ಯುಗಾದಿಯ ಶುಭಕಾಮನೆಗಳ ಜೊತೆಗೆ ಭಾಜಪ ಸ್ಥಾಪನಾ ದಿವಸದ ಶುಭಾಶಯಗಳು !
ಏಪ್ರಿಲ್ ಆರು; ನೆನಪುಗಳು ನೂರಾರು
ಇಂದು ಹಳೆ ವರ್ಷ ಕಳೆದು;
ಹೊಸ ವರ್ಷವರಳುವ ಯುಗಾದಿಯ ದಿನ
ಅಂದು ಭಾಜಪ ಎಂಬ ಹೊಸ ಪಕ್ಷ ಹುಟ್ಟಿ;
ಕಮಲ ಅರಳಿದ ಸುದಿನ
ಇಂದು... ಅಂದರೆ ಏಪ್ರಿಲ್ ಆರನೆಯ ತಾರೀಕಿನ ದಿನ ನಮಗೆಲ್ಲ ಅಂದರೆ ಸಂಘಪರಿವಾರದ ಸಮಸ್ತ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಶ್ರೇಯೋಭಿಲಾಷಿಗಳಿಗೆಲ್ಲಾ ಒಂದು ವಿಶೇಷ ದಿನ. ಕಾರಣ ಇಂದಿಗೆ ಸರಿಯಾಗಿ ಮೂವತ್ತೆಂಟು ವರ್ಷಗಳ ಹಿಂದೆ ಇದೆ ಏಪ್ರಿಲ್ ಆರನೆಯ ತಾರೀಕು ಮುಂಬೈಯಲ್ಲಿ ಭಾರತೀಯ ಜನತಾ ಪಕ್ಷ ವಿದ್ಯುಕ್ತವಾಗಿ ಸ್ಥಾಪನೆಯಾಯಿತು. ನಮ್ಮೆಲ್ಲರ ಪ್ರೀತಿಯ ಅಟಲ್ ಜೀ ಯವರ ಸಮರ್ಥ ಅಧ್ಯಕ್ಷತೆಯಲ್ಲಿ ಭಾಜಪ ಎಂಬ ಹೊಸ ಪಕ್ಷ ಉದಯವಾಗಿ, ಆ ಹೊಸ ಪಕ್ಷದ ಚಿಹ್ನೆಯಾಗಿ ಕಮಲವೂ ಅರಳಿತು. ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ದೇಶದ ಪ್ರಾಚೀನ ಸಂಸ್ಕೃತಿ, ಧರ್ಮ, ಪರಂಪರೆ, ದರ್ಶನ, ಆಧ್ಯಾತ್ಮಿಕತೆ ಇತ್ಯಾದಿ ನಶಿಸುತ್ತಿರುವುದನ್ನು ರಕ್ಷಿಸಿ, ವಿಛಿಧ್ರಕಾರೀ ಶಕ್ತಿಗಳಿಂದ ಒಡೆದುಹೋಗುತ್ತಿದ್ದ ದೇಶವನ್ನು ಸಂರಕ್ಷಿಸಿ ರಾಷ್ಷ್ಟ್ರ ನಿರ್ಮಾಣಕ್ಕೊಂದು ಹೊಸ ಆಯಾಮ ನೀಡಲಿಕ್ಕಾಗಿಯೇ ಆ ದಿನ ಕಮಲ ಅರಳಿತು. ದಶಕಗಳ ಹಿಂದೆ ಶ್ಯಾಮ ಪ್ರಸಾದ ಮುಖರ್ಜಿಯವರು ಕಂಡ ರಾಷ್ಟ್ರೋತ್ಥಾನದ ಕನಸುಗಳನ್ನು, ದೀನದಯಾಳ ಉಪಾಧ್ಯಾಯರ ಅಂತ್ಯೋದಯದ ಧ್ಯೇಯವನ್ನು ನನಸು ಮಾಡಲೆಂದೇ ಆ ದಿನ ಕಮಲ ಅರಳಿತು. ಹಳೆಯ ಸಾವಿರ ವರ್ಷಗಳ ಕರಾಳ ಯುಗಾಂತ್ಯವಾಗಿ, ನವ ಯುಗವೊಂದರ ಶುರುವಾತಿನ ಶುಭ ಸಂಕೇತವಾಗಿ ಆ ದಿನ ಕಮಲ ಅರಳಿತು, ಹೊಸ ಪಕ್ಷದ ಹೊಸಬಾವುಟ ಮುಂಬೈಯ ಆಗಸದಲ್ಲಿ ಪಟಪಟಿಸುತ್ತಿರುವ ಸಮಯದಲ್ಲೇ ಕಮಲದ ಹೊಸಚಿಹ್ನೆ ಫಳಫಳಿಸಿತ್ತು...!!
ಭಾರತದ ಭವಿಷ್ಯವನ್ನು ಭವ್ಯವಾಗಿ ಅರಳಿಸುವ ಭರವಸೆ ಬಾವುಟ ಹಿಡಿದವರ ಕಣ್ಣುಗಳಲ್ಲಿ ಮಿನುಗಿತ್ತು! ಅಂದಿನ ಆ ಭರವಸೆಯ ಬೆಳಕೇ ಇಂದು ಭಾರತ ಪ್ರಕಾಶಿಸುವಂತೆ ಮಾಡುತ್ತಿದೆ. ಆದರೆ ಕಳೆದ ಆ ಮೂವತ್ತೆಂಟು ವರ್ಷಗಳ ಯಾತ್ರೆ ಸುಲಭದ್ದಾಗಿರಲಿಲ್ಲ. ಹೊಸ ಯುಗವನ್ನೇ ಶುರುಮಾಡುತ್ತೇವೆ ಅಂತ ಹೊರಟವರ ದಾರಿ ಸುಗಮವಾಗೇನೂ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ಕಷ್ಟಗಳನ್ನು ಸಹಿಸಿ, ಸಂಕಷ್ಟಗಳನ್ನು ಎದುರಿಸಿ, ಏಳುಬೀಳುಗಳ ಹೋರಾಟಗಳ ದಾರಿಯನ್ನು ಸವೆಸಿದ ಕೋಟ್ಯಂತರ ನಿಸ್ವಾರ್ಥಿ ಕಾರ್ಯಕರ್ತರ ಶ್ರಮದ ಫಲವಾಗಿಯೇ ಇವತ್ತು ಕಮಲ ದೇಶವ್ಯಾಪಿಯಾಗಿ ಅರಳಿದೆ ಮಾತ್ರವಲ್ಲ, ಜಗತ್ತಿನಲ್ಲೇ ಅತ್ಯಂತ ಬೃಹತ್ ರಾಜಕೀಯ ಶಕ್ತಿಯಾಗಿಯೂ ಹೊರ ಹೊಮ್ಮಿದೆ. ಹಾಗಾಗಿ ಸಾಗಿ ಬಂದ ಹಾದಿಯಲ್ಲಿ ಸಿಕ್ಕಿದ ಬೇವು ಬೆಲ್ಲ ಎರಡನ್ನೂ ಸಮಾನವಾಗಿಯೇ ಸ್ವೀಕರಿಸಿದ್ದರಿಂದಲೇ ಇಂದಿನ ಯಶಸ್ಸು ಪ್ರಾಪ್ತವಾಗಿದೆ.
ಇಂದು ಚೈತ್ರ ಮಾಸದ ಮೊದಲ ದಿನ, ಹೊಸಯುಗದ ಆರಂಭ ಅನ್ನುವ ಕಾರಣಕ್ಕಾಗಿಯೇ, ಯುಗದ ಆದಿ ಅರ್ಥಾತ್ ಯುಗಾದಿ ಅಂತ ಕರೆಯುತ್ತೇವೆ. ಹಳೆ ವರ್ಷ ಉರುಳಿಹೋಗಿ ಹೊಸ ವರ್ಷ ಅರಳುವ ದಿನವೇ ಯುಗಾದಿ. ಈ ಬಾರಿಯ ಯುಗಾದಿ ಪ್ರತೀ ಸಲಕ್ಕಿಂತ ಸ್ವಲ್ಪ ಹೆಚ್ಚೇ ಖುಷಿಯನ್ನು ತಂದಿದೆ. ಕಾರಣ, ಇಂದಿನ ತಾರೀಕು ಅಂದರೆ ಏಪ್ರಿಲ್ ಆರನೆಯ ತಾರೀಖಿನಂದೇ ಭಾಜಪ ಪಕ್ಷದ ಸ್ಥಾಪನಾ ದಿನವೂ ಆಗಿರುವುದರಿಂದ ನಮಗೆಲ್ಲಾ ದುಪ್ಪಟ್ಟು ಹರ್ಷ...!
ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ನನ್ನ ಪ್ರೀತಿಯ ಸಂಘ ಪರಿವಾರದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ, ಶ್ರೇಯೋಭಿಲಾಷಿಗಳಿಗೆಲ್ಲಾ ಯುಗಾದಿಯ ಶುಭಕಾಮನೆಗಳ ಜೊತೆಗೆ ಭಾಜಪ ಸ್ಥಾಪನಾ ದಿವಸದ ಶುಭಾಶಯಗಳನ್ನೂ ಕೋರುತ್ತೇನೆ!!!
#ಅನಂತಕುಮಾರಹೆಗಡೆ