Infinite Thoughts

Thoughts beyond imagination

ಪಾರಿಕ್ಕರ್ ಜೀ ಅವರಿಗೆ ಹೃದಯ ತುಂಬಿದ ಅಶ್ರುತರ್ಪಣಗಳು, ಅಂತಿಮ ಪ್ರಣಾಮಗಳು

ಪಾರಿಕ್ಕರ್ ಜೀಯವರಿಗೆ ಅಂತಿಮ ಪ್ರಣಾಮಗಳು... 

 

जातस्य हि ध्रुवो मृत्युर्ध्रुवं जन्म मृतस्य च ।

तस्मादपरिहार्येऽर्थे न त्वं शोचितुमर्हसि ।।

ಹುಟ್ಟಿದವನು ಯಾವತ್ತಿದ್ದರೂ ಸಾಯಲೇ ಬೇಕು; ಸಾವು ಶಾಶ್ವತ!!  ಹೀಗೆ ಸಾವಿನ ಬಗ್ಗೆ ಸಾವಿರಾರು ಶ್ಲೋಕಗಳನ್ನು ಹೇಳಿ, ಅದರ ಅರ್ಥವನ್ನೂ ಹೇಳಿ ಜನನ-ಮರಣದ ಬಗ್ಗೆ, ಹುಟ್ಟು-ಸಾವುಗಳ ಬಗ್ಗೆ ಪುಂಖಾನು ಪುಂಖವಾಗಿ ವೇದಾಂತವನ್ನು ಬೋಧಿಸಿ ಜೀವನದ ನಶ್ವರತೆಯ ಬಗ್ಗೆ ಸುಲಭವಾಗಿಯೇ ಪಾಠ ಮಾಡಬಹುದು!!  ಆದರೆ ಸ್ವತಃ ನಮಗೆ  ತೀರಾ ಆಪ್ತರಾದವರನ್ನು ಕಳೆದುಕೊಂಡಾಗ, ಹೃದಯಕ್ಕೇ ನೇರವಾಗಿ ಇರಿಯುವ ಆ ಸಾವಿನ ನೋವನ್ನು ಸಹಿಸುವುದು ಅಷ್ಟು ಸುಲಭವಲ್ಲ...!!  ಎಷ್ಟೇ ವೇದಾಂತಿಯಾಗಿದ್ದರೂ ಸಹ, ದುಃಖ ಅವರನ್ನು ಬಾಧಿಸದೇ ಇರುವುದಿಲ್ಲ...!  ಸ್ಥಿತಪ್ರಜ್ಞತೆ ಸಾಧಿಸುವುದು ಅಸಾಧ್ಯವೆನಿಸುವ ಹೊತ್ತಿದು..!!  ಕೆಲವೊಮ್ಮೆ ಕೆಲವರ ಸಾವು ನಿರೀಕ್ಷಿತವೇ ಆಗಿದ್ದರೂ, ಆ ಅಂತಿಮ ಕ್ಷಣ ಬಂದೊದಗುವಾಗ, ಅಗಲಿಕೆ ಎಂಬುದು ನಿಜಕ್ಕೂ ಶಾಶ್ವತವೇ ಎಂಬುದು ಮನದಟ್ಟಾಗುವಾಗ; ಇನ್ನು ಮುಂದೆ ಆ ವ್ಯಕ್ತಿ ನಮ್ಮ ಮಧ್ಯೆ ಜೀವಂತವಾಗಿಲ್ಲವೆಂಬುದೇ ಶಾಶ್ವತ ಸತ್ಯ ಮತ್ತು ಆ ಅರಿವು ಮೂಡುವಾಗ, ಆಗುವ ವೇದನೆ... ಅದು ವರ್ಣಿಸಲು ಸಾಧ್ಯವೇ ಆಗದ ಯಾತನೆ...!!

ಮನೋಹರ ಪರಿಕ್ಕಾರ್ ಎಂಬ ಆ ಮಹಾತ್ಮ ಒಬ್ಬ ಇರದೇ ಇರುತ್ತಿದ್ದರೆ ಇವತ್ತು ಅನಂತಕುಮಾರ ಹೆಗಡೆ ಎಂಬಾತ ಐದನೆಯ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಸಂಸದನಾಗಿ ಆಯ್ಕೆಯಾಗುತ್ತಿದ್ದನೋ ಇಲ್ಲವೋ...?  ಮೋದೀಜಿಯವರ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗುತ್ತಿದ್ದನೋ ಇಲ್ಲವೋ...?  ಇವೆಲ್ಲಾ ಪ್ರಶ್ನೆಗಳನ್ನಿವತ್ತು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ...!!!  ಆ ಸಂದಿಗ್ಧತೆಯ ಸಮಯದಲ್ಲಿ ಮಹಾತ್ಮನ ರೂಪದಲ್ಲಿ ಬಂದು ನನಗೆ ನೆರವಾದ, ಬೆನ್ನೆಲುಬಾಗಿ ನಿಂತ ಮನೋಹರ ಪರಿಕ್ಕರ್ ಎಂಬ ಹಿರಿಯಣ್ಣ ಇನ್ನು ಮುಂದೆ ಭೌತಿಕವಾಗಿ ನಮ್ಮೊಡನಿಲ್ಲ ಎಂಬ ಸತ್ಯವನ್ನು ನನಗೆ ಅರಗಿಸಿಕೊಳ್ಳಲು ನನ್ನಿಂದ ಇವತ್ತು ಸಾಧ್ಯವೇ ಆಗುತ್ತಿಲ್ಲ...!

ಇವೆಲ್ಲ ನಿನ್ನೆ ಮೊನ್ನೆ ಎಂಬಂತೆ ನಡೆದ ಘಟನೆಗಳಾಗಿ ಮನಃ ಪಟಲದ ಮೇಲೆ ಮೆರವಣಿಗೆ ನಡೆಸುತ್ತಿವೆ... ಕೇವಲ ಐದು ವರ್ಷಗಳ ಹಿಂದೆ.... ಅಂದರೆ ಕಳೆದ ಲೋಕಸಭಾ ಚುನಾವಣೆಯ ಹೊತ್ತು... ಪಕ್ಷ ಮತ್ತೊಮ್ಮೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನನ್ನನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು.  ನನ್ನ ಮೊದಲ ಎರಡು ಚುನಾವಣೆಗೂ ಹಾಗು ಕಳೆದ ಚುನಾವಣೆಗೂ ಬಳಷ್ಟು ವ್ಯತ್ಯಯ ಗೊಂಡಿದ್ದು ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದಾಗ ನನ್ನ ಎದುರಾಳಿ ಪಕ್ಷದ ಸ್ನೇಹಿತರೊಬ್ಬರು ಈ ಅಂಶವನ್ನು  ಗಮನಿಸಿದ್ದರು. ಹಾಗೆ ಅವರು ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ  ಒಬ್ಬರನ್ನು ಭೇಟಿಯಾದಾಗ ಅವರಿಗೆ ಈ ವಿದ್ಯಮಾನವನ್ನು ತಿಳಿಸಿದರು.  ಕೂಡಲೇ ನನಗೆ ಕರೆ ಮಾಡಿ ವಿಚಾರಿಸಿ ಸಂಬಂದಿಸಿದ ಸಂಪನ್ಮೂಲವನ್ನು ಒದಗಿಸಿದ ಆ ಆಪತ್ಭಾಂದವ ವ್ಯಕ್ತಿ  ಅಲ್ಲ... ಅವರೇ ನಮ್ಮ ಮನೋಹರ ಪಾರಿಕ್ಕಾರ್!  

ತನ್ನ ಒಡ ಹುಟ್ಟಿದ ತಮ್ಮನೇ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾನೋ ಎನ್ನುವಷ್ಟು ಆಸ್ಥೆಯಿಂದ ಪಕ್ಕದ ರಾಜ್ಯದ ಮುಖ್ಯಮಂತ್ರಿಯೋರ್ವ, ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದ್ದಂತಹ ಪ್ರಮುಖ ನಾಯಕನೋರ್ವ ಚುನಾವಣಾ ಪ್ರಕ್ರಿಯೆಯಲ್ಲಿ ಈ ಪರಿಯಲ್ಲಿ ಸಹಾಯ ಮಾಡುತ್ತಾರೆ...!  ಈ ರೀತಿಯಲ್ಲಿ ಬೆನ್ನೆಲುಬಾಗಿ ನಿಂತು ಬೆಂಬಲ ನೀಡುತ್ತಾರೆ ಅಂತ ನಾನು ಕನಸು ಮನಸಿನಲ್ಲೂ ಯೋಚಿಸಿರದ ಸಂದರ್ಭದಲ್ಲಿ, ಮನೋಹರ್ ಪರಿಕ್ಕಾರ್ ಎಂಬ ಆ ಮಹಾತ್ಮ ನನ್ನ ಹಿಂದೆ ಬಂಡೆಯಂತೆ ನಿಂತರು.  

ಈ ಹಿನ್ನಲೆಯಲ್ಲಿ ನಾನು ಅವರಿಗೆ ನಾನು ಚಿರಋಣಿಯಾಗಿದ್ದೇನೆ!  

ಹಿಂದಿನ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆಯ ಹಠಮಾರಿತನದಿಂದಾಗಿ ಕಾರವಾರದ Project Seabird ಸಂತ್ರಸ್ತರ ಪರಿಹಾರ ಪರಿಸ್ಥಿತಿ ನೆನೆಗುದಿಗೆ ಬಿದ್ದು ಸಂತ್ರಸ್ತರೆಲ್ಲ ತೀವ್ರ ಹತಾಶಗೊಂಡಿದ್ದರು.  ಈ ದೇಶದ ಅತ್ಯುನ್ನತ ನ್ಯಾಯಾಲಯವೇ ನ್ಯಾಯ ನೀಡುವಂತೆ ಆದೇಶಿಸಿದರು, ಅಂದಿನ ಸೋನಿಯಾ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಮಾತ್ರ ಅದಕ್ಕೆ ಸೊಪ್ಪು ಹಾಕದೆ, ೨ ದಶಕಕ್ಕೂ ಹೆಚ್ಚಿನ ಕಾಲಾವಧಿಗೆ ಸಂಬಂದಿಸಿದ ಸಂತ್ರಸ್ತರಿಗೆ ಗೋಳು ಹೊಯ್ದುಕೊಂಡಿತ್ತು.  ಅಂದಿನ ರಕ್ಷಣಾ ಮಂತ್ರಿಯಾಗಿದ್ದ ಸನ್ಮಾನ್ಯ ಎ ಕೆ ಅಂತೋನಿ ಎಂಬ ಮಹಾನುಭಾವ ಈ ವಿಷಯದ ಬಗ್ಗೆ ಚರ್ಚಿಸಲು ನನಗೆ ಭೇಟಿಯ ಸಮಯಾವಕಾಶ ಸಹ ನೀಡಲಿಲ್ಲ.  

ಇಂತಹ ಸಂದರ್ಭದಲ್ಲಿ ಅಧಿಕಾರವೇರಿದ ನಮ್ಮ ಬಿಜೆಪಿ ನೇತ್ರತ್ವದ ಏನ್ ಡಿ ಏ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಹೊತ್ತಿನಲ್ಲೆ ಶ್ರೀ ಮನೋಹರ್ ಪಾರಿಕ್ಕಾರ್ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡರು.  ಆ ಕೂಡಲೇ ನನ್ನ ಹಿಂದಿನ ಎಲ್ಲ ಕಹಿ ಅನುಭವಗಳೊಂದಿಗೆ ರಕ್ಷಣಾ ಸಚಿವರನ್ನು ಭೇಟಿಯಾಗಿ ನೆನೆಗುದಿಗೆ ಬಿದ್ದ ವಿಷಯ ಮತ್ತು ಸಂತ್ರಸ್ತರ ಚಿಂತಾಜನಕ ಪರಿಸ್ಥಿತಿ ಬಗ್ಗೆ ತಿಳಿಸಿ ಹೇಳಿದಾಗ ಕೂಡಲೇ ಪರಿಹಾರ ವಿತರಿಸುವಲ್ಲಿ ಅವರು ತೋರಿದ ನಿಷ್ಠೆ ನನ್ನ ಕಣ್ಣೆದುರಿಗೆ ಇಂದು ಕಟ್ಟಿದಂತಿದೆ.  ಕೂಡಲೇ ವಿತ್ತ ಸಚಿವರನ್ನು ಭೇಟಿ ಮಾಡಿ ಅಷ್ಟು ಹಣವನ್ನು ಬಿಡುಗಡೆಗೊಳಿಸುವಂತೆ ಕೋರಿ ಅದರ ವಿತರಣೆ ಮಾಡುವ ಕಾರ್ಯ ಕೈಗೆತ್ತಿಕೊಂಡು ಮಾನವೀಯತೆ ಮೆರೆದ ರಕ್ಷಣಾ ಸಚಿವರು, ನಮ್ಮ ಹೆಮ್ಮೆಯ ಮನೋಹರ ಪಾರಿಕ್ಕಾರ್ ರವರು.  ಇಂತಹ ಸಜ್ಜನ ಪುರುಷನನ್ನು ಇಂದು ಈ ಸಂತ್ರಸ್ತರ ಪರವಾಗಿ ಅವರ ಆತ್ಮಕೆ ಸದ್ಗತಿ ದೊರೆಯಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.  

ದೇಶವೇ ಇವತ್ತು ಓರ್ವ ಗಣ್ಯ ನೇತಾರರನ್ನು ಕಳೆದುಕೊಂಡಿದೆ... ಸರಳತೆಯ ಸಾಕಾರ ಮೂರ್ತಿಯಾಗಿದ್ದರು ಅಂತ ಪತ್ರಿಕೆಗಳು ಹಲವಾರು ಸಾರಿ ಹಲವರ ಬಗ್ಗೆ ಬರೆಯುತ್ತವೆ... ಆದರೆ ಶ್ರೀ ಮನೋಹರ ಪರಿಕ್ಕರ್ ಜೀ ಅಕ್ಷರಶಃ ಹಾಗೆಯೆ ಬದುಕಿದ್ದವರು... ಐ.ಐ.ಟಿ. ಯಂಥ ಪ್ರತಿಷ್ಠಿತ ಸಂಸ್ಥೆಯಿಂದ ಎಂಜಿನೀಯರಿಂಗ್ ಪದವಿ ಪಡೆದಾತ ಎಂಬ ಅಹಂ ಇಲ್ಲದ, ತಾನು ರಾಜ್ಯವೊಂದರ  ಮುಖ್ಯಮಂತ್ರಿ, ದೇಶದ ರಕ್ಷಣಾ ಮಂತ್ರಿ ಎಂಬ ಹಮ್ಮು ಅಹಂಕಾರ ಏನೂ ಇಲ್ಲದೇ  ರಿಕ್ಷಾ, ಸ್ಕೂಟರುಗಳಲ್ಲಿ ಓಡಾಡುತ್ತಿದ್ದ ಸರಳ ಜೀವಿ.  ಕ್ಯಾನ್ಸರ್ ನಂತಾ ಭೀಕರ ಕಾಯಿಲೆಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ, ಇಂಥಾ ಅನಾರೋಗ್ಯದ ನಡುವೆಯೂ ಕಚೇರಿಗೆ ಬಂದು ಕೆಲಸ-ಕಾರ್ಯಗಳನ್ನು ನಿಭಾಯಿಸುತ್ತಿದ್ದ ನಿಷ್ಕಾಮ ಕರ್ಮದ ಕಾಯಕ ಯೋಗಿ ಅವರು.  ಇಂಥಹಾ ಅಪರೂಪದ ವ್ಯಕ್ತಿ ನಮ್ಮ ನಡುವೆ ಜೀವಿಸಿದ್ದರು, ಅವರೊಡನೆ ಒಡನಾಟವಿದ್ದವರ ಪೈಕಿ ನಾನೂ ಒಬ್ಬ, ಅಂಥಾ ಮಹಾತ್ಮನಿಂದ ಉಪಕೃತರಾದವರಲ್ಲಿ ನಾನೂ ಒಬ್ಬ ಅನ್ನುವುದೇ ನನ್ನ ಬದುಕಿನ ಪುಣ್ಯ ವಿಶೇಷ.....!

ಪರಿಕ್ಕರ್ ಜೀ ಅವರಿಗೆ ಹೃದಯ ತುಂಬಿದ ಅಶ್ರುತರ್ಪಣಗಳು, ಅಂತಿಮ ಪ್ರಣಾಮಗಳು!

#ಅನಂತಕುಮಾರಹೆಗಡೆ

Related posts