ. ಅವರು ಬದುಕಿ ಭಾರತಕ್ಕೆ ಬಂದಿದ್ದರೆ, ಶೀಲ ಸಂಯಮಗಳಿಲ್ಲದ ನಾಯಕರಿಂದ ದೇಶಕ್ಕೆ ಆಗಲೇ ಬಿಡುಗಡೆ ಸಿಗುತ್ತಿತ್ತು ಎನ್ನುವುದು ಮಾತ್ರ ನಿಜ.  ಸ್ವತಂತ್ರ ಭಾರತದ ಮೊದಲ ಪ್ರಧಾನಿ, ನೇತಾಜಿ ಸುಭಾಶ್ಚಂದ್ರ ಬೋಸರು ನಮಗೆಲ್ಲ ಪ್ರಾತಃಸ್ಮರಣೀಯರು.  ನೇತಾಜಿ ಸ್ಥಾಪಿಸಿದ, ಆಝಾದ್ ಹಿಂದ್ ಫೌಜ್‌ನಲ್ಲಿದ್ದ ಲೆಫ್ಟಿನಂಟ್ ಮಾನವತಿ ಆರ್ಯಾ ತಮ್ಮ ಪುಸ್ತಕ ಪೇಟ್ರಿಯಟ್ (Patriot)ನಲ್ಲಿ ಬರೆದ ಮಾತು ಮತ್ತೆ ಮತ್ತೆ ನೆನಪಾಗುತ್ತದೆ......   
 
೧೯೩೯ರಲ್ಲಿಯೇ ನೇತಾಜಿಯವರ ಮಾತನ್ನು ಕೇಳಿದ್ದರೆ ವಿಭಜನೆಯ ಯಾತನೆಯಿಲ್ಲದೆ, ರಕ್ತಪಾತವಿಲ್ಲದೆ ಅಖಂಡ ಭಾರತ ಸ್ವತಂತ್ರವಾಗುತ್ತಿತ್ತು, ಬೇಡಿ ಪಡೆದುಕೊಂಡಿಲ್ಲವೆಂಬ ಅಭಿಮಾನವೂ ಇರುತ್ತಿತ್ತು ಎಂದು, 
 
"Had the congress led by Gandhiji duly valued and acted upon the proposals of Subhas Chandra Bose at the opportune moment, instead of launching the ‘Quit India Movement’ late by two years, when Subhash was constrained to leave India desperately for opening a ‘Second Front’ India could have attained freedom without bloodshed.  The call of Subhash Bose for the issue of an ultimatum to British to ‘Quit India’ was eventually activated by Gandhiji’s call for the same in August 1942. But it was too late..” (Patriot, p.102 by Lt. Manwati  Arya) 
 
ಇಂದು ಸುಭಾಷ್ ಬಾಬು ರವರ ಪುಣ್ಯ ಜಯಂತಿ.  ಆ ಸ್ವಾತಂತ್ರ್ಯದ ಮಹಾನ್ ಯುಗ ಪುರುಷನ ಜೀವನಗಾಥೆ ನಮ್ಮೆಲ್ಲರನ್ನೂ ಸದಾ ಪ್ರೇರೇಪಿಸುತ್ತಲೇ ಇರುತ್ತದೆ!

 

Related posts