Infinite Thoughts

Thoughts beyond imagination

ಮಿಷನ್ ಶಕ್ತಿಯ ಯಶಸ್ವೀ ಪರೀಕ್ಷೆ ದೇಶದ ಸೀಮಾ ಸುರಕ್ಷತೆಗೊಂದು ಶ್ರೀರಕ್ಷೆ!

ಮಿಷನ್ ಶಕ್ತಿಯ ಯಶಸ್ವೀ ಪರೀಕ್ಷೆ 

ದೇಶದ ಸೀಮಾ ಸುರಕ್ಷತೆಗೊಂದು ಶ್ರೀರಕ್ಷೆ!

 ವೈರಿ ಉಪಗ್ರಹವನ್ನೇ ಹೊಡೆದುರುಳಿಸಬಲ್ಲ ಕ್ಷಿಪಣಿ ಹೊಂದಿರುವ ನಾಲ್ಕನೆಯ ರಾಷ್ಟ್ರ ಭಾರತವೆಂದು ಘೋಷಿಸಿದ ಪ್ರಧಾನಿ!  

ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಪ್ರಧಾನಿ ಶ್ರೀ ನರೇಂದ್ರ ಮೋದೀಜಿಯವರು ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆಂದು ಸುದ್ದಿ ಬಂದೊಡನೆಯೇ ಹಲವಾರು ಜನ ದಿಗಿಲುಗೊಂಡದ್ದು ನಿಜವೇ ಹೌದು!  ಆದರೆ ಮೋದೀಜಿಯವರು ಭಾಷಣ ಶುರುಮಾಡಿ ಮಿಷನ್ ಶಕ್ತಿಯ ವಿಷಯ ಪ್ರಸ್ತಾಪಿಸಿ, "ಭಾರತದ ವಿಜ್ಞಾನಿಗಳು ಇದರಲ್ಲಿ ಯಶಸ್ವಿಯಾಗಿ ಮಹತ್ತರ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ, ಭೂಮಿ ಕಕ್ಷೆಯ ಕೆಳಭಾಗದಲ್ಲಿ (Low Earth Orbit)  ಪರಿಭ್ರಮಿಸುತ್ತಿದ್ದ ಕ್ರಿಯಾಶೀಲ ಉಪಗ್ರಹವೊಂದನ್ನು ಪ್ರತಿರೋಧಕ ಕ್ಷಿಪಣಿಯ ಮೂಲಕ ಹೊಡೆದುರುಳಿಸಿ ನಮ್ಮ ವಿಜ್ಞಾನಿಗಳು ಅಂತರಿಕ್ಷ ಯುದ್ಧ ಕ್ಷೇತ್ರದಲ್ಲಿ ಬಹಳ ಮಹತ್ವಪೂರ್ಣ ಯಶಸ್ಸು ಸಾಧಿಸಿದ್ದಾರೆ!"  ಅಂತ ಅನ್ನುತ್ತಿದ್ದ ಹಾಗೆಯೇ ಬಹುಶಃ ದೇಶದ ಅಸಂಖ್ಯಾತ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬೇಕು...!

ಮಿಷನ್ ಶಕ್ತಿ ಯಶಸ್ವೀ ಆಗುವುದರ ಮೂಲಕ ಭಾರತ ವಿಶ್ವದಲ್ಲೇ ಉಪಗ್ರಹ ಪ್ರತಿರೋಧಕ ವ್ಯವಸ್ಥೆ ಹೊಂದಿರುವ ನಾಲ್ಕನೆಯ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆಯಿತು.  ಅಂತರಿಕ್ಷದಲ್ಲಿ ಪರಿಭ್ರಮಣ ಮಾಡುತ್ತಿರುವ ಉಪಗ್ರಹವನ್ನು ಭೂಮಿಯಿಂದಲೇ ಹೊಡೆದುರುಳಿಸುವುದು ಅಷ್ಟು ಸುಲಭದ ಕೆಲಸವಲ್ಲ.  ಅದಕ್ಕೆ ಅಸಾಧಾರಣ ಮತ್ತು  ಅತ್ಯುತ್ಕೃಷ್ಟ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಹಾಗು ಅತೀ ನಿಖರವಾದ  ವೈಜ್ಞಾನಿಕ ಉಪಕರಣಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯ ಮತ್ತು ಇದಕ್ಕೆಲ್ಲ ತುಂಬಾ ಸಮಯಾವಕಾಶ ಬೇಕು.  ಅಂತರಿಕ್ಷದಲ್ಲಿ ಪರಿಕ್ರಮಿಸುತ್ತಾ ನಮ್ಮ ಭೂಭಾಗದ ಮೇಲೆ ಗೂಢಚರ್ಯೆ ಮಾಡುವ ವೈರಿಗಳ ಗೂಢಚಾರಿ ಉಪಗ್ರಹ (Spy Satellite)  ಕೈಯಿಂದ ಯಾರಿಗೂ, ಎಂಥಾ ಶಕ್ತ ರಾಷ್ಟ್ರಗಳಿಗೂ ತಪ್ಪಿಸಿಕೊಳ್ಳುವುದು ಅಸಾಧ್ಯ!  ನೂರಾರು ಕಿಲೋಮೀಟರ್ ಎತ್ತರದಿಂದ, ನಮ್ಮ ಭೂಮಂಡಲದ ವಾತಾವರಣ ವ್ಯಾಪ್ತಿಯನ್ನೂ ಮೀರಿ ಅಂತರಿಕ್ಷದಲ್ಲಿ ನಮ್ಮ ದೇಶದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳನ್ನು ಹದ್ದಿನ ಕಣ್ಣಿಂದ ಕಾಯುವ ಈ ಗೂಢಚಾರಿ ಉಪಗ್ರಹಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.  ಈ ಚಿಕ್ಕ ಗೂಢಾಚಾರಿಕಾ ಉಪಗ್ರಹಗಳನ್ನು ಭೂಮಿಯ ಮೇಲಿಂದಲೇ ನಿಖರವಾಗಿ ಗುರಿಯಿಟ್ಟು ಹೊಡೆದು ಹಾಕಲು ಯಾವುದೇ ಆಧುನಿಕ ಶಸ್ತ್ರ ಗಳಿಂದಲೂ ಸಾಧ್ಯವಿಲ್ಲ.  ಅದಕ್ಕಾಗಿಯೇ ವಿಶೇಷ ಕ್ಷಿಪಣಿಗಳ ಅವಶ್ಯಕತೆ ಇದೆ!  

ಅಮೆರಿಕ ಮತ್ತು ರಷ್ಯಾ ಶೀತಲ ಯುದ್ಧದ ಸಮಯದಲ್ಲಿ ಉಪಗ್ರಹಗಳನ್ನು ನಾಶ ಮಾಡಬಲ್ಲ ಇಂಥಾ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿತು, ಆದರೆ ಭಾರತ ಅಂತರಿಕ್ಷವನ್ನು ದೇಶಗಳು ಪರಸ್ಪರರ ಮೇಲೆ ದಾಳಿ ಮಾಡಲು, ಯುದ್ಧ ಮಾಡಲು ಉಪಯೋಗಿಸುವುದರ ವಿರುದ್ಧವೇ ಇತ್ತು.  ಅಂತರಿಕ್ಷದ ದುರ್ಬಳಕೆ ತಡೆಯುವುದಕ್ಕಾಗಿಯೇ ೧೯೬೭ರಷ್ಟು ಹಿಂದೆಯೇ "Outer Space Treaty", ಬಾಹ್ಯಾಕಾಶ ಒಪ್ಪಂದವನ್ನು ಪ್ರಪಂಚದ ಎಲ್ಲಾ ದೇಶಗಳೂ ಮಾಡಿಕೊಂಡವು.  ಭಾರತವೂ ಅದಕ್ಕೆ ಸೇರಿಕೊಂಡಿತ್ತು ಮತ್ತು ೧೯೮೨ ರಲ್ಲಿ ಈ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು.  ಹಾಗಾಗಿ ಅಂತರಿಕ್ಷವನ್ನು ದುರ್ಬಳಕೆ ಮಾಡುವುದರ ಬಗ್ಗೆ ಭಾರತ ಖಚಿತ ನಿಲುವು ಹೊಂದಿದ್ದರಿಂದ ಉಪಗ್ರಹ ವಿನಾಶಕ ಶಸ್ತ್ರಾಸ್ತ್ರ ಬಳಸುವುದನ್ನು ಮತ್ತು ಅಭಿವೃದ್ಧಿ ಪಡಿಸುವುದನ್ನು ವಿರೋಧಿಸಿತ್ತು.  ಪ್ರಪಂಚದ ಇತರ ಹಲವಾರು ದೇಶಗಳು ಕೂಡಾ ಇದೆ ನೀತಿಯನ್ನೇ ಅನುಸರಿಸಿದೆಯಾದರು..... 

ಭಾರತಕ್ಕೆ ತನ್ನ ನೀತಿಯನ್ನು ಬದಲಿಸಬೇಕಾದ ತುರ್ತು ಅಗತ್ಯವಿತ್ತು.  ೨೦೦೭ರ ಸುಮಾರಿಗೆ ಚೀನಾ ತನ್ನದೇ ಒಂದು ಉಪಗ್ರಹವನ್ನು ಅಂತರಿಕ್ಷದಲ್ಲೇ ನಾಶಪಡಿಸಬೇಕೆಂಬ ನೆಪದಲ್ಲಿ ಉಪಗ್ರಹ ನಿರೋಧಕ ಕ್ಷಿಪಣಿ ಅಭಿವೃದ್ಧಿಗೆ ತೊಡಗಿತು.  ೨೦೧೩ ರಲ್ಲಿ ಅದು ಒಂದು  ಕ್ಷಿಪಣಿಯನ್ನು ರಹಸ್ಯವಾಗಿ Ionosphere ಅಧ್ಯಯನಕ್ಕಾಗಿ ಹಾರಿಸುತ್ತಿದ್ದೇವೆ ಎಂಬ ನೆಪದಿಂದ ಪರೀಕ್ಷಿಸಿತು.  ಇದು ಉಪಗ್ರಹ ನಿರೋಧಕ ಕ್ಷಿಪಣಿಯಾಗಿತ್ತೆನ್ನುವುದು ಅಮೆರಿಕ ನಡೆಸಿದ ತನಿಖೆಯಿಂದ ಖಚಿತವಾಗಿತ್ತು.  ಯಾವಾಗ ಚೀನಾ ಉಪಗ್ರಹ ನಿರೋಧಕ ಕ್ಷಿಪಣಿ ಅಭಿವೃದ್ಧಿಪಡಿಸುವ ಮುನ್ಸೂಚನೆ ಸಿಕ್ಕಿತೋ,  ಆಗಲೇ ಭಾರತ ಕೂಡಾ ತನ್ನ ನೀತಿಯನ್ನು ಬದಲಿಸಿತು.  ನಮ್ಮ ವಿಜ್ಞಾನಿಗಳೂ ಮಿಷನ್ ಶಕ್ತಿಯಡಿ ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರಜ್ಞಾನದ ಅಭಿವೃದ್ಧಿಗೆ ತೊಡಗಿಕೊಂಡರು.  ೨೦೧೩ ರಿಂದ ಚೀನಾ ಕ್ಷಿಪಣಿ ದೊಡ್ಡ ಮಟ್ಟದ ಸುದ್ದಿ ಮಾಡಿದ ನಂತರ ಭಾರತದ ವಿಜ್ಞಾನಿಗಳು ತುಂಬಾ ವೇಗದಿಂದ ಕೆಲಸ ಮಾಡಲಾರಂಭಿಸಿದರು.  ಆದರೆ ಅಂದಿನ ಸೋನಿಯ ಸುಪರ್ದಿಯಲ್ಲಿ ಮನಮೋಹನ ಸಿಂಗ್ ನೇತ್ರತ್ವದ ಕೇಂದ್ರ ಸರ್ಕಾರ, ವಿಜ್ಞಾನಿಗಳ ಸಂಶೋಧನಾ ಕಾರ್ಯಕ್ಕೆ  ಕೆಂಪು ನಿಶಾನೆ ತೋರುವ ಮೂಲಕ ತನ್ನ ಪುಕ್ಕಲುತನವನ್ನು ಪ್ರದರ್ಶಿಸಿತು.    

ಮುಂದೆ ಕೇಂದ್ರದಲ್ಲಿ ಮೋದೀಜಿಯವರ ಸರಕಾರ ಅಧಿಕಾರಕ್ಕೆ ಬಂದು, ಸೂಕ್ತ ನೆರವು ಪ್ರೋತ್ಸಾಹ ದೊರಕಿದ ಕಾರಣಕ್ಕೆ ಕೆಲಸಗಳು ಬಹಳ ವೇಗವಾಗಿ ನಡೆಯತೊಡಗಿದವು.  ಅದರ ಪರಿಣಾಮವಾಗಿ ಇವತ್ತು ಮಿಷನ್ ಶಕ್ತಿ ಯಶಸ್ವಿಯಾಗಿದೆ..!!  Low Earth Orbit ಅಂದರೆ ಭೂಮಿಯ ಕೆಳ ಕಕ್ಷೆಯಲ್ಲಿ ಸಂಚರಿಸುತ್ತಿದ್ದ, ಅಂದರೆ ಚಲನೆಯಲ್ಲೇ ಇದ್ದ ನಮ್ಮದೇ ಉಪಗ್ರಹವೊಂದನ್ನು ಕ್ಷಿಪಣಿಯ ಮೂಲಕ ಪರೀಕ್ಷಾರ್ಥವಾಗಿ ಯಶಸ್ವಿಯಾಯಾಗಿ ನಾಶ ಪಡಿಸಲಾಯಿತು.  ಈ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಉಪಗ್ರಹನಾಶಕ ಕ್ಷಿಪಣಿ ತಂತ್ರಜ್ಞಾನ ಉಳ್ಳ ನಾಲ್ಕನೆಯ ರಾಷ್ಟ್ರವಾಗಿ ಭಾರತ ದಾಖಲೆ ಬರೆಯಿತು!!!!

ಈ ತಂತ್ರಜ್ಞಾನವನ್ನು ನಾವು ಉಪಯೋಗಿಸಬೇಕೆಂದಿಲ್ಲ,  ಬದಲಿಗೆ ನಮ್ಮಲ್ಲೂ ಇಂಥದ್ದೊಂದು ತಂತ್ರಜ್ಞಾನ ಸಿದ್ಧವಿದೆ... ನಾವು ಕೂಡ ಎಂದಿಗಾದರೂ ಅವಶ್ಯವಿದ್ದಲ್ಲಿ, ಯಾವುದೇ ದೇಶದ ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹವನ್ನು ನಮ್ಮ  ಉಪಗ್ರಹ ನಿರೋಧಕ  ಕ್ಷಿಪಣಿಗಳಿಂದ ಉಡಾಯಿಸಿ ಬಿಡಬಲ್ಲೆವು" ಎಂಬ ಸಂದೇಶವನ್ನು ನಾವು ಇವತ್ತು ಜಗತ್ತಿಗೆ ತಲುಪಿಸಿದ್ದೇವೆ!!  ಅಂತರಿಕ್ಷ ಜಗತ್ತಿನ ಬಲಾಢ್ಯ ದೇಶಗಳ ಪೈಕಿ ನಾವೂ ಕೂಡ ಒಬ್ಬರೆಂದು ತೋರಿಸಿಕೊಟ್ಟಿದ್ದೇವೆ!  ಇವತ್ತು ದೂರ ಸಂಪರ್ಕ, ಟೆಲಿವಿಷನ್, ಟೆಲಿಫೋನ್, ನ್ಯಾವಿಗೇಶನ್ ನಿಂದ ಹಿಡಿದು ದೇಶದ ಎಲ್ಲ ವ್ಯವಸ್ಥೆಗಳೂ ಅಂತರ್ಜಾಲದ ನೆರವಿನಿಂದ ಉಪಗ್ರಹಗಳ ಮುಖಾಂತರವೇ ನಡೆಯುತ್ತದೆ.  ಇಂಥಹ ಸಂದರ್ಭದಲ್ಲಿ ನಮ್ಮ ಸಂವಹನ ಉಪಗ್ರಹವೊಂದನ್ನು ವೈರಿ ರಾಷ್ಟ್ರವೊಂದು ಹೊಡೆದುಹಾಕಿದರೆ ನಮ್ಮ ಸಂಪೂರ್ಣ ವ್ಯವಸ್ಥೆಯೇ ಕುಸಿದು ಬೀಳುತ್ತದೆ.  ಹಾಗಾಗಿ ಯುದ್ಧದಂತ ತುರ್ತು ಸಂದರ್ಭದಲ್ಲಿ ಇಂಥ ಅವಘಡಗಳಾಗದ ಹಾಗೆ ನೋಡಿಕೊಳ್ಳಲು ನಮ್ಮಲ್ಲೂ ಅಂಥದ್ದೇ ಒಂದು ವ್ಯವಸ್ಥೆಯಿದ್ದರೆ,  ಆಗ ಯಾರೂ ನಮ್ಮ ಉಸಾಬರಿಗೆ ಬರುವುದಿಲ್ಲ.  

ಇವತ್ತಿನ ದಿನ ನಾವು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ..!!  ಇಂಥ ಉಪಗ್ರಹ ನಿರೋಧಕ ಕ್ಷಿಪಣಿ ವ್ಯವಸ್ಥೆ ಹೊಂದಿದ ವಿಶ್ವದ ನಾಲ್ಕೇ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು ಎನ್ನುವ ಹೆಮ್ಮೆಯಿದೆ...!!  ಆ ಕಾರಣದಿಂದಲೇ ನಮ್ಮ ಪ್ರಧಾನಿ ಮೋದೀಜಿಯವರು ಇವತ್ತು ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಮೂಲಕ ಈ ಸಿಹಿ ಸುದ್ದಿಯನ್ನು ಬಿತ್ತರಿಸಿದ್ದು..!!  

ಮಿಷನ್ ಶಕ್ತಿ ಯನ್ನು ಯಶಸ್ವಿಗೊಳಿಸಿದ  DRDO ಸಂಸ್ಥೆಯ ಎಲ್ಲಾ ವಿಜ್ಞಾನಿ-ವೃಂದದವರಿಗೆ, ಈ ಸುಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು...!!

ಮಿಷನ್_ಶಕ್ತಿ

#DRDO 

#ಅನಂತಕುಮಾರಹೆಗಡೆ

Related posts