Infinite Thoughts

Thoughts beyond imagination

ಪಾಪದ ಬೆಂಕಿಯ ಜ್ವಾಲೆ ಪ್ರತಿಯೊಬ್ಬರನ್ನೂ ಸುಡುತ್ತೆ...ಹೋಲಿಕಾ ಸುಟ್ಟು ಕರಟಿ ಹೋದ ಕತೆ ಅದನ್ನೇ ಹೇಳುತ್ತೆ...

ಪಾಪದ ಬೆಂಕಿಯ ಜ್ವಾಲೆ ಪ್ರತಿಯೊಬ್ಬರನ್ನೂ ಸುಡುತ್ತೆ... 

ಹೋಲಿಕಾ ಸುಟ್ಟು ಕರಟಿ ಹೋದ ಕತೆ ಅದನ್ನೇ ಹೇಳುತ್ತೆ... 

ಇವತ್ತಿನ ಹುಣ್ಣಿಮೆಯ ದಿನ ಕಾಮನನ್ನು ದಹನ ಮಾಡಿ ಬಣ್ಣದೋಕುಳಿ ಆಡುತ್ತಾ ಆಚರಿಸುವ ಹೋಳಿ ಹಬ್ಬದ ಆಚರಣೆಯ ಹಿಂದೆ ಹಲವಾರು ಕತೆಗಳಿವೆ.  ಅದರಲ್ಲಿ ಪೌರಾಣಿಕವಾಗಿ ಪ್ರಮುಖವಾದದ್ದು ಹೋಲಿಕಾ ಎಂಬ ರಾಕ್ಷಸಿಯ ಕತೆ!!  ಹೋಲಿಕಾ ಓರ್ವ ರಾಕ್ಷಸಿ.  ಹಿರಣ್ಯಕಶಿಪು ಎಂಬ ರಾಕ್ಷಸನ ಸಹೋದರಿ.  ಆಕೆಯಲ್ಲೊಂದು ವಿಶೇಷ ಶಕ್ತಿಯಿತ್ತು.  ಆಕೆಯಲ್ಲಿದ್ದ ವಿಶೇಷ ವಸ್ತ್ರವನ್ನು ಹೊದ್ದುಕೊಂಡರೆ ಎಂಥಾ ಬೆಂಕಿಯ ಜ್ವಾಲೆಗಳೂ ಕೂಡಾ ಅದನ್ನು ಸುಡಲಾರವು.  ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದ ಸದಾ ವಿಷ್ಣುನಾಮವನ್ನೇ ಜಪಿಸುವುದನ್ನು ಸಹಿಸದೆ ಆತನನ್ನು ಕೊಲ್ಲಲು  ಹಲವಾರು ಬಾರಿ ಪ್ರಯತ್ನಿಸುತ್ತಾನೆ. ಸ್ವಂತ ಮಗನೆ ಹರಿಭಕ್ತ ಎಂಬ ಕಾರಣಕ್ಕೆ ಆತನನ್ನು ಕೊಲ್ಲಲು ಹೊರಟು ವಿಫಲನಾದ ಹಿರಣ್ಯಕಶಿಪು ಕೊನೆಗೆ ತನ್ನ ಸಹೋದರಿ ಹೋಲಿಕಾಳ ಸಹಾಯ ಪಡೆಯಲು ನಿರ್ಧರಿಸುತ್ತಾನೆ.  ಹೋಲಿಕಾ ಬೆಂಕಿಯಿಂದ ರಕ್ಷಿಸುವ ತನ್ನ ವಿಶೇಷ ವಸ್ತ್ರ ಹೊದ್ದುಕೊಂಡು ಬಾಲಕ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಕಟ್ಟಿಗೆಯ ರಾಶಿ ಮೇಲೆ ಕುಳಿತುಕೊಂಡಳು.  ಆ ಬೃಹತ್ ಕಟ್ಟಿಗೆಯ ರಾಶಿಗೆ ಬೆಂಕಿ ಹಚ್ಚಿದಾಗ ತನ್ನ ವಿಶೇಷ ವಸ್ತ್ರದ ಸಹಾಯದಿಂದ ಹೋಲಿಕಾ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಮುಗ್ಧ ಹರಿ ಭಕ್ತ ಬಾಲಕ ಪ್ರಹ್ಲಾದ ಸುಟ್ಟುಹೋಗುತ್ತಾನೆ ಎಂಬುದು ಹೋಲಿಕಾಳ ಯೋಜನೆಯಾಗಿತ್ತು.  ಆದರೆ ಹರಿಭಕ್ತ ಪ್ರಹ್ಲಾದ ಹರಿನಾಮ ಸ್ಮರಣೆ ಮಾಡುತ್ತಲೇ ಇದ್ದುದರಿಂದ ಬೆಂಕಿಯ ಕೆನ್ನಾಲಗೆ ಪ್ರಹ್ಲಾದನ ಬದಲು ಹೋಲಿಕಾಳನ್ನೇ ದಹಿಸಿ ಬಲಿಪಡೆಯಿತು.  ಇದು ಕತೆ. ಇದನ್ನೇ ಇವತ್ತಿನ ದಿನ ಸಾಂಕೇತಿಕವಾಗಿ  ಭಕ್ತನಾದ ಪ್ರಹ್ಲಾದ ಬೆಂಕಿಯ ಕೆನ್ನಾಲಗೆಯಿಂದ ಕೂದಲೂ ಕೊಂಕದೆ ಪಾರಾದ, ರಾಕ್ಷಸಿ ಹೋಲಿಕಾ ತಾನೇ ಸೃಷ್ಟಿಸಿಕೊಂಡ ಬೆಂಕಿಯಿಂದ ಸುಟ್ಟುಭಸ್ಮವಾದ ಘಟನೆಯ ನೆನಪಿಗೆ ಭಕ್ತರು ಹೋಳೀ ಹಬ್ಬ ಆಚರಿಸುತ್ತಾರೆ... 

ಇಲ್ಲಿ ಈ ಕತೆಯೊಳಗೆ.... ಹಿರಣ್ಯಕಶಿಪು, ಪ್ರಹ್ಲಾದ ಮತ್ತು ಹೋಲಿಕಾರ ಈ ಕತೆಯೊಳಗೆ ಸಾಂಕೇತಿಕವಾಗಿ ಹುದುಗಿಕೊಂಡಿರುವ ಸುಪ್ತ ಅರ್ಥಗಳಿವೆ... ಹಲವು ಗೂಢಾರ್ಥಗಳಿವೆ... ಅದನ್ನು ಸ್ವಲ್ಪ ಕೆದಕಿದರೆ ನೈಜ ಅರ್ಥಗಳು ಸ್ಪುರಿಸುತ್ತದೆ...  ಹಿರಣ್ಯ ಅಂದರೆ ಬಂಗಾರ ಅಂತ ಅರ್ಥ... ಹಿರಣ್ಯಕಶಿಪು ಅಂದರೆ ಸದಾ ಬಂಗಾರ ಅಥವಾ ಸಂಪತ್ತಿನ ಕಡೆಯೇ ದೃಷ್ಟಿಯಿಟ್ಟಿರುವಾತ ಅಂತ ಅರ್ಥ... ಅದನ್ನು ಪಡೆಯಲು ಆತ ಎಂತ ವಾಮ ಮಾರ್ಗ ಹಿಡಿಯಲೂ ಸಿದ್ಧ!! ಅದೇ ವೇಳೆ ಪ್ರಹ್ಲಾದ ಅಂದರೆ ಆಹ್ಲಾದ ಅಂದರೆ ಆನಂದ ಅಂತ ಅರ್ಥ.  ಆತ ದೈವ ಭಕ್ತ...!!  ಸದಾ ದೇವರತ್ತಲೇ ಚಿತ್ತ, ಹಾಗಾಗಿಯೇ ಆತ ಸದಾ ಆನಂದವಾಗಿರುತ್ತಾನೆ! ಭಕ್ತನ ಆನಂದ ನೋಡಿ, ಸಂಪತ್ತು ಲೂಟಿ ಮಾಡಿ ಶ್ರೀಮಂತನಾಗಿಯೇ ಆನಂದ ಪಡೆಯಬೇಕು ಅನ್ನುವಂಥಾ ಹಿರಣ್ಯಕಶಿಪು ಆನಂದವನ್ನು ಪಡೆಯಲು ಪ್ರಯತ್ನಿಸಿ ವಿಫಲನಾಗಿ ಆನಂದ ತನ್ನ ಬಳಿ ಬಾರದೇ ಭಕ್ತನಾಗಿ ಹರಿಯೆಡೆಗೆ ವಾಲುವುದನ್ನು ಸಹಿಸದೆ ಆತನನ್ನೇ ಕೊಲ್ಲಲು ಪ್ರಚೋದಿತನಾಗುತ್ತಾನೆ.  ಅದಕ್ಕಾಗಿ ತನ್ನ ಸಹೋದರಿ ಹೋಲಿಕಾಳ ಸಹಾಯ ಯಾಚಿಸುತ್ತಾನೆ.  ಆದರೆ ಹೋಲಿಕಾ ತನ್ನ ಸಹೋದರನ ಪಾಪಕೃತ್ಯಗಳಲ್ಲಿ ಪಾಲುದಾರಳಾದದ್ದಕ್ಕಾಗಿ, ಆತನನ್ನು ಬೆಂಬಲಿಸಿದ್ದಕ್ಕಾಗಿ ತಾನು ಸೃಷ್ಟಿಸಿದ ಪಾಪದ ಬೆಂಕಿಯಲ್ಲಿ ತಾನೇ ಸುಟ್ಟು ಹೋಗುತ್ತಾಳೆ...!!  ಭಕ್ತನಾದ ಪ್ರಹ್ಲಾದನಿಗೆ ಯಾವುದೇ ಆಪತ್ತೂ ಬರುವುದಿಲ್ಲ. ಜೊತೆಗೆಯೇ ಹೋಲಿಕಾಳ ಸಹೋದರ ಹಿರಣ್ಯಕಶಿಪು ಕೂಡಾ ನರಸಿಂಹನ ಅವತಾರದಿಂದ ಹತನಾಗುತ್ತಾನೆ...  

ಇಲ್ಲಿ... ಈ ಕತೆಯಲ್ಲಿ ಇನ್ನೊಂದು ಗೂಢಾರ್ಥವೂ ಇದೆ.  ಅದೇನೆಂದರೆ ಯಾರೂ ಕೂಡಾ ತನ್ನ ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ.  ಕೇವಲ ತನ್ನ ಜನ್ಮದಿಂದ, ಅಂದರೆ ತಾನು ಯಾರ ಹೊಟ್ಟೆಯಲ್ಲಿ ಜನಿಸಿದೆ ಎನ್ನುವ ಕಾರಣಕ್ಕೆ ಶ್ರೇಷ್ಠತೆಯನ್ನು ಪಡೆಯುವುದಿಲ್ಲ. ಅದೆಲ್ಲವೂ ಸಂಸ್ಕಾರದಿಂದಲೇ ಬರುತ್ತದೆ ಎನ್ನುವುದನ್ನೂ ಸಹ ಈ ಕತೆ ಸಂಕೇತಿಸುತ್ತದೆ.  ರಾಕ್ಷಸನಾದ ಹಿರಣ್ಯಕಶಿಪು ಮತ್ತವನ ಸಹೋದರಿ ಹೋಲಿಕಾ ಹುಟ್ಟಿನಿಂದ ಬ್ರಾಹ್ಮಣರು; ಹಾಗಂತ ಅವರೇನೂ ಶ್ರೇಷ್ಠರಾಗಲಿಲ್ಲ, ಬದಲಿಗೆ ತಮ್ಮ ಸಂಸ್ಕಾರದಿಂದ ರಾಕ್ಷಸೀ ಪ್ರವೃತ್ತಿಯನ್ನು ಪಡೆದುಕೊಂಡು ಸಮಾಜಕ್ಕೆ ಕಂಟಕರಾದರು...!! ಪ್ರಹ್ಲಾದನನ್ನು ಅಂದರೆ ಆನಂದವನ್ನೇ ಕೊಲ್ಲಲು.... ನಾಶ ಮಾಡಲು ಹೊರಟರು. ಹಿರಣ್ಯಕಶಿಪುವೂ ಕೂಡಾ ಜನಿವಾರಧಾರೀ ಬ್ರಾಹ್ಮಣನೇ..!! ಅವನು ಕಾಶ್ಯಪ ಗೋತ್ರದವನು! ಆದರೆ ಅನ್ಯಾಯದ ಮಾರ್ಗದ ಮೂಲಕ ಸಂಪತ್ತನ್ನು (ಹಿರಣ್ಯ ಅಂದರೆ  ಬಂಗಾರವನ್ನು) ಪಡೆದು ಆ ಮೂಲಕ ಆನಂದವನ್ನು (ಪ್ರಹ್ಲಾದ) ಪಡೆಯಲು ಹೊರಟ ಆತ ಬ್ರಾಹ್ಮಣನಾಗದೇ, ಅದರ ಬದಲಿಗೆ ರಾಕ್ಷಸನಾದ!!  ಅದೇ ವೇಳೆ ಭಕ್ತ ಪ್ರಹ್ಲಾದ, ದೇವನಾದ ಹರಿಗೆ ಪ್ರೀತಿಪಾತ್ರನಾದ. ತಾವೆಸಗಿದ ಅನ್ಯಾಯದ ಪ್ರತಿಫಲವಾಗಿ ಹೋಲಿಕಾ ತಾನೇ ಸೃಷ್ಟಿಸಿದ ಪಾಪದ ಬೆಂಕಿಯಲ್ಲಿ ಸುಟ್ಟು ಭಸ್ಮವಾದರೇ... ಹಿರಣ್ಯಕಶಿಪು ವಿಷ್ಣುವಿನ ಅವತಾರವಾದ ನರಸಿಂಹನಿಂದ ಹತನಾದ...!!

ಆದರೆ ಈ ಎಲ್ಲಾ ಕತೆ ಕೇಳಿದ ನೀವು ಇನ್ನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ  ಈ ಹೋಳೀ ಹಬ್ಬವನ್ನು ಮುಂದಿನ ಮಹಾ ಚುನಾವಣೆಗೆ ಹೋಲಿಸ ಬೇಡಿ...! "ಹೇಗೆ ಹಿರಣ್ಯಕಶಿಪು ಜನಿವಾರಧಾರೀ ಬ್ರಾಹ್ಮಣನೋ ... ಅದೇ ರೀತಿ ನಮ್ಮ ರೌಲ್ ವಿನ್ಸಿ ಸಹ  ಜನಿವಾರಧಾರೀ ಬ್ರಾಹ್ಮಣನೇ ಅಂತೆ (ಅವನೇ ಅದನ್ನು ಹೇಳಿಕೊಂಡಿದ್ದಾನೆ).  ಹೇಗೆ ಹಿರಣ್ಯಕಶಿಪು ಕಶ್ಯಪ ಗೋತ್ರದವನೋ...... ರೌಲ್ ಕೂಡಾ ದತ್ತಾತ್ರೇಯ ಗೋತ್ರದ ಕೌಲ ಬ್ರಾಹ್ಮಣನೇ...!!  ಹೋಲಿಕಾ ಹೇಗೆ ತನ್ನ ಸಹೋದರನ ಪಾಪಕೃತ್ಯಗಳಲ್ಲಿ ಪಾಲುದಾರಳಾದಳೋ ಅದೇ ರೀತಿ ಬಿಯಾಂಕ.... ಹೋಲಿಕಾ ಈಸ್  ಈಕ್ವಲ್ ಟು ಬಿಯಾಂಕ...! ಅವಳೂ ಕೂಡಾ ತಾನು ಸೃಷ್ಟಿಸಿದ ಪಾಪದ ಬೆಂಕಿಯಲ್ಲಿ ತಾನೇ ಸುಟ್ಟು ಹೋಗುತ್ತಾಳೆ... ಆದರೆ ನಮ್ಮಂಥಾ ಭಕ್ತರಿಗೆ ಯಾವುದೇ ಆತಂಕ ಇಲ್ಲ..!ನಾವು ಪ್ರಹ್ಲಾದನಂತೆಯೇ ತುಂಬಾ ಸೇಫ್...! ಯಾಕಂದರೆ ನರಸಿಂಹ ದೇವರ ರೂಪದಲ್ಲಿ ಸಾಕ್ಷಾತ್ ನಮ್ಮ ನರೇಂದ್ರ ಮೋದಿಯವರೇ ಇದ್ದಾರಲ್ಲಾ ..?!?! ..." ಅಂತೆಲ್ಲಾ ನೀವೇ ಕಲ್ಪನೆ ಮಾಡಿಕೊಂಡರೆ ಅದು ನನ್ನ ತಪ್ಪಲ್ಲ...!  ಯಾಕಂದರೆ ಈಗ ಎಲ್ಲರೂ ಚುನಾವಣಾ ಮೂಡ್ ನಲ್ಲೆ ಇರುವುದರಿಂದ ಯಾವುದೇ ಹಬ್ಬ ಬಂದರೂ ಅದೆಲ್ಲವನ್ನೂ  ಚುನಾವಣೆಗೇ  ಜೋಡಿಸಿಕೊಳ್ಳುವ ಹುಮ್ಮಸ್ಸು ಎಲ್ಲಾ ಕಡೆಯೂ ಇದೆ...!!

ಹಾಗಾಗಿ ನೀವೆಲ್ಲಾ ಈ ರೀತಿಯಾಗಿ ಹೋಳಿಯ ಕತೆಯನ್ನು ಬೇರೆ ರೀತಿಯಲ್ಲಿ ಯೋಚಿಸಿ ರಾಜಕೀಯ ಬಣ್ಣ ಹಚ್ಚಿದರೆ.... ಅದು ನಿಮ್ಮ ತಪ್ಪೂ ಅಲ್ಲ...! 

ಅದೇನೇ ಇದ್ದರೂ ಇಂದು ಎಲ್ಲರಿಗೂ ಹೋಳಿ ಹಬ್ಬದ ಬಣ್ಣ ಬಣ್ಣದ ಶುಭಾಶಯಗಳನ್ನು ಹೇಳುತ್ತಾ .... ಈ ಬಾರಿಯ ರಂಗಿನ ಹಬ್ಬದಲ್ಲಿ ಕೇಸರೀ ರಂಗು ಹೆಚ್ಚು ಕಳೆಕಟ್ಟಲಿ... ಎಲ್ಲರ ಬದುಕಿನಲ್ಲೂ ಹೊಸರಂಗು ಮೂಡಲಿ ಅಂತ ಆಶಿಸುತ್ತೇನೆ...!!!

#ಅನಂತಕುಮಾರಹೆಗಡೆ

Related posts