Infinite Thoughts

Thoughts beyond imagination

ಮೋದಿ ಮೋಡಿಯ ರೂಪೇ ಕಾರ್ಡ್ - ದೇಶೀಯ ವ್ಯವಸ್ಥೆ-ರೂಪೇ ಕಾರ್ಡ್

ಮೋದಿ ಮೋಡಿಯ ರೂಪೇ ಕಾರ್ಡ್

೨೦೧೮ರ ಜೂನ್ ೨೧ರಂದು ವಿಶ್ವದ ಬಹುತೇಕ ರಾಷ್ಟ್ರಗಳು, “ವಿಶ್ವ ಯೋಗದಿನ” ಆಚರಿಸುತ್ತ ಮೋದಿಯವರ ಗುಣಗಾನ ಮಾಡುತ್ತಿದ್ದಾಗ, ಅಮೇರಿಕದ ಮಾಸ್ಟರ್ ಕಾರ್ಡ್ ಕಂಪನಿ ಮೋದಿಯವರನ್ನು ದೂರುತ್ತಿತ್ತು!  ಆಶ್ಚರ್ಯವಾದರೂ ಇದು ಸತ್ಯ.  ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯಡಿ ಸಾಮಾನ್ಯನಿಗೂ ಖಾತೆ ತೆರೆಸಿದ ಮೋದಿಯವರು ಎಲ್ಲ ಖಾತೆದಾರರಿಗೆ ರೂಪೇ ಕಾರ್ಡ್ ಸಿಗುವಂತೆ ಮಾಡಿದ್ದರು.  ರೂಪೇ ಕಾರ್ಡ್ ವ್ಯಾಪಕ ಬಳಕೆಯಿಂದಾಗಿ ನಗದು ರಹಿತ ವ್ಯವಹಾರದ ದೊಡ್ಡ ಪಾಲು ದೇಶೀಯವಾಯಿತು.  ೨೦೧೭ರಲ್ಲಿ ರೂಪೇ ಕಾರ್ಡಿನ ಒಟ್ಟೂ ವ್ಯವಹಾರ ರೂ. ೫,೯೩೪ ಕೋಟಿ, ೨೦೧೮ರಲ್ಲಿ ರೂ. ೧೬,೬೦೦ ಕೋಟಿ.  ಈ ಪ್ರಮಾಣದ ಬೆಳವಣಿಗೆಯನ್ನು ಕಂಡು ಕಂಗಾಲಾದ ಮಾಸ್ಟರ್ ಕಾರ್ಡ್ ಕಂಪನಿ USTR (United States Trade Representative) ಕಚೇರಿಯಲ್ಲಿ ದೂರು ನೀಡಿತು.  ರೂಪೇ ಕಾರ್ಡ್ ವ್ಯವಹಾರವನ್ನು ನಿಯಂತ್ರಿಸದಿದ್ದರೆ ತನಗೆ ಅಪಾರ ಹಾನಿಯಾಗುತ್ತದೆಂದು ದೂರಿತ್ತಿತು.  ಆ ದೂರಿಗೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲವಾದರೂ ರೂಪೇ ಕಾರ್ಡಿನ ಬಳಕೆಯ ಮಹತ್ವವನ್ನು ಅದು ತಿಳಿಸಿಕೊಟ್ಟಿತು.

ದೇಶೀಯ ವ್ಯವಸ್ಥೆ-ರೂಪೇ ಕಾರ್ಡ್

ಜನಸಾಮಾನ್ಯರನ್ನು ಬ್ಯಾಂಕಿನ ಗ್ರಾಹಕರನ್ನಾಗಿ ಮಾಡಿದ ಪ್ರಧಾನಮಂತ್ರಿ ಜನಧನ ಯೋಜನೆ ದೇಶದ ಆರ್ಥಿಕ ವ್ಯವಹಾರದಲ್ಲಿ ಕ್ರಾಂತಿಯನ್ನೇ ಮಾಡಿದೆ.  ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ಗಿನ್ನಿಸ್ ದಾಖಲೆಯಾಗಿದೆ.  ಅದರ ಜೊತೆಯಲ್ಲಿಯೇ ಇನ್ನೊಂದು ಸಾಧನೆಯೂ ಆಗಿದೆ.  ಅದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.  ಅದೇ, ರೂಪೇ ಕಾರ್ಡ್ಗಳ ಬಳಕೆಗೆ ಒತ್ತು ನೀಡಿದ್ದು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ೨೦೧೬ ಡಿಸೆಂಬರ್ ೩೦ರಂದು ಭೀಮ್ ಆ್ಯಪ್ (BHIM UPI) ದೇಶಕ್ಕೆ ಸಮರ್ಪಣೆ ಮಾಡಿದರು.  ಜನಧನ ಖಾತೆದಾರರಿಗೆ ಒಂದು ರೂಪೇ ಕಾರ್ಡ್ ನೀಡಲಾಯಿತು.  ಆಗ ಗ್ರಾಮೀಣ ಪ್ರದೇಶದ ಜನರಿಗೆ ರೂಪೇ ಕಾರ್ಡ್ ಕೊಡುವುದು ವ್ಯರ್ಥ ಎಂದು ಅನೇಕರು ಹೇಳಿದರು.  ಆಗ ಮೋದಿಯವರು “ನಮ್ಮ ಹಳ್ಳಿಯ ಹೈದರು, ಹೆಣ್ಣುಮಕ್ಕಳಿಗೂ ಏಟಿಎಂ ಕಾರ್ಡ್ ಬಳಸುತ್ತಿದ್ದೇವೆ ಎನ್ನುವ ಹೆಮ್ಮೆ ಇರಬೇಕು, ನನಗೆ ವಿಶ್ವಾಸವಿದೆ ಅವರೆಲ್ಲ ಅದನ್ನು ಸರಿಯಾಗಿಯೇ ಬಳಸುತ್ತಾರೆ” ಎಂದು ಹೇಳಿದರು.  ಮೋದಿಯವರ ಮಾತು ನಿಜವಾಯಿತು.  ಇಂದು ಭಾರತದಲ್ಲಿ ಬಳಕೆಯಾಗುತ್ತಿರುವ ಕಾರ್ಡ್ಗಳಲ್ಲಿ ಶೇಕಡಾ ೬೫ರಷ್ಟು ರೂಪೇ ಕಾರ್ಡ್ಗಳಾಗಿವೆ.  ಭಾರತೀಯ ರಿಸರ್ವ್ ಬ್ಯಾಂಕ್ ೨೦೧೨ರಲ್ಲೇ ರೂಪೇ ಕಾರ್ಡ್ ಗಳ ಬಿಡುಗಡೆ ಮಾಡಿತ್ತಾದರೂ ಅದರ ವ್ಯಾಪಕ ಬಳಕೆ ಆರಂಭವಾದದ್ದು ಜನಧನ ಯೋಜನೆಯೊಂದಿಗೆ.  ಭಾರತದಲ್ಲಿ ಬಳಕೆಯಲ್ಲಿರುವ ಕಾರ್ಡ್ ಗಳ ಸಂಖ್ಯೆಯಲ್ಲಿ ರೂಪೇ ಕಾರ್ಡ್ ಗಳು ಮೊದಲ ಸ್ಥಾನದಲ್ಲಿದೆ.  ಇನ್ನೆರಡೇ ವರ್ಷಗಳಲ್ಲಿ, ವ್ಯವಹಾರದ ಮೊತ್ತ ಹಾಗೂ ವ್ಯಾಪ್ತಿಯಲ್ಲಿಯೂ ಅದು ಮೊದಲ ಸ್ಥಾನಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.  ಹಳ್ಳಿ ಹಳ್ಳಿಗಳಲ್ಲಿ ಪರಿಚಿತವಾಗಿರುವ ರೂಪೇ ಕಾರ್ಡ್ ಬಹುಬೇಗ ನಮ್ಮ ಗ್ರಾಮೀಣ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಸಂಗತಿಯಾಗುವ ದಿನ ದೂರವಿಲ್ಲ.  ನಗದು ರಹಿತ ಹಣಕಾಸು ವ್ಯವಹಾರವನ್ನು ಹಳ್ಳಿ ಹಳ್ಳಿಗಳಲ್ಲೂ ರೂಢಿಸುತ್ತಿರುವ ರೂಪೇ ಕಾರ್ಡ್ ದೇಶಕ್ಕೆ ನೀಡುತ್ತಿರುವ ಕೊಡುಗೆ ಬಹಳ ದೊಡ್ಡದು.  ಇದು ಸಂಪೂರ್ಣವಾಗಿ ನಮ್ಮ ದೇಶದಲ್ಲಿಯೇ ಸಿದ್ಧವಾದ ವ್ಯವಸ್ಥೆಯಾದ್ದರಿಂದ ನಮ್ಮೆಲ್ಲ ವ್ಯವಹಾರಗಳೂ ಸುರಕ್ಷಿತವಾಗಿರುತ್ತವೆ.  ನಮ್ಮ ವ್ಯವಹಾರದ ಮಾಹಿತಿ ನಮ್ಮ ದೇಶದಲ್ಲಿಯೇ ಇರುತ್ತದೆ.  ಮೊದಲಿನಿಂದ ನಮ್ಮಲ್ಲಿ ಬಳಕೆಯಲ್ಲಿರುವ ವೀಸಾ ಕಾರ್ಡ್ ಮತ್ತು ಮಾಸ್ಟರ್  ಕಾರ್ಡ್ ಗಳು ವಿದೇಶಿ ಮೂಲದವಾದ್ದರಿಂದ ಆ ಕಾರ್ಡ್ ಗಳನ್ನೂ ಬಳಸಿ ಮಾಡಿದ ವ್ಯವಹಾರಕ್ಕೆ ತಗಲುವ ಶುಲ್ಕ ವಿದೇಶಕ್ಕೆ ಪಾವತಿಯಾಗುತ್ತದೆ.

ರೂಪೇ ಕಾರ್ಡ್ ಮೂಲಕ ಮಾಡಿದ ವ್ಯವಹಾರಕ್ಕೆ ತಗಲುವ ಶುಲ್ಕ ನಮ್ಮ ದೇಶಕ್ಕಾಗುವ ಉಳಿತಾಯವೂ ಹೌದು.  ವೀಸಾ ಕಾರ್ಡ್ ಮತ್ತು ಮಾಸ್ಟರ್ ಕಾರ್ಡ್ ಗಳಿಗೆ ಹೋಲಿಸಿದರೆ ರೂಪೇ ಕಾರ್ಡ್ ನ ವ್ಯವಹಾರ ಶುಲ್ಕದ ಪ್ರಮಾಣವೂ ಕಡಿಮೆಯಿದೆ. ವಿದೇಶಿ ಕಾರ್ಡುಗಳು ಒಂದು ವ್ಯವಹಾರಕ್ಕೆ ೩ ರೂಪಾಯಿ ಶುಲ್ಕ ವಿಧಿಸಿದರೆ ರೂಪೇ ಕಾರ್ಡ್ ವಿಧಿಸುವ ಶುಲ್ಕ ಕೇವಲ ೯೦ ಪೈಸೆ. ರೂಪೇ ಕಾರ್ಡ್ ಬರುವುದಕ್ಕಿಂತ ಮುಂಚೆ ಕೆಲವೇ ಬ್ಯಾಂಕುಗಳು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನೂ ನೀಡುತ್ತಿದ್ದವು.  ರೂಪೇ ಕಾರ್ಡ್ ಬಂದ ಮೇಲೆ ೧೧೦೦ಕ್ಕೂ ಹೆಚ್ಚು ಬ್ಯಾಂಕುಗಳು ರೂಪೇ ಕಾರ್ಡ್ ನೀಡುತ್ತಿವೆ.  ೧೮೫ಕ್ಕೂ ಹೆಚ್ಚು ರಾಷ್ಟ್ರಗಳು ರೂಪೇ ಕಾರ್ಡನ್ನು ಮಾನ್ಯ ಮಾಡಿವೆ.  ಪ್ರತಿ ತಿಂಗಳೂ ೨೬ ಕೋಟಿ ಸಂಖ್ಯೆಯ ವಹಿವಾಟು ನಡೆಯುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ಲೆಕ್ಕದಲ್ಲಿ ವರ್ಷಕ್ಕೆ ೩೧೨ ಕೋಟಿ ಸಂಖ್ಯೆಯ ವಹಿವಾಟು ನಡೆಯಲಿದೆ. ಅಂದರೆ ಪ್ರತಿ ವಹಿವಾಟಿಗೆ ೩ ರೂಪಾಯಿಯಂತೆ ಲೆಕ್ಕ ಹಾಕಿದರೆ ವೀಸಾ ಮತ್ತು ಮಾಸ್ಟರ್ ಕಾರ್ಡ್ ಕಂಪನಿಗೆ ೯೩೬ ಕೋಟಿ ರೂಪಾಯಿ ಹಾನಿಯಾಗುತ್ತದೆ!  ಮತ್ತು ಭಾರತಕ್ಕೆ ಅಷ್ಟು ಉಳಿತಾಯವಾಗುತ್ತದೆ. ಇದು ಸಣ್ಣ ಲೆಕ್ಕವಲ್ಲ ಆದರೆ ಥಟ್ಟನೆ ಗಮನಕ್ಕೆ ಬರುವುದಿಲ್ಲ. 

ಸಮಗ್ರ ಭಾರತ, ನಗದು ರಹಿತ ವ್ಯವಹಾರಕ್ಕೆ ಹೊಂದಿಕೊಂಡಾಗ ಅದೆಷ್ಟು ದೊಡ್ಡ ವ್ಯವಹಾರವಾದೀತು!  ಎಣಿಸಿದರೆ ಆಶ್ಚರ್ಯವಾಗುತ್ತದೆ, ಮೋದಿಯವರ ನಡೆಯ ಕುರಿತು ಹೆಮ್ಮೆಯಾಗುತ್ತದೆ.  ದೇಶದಲ್ಲಿರುವ ಎಲ್ಲ ರಾಷ್ಟ್ರೀಕೃತ  ಬ್ಯಾಂಕುಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ರೂಪೇ ಕಾರ್ಡ್ ಬಳಸುತ್ತಿರುವುದರಿಂದ ಡಿಜಿಟಲ್ ಇಂಡಿಯಾದ ಕನಸನ್ನು ನನಸಾಗಿಸುವಲ್ಲಿ ರೂಪೇ ಕಾರ್ಡ್ ಪ್ರಧಾನ ಸಾಧನವಾಗುವುದರಲ್ಲಿ ಸಂದೇಹವಿಲ್ಲ.  ಭಾರತ ರತ್ನ ಡಾ. ಭೀಮರಾವ್ ಅಂಬೇಡ್ಕರರನ್ನು ನೆನಪಿಸುವ ಭೀಮ್ ಆ್ಯಪ್‌ನ (BHIM) ತಾಂತ್ರಿಕ ಕ್ಷಮತೆ ಈಗಾಗಲೇ ಅದೆಷ್ಟು ಪ್ರಸಿದ್ದವಾಗಿದೆ ಎಂದರೆ ಜಗತ್ತಿನ ೩೦ ರಾಷ್ಟ್ರಗಳು ಅದರ ಸೇವೆಗಾಗಿ ಬೇಡಿಕೆ ಸಲ್ಲಿಸಿವೆ.  ಮೋದಿ ಸರಕಾರದ ಕಾರ್ಯವೈಖರಿಯೇ ಹಾಗೆ, ಗುಣಾತ್ಮಕ ಸಾಮರ್ಥ್ಯದಿಂದ ವಿಶ್ವದೆದುರು ಭಾರತವನ್ನು ಸಶಕ್ತವಾಗಿ ತೆರೆದಿಡುವುದು. 

ಸಶಕ್ತ ಭಾರತ-ಸ್ವಾವಲಂಬಿ ಭಾರತ!

Related posts