Infinite Thoughts

Thoughts beyond imagination

ಪಂಡಿತ ದೀನದಯಾಳರ ಬರ್ಭರ ಕೊಲೆ ನಡೆದು ಇವತ್ತಿಗೆ ಭರ್ತಿ ಐವತ್ತೊಂದು ವರ್ಷ ಆಯಿತು ...!

ಬಲಗೈಯ ಐದೂ ಬೆರಳುಗಳನ್ನು  ಮಡಚಿ ಮುಷ್ಠಿ ಮಾಡಿಕೊಂಡಿದ್ದರಾತ.  ಶಾಂತ ಮುಖಮುದ್ರೆಯೊಂದಿಗೆ ಎಡಗೈಯನ್ನು ಹೊಟ್ಟೆಯ ಮೇಲೆ ಅಡ್ಡಲಾಗಿಟ್ಟುಕೊಂಡು ಮುಷ್ಠಿ ಮಾಡಿದ ಬಲಗೈಯನ್ನು ಹೆಗಲಿಗಿಂತ ಕೊಂಚ ಮೇಲೆ ಇರಿಸಿ ರೈಲು ಹಳಿಯ ಪಕ್ಕ ನಿಶ್ಚಲವಾಗಿ ಮಲಗಿದಂತೆ ಇತ್ತು ಅವರ ದೇಹ.  ಉಸಿರು ನಿಂತರೂ ತಾನು ನಂಬಿದ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಡಲಾರೆ ಎಂಬಂತೆ ಬಲಗೈ ಮುಷ್ಟಿಯನ್ನು ಮೇಲೆತ್ತಿ ಹಿಡಿದಿದ್ದರು ಆ ಪುಣ್ಯಾತ್ಮರು...!! 
 
ಫೆಬ್ರವರಿ ೧೧ ನೇ ತಾರೀಕಿನ ಮುಂಜಾನೆ ಸುಮಾರು ೩. ೪೫ ಕ್ಕೆ  ಅಂದಿನ ಮುಘಲ್ ಸರಾಯ್ ನಿಲ್ದಾಣದ ಲಿವರ್ ಮ್ಯಾನ್ ಒಬ್ಬಾತ, ಪ್ಲ್ಯಾಟ್ ಫಾರ್ಮ್ ನಿಂದ ಸುಮಾರು ೭೪೮ ಮೀಟರ್ ದೂರದಲ್ಲಿ, ರೈಲು ಪಟ್ಟಿಯ ಸಮೀಪದ ೧೨೭೬ ನಂಬರಿನ ವಿದ್ಯುತ್ ಕಂಬದ ಬಳಿ ಓರ್ವ ವ್ಯಕ್ತಿಯ ದೇಹ "ಬಹುತೇಕ ಮೃತಪಟ್ಟ" ಸ್ಥಿತಿಯಲ್ಲಿ ಪತ್ತೆಯಾಗಿದೆ ಅಂತ ಅಸಿಸ್ಟಂಟ್ ಸ್ಟೇಷನ್ ಮಾಸ್ಟರ್ ಗೆ ದೂರು ನೀಡುತ್ತಾನೆ.  ಪೊಲೀಸರು ಮಾಹಿತಿ ತಿಳಿದು, ದೇಹವನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಅಂತ ಘೋಷಿಸುತ್ತಾರೆ.  ಶವದ ಗುರುತು ಪತ್ತೆಯಾಗಿ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.  ನಿಗೂಢವಾಗಿ ಸಾವನ್ನಪ್ಪಿದವರು ಬೇರೆ ಯಾರು ಅಲ್ಲ.... ಬದಲಿಗೆ  ಭಾರತದ ಅಂದಿನ ಪ್ರಧಾನ ವಿರೋಧ ಪಕ್ಷವಾಗಿದ್ದ ಭಾರತೀಯ ಜನಸಂಘದ ನೂತನ ಅಧ್ಯಕ್ಷ ಪಂಡಿತ ಶ್ರೀ ದೀನದಯಾಳ ಉಪಾಧ್ಯಾಯರು! 
 
ಪಂಡಿತ ದೀನದಯಾಳ ಉಪಾಧ್ಯಾಯ ಎಂಬ ಆ ಮಹಾನ್ ಚೇತನ ಈ ರೀತಿಯ ದುರಂತ ಅಂತ್ಯಕ್ಕೊಳಗಾಗುತ್ತಾರೆಂಬುದನ್ನು ಯಾರೂ ಊಹಿಸಿರಲೇ ಇಲ್ಲ.  ೧೯೬೮ ರ ಫೆಬ್ರವರಿ ೧೧ರ ಬೆಳಗಿನ ಜಾವ ಅತ್ಯಂತ ನಿಗೂಢವಾಗಿ ಕೊಲೆಯಾದ ದೀನದಯಾಳರು ಸುಧೀರ್ಘ ಕಾಲ ಭಾರತೀಯ ಜನಸಂಘದ  ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.  ಹೀಗೆ ನಿಗೂಢವಾಗಿ ಕೊಲೆಯಾಗುವ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜನಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.   
 
೧೯೬೭ರಲ್ಲಿ ಡಿಸೆಂಬರ್ ೨೯ ರಿಂದ ೩೧ ರವರೆಗೆ ಕೇರಳದ ಕಲ್ಲಿಕೋಟೆಯಲ್ಲಿ ಭಾರತೀಯ ಜನಸಂಘದ ೧೪ನೇ ರಾಷ್ಟ್ರೀಯ ಅಧಿವೇಶನ ನಡೆದಿತ್ತು.  ಆ ಸಂಧರ್ಭದಲ್ಲಿ ಶ್ರೀ ದೀನದಯಾಳ ಉಪಾಧ್ಯಾಯರು ಜನ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.  ಅಂದಿನ ಸರಸಂಘ ಚಾಲಕ ಪರಮ  ಪೂಜನೀಯ ಶ್ರೀ ಗೋಲ್ವಾಲ್ಕರ್ ಗುರೂಜಿ ಯವರ ನೇರ ಶಿಷ್ಯರಾಗಿದ್ದ ಶ್ರೀ ದೀನದಯಾಳರಿಗೆ ಗುರುಗಳ ಪೂರ್ಣಾಶೀರ್ವಾದವೂ ಇತ್ತು.  ಆದರೆ ದುರಂತವೆಂದರೆ ಅಧ್ಯಕ್ಷರಾಗಿ ಆಯ್ಕೆಯಾದ ಕೇವಲ ನಲವತ್ತೊಂದನೇ ದಿನಕ್ಕೆ ದೀನದಯಾಳರು ಹತ್ಯೆಗೀಡಾಗಿದ್ದರು.  ಇದರ ಹಿಂದೆ ಬಹಳ ದೊಡ್ಡ ಸಂಚಿತ್ತು.  ಉತ್ತರ ಪ್ರದೇಶವೇ ಶ್ರೀ ದೀನದಯಾಳರ ಮುಖ್ಯ ಕಾರ್ಯ ಕ್ಷೇತ್ರವಾಗಿತ್ತು.  ೧೯೬೧ ರ ಮೀರತ್, ೧೯೬೭ ರ ರಾಂಚಿ ಮುಂತಾದ ಕಡೆಗಳಲ್ಲಾದ ಕೋಮು ಗಲಭೆಗಳಿಗೆ ಜನಸಂಘವೇ ಕಾರಣ, ಹಾಗಾಗಿ ಜನಸಂಘದ ನಾಯಕರ ಹತ್ಯೆ ಮಾಡಬೇಕು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಬಹಿರಂಗವಾಗಿಯೇ ಘೋಷಿಸಿದ್ದವು.  ಈ ಪೈಕಿ ಮುಸ್ಲಿಂ ಮಜಲಿಸ್ (ಮಜಲಿಸ್ ಮುಶವಾರತ್) ಪಕ್ಷದ ಡಾ. ಅಬ್ದುಲ್ ಜಲೀಲ ಫರೀದಿ ಯಂತೂ ಉಪಾಧ್ಯಾಯರ ವಿರುದ್ಧ ಕಿಡಿಕಾರುತ್ತಿದ್ದ. 
 
ಲಕ್ನೋ ದಲ್ಲಿ ಪಾಟ್ನಾ ಗೆ ತೆರಳುವ ರೈಲನ್ನು ಹತ್ತಿದ ದೀನದಯಾಳರ ಹತ್ಯೆಗೆ ಭಾರೀ ಪೂರ್ವ ಯೋಜಿತ ಸಂಚೇ ನಡೆದಿರುವ ಸಾಧ್ಯತೆ ಇದೆ.  ಯಾಕೆಂದರೆ ಅವರು ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಅವರ ಸಹ ಪ್ರಯಾಣಿಕರಾಗಿ ಪ್ರಯಾಣಿಸಬೇಕಿದ್ದ ರೈಲಿನ ಪ್ರಥಮ ದರ್ಜೆ ಬೋಗಿಯ 'ಸಿ ' ಕಂಪಾರ್ಟ್ಮೆಂಟಿನಲ್ಲಿ ಮೇಜರ್ ಎಸ್. ಎಮ್. ಶರ್ಮಾ ಅನ್ನೋ  ಹೆಸರಿನ ಮಿಲಿಟರಿ ಅಧಿಕಾರಿ ಪ್ರಯಾಣಿಸಬೇಕಿತ್ತು...ಆದರೆ ಯಾಕೋ ರೈಲು ಹೊರಡುವ ಮೊದಲು ರಿಸರ್ವೇಶನ್ ಚಾರ್ಟ್ ನಲ್ಲಿ ಎಸ್. ಎಮ್. ಶರ್ಮಾ ಹೆಸರಿನ ಬದಲಿಗೆ ಎಸ್. ಎಲ್ . ಶರ್ಮಾ ಎಂಬ ಹೆಸರು ಬರೆಯಲ್ಪಟ್ಟಿತ್ತು..!  ಟಿಕೆಟ್ ಸಂಖ್ಯೆ ಕೂಡಾ ಬದಲಾಗಿ ೦೬೧೭೧ ಬದಲಿಗೆ ೦೬೧೭೨ ಆಗಿತ್ತು..!  ಹಾಗಾಗಿ ತನಗೆ ಅಲಾಟ್ ಆಗಿದ್ದ ಬೋಗಿಯ ಕಾದಿರಿಸುವ ಪಟ್ಟಿಯಲ್ಲಿ ಹೆಸರು ಮತ್ತು ಟಿಕೆಟ್ ನಂಬರ್ ಎರಡೂ ಹೊಂದಾಣಿಕೆಯಾಗದೆ ಈ ವ್ಯಕ್ತಿ ಅದೇ ರೈಲಿನ ಬೇರೊಂದು ಬೋಗಿಯಲ್ಲಿ ಪ್ರಯಾಣ ಮಾಡಿದರು!  ಆದರೆ ಇಡೀ ರೈಲಿನ ರಿಸರ್ವೇಶನ್ ಚಾರ್ಟ್ ಪರಿಶೀಲಿಸಿದರೆ  ಅದರಲ್ಲಿ  ಎಸ್. ಎಮ್. ಶರ್ಮಾ ಅನ್ನುವ ಹೆಸರಿನ ಬದಲಿಗೆ ಎಸ್. ಎನ್ . ಶರ್ಮಾ ಎಂಬ ಹೆಸರು ಬರೆಯಲ್ಪಟ್ಟಿತ್ತು!  ಹಾಗಾದರೆ ದೀನದಯಾಳರ ಜೊತೆಗೆ ಅವರ ಸಿ ಕ್ಯಾಬಿನ್ನಿನಲ್ಲಿ ಪ್ರಯಾಣಿಸಿದ ವ್ಯಕ್ತಿ ಯಾರು...?  ಶರ್ಮಾ ಎನ್ನುವ ಮಿಲಿಟರಿ ಮೇಜರ್ ಹೆಸರಿನಲ್ಲಿ ಇನಿಶಿಯಲ್ಸ್ ಬರಿಯುವಾಗ ಮೂರು ಮೂರು ರೀತಿಯಲ್ಲಿ ಬರೆದು ಬೇಕಂತಲೇ ಗೊಂದಲ ಸೃಷ್ಟಿಸಲಾಯಿತು!  ಆ ಮೂಲಕ ಎಸ್. ಎಮ್. ಶರ್ಮಾ ದೀನದಯಾಳರ ಜೊತೆಗೆ ಪ್ರಯಾಣಿಸಲೇ ಇಲ್ಲ ಅಂತ ಒಂದು ಅಲಿಬಿ ಸೃಷ್ಟಿಸಿ ಸ್ವಲ್ಪ ವ್ಯತ್ಯಾಸ ಇರುವ ಹೆಸರಿನಲ್ಲಿ ಇನ್ನೊಂದು ಟಿಕೆಟ್ ಮೂಲಕ ದೀನದಯಾಳರ ಕ್ಯಾಬಿನ್ನಿನಲ್ಲಿ ಅಪರಿಚಿತ ಕೊಲೆಗಾರ ಪ್ರಯಾಣಿಸಲು ಬೇಕಾದ ತಯಾರಿಯನ್ನು ಮಾಡಲಾಯಿತಾ..?  ಈ ಸಂಚಿನಲ್ಲಿ ಎಸ್. ಎಮ್. ಶರ್ಮಾ ಎಂಬ ಮಿಲಿಟರಿ ಅಧಿಕಾರಿ ಕೂಡಾ ಪಾತ್ರಧಾರಿಯೇ..?  ಅದಕ್ಕೆ ಇಂಬು ನೀಡುವಂತೆ  ಈ ಎಸ್. ಎಮ್. ಶರ್ಮಾ ಎನ್ನುವ ಮಿಲಿಟರಿ ಮೇಜರ್ ಅವರ ಹೆಣ್ಣು ಕೊಟ್ಟ ಮಾವ ಶ್ರೀ ವಿ. ಎನ್ ಶರ್ಮಾಗೂ ಮಜಲಿಸ್ ಮುಶವಾರತ್ ಪಕ್ಷದ ಡಾ. ಅಬ್ದುಲ್ ಜಲೀಲ ಫರೀದಿಗೂ ಗಳಸ್ಯ ಕಂಠಸ್ಯ ನಂಟಿತ್ತು...!  ಹಾಗಾದರೆ ಎಸ್. ಎಲ್ . ಶರ್ಮಾ ಎಂಬ ನಕಲಿ ಹೆಸರಿನಿಂದ ಅನಾಮಿಕ ಅಪರಿಚಿತನೊಬ್ಬ ದೀನದಯಾಳರ ಜೊತೆಗೆ ಪ್ರಯಾಣಿಸಿದ್ದನೇ ..? 
 
ದೀನದಯಾಳರ ನಿಗೂಢ ಕೊಲೆಯ ಬಗ್ಗೆ ಸಿಬಿಐ ತನಿಖೆಗಳಾದವು.  ತನಿಖಾ ಆಯೋಗ ರಚಿಸಲ್ಪಟ್ಟಿತು... ನ್ಯಾಯಮೂರ್ತಿ ವೈ.ವಿ ಚಂದ್ರಚೂಡ್ ಆಯೋಗ ದೀನದಯಾಳರದ್ದು ಕೊಲೆ ಅಲ್ಲ ಅಂತೇನೂ ಹೇಳಲಿಲ್ಲ ... !  ಅದು ಕೊಲೆಯೇ ಅಂತ ದೃಢ ಪಡಿಸಿತು ಕೂಡಾ ..!  ಆದರೆ ಕೊಲೆ ಮಾಡಿದ್ದು ಯಾರೋ ಇಬ್ಬರು ಕಳ್ಳರು ಅಂತ ತೀರ್ಪಿತ್ತಿತು!  ಯಾಕೆಂದರೆ ಸಿಬಿಐ  ತನಿಖೆ ನಡೆಸಿದ ವೇಳೆ ರಾಮ ಅವಧ್ ಮತ್ತು ಭರತ್ ಲಾಲ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಿತ್ತು.  ಈ ಇಬ್ಬರೂ ತಾವು ದೀನದಯಾಳರ ಕ್ಯಾಬಿನ್ನಿಗೆ ನುಗ್ಗಿ ಕಳ್ಳತನ ಮಾಡಿ, ಅದನ್ನು ವಿರೋಧಿಸಿದ ದೀನದಯಾಳರನ್ನು ರೈಲಿನಿಂದ ಹೊರಗೆಸೆದು ಸಾಯಿಸಿದೆವೆಂದು ತಪ್ಪೊಪ್ಪಿಕೊಂಡಿದ್ದರು...!  ಅದಕ್ಕೆ ಇಂಬು ನೀಡುವಂತೆ ದೀನದಯಾಳರ ಪಕ್ಕದ ಕ್ಯಾಬಿನ್ನಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ಹೇಳಲಾದ ಎಂ ಪಿ ಸಿಂಗ್ ಎಂಬಾತ ತಾನು  ಇವರಿಬ್ಬರು ದೀನದಯಾಳರ ಕ್ಯಾಬಿನ್ನಿನೊಳಗೆ ಹೊಕ್ಕು  ಅವರ ಹಾಸಿಗೆ ಮತ್ತು ಒಂದು ಫೈಲ್ ಹಿಡಿದುಕೊಂಡು ಹೊರಹೋಗುವುದನ್ನು ನೋಡಿದ್ದಾಗಿ ಸಾಕ್ಷಿ ಹೇಳಿದ...!  ಆದರೆ ಇದರಲ್ಲಿ ರಾಮ್ ಅವಧ್ ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆಯಾದ.  ಭರತ್ ಲಾಲ್ ಗೆ ಕಳ್ಳತನಕ್ಕೆ ಕೇವಲ ನಾಲ್ಕು ವರ್ಷದ ಶಿಕ್ಷೆ ಆಯಿತು!  ಭರತ್  ಲಾಲ್  ಇದರ ವಿರುದ್ಧವೂ ಅಪೀಲು ಹೋಗಿ ಉಚ್ಛ ನ್ಯಾಯಾಲಯದಲ್ಲಿ ಬಿಡುಗಡೆ ಹೊಂದಿದ... !  ಅಂದರೆ ದೀನದಯಾಳರ ಕೊಲೆ ಕೇಸು ಹಾಗೆಯೆ ವ್ಯವಸ್ಥಿತವಾಗಿ ಮುಚ್ಚಿ ಹೋಯಿತು... !
 
ಆದರೆ ವಿಚಿತ್ರವೆಂದರೆ ದೀನದಯಾಳರನ್ನು ಯಕಶ್ಚಿತ್ ಕಳ್ಳರಿಬ್ಬರು ಕಳ್ಳತನಕ್ಕಾಗಿ ಅವರ ಕ್ಯಾಬಿನ್ನಿಗೆ ನುಗ್ಗಿ ಅವರನ್ನು ಟ್ರೈನಿಂದ ತಳ್ಳಿ ಸಾಯಿಸಿದರು ಅಂತ ಚಂದ್ರಚೂಡ್ ಆಯೋಗ ಹೇಳಿತೇನೋ ಸರಿ... ಆದರೆ ಅವರ ಬಳಿಯಿದ್ದ ಸೂಟ್ ಕೇಸ್ ಅನ್ನು ಆ ಕಳ್ಳ ಯಾಕೆ ಕದಿಯಲೇ ಇಲ್ಲ...?  ಅದ್ಯಾಕೆ ಕ್ಯಾಬಿನ್ನಿನಲ್ಲೇ ಉಳಿಯಿತು...?   ಅನ್ನುವುದಕ್ಕೆ ಉತ್ತರ ನೀಡುವುದಿಲ್ಲ... ! ಅವರ ಕ್ಯಾಬಿನ್ನಿನಲ್ಲಿ ಶರ್ಮಾ ಎಂಬ ಹೆಸರಿನಲ್ಲಿ ಬೇರೆ ಯಾರು ಪ್ರಯಾಣಿಸಿದ್ದರು ಎಂಬ ಬಗ್ಗೆ ಆಯೋಗ ಏನನ್ನೂ ಹೇಳುವುದಿಲ್ಲ... ಜೊತೆಗೆ ದೀನ ದಯಾಳರ ಜೊತೆಗೆ ಪ್ರಯಾಣಿಸಿದ ಇತರ ಸಹಪ್ರಯಾಣಿಕರ ಬಗ್ಗೆಯೂ ಸರಿಯಾದ ಮಾಹಿತಿಯಿಲ್ಲ.   
 
ಇದಕ್ಕಿಂತಲೂ ಆಶ್ಚರ್ಯದ ನಿಗೂಢ  ವಿಚಾರವಿದೆ.  ಈಗ ಶ್ರೀ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ  ಮೇಲೆ ಕಾಂಗ್ರೆಸ್ ಆಡಳಿತದ ಕಾಲದಲ್ಲಾಗಿದ್ದ ಇಂಥ ನಿಗೂಢ ಪ್ರಕರಣಗಳ ಮರುವಿಚಾರಣೆ ನಡೆಸಲು ಮನವಿಗಳು ಸಲ್ಲಿಸಲ್ಪಟ್ಟವು.  ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಅಧಿಕಾರ ವಹಿಸಿಕೊಂಡ ಕೂಡಲೇ ದೀನದಯಾಳರ ಕೊಲೆ ಕೇಸನ್ನು ಮತ್ತೊಮೆ ತೆರೆಯುವ ಪ್ರಯತ್ನ ಮಾಡಿದರು.  ಕೇಂದ್ರ ಗೃಹ ಸಚಿವಾಲಯ ಕೂಡಾ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದು ಮಾಹಿತಿ ಕೋರಿತ್ತು.  ಅದರ ಪ್ರಕಾರ ರೈಲ್ವೆಯ ಅಲಹಾಬಾದ್ (ಈಗಿನ ಪ್ರಯಾಗ್ ರಾಜ್ ) ಪೊಲೀಸ್ ಸುಪರಿಂಟೆಂಡಂಟ್ ನೀಡಿದ ವರದಿ ಅಚ್ಚರಿ ಹುಟ್ಟಿಸಿದೆ.  ದೀನದಯಾಳ ಉಪಾಧ್ಯಾಯರ ಕೊಲೆಗೆ ಸಂಬಂಧಿಸಿದ ಎಫ್ ಐ ಆರ್ ನಿಂದ ಹಿಡಿದು, ಕೇಸ್ ಡೈರಿ ಸಮೇತ ಎಲ್ಲ ದಾಖಲೆಗಳೂ ಕಾಣೆಯಾಗಿವೆ... !  ಯಾವುದೂ ಲಭ್ಯವಿಲ್ಲ ...!  ಯಾಕೆ ಹೀಗೆ..?  ಈ ದಾಖಲೆಗಳನ್ನೆಲ್ಲಾ ನಾಪತ್ತೆ ಮಾಡಿದ್ದ್ಯಾರು..?   ಯಾರು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.. ? 
 
ಅಂದರೆ ಇದೆಲ್ಲಾ ಏನನ್ನು ಸೂಚಿಸುತ್ತದೆ...?  ಪಂಡಿತ ದೀನ ದಯಾಳ ಉಪಾಧ್ಯಾಯರನ್ನು ಭಾರೀ ದೊಡ್ಡ ಸಂಚು ರೂಪಿಸಿ ಹತ್ಯೆಗೈಯ್ಯಲಾಗಿದೆ..!  ಇದರ ಹಿಂದೆ ಬಹಳ ನಿಗೂಢ ವ್ಯಕ್ತಿಗಳಿದ್ದಾರೆ... ನೆಹರೂ ಅಧಿಕಾರದಲ್ಲಿದ್ದಾಗ ಭಾರತೀಯ ಜನಸಂಘದ ಅಧ್ಯಕ್ಷ ಶಾಮಪ್ರಸಾದ ಮುಖರ್ಜಿಯವರು ಜೈಲಿನಲ್ಲಿ ನಿಗೂಢವಾಗಿ ಮೃತಪಟ್ಟರು....!  ಅದೇ ರೀತಿ ನೆಹರೂ ಮಗಳು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಜನಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಕೇವಲ ೪೧ ದಿನದೊಳಗೆಯೇ ಪಂಡಿತ ದೀನದಯಾಳರ ನಿಗೂಢ ಹತ್ಯೆಯಾಯಿತು...!  ರಹಸ್ಯ ಬಯಲಾಗಲೇ ಇಲ್ಲ... ಸಂಚುಕೋರರು ಸಿಗಲೇ ಇಲ್ಲ... ಕೊಲೆಗಾರರಿಗೆ ಶಿಕ್ಷೆ ಆಗಲೇ ಇಲ್ಲ...!!
 
ಇವತ್ತು ಪಂಡಿತ ದೀನದಯಾಳ ಉಪಾಧ್ಯಾಯ ಎಂಬ ಪುಣ್ಯ ಪುರುಷರ ಪುಣ್ಯ ತಿಥಿ!  ತೀರಾ ಹಿಂದುಳಿದ ಅವಕಾಶ ವಂಚಿತ ಪ್ರತಿಯೊಬ್ಬ ಭಾರತೀಯನಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ 'ಅಂತ್ಯೋದಯ' ಸಿದ್ಧಾಂತ ಪ್ರತಿಪಾದಿಸಿದ, 'ಸಮಗ್ರ ಮಾನವೀಯತೆ' ಸಿದ್ಧಾಂತ ಹುಟ್ಟುಹಾಕಿದ ಮಹಾನ್ ನೇತಾರನೊಬ್ಬ ಪುಣ್ಯ ಸ್ಮರಣೆ ಮಾಡಬೇಕಾದ ಸುದಿನ ಇವತ್ತು.  ಯಾಕೋ ಅವರ ಜೀವನದ ಅಂತಿಮ ಕ್ಷಣದ ಬಗ್ಗೆ ಯೋಚಿಸುವಾಗ ನನಗೆ ಇವತ್ತಿಗೂ, ಈ ಹೊತ್ತಿಗೂ ಮೈ ನವಿರೇಳುತ್ತದೆ!  ಆತನ ಬಲಗೈ ಮುಷ್ಠಿಯೊಳಗೆ ಇದ್ದದ್ದು ಐದು ರೂಪಾಯಿಯ ಒಂದು ನೋಟು...!  ಅದನ್ನವರು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಕೈಯನ್ನೆತ್ತಿ ಹಿಡಿದ ಸ್ಥಿತಿಯಲ್ಲಿ ಕೊನೆಯುಸಿರೆಳೆದಿದ್ದರು...!  ಆ ಮೂಲಕ ಅವರು ಏನಾದರೂ ತಿಳಿಸಲು ಪ್ರಯತ್ನಿಸಿದರೇ ..? ಅದರಲ್ಲೊಂದು ಸಾಂಕೇತಿಕತೆ ಅಡಗಿತ್ತೇ..?  ಐದು ಅಂದರೆ ಅದು ಐವತ್ತೇ..?  ಐವತ್ತು ವರ್ಷಗಳ ಬಳಿಕ ತಾನು ಪ್ರತಿಪಾದಿಸಿದ, ನಂಬಿದ, ಆಚರಿಸಿದ ಸಿದ್ಧಾಂತವನ್ನಿಟ್ಟುಕೊಂಡ ಪಕ್ಷ ಅಷ್ಟೇ ಸಮರ್ಥ ನಾಯಕತ್ವದೊಂದಿಗೆ ಭಾರತ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಅಂತ ಅವರು ತಮ್ಮ ಅದಮ್ಯ ವಿಶ್ವಾಸವನ್ನು ತಮ್ಮ ಜೀವನದ ಅಂತಿಮ ಕ್ಷಣದಲ್ಲೂ ಹೇಳಲು ಪ್ರಯತ್ನಿಸಿದರೇ ...?  ಅದೇ ಇವತ್ತಿನ ದಿನ ನಿಜವಾಗಿ, ಅವರ ಕನಸು ಸಾಕ್ಷಾತ್ಕಾರವಾಗಿದೆಯೇ..?  ಅದರ ದ್ಯೋತಕವಾಗಿಯೇ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಗಳಾಗಿ  ದೇಶವನ್ನು ಸಧೃಢಗೊಳಿಸಿ ಇನ್ನೊಂದು ದೊಡ್ಡ ಗೆಲುವಿನ ಕಡೆಗೆ ದಾಪುಗಾಲಿಡುತ್ತಿದ್ದಾರೆಯೇ..?  ಇದನ್ನೆಲ್ಲಾ ನೋಡಿ ಪಂಡಿತ ದೀನದಯಾಳರ ಆತ್ಮ ಹರ್ಷಿಸುತ್ತಿರಬಹುದೇ...? 
 
ನನ್ನ ಭಾವುಕ ಮನಸ್ಸಿಗಂತೂ ಹಾಗೆಯೆ ಅನಿಸುತ್ತಿದೆ.... 

Related posts