ಸ್ತ್ರೀ ಪುರುಷರ ನಡುವಿನ ಸಮಾನತೆ - ಅದುವೇ ನಿಜವಾದ ಭಾರತೀಯತೆ
ಸ್ತ್ರೀ ಪುರುಷರ ನಡುವಿನ ಸಮಾನತೆ - ಅದುವೇ ನಿಜವಾದ ಭಾರತೀಯತೆ
ವೇದಕಾಲದಿಂದಲೂ ಪ್ರಕೃತಿ-ಪುರುಷರನ್ನು ಸಮಾನವಾಗಿ ಕಂಡವಳು ಭಾರತಮಾತೆ!
ಪ್ರತಿ ವರ್ಷ ಮಾರ್ಚ್ ತಿಂಗಳ ೮ ನೇ ತಾರೀಕಿನಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯುತ್ತದೆ.
೧೯೭೫ರಲ್ಲಿ ವಿಶ್ವ ಸಂಸ್ಥೆ ಈ ದಿನವನ್ನು ವಿಶ್ವ ಮಹಿಳಾ ದಿನವೆಂದು ಒಪ್ಪಿಕೊಂಡು ಘೋಷಣೆ ಮಾಡಿದೆ. ಹಾಗಾಗಿ ಪ್ರತೀ ವರ್ಷವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನದ ಆಚರಣೆ ನಡೆಯುತ್ತಿದೆ. ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರಿಬ್ಬರೂ ಸಮಾನರು ಎಂಬ ಸಿದ್ಧಾಂತದ ಅಡಿಯಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ಈ ಬಾರಿಯ ಮಹಿಳಾ ದಿನದ ಘೋಷ ವಾಕ್ಯವನ್ನು ರೂಪಿಸಲಾಗಿದೆ. Balance for Better ಅನ್ನುವ ಈ ಬಾರಿಯ ಘೋಷಣೆ ಜಗತ್ತಿನಾದ್ಯಂತ ಸ್ತ್ರೀಯರಿಗೆ ಅತಿ ಹೆಚ್ಚಿನ ಸಮಾನತೆ ತಂದು ಕೊಡಲಿ. ಪುರುಷರಿಗೆ ಯಾವ ರೀತಿಯಲ್ಲೂ ಕಡಿಮೆಯೇ ಇಲ್ಲದಂತೆ, ಅವರಿಗೆ ಸರಿಸಮಾನರಾಗಿ ನಿಂತು ಬದುಕಲಿ, ಬಾಳಲಿ, ಹೆಮ್ಮೆ ಪಡಲಿ, ಹರ್ಷ ಪಡಲಿ ಎಂಬ ಹಾರೈಕೆ ನಮ್ಮದು.
ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವಸಂಸ್ಥೆ ಅಧಿಕೃತವಾಗಿ ಶುರುಮಾಡಿದ್ದು ೧೯೭೫ರಲ್ಲಿ. ಅದಕ್ಕೂ ಮೊದಲು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಜನಪ್ರಿಯತೆ ಪಡೆಯುತ್ತಿದ್ದ ಸಮಾಜವಾದಿ ಸಿದ್ಧಾಂತದಿಂದ ಪ್ರೇರಿತವಾಗಿ ಮಹಿಳಾ ಸಮಾನತೆಯ, ಮಹಿಳಾ ದಿನಾಚರಣೆಯ ಪರಿಕಲ್ಪನೆ ಹುಟ್ಟಿಕೊಂಡದ್ದು. ೧೯೦೯ರಲ್ಲಿ ಅಮೆರಿಕಾದ ಸಮಾಜವಾದಿ ಪಾರ್ಟಿ ಮೊತ್ತ ಮೊದಲ ಮಹಿಳಾ ದಿನಾಚರಣೆಯನ್ನು ಫೆಬ್ರವರಿ ೨೮ರಂದು ಆಚರಣೆ ಮಾಡಿತ್ತು. ಇದಾಗಿ ಒಂದು ದಶಕದೊಳಗೆ ರಷ್ಯಾದಲ್ಲಿ ಕಮ್ಯುನಿಸ್ಟ್ ಪ್ರಬಲವಾಗುತ್ತಿದ್ದಂತೆ ಮಹಿಳೆಯರಿಗೆ ಮತ ಚಲಾವಣೆಯ ಹಕ್ಕನ್ನು ಮಾರ್ಚ್ ೮ನೇ ತಾರೀಕಿಗೆ ನೀಡಲಾಯಿತು. ಅದಕ್ಕೋಸ್ಕರವೇ ಮಹಿಳಾ ದಿನವನ್ನು ಮಾರ್ಚ್ ೮ನೇ ತಾರೀಕಿಗೆ ಆಚರಿಸುವ ಪರಿಪಾಠ ಬೆಳೆಯಿತು..!
ಇದನ್ನೆಲ್ಲಾ ಸುಮ್ಮನೆ ಒಮ್ಮೆ ಯೋಚಿಸುವಾಗ ನನಗೆ ತಮಾಷೆ ಅನ್ನಿಸಿದುಂಟು..! ಅಂದರೆ ೧೯೦೯ರವರೆಗೆ ಅಥವಾ ೧೯೧೭ರ ವರೆಗೆ ಪಾಶ್ಚಾತ್ಯ ಸಮಾಜದಲ್ಲಿ ಸ್ತ್ರೀ ಸಮಾನತೆಯ ಪರಿಕಲ್ಪನೆ ಇರಲೇ ಇಲ್ಲವೇ...? ನಮ್ಮ ಭಾರತ ದೇಶದ ಸಂಸ್ಕೃತಿ ಈ ಹಿಂದೆ (ಅಂದರೆ ಪರಕೀಯರು ನಮ್ಮ ದೇಶದ ಮೇಲೆ ದಾಳಿ ಮಾಡಿ ನಮ್ಮಲ್ಲಿ, ನಮ್ಮ ದೇಶದಲ್ಲಿ ಅಗಾಧ ಸಾಂಸ್ಕೃತಿಕ ನಾಶವಾಗುವ ತನಕ) ಹೇಗಿತ್ತು? ಆಗಿನ ಜನ ಜೀವನದಲ್ಲಿ ಮಹಿಳೆಯರು ಅದೆಂಥಾ ಮಹೋನ್ನತ ಪಾತ್ರ ವಹಿಸುತ್ತಿದ್ದರು? ಸ್ತ್ರೀ ಮತ್ತು ಪುರುಷರ ಸಮಾನತೆ ಎಂಬುದು ಸಹಜವಾಗಿಯೇ ಈ ನೆಲದಲ್ಲಿ ಮೊಳೆತ ಪರಿಕಲ್ಪನೆಯಾಗಿತ್ತಲ್ಲವೇ? ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕೆದಕುತ್ತಾ ವೇದಕಾಲದಷ್ಟು ಹಿಂದಕ್ಕೆ ಹೋದರೆ ನಮಗೆ ನಂಬಲಿಕ್ಕೇ ಅಸಾಧ್ಯವಾದ ಒಂದು ಜೀವನ ಪದ್ಧತಿಯನ್ನು ಆಗಿನ ಜನಪದರು ಅಳವಡಿಸಿಕೊಂಡದ್ದಕ್ಕೆ ಅಸಂಖ್ಯಾತ ಪುರಾವೆಗಳು ನಮಗೆ ಸಿಗುತ್ತವೆ..!
ಈಗಲೂ ಜಗತ್ತಿನ ಅದೆಷ್ಟೋ ದೇಶಗಳಲ್ಲಿ (ನಮ್ಮ ನೆರೆಹೊರೆಯ ದೇಶಗಳಲ್ಲೇ ನೋಡಿ) ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶವೇ ಇಲ್ಲ...! ಆದರೆ ನಮ್ಮ ಹೆಮ್ಮೆಯ ಹಿಂದೂ ಸಂಸ್ಕೃತಿಯನ್ನೊಮ್ಮೆ ನೋಡಿ ಏಳೆಂಟು ಸಾವಿರ ವರ್ಷಗಳಿಗೂ ಮೊದಲೇ ನಮ್ಮಲ್ಲಿ ತತ್ವಶಾಸ್ತ್ರದಲ್ಲಿ ಪಾರಂಗತರಾದ ಋಷಿಕೆಯರಿದ್ದರು.!! ಋಗ್ ವೇದದಿಂದ ಆರಂಭಿಸಿ ನಾಲ್ಕು ವೇದಗಳ ರಚನೆಯಲ್ಲೂ ಸ್ತ್ರೀ ಋಷಿಗಳು (ಅವರನ್ನು ಬ್ರಹ್ಮವಾದಿನಿಯರೆಂದೂ ಕರೆಯುತ್ತಿದ್ದರು..! ಯಾಕೆಂದರೆ ಪರಬ್ರಹ್ಮ ತತ್ವವನ್ನೇ ಕಲಿತು ಅರಿತು ಚರ್ಚಿಸಿ ವಾದಿಸುತ್ತಿದ್ದ ಕಾರಣಕ್ಕಾಗಿ) ತೊಡಗಿಕೊಂಡಿದ್ದರು! ಲೋಪಾಮುದ್ರಾ, ಗಾರ್ಗಿ, ಮೈತ್ರೇಯಿ, ಅಪಾಲ, ಅತ್ರೇಯೀ, ಗೋಧಾ, ಘೋಷಾ, ಶಚಿ ಪೌಲೊಮಿ, ವಾಗಂಭ್ರಿಣಿ, ಇಂದ್ರಾಣಿ, ರೋಮಶ, ಸೂರ್ಯ ಸಾವಿತ್ರಿ .... ಹೀಗೆ ಅಸಂಖ್ಯಾತ ಋಷಿಕೆಯರು ವೇದಮಂತ್ರಗಳನ್ನು ರಚಿಸಿದ್ದಾರೆ...!! ವೇದಗಳನ್ನೇ ರಚಿಸುವಷ್ಟು ಪಾರಂಗತರಾದ ಸ್ತ್ರೀಯರಿದ್ದರು ಅಂದಮೇಲೆ ಆ ಕಾಲದಲ್ಲಿ ಸ್ತ್ರೀಯರಿಗಿದ್ದ ಸಾಮಾಜಿಕ ಸ್ಥಾನಮಾನಗಳನ್ನು ಒಮ್ಮೆ ಊಹಿಸಿಕೊಳ್ಳಿ..!
ವಿದ್ಯೆ ಎಂಬುದಕ್ಕೆ ದೇವಿಯೇ ಸರಸ್ವತಿಯಾಗಿರುವಾಗ ಹೆಣ್ಣುಮಕ್ಕಳಿಗೆ ಪಾಂಡಿತ್ಯ ಇರದಿದ್ದೀತೇ?
ಅದೇ ರೀತಿ ಸಂಪತ್ತಿಗೆ ಅಧಿದೇವತೆ ಲಕ್ಷ್ಮಿಯಾಗಿರುವಾಗ ಆ ಕಾಲದ ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರು ಮತ್ತು ಸಧೃಢರೂ ಆಗಿದ್ದರು..! ಆ ಕಾಲದಲ್ಲಿ ಮದುವೆಯೇ ಆಗದ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲನ್ನು ಪಡೆಯುವ ಹಕ್ಕಿತ್ತು! ತಂದೆಗೆ ಗಂಡುಮಕ್ಕಳೇ ಇಲ್ಲದಿದ್ದಲ್ಲಿ ತಂದೆಯ ಸಂಪೂರ್ಣ ಆಸ್ತಿಯ ಹಕ್ಕು ಹೆಣ್ಣು ಮಕ್ಕಳಿಗೇ... ತಾಯಿಯ ಅಸ್ತಿಯಲ್ಲಿಯೂ ಹೆಣ್ಣುಮಕ್ಕಳಿಗೆ ಗಂಡು ಮಕ್ಕಳಷ್ಟೇ ಹಕ್ಕಿನ ಪಾಲಿತ್ತು! ಇನ್ನು ಹೆಣ್ಣು ಮದುವೆಯಾದರಂತೂ ಗಂಡನ ಪಾಲಿನ ಮನೆಯ ರಾಣಿಯಾಗಿರುತ್ತಿದ್ದಳು ಆಕೆ...!
ತಾನು ಯಾರನ್ನು ವಿವಾಹವಾಗಬೇಕು ಅಂತ ಹೆಣ್ಣೇ ನಿರ್ಧರಿಸುವ ಒಂದು ಅಭೂತ ಪೂರ್ವ ಪರಿಕಲ್ಪನೆ ಜಗತ್ತಿನ ಯಾವುದೇ ಮೂಲೆಯಲ್ಲೂ, ಯಾವುದೇ ಕಾಲಘಟ್ಟದಲ್ಲೂ ಇರಲೇ ಇಲ್ಲ! ಆದರೆ ನಮ್ಮ ಸನಾತನ ಧರ್ಮ ಅಂತ ಒಂದು ಅಪೂರ್ವ ಅವಕಾಶ ಹೆಣ್ಣಿಗೆ ನೀಡಿದ ಮೊತ್ತ ಮೊದಲ ಧರ್ಮ...! ಅದುವೇ ಸ್ವಯಂವರ..!
ಸ್ತ್ರೀ, ಶಕ್ತಿ ಸ್ವರೂಪಿಣಿ, ಹಾಗಾಗಿಯೇ ಆಕೆ ದುರ್ಗೆ, ಕಾಳಿ... ಹಾಗಾಗಿ ಸಮರ, ಯುದ್ಧ ಕಲೆಗಳಲ್ಲೂ ಆ ಕಾಲದ ಸ್ತ್ರೀಯರು ನಿಪುಣರೇ ಇದ್ದರು!! ವೇದಗಳಲ್ಲಿ ವಿಷ್ಪಲ ಎಂಬ ವೀರಾಂಗನೆಯ ಪ್ರಸಕ್ತಿ ಬರುತ್ತದೆ... ಆಕೆ ಸೇನಾನಿಯಾಗಿದ್ದಳು! ಒಮ್ಮೆ ಯುದ್ಧದಲ್ಲಿ ತನ್ನ ಕಾಲೊಂದನ್ನು ಕಳೆದುಕೊಂಡಳು; ಆಗ ಅಶ್ವಿನಿ ದೇವತೆಗಳ ಅನುಗ್ರಹದಿಂದ ಆಕೆಗೆ ಲೋಹದ ಕಾಲೊಂದನ್ನು ಜೋಡಿಸಲಾಗುತ್ತದೆ ಮತ್ತು ಅದರಿಂದ ಆಕೆಯ ಅಂಗ ವೈಕಲ್ಯ ಸರಿಹೋಗುತ್ತದೆ! ಬಹುಷಃ ಜಗತ್ತಿನ ಮೊತ್ತ ಮೊದಲ prosthetic limb transplantation ಇದುವೇ ಇರಬೇಕು...!!
ನಮ್ಮ ಸನಾತನ ಧರ್ಮದಲ್ಲಿ ಸ್ತ್ರೀಯರು ಯಾವತ್ತಿಗೂ ಒಂದು ತೂಕ ಮೇಲೆ ಇದ್ದರು...!! ಶಿವ ಮತ್ತು ಶಿವೆ, ಶಿವ ಮತ್ತು ಶಕ್ತಿ, ಪ್ರಕೃತಿ ಮತ್ತು ಪುರುಷ ಹೀಗೆ ಸೃಷ್ಟಿ ಕ್ರಿಯೆಯಲ್ಲಿ ಇಬ್ಬರೂ ಸಮಾನರು ಮಾತ್ರವಲ್ಲ... ಸ್ತ್ರೀಗೆ ಆದಿ ಪರಾಶಕ್ತಿಯ ಸ್ಥಾನಮಾನವನ್ನು ನಮ್ಮ ಧರ್ಮ ನೀಡಿದೆ..!! ಆಸ್ತಿಯಲ್ಲಿ ಸಮಪಾಲು, ವಿದ್ಯೆಯಲ್ಲಿ, ಉದ್ಯೋಗಾವಕಾಶದಲ್ಲಿ ಸಮಪಾಲು, ಬದುಕಿನಲ್ಲಿ ಸಮಪಾಲು, ಹಕ್ಕುಗಳಲ್ಲಿ ಸಮಪಾಲು.... ಇನ್ನೂ ಇದೆಲ್ಲಾ ಬೇಕೆಂಬ ಒತ್ತಾಯ... ಹೋರಾಟ ಈ ಜಗತ್ತಿನಲ್ಲಿ ನೆಡೆದೇ ಇದೆಯಾದರೂ ನಮ್ಮ ಸನಾತನರ ಪರಿಕಲ್ಪನೆ ಅದೆಷ್ಟು ಶ್ರೇಷ್ಠವಾಗಿತ್ತೆಂದರೆ, ಪರಶಿವನ ಮಡದಿಯಾದ ಶಕ್ತಿ ಸ್ವರೂಪಿಣಿ ಪಾರ್ವತೀ ದೇವಿಗೆ ಶಿವನ ದೇಹದಲ್ಲೇ ಸಮಪಾಲನ್ನು ನೀಡಲಾಯಿತು! ಅಂದರೆ ಶಿವ ದೈಹಿಕವಾಗಿ ಸಂಪೂರ್ಣ ಪುರುಷ ದೇಹಿಯಲ್ಲ... ಬದಲಿಗೆ ಆತನ ದೇಹದ ಅರ್ಧ ಭಾಗ ಮಾತ್ರ ಪುರುಷರೂಪಿ... ಇನ್ನರ್ಧ ಸ್ತ್ರೀ ರೂಪೀ.... ಆತನೇ ಅರ್ಧನಾರೀಶ್ವರ.... ! ಇಂಥದ್ದೊಂದು ಉದ್ಧಾತ್ತ ಕಲ್ಪನೆಗೆ ಬೇರೆ ಎಲ್ಲಾದರೂ ಸಾಟಿಯುಂಟೆ...?
ಹೀಗೆ ನಮಗೆ ಭಾರತೀಯರಿಗೆ, ಅದರಲ್ಲೂ ಸನಾತನ ಧರ್ಮದವರಿಗೆ ಸ್ತ್ರೀ ಪುರುಷ ಸಮಾನತೆ ಪಾರಂಪರಿಕವಾಗಿಯೇ ಬಂದಿದೆ. ಹಾಗಾಗಿ ನಾವು ಸಹಜವಾಗಿಯೇ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಬಹಳ ಗೌರವಪೂರ್ಣವಾಗಿ, ಭಯಭಕ್ತಿಯಿಂದ ಎಂದಿನಿಂದಲೂ ಪ್ರತಿ ದಿನಡಾ ಪ್ರತಿ ಕ್ಷಣಕ್ಕೂ ಆಕೆಯ ಆರಾಧನೆಯ ಮೂಲಕ ಆಚರಣೆ ಮಾಡುತ್ತೇವೆ....! ಒಂದು ದಿನಕ್ಕೆ ಆಕೆ ಸೀಮಿತಳಲ್ಲ; ಬದಲಿಗೆ ಸ್ತ್ರೀ ಸಮಾನತೆಯ ನೈಜ ರೂವಾರಿಗಳೇ ನಾವು...!
ನಮಗೆ ಇನ್ನೆಲ್ಲಿಂದಲೋ ಎರವಲು ಪಡೆದು, ಅರೆ-ಬೆಂದ ಯೋಚನಾ ಲಹರಿ ಬಡಿದೆಬ್ಬಿಸಬೇಕಿಲ್ಲ!
ವಂದೇ ನಾರಿ ಶಕ್ತಿ! ವಂದೇ ಮಾತರಂ!!
#ಅನಂತಕುಮಾರಹೆಗಡೆ