Infinite Thoughts

Thoughts beyond imagination

ಇಂದು ಶಹೀದ್ ದಿವಸ ಎಂಬ ಹುತಾತ್ಮ ದಿನಾಚರಣೆ! ಭಗತ್ ಸಿಂಗ್ - ರಾಜ್ ಗುರು - ಸುಖದೇವ್ ಇವರ ಪುಣ್ಯಸ್ಮರಣೆ

ಇಂದು ಶಹೀದ್ ದಿವಸ ಎಂಬ ಹುತಾತ್ಮ ದಿನಾಚರಣೆ

ಭಗತ್ ಸಿಂಗ್ - ರಾಜ್ ಗುರು - ಸುಖದೇವ್ ಇವರ ಪುಣ್ಯಸ್ಮರಣೆ 

 

"ನಮ್ಮನ್ನು ನೇಣಿಗೆ ಹಾಕಬೇಡಿ" ಅಂತ ಸ್ವತಃ ಭಗತ್ ಸಿಂಗ್ ಅಂದಿನ ಬ್ರಿಟಿಷ್ ಸರಕಾರಕ್ಕೆ, ಅಂದಿನ ಪಂಜಾಬ್ ಪ್ರಾಂತ್ಯದ ಗವರ್ನರ್ ಗೆ ಪತ್ರ ಬರೆದಿದ್ದ ಅಂತ ನಾನೆಲ್ಲಾದರೂ ಇವತ್ತು  ಭಾಷಣ ಮಾಡಿದರೆ 'ಅನಂತಕುಮಾರ ಹೆಗಡೆಯಿಂದ ಇನ್ನೊಂದು ವಿವಾದಾತ್ಮಕ ಹೇಳಿಕೆ - ಭಗತ್ ಸಿಂಗ್ ನನ್ನೇ  ಅವಮಾನಿಸಿದ ಹೆಗಡೆ" ಅಂತ ಸುದ್ದಿ ಮಾಡೋದಕ್ಕೆ ಇವತ್ತು ಪತ್ರಕರ್ತರು ತುದಿಗಾಲಲ್ಲಿ ನಿಂತಿರುತ್ತಾರೆ... !  ಆದರೆ ಭಗತ್ ಸಿಂಗ್ ಆ ರೀತಿ ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದದ್ದಂತೂ ನೂರಕ್ಕೆ ನೂರು ನಿಜ..!!  ಭಗತ್ ಸಿಂಗ್ ಮಹಾನ್ ವೀರ, ಕೆಚ್ಚೆದೆಯ ಕಟ್ಟಾಳು, ಆದಮ್ಯ ಆತ್ಮವಿಶ್ವಾಸವೇ ಮೂರ್ತಿವೆತ್ತಂಥಾ ಇಂಥಹಾ ಪರಮ ಸ್ವಾಭಿಮಾನಿಯಾದ ಭಗತ್ ಸಿಂಗ್ ತನ್ನ ಹಾಗೂ ತನ್ನ ಜೀವದ ಗೆಳೆಯರಾದ ಸುಖದೇವ್ ಥಾಪರ್ ಮತ್ತು ಶಿವರಾಂ ರಾಜ್ ಗುರು ಅವರ ಪರವಾಗಿ "ನಮ್ಮನ್ನು ನೇಣಿಗೆ ಹಾಕಬೇಡಿ" ಅಂತ ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದಿದ್ದು ನಿಜವೇ ..? ಅಂತ ನಿಮಗೂ ಆಶ್ಚರ್ಯ ಆಗಬಹುದು. ಆದರೆ ನಾನಾಡುವ ಮಾತುಗಳನ್ನು ಪೂರ್ತಿ ಕೇಳಿಸಿಕೊಳ್ಳದೆ, ಸರಿಯಾಗಿ ಸಂಪೂರ್ಣ ಅರ್ಥ ಗ್ರಹಿಸಿಕೊಳ್ಳದೆ ವರದಿ ಮಾಡುವ ಪತ್ರಕರ್ತರಂತೆ ಅವಸರದ ಬುದ್ಧಿ ನಿಮಗೆ ಬೇಡ...! ಭಗತ್ ಸಿಂಗ್ ಅಂಥದ್ದೊಂದು ಪತ್ರ ಬರೆದಿದ್ದದ್ದು ನಿಜವೇ ಆದರೂ ಆ ಪತ್ರ ಆತನ ದೇಶಪ್ರೇಮಕ್ಕೆ, ಆತನೊಳಗಿನ ಓರ್ವ ನೈಜ ಯೋಧನ ಅಪ್ರತಿಮ ಶೌರ್ಯ ಸ್ವಾಭಿಮಾನದ ಪ್ರತೀಕದಂತಿತ್ತು...! 

ಹೌದು, ಆ ಪತ್ರದಲ್ಲಿದ್ದದ್ದು ನಮ್ಮನ್ನು ಸಾಯಿಸಬೇಡಿ ಎಂಬ ಹೇಡಿತನದ ಬೇಡಿಕೆಯಲ್ಲ, ವಿನಮ್ರತೆಯ ವಿನಂತಿಯಲ್ಲ... ಬದಲಿಗೆ ಅದು ವೀರಾಗ್ರಣಿಗಳ ಸಿಂಹಘರ್ಜನೆಯಂಥ ಆಜ್ಞೆಯಾಗಿತ್ತು.  "ನಾವು ಸ್ವಾತಂತ್ರ್ಯ ಸಂಗ್ರಾಮದ ಸ್ವಾಭಿಮಾನೀ ಸೈನಿಕರು, ಕೆಚ್ಚೆದೆಯ ಕ್ರಾಂತಿಕಾರಿಗಳು, ನಾವು ಅಪರಾಧಿಗಳಲ್ಲಾ... ನಾವು ಕ್ರಿಮಿನಲ್ ಗಳಲ್ಲಾ ... ಹಾಗಾಗಿ ನಮಗೆ ಗೌರವಾರ್ಹವಾದ ವೀರ ಯೋಧರ ಸಾವು ಬೇಕು!! ಭಾರತಮಾತೆಯ ಸೇವೆಗಾಗಿ ಪ್ರಾಣವನ್ನರ್ಪಿಸಲು ಸಂತೋಷದಿಂದ ನಾವೆಲ್ಲಾ ಸಿದ್ಧರಿದ್ದೇವೆ.... ಆದರೆ... ಯಾವ್ಯಾವುದೊ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾದ ಅಪರಾಧಿಗಳಂತೆ ನಮ್ಮನ್ನು ನೇಣಿಗೆ ಹಾಕಬೇಡಿ... ನಾವು ವೀರಮರಣವನ್ನಪ್ಪಲು ಸದಾ ಹಾತೊರೆಯುತ್ತಿದ್ದೇವೆ...!!  ಹಾಗಾಗಿ ಯುದ್ಧದಲ್ಲಿ ಸೈನಿಕರನ್ನು ಶೂಟ್ ಮಾಡುವಂತೆ ನಮ್ಮನ್ನೂ ಬಂದೂಕುಗಳಿಂದ ಸುಟ್ಟು ಸಾಯಿಸಿ... ಅಥವಾ ಫಿರಂಗಿಯ ಗುಂಡಿಟ್ಟು ಉಡಾಯಿಸಿ...!!  ನಾವು ತುಪಾಕಿಯ ಬಾಯಿಗೆ.. ಫಿರಂಗಿಯ ಗುಂಡಿಗೆ  ಪ್ರಾಣವನ್ನರ್ಪಿಸುವ ಗುಂಡಿಗೆಯಿರುವ ಗಂಡುಗಲಿಗಳು... ಹಾಗಾಗಿ ಹೇಡಿಗಳಂತೆ ನೇಣಿಗೆ ಕೊರಳೊಡ್ಡುವ ಬದಲಿಗೆ ಬಂದೂಕಿಗೆ ಎದೆಯೊಡ್ಡಿ ಸಾಯುತ್ತೇವೆ...!!" ಅಂತನ್ನುವ ರೀತಿಯ  ಅರ್ಥ ಸ್ಪುರಿಸುವಂಥಾ ಪತ್ರ ಬರೆದಿದ್ದರು ಭಗತ್ ಸಿಂಗ್ ಮತ್ತವರ ಗೆಳೆಯರು... 

ಆದರೆ ಬ್ರಿಟಿಷ್ ಸರಕಾರ ಭಗತ್ ಸಿಂಗ್ ಮತ್ತವರ ಕ್ರಾಂತಿಕಾರಿಗಳ ತಂಡಕ್ಕೆ ಹೆದರಿ ನಡುಗಿ ಹೋಗಿತ್ತು...!  ಈಗಾಗಲೇ ಭಗತ್ ಸಿಂಗ್ ಮತ್ತವರ ಸಂಗಡಿಗರು ತಮ್ಮ ಸಾಹಸದಿಂದ ಇಡೀ ಭಾರತದಲ್ಲೇ ಸಂಚಲವನ್ನುಂಟು ಮಾಡಿದ್ದರು.  ದೇಶದಾದ್ಯಂತ ಯುವಜನತೆಗೆ ಭಗತ್ - ರಾಜ ಗುರು - ಸುಖದೇವ್ ಮಾದರಿಯಾಗಿದ್ದರು, ದಿನ ಬೆಳಗಾಗುವುದರೊಳಗೆ ಆ ಮೂವರೂ ದೇಶಾಭಿಮಾನೀ ಯುವಕ ಯುವತಿಯರ ಪಾಲಿಗೆ ಹೀರೋಗಳಾಗಿದ್ದರು.  ಒಂದು ವೇಳೆ ತಾವು ಭಗತ್ ಮತ್ತವರ ಸಂಗಡಿಗರನ್ನು ಬಂದೂಕಿನಿಂದ ಗುಂಡು ಹಾರಿಸಿ ಅಥವಾ ಫಿರಂಗಿಯಿಂದ ಉಡಾಯಿಸಿ ಸಾಯಿಸಿದ್ದೇ ಆದರೆ ಇಡೀ ಭಾರತದಾದ್ಯಂತ ಕ್ರಾಂತಿಯ ಕೆನ್ನಾಲಗೆ ಹರಡಿ ದೇಶಭಕ್ತಿ ಕಿಚ್ಚು ವ್ಯಾಪಿಸಿ ತಾವು ಭಾರತ ಬಿಟ್ಟೋಡುವ ಪರಿಸ್ಥಿತಿ ಉದ್ಭವವಾಗಬಹುದೆಂಬುದನ್ನು ಊಹಿಸಿಯೇ ಬೆದರಿದ ಬ್ರಿಟಿಷರು ಬಹಳ ಗುಟ್ಟು ಗುಟ್ಟಾಗಿ, ಅತ್ಯಂತ ರಹಸ್ಯವಾಗಿ, ಅವಸರವಸರವಾಗಿ ಭಗತ್ ಸಿಂಗ್, ಶಿವರಾಮ ರಾಜ್ ಗುರು, ಸುಖದೇವ್ ಥಾಪರ್ ಅವರನ್ನು ಎಂಭತ್ತೆಂಟು ವರ್ಷಗಳ ಹಿಂದೆ.. ಇದೆ ದಿನ.... ಅಂದರೆ ಮಾರ್ಚ್ ೨೩ ರಂದು ಲಾಹೋರ್ ಜೈಲಿನಲ್ಲಿ ಗಲ್ಲುಗಂಭಕ್ಕೇರಿಸಿದರು..! ಬ್ರಿಟಿಷ್ ಅಧಿಕಾರಿಗಳು ಭಗತ್ ಮತ್ತವರ ಸಂಗಡಿಗರ ಬಗ್ಗೆ ಅದೆಷ್ಟು ಭಯಭೀತರಾಗಿದ್ದರೆಂದರೆ ನೇಣಿಗೇರಿಸಿದರೂ ಅವರೆಲ್ಲಾದರೂ ಮತ್ತೆ ಬದುಕಿಯಾರೋ, ಗಲ್ಲುಗಂಭದಿಂದ ಇಳಿಸಿದ ಮೇಲೆ ಅವರೇನಾದರೂ ಮತ್ತೆ ಎದ್ದು ಬಂದಾರೋ ಎಂಬ ಕಾರಣದಿಂದ ಆ ಮೂವರೂ ಯುವ ಕ್ರಾಂತಿಕಾರಿಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ನೇಣುಗಂಭದಲ್ಲೇ ನೇತಾಡಿಸಿ ಅವರು ನಿಜವಾಗಲೂ ಸತ್ತಿದ್ದಾರೆ ಅಂತ ಖಾತರಿಪಡಿಸಿದ ನಂತರವೇ ದೇಹಗಳನ್ನು ನೇಣು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿದರು...!

ಇವತ್ತು ಭಾರತ ಮಾತೆಯ ಆ ಮೂವರು ವೀರಪುತ್ರರು ವೀರಸ್ವರ್ಗವನ್ನೇರಿದ ದಿನ.  ಭಗತ್ ಸಿಂಗ್, ಶಿವರಾಂ ರಾಜ್ ಗುರು ಮತ್ತು  ಸುಖದೇವ್ ಥಾಪರ್ ಈ ಮೂವರ ಬಲಿದಾನದ ದಿವಸವನ್ನು ಶಹೀದ್ ದಿವಸ ಅಥವಾ ಹುತಾತ್ಮ ದಿನಾಚರಣೆ ಅಂತ ದೇಶಭಕ್ತರು ಆಚರಿಸುತ್ತಾರೆ.  ಇವತ್ತಿಗೆ ಭರ್ತಿ ಎಂಭತ್ತೆಂಟು ವರ್ಷಗಳಾದವು...! ಸಂತೋಷದ ವಿಚಾರವೆಂದರೆ ಭಾರತಾಂಬೆಯ ಈ ಮೂವರು ಹೆಮ್ಮೆಯ ಪುತ್ರರನ್ನು ಸ್ಮರಿಸುವ ಜನ ಇವತ್ತು ದೇಶಾದ್ಯಂತ ಹೆಚ್ಚಾಗಿದ್ದಾರೆ...!!  ನಾವೆಲ್ಲಾ ಚಿಕ್ಕದಿರುವಾಗ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಇವರ ಕ್ರಾಂತಿಕಾರೀ ಜೀವನದ ಬಗ್ಗೆ ಇವರ ಧೈರ್ಯ ಸಾಹಸಗಳ ಕತೆಗಳನ್ನು ಕೇಳಿಯೇ ಬೆಳೆದಿದ್ದೆವಾದರೂ ಬಹುತೇಕ ಶಾಲಾ ಕಾಲೇಜುಗಳಲ್ಲಿ ಮಾರ್ಚ್ ೨೩ ನೇ ತಾರೀಕಿನಂದು ಇವರ ಸ್ಮರಣಾರ್ಥ ಹುತಾತ್ಮ ದಿನಾಚರಣೆ ಸಾಮಾನ್ಯವಾಗಿ ಆಚರಿಸುತ್ತಿರಲಿಲ್ಲ. ಭಗತ್ ಸಿಂಗ್ ಅವರ ಚಿತ್ರಗಳು ಅಲ್ಲಲ್ಲಿ ಕಾಣಿಸುತ್ತಿದ್ದವಾದರೂ ರಾಜ್ ಗುರು ಮತ್ತು ಸುಖದೇವ್ ಅವರ ಮುಖಪರಿಚಯವೇ ಯಾರಿಗೂ ಇರಲಿಲ್ಲ...!  ಆದರೆ ಕಾಲ ಬದಲಾಗಿದೆ... ದೇಶ ಬದಲಾಗಿದೆ... ದ್ರೋಹಿ ಕಮ್ಯುನಿಸ್ಟರ ಮತ್ತು ಕಪಟ ಕಾಂಗ್ರೆಸ್ಸಿಗರ ಚಿತಾವಣೆಯಿಂದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ... ದೇಶಭಕ್ತರ ಬಗ್ಗೆ ದೇಶದ ಜನರಿಗೆ ಅರಿವೇ ಇರದಂತೆ ಮಾಡಿ, ಕೆಲವೇ ಕೆಲವು ಬೆರಳೆಣಿಕೆಯಷ್ಟೇ ಜನರಿಂದ ಅವರು ಮಾಡಿದ ತ್ಯಾಗ(?)ದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂಬ ಹಳಸಲು ಕತೆಯನ್ನೇ ಪ್ರಚಾರ ಮಾಡುತ್ತಿದ್ದ ಕಾಲ ತೆರೆಮರೆಗೆ ಸರಿದಿದೆ...!!!  ನಮ್ಮ ದೇಶದ ಯುವಕರಿಗೆ ನಮ್ಮ ದೇಶದ ಭವ್ಯ ಪರಂಪರೆಯ ಬಗ್ಗೆ, ವೀರಯೋಧರ ಬಗ್ಗೆ ತಿಳುವಳಿಕೆ ಹೆಚ್ಚುತ್ತಿದೆ...!  ಜಾಗೃತಿ ಮೂಡುತ್ತಿದೆ.  ಅದರಲ್ಲೂ ಕಳೆದ ಐದು ವರ್ಷಗಳಲ್ಲಿ , ಶ್ರೀ ಮೋದೀಜಿಯವರು ಅಧಿಕಾರಕ್ಕೆ ಏರಿದ ಮೇಲೆ ಈ ನಿಟ್ಟಿನಲ್ಲಿ ಅಗಾಧವಾದ ಬದಲಾವಣೆಗಳಾಗಿವೆ.  ಹಿಂದೆಲ್ಲ ಯಾವುದೊ ಕಮ್ಯುನಿಸ್ಟ್ ನಾಯಕರ ಚಿತ್ರಗಳನ್ನು, ಪಾಪ್ ಗಾಯಕರ ಚಿತ್ರಗಳನ್ನು ಟಿ ಶರ್ಟ್ ಗಳ ಮೇಲೆ ಧರಿಸುತ್ತಿದ್ದ ದ್ದೇಶದ ಯುವಜನತೆ ಇವತ್ತು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಇವರ ಚಿತ್ರಗಳಿರುವ ಟಿ ಶರ್ಟ್ ಗಳನ್ನೂ ಹೆಮ್ಮೆಯಿಂದ ಅತ್ಯಾಧುನಿಕ ಫ್ಯಾಶನ್ ಎಂಬಂತೆ ಧರಿಸುತ್ತಿದೆ...!!  ನಮ್ಮ ನೈಜ ಕ್ರಾಂತಿಕಾರಿ ವೀರರು ನಮ್ಮ ಯುವಜನತೆಯ ಆದರ್ಶ ವಾಗುತ್ತಿರುವುದು ತುಂಬಾ ಸಂತೋಷದ ವಿಚಾರ.

Related posts