Infinite Thoughts

Thoughts beyond imagination

ನಾಮಪತ್ರಕ್ಕೆ ನೇಮ ನೀಡಿರಿ...!!

ನಾಮಪತ್ರಕ್ಕೆ ನೇಮ ನೀಡಿರಿ...!!

ಮಾನ್ಯರೇ,

ಈಗ ಮತ್ತೆ ನಮ್ಮೆದುರು ಲೋಕಸಭಾ ಚುನಾವಣೆ ಬಂದಿದೆ.  ನಿಮ್ಮೆಲ್ಲರ ಬೆಂಬಲ ಆಶೀರ್ವಾದಗಳ ಭರವಸೆಯಿಂದ ಎಪ್ರಿಲ್ ೨ರಂದು ಮತ್ತೆ ನಾಮಪತ್ರ ಸಲ್ಲಿಸುತ್ತಿದ್ದೇನೆ.  ಈ ಸಂದರ್ಭದಲ್ಲಿ ಈವರೆಗಿನ ನಿಮ್ಮ ಔದಾರ್ಯ, ಬದ್ಧತೆ ಮತ್ತು ಪ್ರಬುದ್ಧತೆಗಳ ಬಗ್ಗೆ ನಿಮ್ಮೊಂದಿಗೆ ನನ್ನ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.

ಐದು ಬಾರಿ, ಭಾಜಪಾದ ಅಭ್ಯರ್ಥಿಯಾದ ನನ್ನನ್ನು ಆಶೀರ್ವಾದಿಸಿ ಸಂಸತ್ತಿಗೆ ಕಳಿಸಿದ್ದೀರಿ.  ನಿಮ್ಮ ಪ್ರೀತಿ, ಅಭಿಮಾನ, ಔದಾರ್ಯ ಬಹಳ ದೊಡ್ಡದು, ಅದಕ್ಕೆ ನಾನು ನಿತ್ಯ ಕೃತಜ್ಞ.  ರಾಜಕೀಯ ರಂಗದ ಪ್ರಾಮಾಣಿಕತೆಯಲ್ಲಿ, ಸಾರ್ವಜನಿಕ ಬದುಕಿನ ಶುದ್ಧತೆಯಲ್ಲಿ ನಿಮಗಿರುವ ಬದ್ಧತೆ ನನಗೆ ಅತೀವ ಸಂತೋಷ ಹಾಗೂ ಆಶ್ಚರ್ಯವನ್ನು ತಂದಿದೆ.  ನೀವು ಜಾತಿಯನ್ನು ನೋಡಿ ಮತ ಹಾಕಿದ್ದರೆ, ನೀವು ದುಡ್ಡಿನ ಆಮಿಷಕ್ಕೆ ಒಳಗಾಗಿದ್ದರೆ ನಾನು ಒಮ್ಮೆಯೂ ಆರಿಸಿ ಬರುತ್ತಿರಲಿಲ್ಲ.  ಜಾತಿ ರಾಜಕಾರಣವನ್ನೂ ದುಡ್ಡಿನ ದೌಲತ್ತನ್ನೂ ಮೀರಿ ರಾಷ್ಟ್ರ ಹಿತವನ್ನು ಗಮನಿಸಿದ್ದೀರಿ.  ರಾಜಕಾರಣದ ಸೋಗಲಾಡಿತನವನ್ನು ಮೀರಿ ವೈಚಾರಿಕ ಒಲವನ್ನು ಗೌರವಿಸಿದ್ದೀರಿ. ನಿಮ್ಮ ಬದ್ಧತೆ ಬಹಳ ಅಮೂಲ್ಯವಾದದ್ದು.

ಕಳೆದ ಐದು ಚುನಾವಣೆಗಳಲ್ಲಿ ನಿಮ್ಮೆದುರು ಯಾವೆಲ್ಲ ಆಮಿಷಗಳನ್ನು ಒಡ್ಡಲಾಗಿತ್ತು ಎನ್ನುವುದರ ಕಲ್ಪನೆ ನನಗಿದೆ.  ಪ್ರಜಾಪ್ರಭುತ್ವದಲ್ಲಿ ನಂಬಿಗೆ ಇಲ್ಲದ ಜನ; ನಿಮ್ಮ ಮುಂದೆ ಹಣದ ಥೈಲಿಯನ್ನು ಹಿಡಿದು ಮಾತಾಡಿಸಿದ್ದಾರೆ; ಜಾತಿಯ ಮಾತನ್ನು ಮುಂದೆ ಮಾಡಿ ನಿಮ್ಮನ್ನು ಮರುಳುಗೊಳಿಸುವ ಯತ್ನ ಮಾಡಿದ್ದಾರೆ.

ಕರಾವಳಿ, ಮಲೆನಾಡು, ಬಯಲು ನಾಡು ಎಂದೆಲ್ಲ ಪ್ರಾದೇಶಿಕ ಮೋಹದ ಮಾತಾಡಿದ್ದಾರೆ.  ಆದರೆ ನಿಮ್ಮ ನಿಷ್ಠೆಯ ಎದುರು ಆ ಎಲ್ಲ ಪ್ರಯತ್ನಗಳೂ ಸೋತಿವೆ.  ನೀವು ಸತ್ಯದ ಜೊತೆ, ರಾಷ್ಟ್ರಿಯ ಏಕತೆಯ ಜೊತೆ, ಪ್ರಾಮಾಣಿಕ ರಾಜಕಾರಣದ ಜೊತೆ ನಿರಂತರವಾಗಿ ನಿಂತಿದ್ದೀರಿ. ಆ ನಿಮ್ಮ ನಿಷ್ಠೆಯೇ ಸಾರ್ವಜನಿಕ ಜೀವನದ ನನ್ನ ಶ್ರದ್ಧೆಯನ್ನು ಹೆಚ್ಚಿಸಿದೆ,  ಪ್ರಾಮಾಣಿಕ ಬದುಕಿನ ನನ್ನ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.  ನಿಮ್ಮ ಪ್ರಬುದ್ಧತೆಗೆ, ಅದಮ್ಯ ವಿವೇಕಕ್ಕೆ ನನ್ನ ಅನಂತ ನಮನಗಳು.

ಬಂಧುಗಳೇ..

ಇಪ್ಪತ್ತೆರಡು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನಾನು ನಂಬಿದ ಮೌಲ್ಯಗಳ ಕುರಿತ ಶ್ರದ್ಧೆಯಿಂದ, ಬದ್ಧತೆಯಿಂದ ಸ್ವಲ್ಪವೂ ಕದಲದಂತೆ ಕಾದುಕೊಂಡವರು ನೀವು.  ನಿಮ್ಮ ನಿಷ್ಠೆಯೇ ನನಗೆ ಪ್ರೇರಣೆ.  ೨೦೦೪ ರಿಂದ ೨೦೧೪ರ ವರೆಗಿನ ಲೋಕಸಭೆಯ ಎರಡು ಅವಧಿಗಳು, ದೇಶದಲ್ಲಿ ಭ್ರಷ್ಟರ ಅಟ್ಟಹಾಸದ ದಿನಗಳವು. ಎಂತೆಂತಹ ಗಟ್ಟಿಗರನ್ನೂ ಆಮಿಷದಲ್ಲಿ ಕೆಡವಿದ ದಿನಗಳವು. ರಾಜಕಾರಣದ ಹಿರಿಯರೆಂದು ಕೊಂಡವರೂ ಸೋಗಲಾಡಿ ಜಾತ್ಯತೀತರ ಸಂಗಡ ಹೊಂದಾಣಿಕೆಯ ಕುಸ್ತಿಗೆ ಸಿದ್ಧರಾಗಿಬಿಟ್ಟಿದ್ದರು!! ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡವರಿಗೆ ಭಾರೀ ಬಹುಮಾನಗಳು ಸಿಕ್ಕವು. 

ದೇಶದ ಹಿತವನ್ನೂ ಮರೆತು ಸಿಕ್ಕಷ್ಟು ಬಾಚಿಕೊಳ್ಳುವ ಸ್ಪರ್ಧೆಯಲ್ಲಿ ದ್ರೋಹಿಗಳೆಲ್ಲ ಮುಂದಿದ್ದರು. ಆ ದಿನಗಳಲ್ಲಿಯೂ ನನ್ನ ಮೌಲ್ಯಗಳ ಬದ್ಧತೆಗೆ, ವೈಚಾರಿಕ ಪ್ರಖರತೆಗೆ, ರಾಷ್ಟೀಯ  ಜಾಗೃತಿಗೆ ಒತ್ತಾಸೆಯಾಗಿ ನಿಂತಿದ್ದು ನಿಮ್ಮೆಲ್ಲರ ನಿಯತ್ತು.  ನಿಮ್ಮ ನೆನಪೇ ನನಗೆ ದಾರಿ ದೀಪ.  ನನ್ನನ್ನು ಬೆಳೆಸಿದವರು ನೀವು, ಒಲುಮೆಯ ಕೈತುತ್ತು ನೀಡಿ ಸಾಕಿದವರು ನೀವು.  ಕಳೆದ ಅವಧಿಯಲ್ಲಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದ ಸರಕಾರದಲ್ಲಿ ಮಂತ್ರಿಯಾಗಿ ಸೇವೆಸಲ್ಲಿಸುವ ಅವಕಾಶವೂ ನಿಮ್ಮಿಂದಾಗಿಯೇ ನನಗೆ ಒದಗಿ ಬಂತು.

ಪ್ರಪಂಚದ ಭೂಪಟದಲ್ಲಿ ಜೀವ ವೈವಿಧ್ಯದ ತವರು ಎನ್ನಿಸಿಕೊಂಡಿರುವ ಪಶ್ಚಿಮ ಘಟ್ಟದ ವಲಯದಲ್ಲಿ ನಿಂತು ಅಭಿವೃದ್ಧಿಯ ಬಗ್ಗೆ ಚಿಂತಿಸುವಾಗ, ಪರಿಸರ ಸ್ನೇಹಿ  ಪ್ರಗತಿ ನಮ್ಮ ಹಂಬಲವಾಗಬೇಕು. ಇರುವ ಹಸಿರನ್ನು ತುಳಿದು ಹೊಸದನ್ನು ನಿರ್ಮಿಸುತ್ತೇನೆ ಎನ್ನುವುದು ವಿವೇಕವಾಗುವುದಿಲ್ಲ. ನಿಸರ್ಗದ ಸಮೃದ್ಧಿ, ಪ್ರಕೃತಿ ರಮ್ಯತೆಗಳ ಆಧಾರದಲ್ಲಿಯೇ ಹೊಸ ತಲೆಮಾರಿನ ಉದ್ಯಮಗಳನ್ನು ಸೃಷ್ಟಿಸುವ, ಜ್ಞಾನ ಆಧಾರಿತ ಉದ್ಯೋಗಗಳನ್ನು  ಸೃಜಿಸುವ ಅಗತ್ಯ ನಮ್ಮದು. ನಾಗರಿಕ ಬದುಕಿನ ಅನುಕೂಲಗಳಿದ್ದೂ ಪ್ರಕೃತಿಯ ಮಡಿಲಿನ ನೆಮ್ಮದಿಯ ಬದುಕು ನಮ್ಮದಾಗಬೇಕು.  ಈ ದೃಷ್ಟಿಯಿಂದಲೇ ನನ್ನ ಪ್ರಯತ್ನಗಳಿವೆ.  ನಮ್ಮ ಕ್ಷೇತ್ರದ  ಅಭಿವೃದ್ಧಿಗೆ ನಗರ ಕೇಂದ್ರಿತವಾದ ಪ್ರಚಲಿತ ಮಾನದಂಡಗಳು ಹೊಂದಲಾರವು.  ನಾವು ನಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.  ಇದು ನನ್ನ ಬಲವಾದ ಹಂಬಲ.  ಇದಕ್ಕೆ ನಿಮ್ಮೆಲ್ಲರ ಸಮ್ಮತಿ ಇದೆ ಎಂದುಕೊಳ್ಳುತ್ತೇನೆ. 

ಆದಾಗ್ಯೂ, ಜನರ ಅಗತ್ಯಕ್ಕೆ ಅನುಗುಣವಾಗಿ ಸುದೂರದ ಸುಸ್ಥಿರ ಅಭಿವೃದ್ಧಿಯ ಕನಸನ್ನು ನನಸಾಗಿಸಲು, ಕಳೆದ ಹಲವು ದಶಕಗಳಿಂದ ಕಲ್ಪಿಸಿಕೊಳ್ಳಲಾಗದ ಹತ್ತಾರು ಯೋಜನೆಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗುತ್ತಿದ್ದು ಅದನ್ನು ಈಗಾಗಲೇ ಪುಸ್ತಕ (“ವಿಕಾಸ ಪಥ”) ಹಾಗೂ ಕರಪತ್ರಗಳ ಮುಖಾಂತರ ತಮ್ಮ ಅವಗಾಹನೆಗೆ ತಂದಿದ್ದೇನೆ.  ಆದರೂ ಸಾಧಿಸುವುದು ಸಾಕಷ್ಟಿದೆ.  ಸಾಧಿಸುವ ಛಲವೂ ಜೊತೆಯಲ್ಲಿದೆ.

ಬಂಧುಗಳೇ..

ಈಗ ಬಂದಿರುವ ಲೋಕಸಭಾ ಚುನಾವಣೆ ಕೇವಲ ರಾಜಕೀಯ ಆಯ್ಕೆಯ ಚುನಾವಣೆಯಲ್ಲ.  ನಮ್ಮ ದೇಶ, ಧರ್ಮ, ಸಂಸ್ಕೃತಿಗಳನ್ನು ರಕ್ಷಿಸಿಕೊಳ್ಳುವ ಬಹುದೊಡ್ಡ ಅವಕಾಶ.  ರಾಷ್ಟೀಯ  ಶಕ್ತಿ ಮತ್ತು ಅರಾಷ್ಟೀಯ ಶಕ್ತಿಗಳ ನಡುವಣ ನೇರ ಹೋರಾಟ ಇದಾಗಿದೆ.  ನಮ್ಮ ಮನೆ, ಕುಟುಂಬ ವ್ಯವಸ್ಥೆ, ನಮ್ಮ ದೇವಾಲಯಗಳು, ಗೋವು, ಒಟ್ಟಾರೆ ಭಾರತದ

ಮಾನಬಿಂದುಗಳ ರಕ್ಷಣೆಗೆ ಈ ಚುನಾವಣೆಯ ಗೆಲುವು ಅತ್ಯಂತ ಅಗತ್ಯ.  ಈ ಕುರಿತ ಜನ ಜಾಗೃತಿ ನಮ್ಮ ರಾಷ್ಟೀಯ ಕರ್ತವ್ಯವೂ ಹೌದು.  ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿ ಮಾಡಿದ, ವಿಶ್ವ ವೇದಿಕೆಯಲ್ಲಿ ಭಾರತದ ಅನನ್ಯತೆಯನ್ನು ಮೆರೆದ, ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ ಶ್ರೀ ನರೇಂದ್ರ ಮೋದಿಯವರ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಕಾಲದ ಅನಿವಾರ್ಯತೆಯಾಗಿದೆ.

ಮೋದಿಯವರ ನೇತೃತ್ವದಲ್ಲಿ ಆರಂಭವಾಗಿರುವ ಸುಸಂಸ್ಕೃತ, ಸುಸಭ್ಯ, ಸುಸಮೃದ್ಧ ಹಾಗೂ ಸುಸದೃಢ ಭಾರತದ ಪುನರುತ್ಥಾನದ ಕಾರ್ಯವನ್ನು ಮುಂದುವರಿಸುವಲ್ಲಿ ಈ ಚುನಾವಣೆ ಬಹಳ ಮುಖ್ಯವಾದದ್ದು.  ಇದೇ ಹಿಂದು ಭಾರತದ ಅನಾವರಣ.  ಭಾರತದ ಅಸ್ತಿತ್ವ, ಅನನ್ಯತೆ ಇರುವುದು ಹಿಂದುತ್ವದಲ್ಲಿಯೇ ಹೊರತು ಸೋಗಲಾಡಿ ಜಾತ್ಯತೀತತೆಯಲ್ಲ.

ಭಾರತದ ಗುರುತು ಜಾಗೃತ ಹಿಂದುತ್ವ.  ವೈಶ್ವಿಕ ಚಿಂತನೆ ಮತ್ತು ಶ್ರದ್ಧೆಯ ಅನಂತತೆಯನ್ನೊಳಗೊಂಡ ಸಾಂಸ್ಕೃತಿಕ ರಾಷ್ಟೀಯತೆಯನ್ನು ಪ್ರಖರವಾಗಿ ಪ್ರತಿಪಾದಿಸುತ್ತ ಬಂದವನು ನಾನು.  ನಮ್ಮೆಲ್ಲರ ಅಂತಿಮ ಗುರಿ ಭಾರತವನ್ನು ಅದರ ಅಭಿಜಾತ ಗುಣಗಳ ಆಧಾರದಲ್ಲಿ ವಿಕಾಸಗೊಳಿಸುವುದು. ಶತಮಾನಗಳಿಂದ ಕಾಡುತ್ತಿರುವ ಗುಲಾಮಿ ಅಂಧಾನುಕರಣೆಗಳಿಂದ ಭಾರತವನ್ನು ಬಿಡುಗಡೆಗೊಳಿಸುವುದು.

ಹಿಂದು  ರಾಷ್ಟ್ರವೆಂದರೆ ಧಾರ್ಮಿಕ ಸತ್ತೆಯ ಪರಿಕಲ್ಪನೆಯಲ್ಲ.  ವೈವಿಧ್ಯಮಯ ಸಂಸ್ಕೃತಿಯ ರಾಷ್ಟೀಯ ಅಂತಸ್ಸತ್ವದ ಸಶಕ್ತ ಅನಾವರಣ.  ಪರಂಪರೆಯಿಂದ ಹಿಂದುತ್ವದ ಭಾಗವಾಗಿರದ ಯಾವುದೂ ಭಾರತದ ಗುರುತಾಗುವ ಸಾಧ್ಯತೆಯೇ ಇಲ್ಲ. ಸೈನ್ಯವನ್ನು ಸಾಕುವುದೇ ಯುದ್ಧ ದಾಹದ ಲಕ್ಷಣ ಎನ್ನುವ ಸೋಗಲಾಡಿ ಮಾನವತಾವಾದಿಗಳು ಭಾರತದ ಸುರಕ್ಷತೆಗೇ ಸಮಸ್ಯೆಯಾಗುತ್ತಾರೆ. ಹಿಂದುತ್ವವನ್ನು ಸಂಕುಚಿತ ಸಿದ್ಧಾಂತ

ಎನ್ನುವವರು ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುತ್ತಾರೆ. ಇಡೀ ಜಗತ್ತು ಜಿಹಾದೀ ಭಯೋತ್ಪಾದನೆಯ ಭಯದಲ್ಲಿ ಬದುಕುತ್ತಿರುವಾಗ, ಸಶಕ್ತ ಹಾಗೂ ಸಮೃದ್ಧ ಭಾರತವನ್ನು ಕಟ್ಟುವುದೆಂದರೆ ಹಿಂದು ಭಾರತವನ್ನು ಜಾಗೃತಗೊಳಿಸುವುದೇ ಆಗಿದೆ.  ಭ್ರಷ್ಟತೆ, ರಾಷ್ಟ್ರ ದ್ರೋಹ, ಅಭಿಮಾನ-ಶೂನ್ಯತೆಗಳನ್ನು ಮೆಟ್ಟಿ ಅಭಿಮಾನದ ಪೌರುಷಯುಕ್ತ ಸಾಂಸ್ಕೃತಿಕ ಪುನರುತ್ಥಾನವೇ ನಮ್ಮ ಮುಂದಿರುವ ಗುರಿ.

ಮೋದಿಯವರ ಸರಕಾರ ಬಂದ ಮೇಲೆ ಭೌತಿಕ ಅಭಿವೃದ್ಧಿಯ ವಿಕಾಸ ಪಥ ವಿಸ್ತಾರವಾಗುತ್ತಲೇ ಸಾಗಿದೆ.  ‘ಎಲ್ಲರೂ ಜೊತೆಯಲ್ಲಿ; ಎಲ್ಲರೂ ಪ್ರಗತಿಯಲ್ಲಿ’ ಎನ್ನುವುದು ಮೋದಿಯವರ ಆಡಳಿತದ ಮಂತ್ರವಾಗಿದೆ.  ಭೌತಿಕ ವಿಕಾಸದ ಜೊತೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಕಾಸವೂ ರಾಷ್ಟೀಯ  ಜಾಗೃತಿಯೂ ಅತ್ಯಂತ ಅಮೂಲ್ಯವಾದವು.  ಅಭಿಜಾತ ಭಾರತದ ವಿಕಾಸಕ್ಕೆ, ಅನನ್ಯ ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣವಾಗುವ ಈ ಚುನಾವಣೆಯಲ್ಲಿ ನಾನು ನಿಮ್ಮೆಲ್ಲರ ಅಭ್ಯರ್ಥಿಯಾಗಿದ್ದೇನೆ.  ಶ್ರೇಷ್ಠವಾದುದನ್ನು ಸಾಧಿಸುವುದಕ್ಕೆ ಈ ಸಮರದಲ್ಲಿ ನೀವೆಲ್ಲ

ನನ್ನೊಂದಿಗಿದ್ದೀರಿ ಎಂಬ ಭರವಸೆ ನನಗಿದೆ.  ಇದೇ ಎಪ್ರಿಲ್ ೨೩ರ ರಾಷ್ಟೀಯ ಮಹಾ ಯಜ್ಞದಲ್ಲಿ ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ದೇಶದ ಜನಮಾನಸದಲ್ಲಿ ಹೊಸ ಕ್ರಾಂತಿಕಾರ ಕಮನ್ವಂತರವೊಂದನ್ನು ಹುಟ್ಟುಹಾಕಲು, ತಮ್ಮೆಲ್ಲರ ಶುಭಾಶೀರ್ವಾದದ ನಿರೀಕ್ಷೆಯಲ್ಲಿರುವ...

 

ತಮ್ಮೆಲ್ಲರ

#ಅನಂತಕುಮಾರಹೆಗಡೆ

Related posts