Infinite Thoughts

Thoughts beyond imagination

ಪ್ರತಿಯೊಬ್ಬ ಹಿಂದೂವಿನ ಹೃದಯಸಾಮ್ರಾಜ್ಯದಲ್ಲೂ... ಶಿವಾಜಿ ಮಹಾರಾಜರು ವಿರಾಜಮಾನರಾಗಬೇಕು ....!

ಪ್ರತಿಯೊಬ್ಬ ಹಿಂದೂವಿನ ಹೃದಯಸಾಮ್ರಾಜ್ಯದಲ್ಲೂ... 

ಶಿವಾಜಿ ಮಹಾರಾಜರು  ವಿರಾಜಮಾನರಾಗಬೇಕು ....! 

ಮನೆಯ ಒಳಹೊಕ್ಕೊಡನೆಯೇ ಇರುವ ವಿಶಾಲ ಚಾವಡಿಯ ಎಡಭಾಗದ ಗೋಡೆಯನ್ನು ಪೂರ್ತಿಯಾಗಿ ಆವರಿಸುವಂತೆ ಅಂದಾಜು ಏಳು ಅಡಿ ಎತ್ತರ ಹತ್ತು-ಹನ್ನೆರಡು ಅಡಿ ಅಗಲವಿದ್ದ ದೊಡ್ಡದಾದ ಚಿತ್ರ.  ಆ ಮನೆಯ ಒಳ ಪ್ರವೇಶಿಸಿದ ಎಲ್ಲರ ದೃಷ್ಟಿಯನ್ನೂ ಮೊದಲು ಸೆಳೆಯುವುದು ಅದೇ ಚಿತ್ರ... ಹಾಗಾಗಿ ಮನೆಯೊಳಗೆ  ಬಂದ ಪ್ರತಿಯೊಬ್ಬರೂ ಸೀದಾ ಎಡಗಡೆಗೆ ತಿರುಗಿ ಗೋಡೆಯಲ್ಲಿದ್ದ ಆ ಭವ್ಯವಾದ ಚಿತ್ರದ ಬಳಿ ಸಾಗುತ್ತಿದ್ದರು... ಹಾಗೆ ಚಿತ್ರದ ಬಳಿ ತೆರಳಿದವರು ಏನಿಲ್ಲವೆಂದರೂ ಒಂದೈದು ನಿಮಿಷವಾದರೂ ತದೇಕಚಿತ್ತರಾಗಿ ಅದನ್ನೇ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದರು... ಅಷ್ಟಾದ ಮೇಲೆಯೇ ಅವರು ಮನೆಯವರ ಕಡೆಗೆ ಗಮನ ಹರಿಸುತ್ತಿದ್ದದ್ದು ..! 

ಆ ಬಳಿಕ ಶುರುವಾಗುತ್ತಿದ್ದದ್ದು ಪ್ರಶ್ನೆಗಳ ಸರಣಿ... ಅಣ್ಣಾ ಇದನ್ನೆಲ್ಲಿಂದ ತಂದಿರಣ್ಣಾ...? ಇಂಥದ್ದೊಂದು ಒಡ್ಡೋಲಗದ ಚಿತ್ರ ಎಲ್ಲಿ ಸಿಕ್ಕಿತಣ್ಣಾ ...?  ತುಂಬಾ ಅದ್ಭುತವಾಗಿದೆ ಸರ್ ....ಇಷ್ಟು ದೊಡ್ಡ ಚಿತ್ರಕ್ಕೆ ಎಷ್ಟಾಯಿತು, ಸಾರ್..?  ಅಂತೆಲ್ಲ ಕೆಲವರ ಪ್ರಶ್ನೆಯಾದರೆ.... ಇನ್ನೂ  ಕೆಲವರು ಹತ್ತಿರ ಹೋಗಿ ಚಿತ್ರವನ್ನು ಮುಟ್ಟಿ ನೋಡಿ... ಇದು ಸಂಪೂರ್ಣವಾಗಿ ಗಾಜಿನಿಂದಲೇ ಮಾಡಿದ್ದಲ್ಲವೇ..? ತುಂಬಾ ಅದ್ಭುತವಾಗಿದೆ ಸರ್.. ಇದೊಂದು ಚಿತ್ರ ಮನೆಯಲ್ಲಿದ್ದುಬಿಟ್ಟರೆ ಸಾಕು ಸಾರ್ .... ಆ ಮನೆಯಲ್ಲಿ ವಾಸವಿರುವವರ ಹೃದಯದಲ್ಲಿ ಸದಾ ದೇಶಭಕ್ತಿಯ ಜ್ಯೋತಿ ನಂದಾ ದೀಪದಂತೆ ಸದಾ ಉರಿಯುತ್ತಿರುತ್ತದೆ ಸಾರ್... ನಿಜಕ್ಕೂ ನಿಮ್ಮ ಆಲೋಚನೆ ಅದ್ಭುತ ಸಾರ್...! ಹೀಗೆ ಅಭಿನಂದನಗಳ ಪೂರ... 

ಒಟ್ಟಿನಲ್ಲಿ ಇದುವರೆಗೆ ಆ ಚಿತ್ರವನ್ನು ಎಷ್ಟು ಮಂದಿ ನೋಡಿದ್ದಾರೋ , ನೋಡಿದವರೆಲ್ಲರೂ ಒಂದಿಲ್ಲೊಂದು ರೀತಿಯಿಂದ ಪ್ರಭಾವಿತರಾದವರೇ... ನೂರಕ್ಕೆ ನೂರರಷ್ಟು ಜನರೂ ಹೊಗಳಿದವರೇ... ಅಭಿನಂದನೆ ಸೂಚಿಸಿದವರೇ... ! 

ಅಂದ ಹಾಗೆ ಆ ಚಿತ್ರದಲ್ಲಿ ಇದ್ದದ್ದು ಪ್ರತಿಯೊಬ್ಬ ಹಿಂದೂವಿನ  ಹೃದಯ ಸಾಮ್ರಾಜ್ಯದಲ್ಲಿಯೂ  ಸದಾ ವಿರಾಜಮಾನನಾಗಿರುವ... ಹಿಂದೂ ಹೃದಯ ಸಾಮ್ರಾಟ, ಹಿಂದೂ ವಿರೋಧಿಗಳ ಹುಟ್ಟಡಗಿಸಿ ಪ್ರಥಮ ಬೃಹತ್ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ ಮರಾಠಾ ವೀರ ಛತ್ರಪತಿ ಶಿವಾಜಿ ಮಹಾರಾಜರ ಒಡ್ಡೋಲಗ... ಛತ್ರಪತಿಯಾಗಿ ಪಟ್ಟಾಭಿಷಿಕ್ತನಾದ ಶಿವಾಜಿ ಮಹಾರಾಜಾ ತನ್ನ ಆಸ್ಥಾನದಲ್ಲಿ ಕುಳಿತು ದರ್ಬಾರ್ ನಡೆಸುತ್ತಿರುವ ಮನ ಮೋಹಕ ದೃಶ್ಯ... ಬೃಹತ್ ಗಾಜಿನ ಫಲಕದಲ್ಲಿ ಮುದ್ರಿತಗೊಂಡ ಆ ಚಿತ್ರ ಎಂತವರ ಮನಸ್ಸಿನಲ್ಲಿಯೂ ದೇಶಭಕ್ತಿಯ ಕೆಚ್ಚನ್ನು ಬಡಿದೆಬ್ಬಿಸುವಂತಿತ್ತು... ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲೂ ಹಿಂದೂ ಸಾಮ್ರಾಜ್ಯವೊಂದರ ಅಮೋಘ ಕಲ್ಪನೆಯನ್ನು ಹುಟ್ಟಿಸಿ ರೋಮಾಂಚಿತರಾಗಿಸುವಂತಿತ್ತು... 

ಶಿವಾಜಿ ಮಹಾರಾಜರನ್ನು ಅವರ ತಾಯಿ ಜೀಜಾಬಾಯಿ ಬೆಳೆಸಿದ ರೀತಿ, ಅವರಿಗೆ ಚಿಕ್ಕಂದಿನಲ್ಲೇ ದೇಶಪ್ರೇಮದ, ರಾಷ್ಟ್ರಪ್ರೇಮದ ಕತೆಗಳನ್ನು ಹೇಳಿ, ರಾಮಾಯಣ , ಮಹಾಭಾರತ ಮುಂತಾದ ಪುರಾಣಗಳ ವೇದೋಪನಿಷತ್ತುಗಳ ಪಾಠ ಮಾಡಿ ಹಿಂದೂ ಧರ್ಮದ ಸಾರ ಸರ್ವಸ್ವವನ್ನೂ ಹೇಳಿ ಮಗನನ್ನು ಓರ್ವ ಕೆಚ್ಚೆದೆಯ ದೇಶಪ್ರಮಿಯಾಗಿ, ಧರ್ಮಭೀರುವನ್ನಾಗಿ ರೂಪಿಸಿದ ಕತೆ ಎಲ್ಲಾ ಕಡೆಯೂ ಜನಜನಿತ. ಇದೆಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ  ನಮ್ಮ ಬಾಲ್ಯದ ದಿನಗಳ ಕತೆ ಕೊಂಚ ಬೇರೆ... ನಮಗೆ ರಾಮಾಯಣ, ಮಹಾಭಾರತ ಉಪನಿಷತ್ತುಗಳ ಜೊತೆಗೆ ಜೀಜಾಬಾಯಿಯಂಥಾ ಮಹಾಮಾತೆಯ ಕತೆಯನ್ನೂ , ಆಕೆ ಶಿವಾಜಿಯ ಬಾಲ್ಯವನ್ನು ರೂಪಿಸಿದ ಕತೆಯನ್ನೂ ಹೇಳುತ್ತಲೇ ನಮ್ಮನ್ನು ಬೆಳೆಸಿದರು ನಮ್ಮ ತಂದೆ-ತಾಯಿಗಳು.... ಹಾಗಾಗಿ ನಾವು ಚಿಕ್ಕ ಹುಡುಗರಿರುವಾಗಲೇ ನಮಗೆ ಅತ್ಯಂತ ಸ್ಪೂರ್ತಿದಾಯಕ ಹೀರೊ ಅಂದರೆ ಶಿವಾಜಿಯೇ....! 

ಶಿವಾಜಿ  ಮಹಾರಾಜರ ಜೀವನ ಹೀಗೆ ಭಾರತೀಯರ ಪಾಲಿಗೆ ಒಂದು ಪಠ್ಯ ಪುಸ್ತಕದಂತೆ.  ಅಂದಾಜು ನಾಲ್ಕು ಶತಮಾನಗಳಿಗೂ ಹಿಂದೆ ಅಂದಿನ ಮೊಘಲರ ದುರಾಚಾರದ ವಿರುದ್ಧ ಸೆಟೆದು ನಿಂತು ಸೋಲಿಸಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ, ಚಕ್ರಾಧಿಪತ್ಯ ಕಟ್ಟಿ ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತರಲ್ಲ... ಅವರು ಕೆಲವು ಕಾಲ ಬೆಂಗಳೂರಿನಲ್ಲೂ ವಾಸವಾಗಿದ್ದರು... ಅವರ ವಿವಾಹ  ಆದದ್ದು ಬೆಂಗಳೂರಿನಲ್ಲಿಯೇ... ಚಿಕ್ಕಪೇಟೆಯಲ್ಲಿ ಇದ್ದ ಗೌರಿ ಮಹಲ್ ಅರಮನೆಯಲ್ಲಿಯೇ ಜರಗಿತು ಅಂತ ಇತಿಹಾಸವಿದೆ..!!

ಶಿವಾಜಿಯಂಥಾ ಮಹಾಶೂರರು ಕಾಲಕಾಲಕ್ಕೆ ಅವತಾರವೆತ್ತದೇ ಹೋಗಿದ್ದರೆ ಇವತ್ತಿಗೆ ನಮ್ಮ ಹಿಂದೂ ಧರ್ಮ ಭೂಪಟದ ಮೇಲೆ ಜೀವಂತ ಉಳಿಯುವುದೇ  ಕಷ್ಟವಿತ್ತು!  ಇಂಥಾ ಶ್ರೇಷ್ಠ ವ್ಯಕ್ತಿಯೊಬ್ಬನನ್ನು ನಮ್ಮ ದೇಶ ಅದರಲ್ಲೂ ಸ್ವತಂತ್ರ ಭಾರತ ಸದಾ ನಿರ್ಲಕ್ಷಿಸುತ್ತಲೇ ಬಂತು!  ಇದೀಗ ಮೊತ್ತ ಮೊದಲ ಬಾರಿಗೆ ಮೋದೀಜಿಯವರ ಸರಕಾರ ಬಂದ  ಬಳಿಕ ಶಿವಾಜಿ ಮಹಾರಾಜರ ಕೊಡುಗೆಯನ್ನು ಸ್ಮರಿಸುವ ಕೆಲಸ ನಡೆದಿದೆ.  ಅದಕ್ಕಾಗಿ ಮುಂಬೈಯ ಸಮುದ್ರ ತಟದಲ್ಲಿ ಶಿವಾಜಿ ಮಹಾರಾಜರ ಅಶ್ವಾರೂಢ ಬೃಹತ್ ವಿಗ್ರಹ ಸ್ಥಾಪನೆ ಮಾಡಲಾಗುತ್ತಿದೆ. 

ಇವತ್ತು ಆ ಪುಣ್ಯ ಪುರುಷ ಜನಿಸಿದ ಜಯಂತಿ!  ಅಂಥಾ ಹಿಂದೂ  ಹೃದಯ ಸಾಮ್ರಾಟನನ್ನು ನಾವು ಹೃತ್ಪೂರ್ವಕವಾಗಿ ನೆನೆಯ ಬೇಕಾದ, ಪೂಜಿಸಬೇಕಾದ ದಿನ!

ನನ್ನ ಮನದಲ್ಲಿ ಹೃದಯದಲ್ಲಿ ಸದಾ ವಿರಾಜಮಾನರಾಗಿರುವ ಶ್ರೀ ಶಿವಾಜಿ ಮಹಾರಾಜರನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳುವುದರ ಜೊತೆಗೆ ನನ್ನ ಮನೆಯ ಪಡಸಾಲೆಯಲ್ಲೂ ಛತ್ರಪತಿ ಶಿವಾಜಿ ಮಹರಾಜರ ಒಡ್ಡೋಲಗದ, ದರ್ಬಾರದ ಬೃಹತ್ ಚಿತ್ರವನ್ನೇ ಪ್ರದರ್ಶಿಸಿದ್ದೇನೆ.

ಇವತ್ತು ಆ ಮಹಾಪುರುಷನ ಜಯಂತಿಯಂದು ಅವರನ್ನು ಪೂಜ್ಯ ಭಾವನೆಯಿಂದ ಸ್ಮರಿಸೋಣ..... 

ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ!!

 

Related posts