2019ರ ಬಜೆಟ್ ಎಲ್ಲರಿಗೂ ಅಚ್ಚು-ಮೆಚ್ಚು; ಮೋದಿ ವಿರೋಧಿಗಳ ಮುಖ ಮಾತ್ರ ಪೆಚ್ಚು-ಪೆಚ್ಚು...!
೨೦೧೯ರ ಬಜೆಟ್ ಎಲ್ಲರಿಗೂ ಅಚ್ಚು-ಮೆಚ್ಚು; ಮೋದಿ ವಿರೋಧಿಗಳ ಮುಖ ಮಾತ್ರ ಪೆಚ್ಚು-ಪೆಚ್ಚು...!
ಮಾನ್ಯ ಪೀಯೂಷ್ ಗೋಯಲ್ ನಿನ್ನೆಯ ದಿನ ಬಜೆಟ್ ಭಾಷಣ ಶುರು ಮಾಡಿದಾಗ ವಿರೋಧ ಪಕ್ಷದ ಮುಖಂಡರ ಮುಖಗಳಲ್ಲೊಂದು "ಇವರೇನು ಮಾಡುತ್ತಾರೆ....ಇವರೇನು ಕೊಡುತ್ತಾರೆ...ಮಹಾ...!" ಎಂಬ ರೀತಿಯ ಉಡಾಫೆಯ ನಗುವಿತ್ತು. ಆದರೆ ನಿಧಾನಕ್ಕೆ ಉಡಾಫೆಯ ನಗು ಅಚ್ಚರಿಗೊಂಡು... ಬಳಿಕ ಅದು ನಿರಾಶೆಯ ಭಾವಕ್ಕೆ ತಿರುಗಿತು...! (ಬಹುಶಃ ಇನ್ನು ನಮಗೆ ಉಳಿಗಾಲವಿಲ್ಲವೆನ್ನುವ ಅರಿವಾಯಿತೋ ಏನೋ...!) ಬಜೆಟ್ ಭಾಷಣ ಇನ್ನು ಅರ್ಧದಷ್ಟು ಮುಗಿದಿರಲಿಲ್ಲ.... ಪಾಪ ರೌಲ್ ವಿನ್ಸಿ ಆಲಿಯಾಸ್ ರಾಹುಲ್ ಗಾಂಧಿಯ ಮುಖ ನೋಡಬೇಕಿತ್ತು.... ಒಂದು ರೀತಿಯ ಸ್ಮಶಾನದಲ್ಲಿ ಹೆಣ ಸುಟ್ಟು ಬಂದವನ ಮುಖದ ಛಾಯೆ... ಎಲ್ಲವನ್ನು ಕಳೆದುಕೊಂಡಂತೆ ಕೂತಿದ್ದರು..... ಕೋಡಂಗಿಯ ಭಟ್ಟಂಗಿಗಳ ಪೆಚ್ಚು-ಪೆಚ್ಚು ಮುಖಗಳೇ ಹೆಚ್ಚು...!
ಮೋದಿಜಿಯವರು ಹೇಳುತ್ತಿದ್ದ "ಸಬ್ ಕಾ ಸಾಥ್; ಸಬ್ ಕಾ ವಿಕಾಸ್" ಎಂಬ ಘೋಷಣೆಯ ನೈಜ ಅರ್ಥ ಏನೆಂದು ನಿನ್ನೆಯ ಬಜೆಟ್ ಭಾಷಣ ಕೇಳಿದ ಎಂಥವರಿಗಾದರೂ ಅರ್ಥವಾಗಲೇಬೇಕಿತ್ತು. ಆದರೆ ರೌಲ್ ಗೆ ಅರ್ಥವಾದಂತೆ ಗೋಚರಿಸಲಿಲ್ಲ.. ಇನ್ನೆಷ್ಟು ಕಾಲ ಸದನದಲ್ಲಿ ಕೂರಬೇಕಪ್ಪ ಎಂದು ಸುಟ್ಟ ಬದನೆಯ ರೀತಿ ವರ್ತಿಸುತ್ತಿದ್ದ! ಆದರೂ ಒಂದು ಸಮಾಧಾನವೆಂದರೆ ಪುಣ್ಯಾತ್ಮ ಈ ಭಾರಿ ಕಣ್ಣು ಹೊಡೆಯಲ್ಲಿಲ್ಲ... ತಬ್ಬಿಕೊಳ್ಳಲಿಲ್ಲ... ನಗಲೂ ಇಲ್ಲ...! ಸಾಕ್ಷಿಯಂಬಂತೆ ಟಿವಿ ಚಾನೆಲ್ಗಳು ಬಿತ್ತರಿಸಿದ ವರದಿ... ಅಂತರಜಾಲದಲ್ಲಿ ಹರಿದಾಡುತ್ತಿರುವ ಛಾಯಾಚಿತ್ರ ಮತ್ತು ವಿಡಿಯೊಗಳೇ ಸಾಕ್ಷಿ..!
ಈ ಎಲ್ಲ ವ್ಯಂಗ್ಯಗಳ ನಡುವೆ ನಿನ್ನೆ ಮಂಡಿಸಲಾದ ಬಜೆಟ್, ಮುಂದಿನ ಭವ್ಯ ಭಾರತದ ಮುಂಗಡ ಪತ್ರ ನಿಜಕ್ಕೂ ಅರ್ಥಪೂರ್ಣ! ಕೆಳವರ್ಗದವರು, ಕೂಲಿ-ಕಾರ್ಮಿಕರು, ಶ್ರಮಿಕ ವರ್ಗದವರು, ಮಾಧ್ಯಮ-ವರ್ಗದವರು, ಸಂಬಳ ಪಡೆದು ತೆರಿಗೆ ಪಾವತಿಸುವವರು, ಸಣ್ಣ ಹಿಡುವಳಿ ಹೊಂದಿರುವ ಚಿಕ್ಕ ರೈತರು, ಇವರೆಲ್ಲ ಜೊತೆಗೆ ದೇಶ ಕಾಯುವ ಸೈನ್ಯ-ಸೈನಿಕ... ಹೀಗೆ ಎಲ್ಲರನ್ನು ಒಳಗೊಂಡ, ಎಲ್ಲರಿಗೂ ನ್ಯಾಯ ಸಲ್ಲಿಸಿದ ಅತ್ಯಂತ ಸಮತೋಲಿತ ಬಜೆಟ್! ಎಲ್ಲರನೊಳಗೊಂಡ... ಎಲ್ಲರಿಗಾಗಿ ರೂಪಿಸಿದ... ಸಬ್ ಕಾ ಸಾಥ್; ಸಬ್ ಕಾ ವಿಕಾಸ್" ಘೋಷಣೆಯನ್ನು ನನಸು ಮಾಡುವ ಮುಂಗಡ ಪತ್ರ!
ಕಳೆದ ವರ್ಷ ತಾನೇ ನೌಕರರ ಗ್ರಾಚ್ಯುಯಿಟಿ ಹಣಕ್ಕೆ ಸಂಬಂಧಿಸಿದಂತೆ ಮಿತಿಯನ್ನು ೧೦ ರಿಂದ ೨೦ ಲಕ್ಷ ರೂಪಾಯಿಗೆ ಏರಿಸಿ, ಖಾಸಗಿ ನೌಕರರನ್ನು ಸರ್ಕಾರಿ ನೌಕರರ ಮಟ್ಟಕ್ಕೆ ತಂದು ನಿಲ್ಲಿಸಿಯಾಗಿತ್ತು. ಈ ಬಾರಿಯ ಮುಂಗಡ ಪತ್ರದಲ್ಲಿ ಅದನ್ನು ಪರಿಷ್ಕರಿಸಿ ಮತ್ತೆ ೨೦ ರಿಂದ ೩೦ ಲಕ್ಷಕ್ಕೆ ಏರಿಸಿ, ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದೇ ಬಹು ದೊಡ್ಡ ಸಾಧನೆ.. ಇದು ದುಡಿಯುವ ವರ್ಗೆಕ್ಕೆ ಭರ್ಜರಿ ಕೊಡುಗೆ!
ದುಡಿದು ಸಂಬಳ ಪಡೆದು ಆದಾಯ ತೆರಿಗೆ ಪಾವತಿಸುವ ಕೆಳ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರ ಆಶೋತ್ತರಗಳಿಗೂ ಸ್ಪಂದಿಸಿದ ಈ ಬಜೆಟ್ ಆದಾಯ ತೆರಿಗೆ ಮಿತಿಯನ್ನು ಈಗಿನ ಎರಡೂವರೆ ಲಕ್ಷದಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಿಸಿತು..! ಸಂಬಳಕ್ಕೆ ದುಡಿಯುವ ಮಂದಿ, ಸ್ವಂತ ಉದ್ಯೋಗ ನಡೆಸುವವರು, ಸಣ್ಣ ವ್ಯಾಪಾರಿಗಳು, ಮತ್ತು ಪಿಂಚಣಿದಾರರಿಗೂ ಇದರಿಂದ ಪ್ರಯೋಜನವಾಗುತ್ತದೆ. ದೇಶಾದ್ಯಂತ ಅಂದಾಜು ಸುಮಾರು ಮೂರು ಕೋಟಿಗೂ ಹೆಚ್ಚು ಜನ ಇದರ ಲಾಭ ಪಡೆಯುತ್ತಾರೆ ಮತ್ತು ಸುಮಾರು ಹದಿನೆಂಟು ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ಜನರಿಗೆ ಉಳಿತಾಯವಾಗುತ್ತದೆ. ಇದಕ್ಕೂ ಮೀರಿ ಆದಾಯ ಇರುವವರೂ ಕೂಡಾ ಪ್ರಾವಿಡೆಂಟ್ ಫಂಡ್ ನಲ್ಲಿ ಅಥವಾ ಸೂಚಿಸಲ್ಪಟ್ಟ ಷೇರುಗಳಲ್ಲಿ ಹೂಡಿಕೆ ಮಾಡಿದರೆ, ಆಗಲೂ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಇನ್ನು ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕ ವರ್ಗದವರಿಗಾಗಿಯೇ ಮೋದಿಜಿಯವರ ವಿನೂತನ ಪರಿಕಲ್ಪನೆಯ ಪಿಂಚಣಿ ಯೋಜನೆ ಕೂಡಾ ಜಾರಿಗೆ ಬರಲಿದೆ. ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮುಂತಾದ ಶ್ರಮಿಕ ವರ್ಗದವರಿಗೆ ಉದ್ಯೋಗ ಭದ್ರತೆಯಾಗಲೀ, ಸಾಮಾಜಿಕ ಭದ್ರತೆಯಾಗಲೀ ಇರೋದೇ ಇಲ್ಲ. ಅಂತ ಕಾರ್ಮಿಕರು ವಯಸ್ಸಾಗಿ ದುಡಿಯುವ ಶಕ್ತಿ ಕಳೆದುಕೊಂಡು, ಕೆಲಸವೂ ಇಲ್ಲದೆ ಆದಾಯವೂ ಇಲ್ಲದೆ, ಇತರ ಕಾರ್ಮಿಕರ ರೀತಿ ಪಿಂಚಣಿಯೂ ಇಲ್ಲದೆ ಅತಂತ್ರರಾಗಿ ಅಸಹಾಯಕರಾಗಿ ಬದುಕುವುದೇ ದುರ್ಭರ ಎನ್ನುವಂಥ ಪರಿಸ್ಥಿತಿ ಬಂದರೆ, ಅದಕ್ಕಾಗಿಯೇ ಅಂಥಾ ಶ್ರಮಿಕ ವರ್ಗದವರಿಗೆ ತಿಂಗಳಿಗೆ ಹದಿನೈದು ಸಾವಿರಕ್ಕಿಂತಲೂ ಕಡಿಮೆ ಆದಾಯ ವಿರುವವರಿಗೆಂದೇ ಅರವತ್ತು ವರ್ಷವಾದ ಮೇಲೆ ನಿವೃತ್ತಿ ವೇತನ ದೊರಕಿಸುವ ಒಂದು ಮಹೋನ್ನತ ಯೋಜನೆಯೇ "ಪ್ರಧಾನ ಮಂತ್ರಿ ಶ್ರಮ ಯೋಗೀ ಮಾನ ಧನ ಯೋಜನೆ". ಇಂಥ ಅಸಂಘಟಿತ ವಲಯದ ಕೂಲಿ-ಕಾರ್ಮಿಕರು ಮಾಸಿಕವಾಗಿ ನೂರು ರೂಪಾಯಿ ಕಂತನ್ನು ತುಂಬಿದರೆ, ಅಂಥಾ ಕಾರ್ಮಿಕ ಅರವತ್ತು ವರ್ಷ ತುಂಬಿದ ಕೂಡಲೇ ಪ್ರತೀ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿಯನ್ನು ಜೀವಿಸಿರುವವರೆಗೂ ಪಡೆಯುತ್ತಾನೆ.
ಸಣ್ಣ ರೈತರಿಗೆ ಅಂದರೆ ಐದು ಎಕರೆ ಗಿಂತ ಕಡಿಮೆ ಹಿಡುವಳಿಯಿರುವ ರೈತರಿಗೆ "ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ" ಯೋಜನೆಯ ಮೂಲಕ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ- ಇದನ್ನು ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಗಳ ಕಂತಿನಲ್ಲಿ ನೇರವಾಗಿ ಅವರ ಖಾತೆಗೇ ಜಮಾ ಮಾಡಲಾಗುವುದು. ಕೃಷಿ ಚಟುವಟಿಕೆಗಳ ಆರಂಭ ಕಾಲದಲ್ಲಿ ಈ ಸಣ್ಣ ಧನಸಹಾಯ ರೈತರಿಗೆ ದೊರಕಿದರೆ ಅದರಿಂದ ಅವರಿಗೆ ಬಿತ್ತನೆ ಬೀಜ ಇತ್ಯಾದಿ ಖರೀದಿಸಲು ಉಪಯೋಗವಾಗುತ್ತದೆ ಎಂಬ ಕಲ್ಪನೆಯಿಂದ ಈ ಯೋಜನೆ ರೂಪಿಸಲಾಗಿದೆ. ದೇಶಾದ್ಯಂತ ಐದು ಎಕರೆ ಗಿಂತ ಕಡಿಮೆ ಹಿಡುವಳಿಯಿರುವ ಸುಮಾರು ಹನ್ನೆರಡು ಕೋಟಿ ರೈತರಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ. ಇದಕ್ಕಾಗಿ ವರ್ಷಕ್ಕೆ ಎಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ.
ಪ್ರಕೃತಿ ವಿಕೋಪಗಳಿಂದ ನಷ್ಟ ಅನುಭವಿಸುವ ರೈತರು ಪಡೆದ ಸಾಲದ ಬಡ್ಡಿಯಲ್ಲಿ ಶೇ. ೨ ರಷ್ಟು ವಿನಾಯಿತಿ ಮತ್ತು ಸಾಲ ಮರುಪಾವತಿ ಕ್ಲಪ್ತವಾಗಿ ಮಾಡಿದ್ದರೆ ಹೆಚ್ಚುವರಿಯಾಗಿ ಶೇ. ೩ ರಷ್ಟು ವಿನಾಯಿತಿ ನೀಡಲಾಗುತ್ತದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲ ಸೌಲಭ್ಯ ಪಡೆದಿದ್ದರೆ, ಅವರಿಗೂ ಈ ವಿನಾಯಿತಿ ಅನ್ವಯವಾಗುತ್ತದೆ. ೭೫೦ ಕೋಟಿ ರೂಪಾಯಿಗಳನ್ನು ವಿಶೇಷವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕೆಗೆಂದೇ ಮೀಸಲಿಡಲಾಗಿದೆ. ಸುಮಾರು ೨೨ ವಿವಿಧ ಖಾರಿಫ್ ಮತ್ತು ರಬಿ ಬೆಳೆಗಳನ್ನು ಗುರುತಿಸಲಾಗಿದ್ದು ಇವುಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ರಸಗೊಬ್ಬರ ಸಬ್ಸಿಯನ್ನೂ ಹೆಚ್ಚಿಸಲಾಗಿದೆ.
ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಠೇವಣಿಯಿಟ್ಟ ಮೊತ್ತಕ್ಕೆ ಬರುತ್ತಿದ್ದ ಬಡ್ಡಿಯ ಹಣ ೧೦ ಸಾವಿರವಿದ್ದರೆ ಕ್ಕೆ ಈ ಹಿಂದೆ ಟಿಡಿಎಸ್ ಅನ್ವಯವಾಗುತ್ತಿತ್ತು. ಆದರೆ ಈ ಮಿತಿಯನ್ನು ಈಗ ೧೦ ಸಾವಿರದಿಂದ ೪೦ ಸಾವಿರಕ್ಕೆ ಏರಿಸಲಾಗಿದ್ದು, ಠೇವಣಿಯ ಬಡ್ಡಿಯ ಹಣದಿಂದಲೇ ಜೀವನ ಸಾಗಿಸುತ್ತಿದ್ದ ಹಿರಿಯರಿಗೆ, ಪಿಂಚಣಿದಾರರಿಗೆ ಇದರಿಂದ ತುಂಬಾ ಉಪಯೋಗವಾಗುತ್ತದೆ.
ಪರಿಶಿಷ್ಟ ಜಾತಿಗಳಿಗೆ ಕಳೆದ ಬಜೆಟ್ ನಲ್ಲಿ ಮೀಸಲಾಗಿಟ್ಟ ರೂ. ೫೬,೬೧೯ ಕೋಟಿ ಈ ಬಾರಿಯ ಬಜೆಟ್ ನಲ್ಲಿ ರೂ.೭೬,೯೦೧ ಕೋಟಿಗೆ ಏರಿಕೆಯಾಗಿದೆ ಅಂದರೆ ಅನುದಾನದಲ್ಲಿ ೩೫.೬% ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ೨೮% ರಷ್ಟು ಹೆಚ್ಚಳವಾಗಿದೆ, ಅಂದರೆ ಕಳೆದ ಬರಿ ಬಜೆಟ್ ಅನುದಾನ ೩೯,೧೩೫ ಕೋಟಿ ರೂಪಾಯಿಗಳಾಗಿದ್ದರೆ, ಈ ಬಾರಿ ಅದು ೫೦,೦೮೬ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ದಲಿತರಿಗೆ ಮೋದಿ ಸರಕಾರ ಅನ್ಯಾಯ ಮಾಡಿದೆ ಅಂತ ಗದ್ದಲ ಎಬ್ಬಿಸಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಖರ್ಗೆ ಮತ್ತವರ ತಂಡಕ್ಕೆ ಸಂಪೂರ್ಣ ನಿರಾಸೆ ಕಾದಿತ್ತು.
ಇಷ್ಟೆಲ್ಲಾ ಕೊಡುಗೆಗಳನ್ನು ನೀಡಿದ ಮೋದಿಯವರು ಇದಕ್ಕೆಲ್ಲ ಹಣ ಹೊಂದಿಸಬೇಕೆಂಬ ಕಾರಣ ನೀಡಿ ಇತರ ಮುಖ್ಯ ಅವಶ್ಯಕತೆಗಳಿಗೆ ನೀಡಬೇಕಾದ ಅನುದಾನಗಳನ್ನು ಕಡಿತ ಗೊಳಿಸಲಿಲ್ಲ..! ಬದಲಿಗೆ ಬಡವರಿಗೆ, ರೈತರಿಗೆಂದು ಭಾರೀ ಯೋಜನೆಗಳನ್ನು ನೀಡಿದ ಮೋದಿಜಿ ದೇಶದ ರಕ್ಷಣೆಗೂ ಹೆಚ್ಚಿನ ಒತ್ತು ನೀಡಿದರು... ಅಷ್ಟೇ ಅಲ್ಲಾ ... ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಭಾರತ ರಕ್ಷಣಾ ಬಜೆಟ್ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿತು... ಇದೊಂದು ಸಾರ್ವಕಾಲಿಕ ದಾಖಲೆ..!
ಇದೆಲ್ಲಾ ಬಡವರಿಗೆ, ಮಧ್ಯಮವರ್ಗದವರಿಗೆ, ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳಾಗಿದ್ದರೆ... ಕಾಂಗ್ರೆಸ್ಸಿನ ಲೀಡರುಗಳ ಮುಖ ಇನ್ನಷ್ಟು ಕಪ್ಪಾಗಲಿಕ್ಕೆಂದೇ ರೂಪಿಸಿದ ಯೋಜನೆ "ರಾಷ್ಟ್ರೀಯ ಗೋಕುಲ ಮಿಷನ್" ದೇಸೀ ತಳಿಯ ಗೋವುಗಳ ಅಭಿವೃದ್ಧಿಗಾಗಿಯೇ ಇರುವ ಈ ಕಾರ್ಯಕ್ರಮಕ್ಕೆ ಕಳೆದ ಸಾಲಿನಲ್ಲಿ ನೀಡಿಯೇ ಮುನ್ನೂರು ಚಿಲ್ಲರೆ ಕೋಟಿ ರೂಪಾಯಿಗಳ ಅನುದಾನವನ್ನು ದುಪ್ಪಟ್ಟು ಗೊಳಿಸಿ ಏಳುನೂರಾ ಐವತ್ತು ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿದೆ...! ದೇಸೀ ಗೋ ತಳಿಗಳ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿದರೆ...?? ವಿದೇಶೀ ತಳಿಗಳಿಗೆ ಮತ್ತವರ ಹಿಂಬಾಲಕರಿಗೆ ಇರಿಸು ಮುರಿಸು ಉಂಟಾಗದಿದ್ದೀತೆ..?
ಅಂತೂ ಮುಖದ ಮೇಲೆ ಪ್ರೇತಕಳೆ ಹೊತ್ತು ಕೂತಿದ್ದ ವಿರೋಧ ಪಕ್ಷದ ನಾಯಕರ ಸಮ್ಮುಖದಲ್ಲೇ ಪೀಯೂಷ್ ಗೋಯೆಲ್ ರವರು ಮೋದಿಜಿಯವರ "ಸಬ್ ಕಾ ಸಾಥ್ ... ಸಬ್ ಕಾ ವಿಕಾಸ್ " ಘೋಷಣೆಯನ್ನು ಸಾಕಾರಗೊಳಿಸುವ ಬಜೆಟ್ ಮಂಡನೆ ಮಾಡಿ ಮುಗಿಸುವ ಹೊತ್ತಿಗೆ, ಎನ್.ಡಿ.ಎ. ಲೋಕಸಭಾ ಸದಸ್ಯರೆಲ್ಲ ಮೇಜು ಕುಟ್ಟುತ್ತಾ ' ಮೋದಿ ... ಮೋದಿ ... ' ಅಂತ ಜಯಘೋಷ ಕೂಗಿದ ಆ ಕ್ಷಣ....
..... ಅದನ್ನಂತೂ ಮರೆಯಲಾಗುತ್ತಿಲ್ಲ ....!
#ಅನಂತಕುಮಾರಹೆಗಡೆ
#ನೂತನ_ಭಾರತದ_ಬಜೆಟ್
ಚಿತ್ರ ಕೃಪೆ : ಅಂತರಜಾಲ