Infinite Thoughts

Thoughts beyond imagination

ಎಲ್ಲರಿಗೂ ಶ್ರೀ ರಾಮನವಮಿಯ ಶುಭಹಾರೈಕೆಗಳು !!!

ರಾಮನವಮಿ - ಚೈತ್ರ ಮಾಸದ ಶುಕ್ಲ ಪಕ್ಷದ ಒಂಭತ್ತನೆಯ ದಿನ 

ಪ್ರಭು ಶ್ರೀರಾಮಚಂದ್ರ ಜನ್ಮವೆತ್ತಿದ ಪುಣ್ಯ ದಿನ !

ಯುಗಾದಿ ಮುಗಿದು ಎಂಟು ದಿನ ಕಳೆಯುವಷ್ಟರಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದಂದೇ ಮರ್ಯಾದಾ ಪುರುಷೋತ್ತಮ ಭಗವಾನ್  ಪ್ರಭು ಶ್ರೀರಾಮಚಂದ್ರನ ಜನನವಾಯಿತು. ಸಾವಿರಾರು ವರ್ಷಗಳ ಹಿಂದೆ ಭರತಖಂಡದ ಈ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮಚಂದ್ರ ಹುಟ್ಟಿ ಬೆಳೆದು ನಡೆದಾಡಿದ್ದ, ರಾಮರಾಜ್ಯವನ್ನು ವೈಭವದಿಂದ ಆಳಿದ್ದ ಎಂಬ ಆಲೋಚನೆಯೇ ನಮ್ಮನ್ನು ರೋಮಾಂಚನಗೊಳಿಸುತ್ತದೆ..!! ಚಿಕ್ಕಂದಿನಲ್ಲಿ ಕೇಳಿದ, ಓದಿದ, ನೃತ್ಯ, ನಾಟಕ, ಯಕ್ಷಗಾನ, ಚಲನಚಿತ್ರ, ಟಿವಿ ಸೀರಿಯಲ್ಲುಗಳ ಮೂಲಕ ನೋಡಿದ ರಾಮಾಯಣದ ಕತೆಗಳು, ಸನ್ನಿವೇಶಗಳೆಲ್ಲಾ ಮನದ ಭಿತ್ತಿಯೊಳಗಿಂದ ಸುತ್ತಿ ಸುಳಿಯುತ್ತಾ, ಕಣ್ಣ ಪರದೆಯ ಮುಂದೆ ಕುಣಿಯುತ್ತಾ, ಮನಸ್ಸು ಭಾವನಾಲಹರಿಯಲ್ಲಿ ವಿಹರಿಸುತ್ತದೆ..!!

ಶ್ರೀರಾಮನವಮಿಯ ಹಬ್ಬವನ್ನು ದೇಶದಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ.  ಸಹಸ್ರ ವರ್ಷಗಳ ಪರಕೀಯರ ಆಳ್ವಿಕೆ ಎಂಬ ನೆಪದಲ್ಲಿ ದಬ್ಬಾಳಿಕೆಯ ಪರಂಪರೆಯನ್ನು ಸಹಿಸಿಕೊಂಡೆವು.  ಪರಕೀಯ ಮತಗಳ ಹಿಂದೂ ಧರ್ಮ ವಿರೋಧೀ ಅಮಾನುಷ ಕ್ರೌರ್ಯಕ್ಕೆ ಲೆಕ್ಕವಿಲ್ಲದಷ್ಟು ತಲೆಮಾರುಗಳು ಸಾಕ್ಷಿಯಾದವು, ಹಾಗೆ ಬಲಿಗೊಂಡವು.  ಈ ನೆಲದ ಮಣ್ಣಿನಲ್ಲಿ ಅವಿಚ್ಛಿನ್ನವಾಗಿ ಬೆರೆತುಹೋಗಿರುವ, ಆಳವಾಗಿ ಬೇರೂರಿರುವ ನಂಬಿಕೆಗಳು ಇನ್ನಷ್ಟು ಗಟ್ಟಿಯಾದವೇ ಹೊರತು ಯಾವ ದಾಳಿಯು ಅವುಗಳನ್ನು ಒಂದಿಷ್ಟೂ ಕಿತ್ತೊಗೆಯುವುದಕ್ಕಾಗಲಿಲ್ಲ...!

ಇವತ್ತು ನಾಡಿನ ಮೂಲೆ ಮೂಲೆಯಲ್ಲೂ ರಾಮನವಮಿ ಯನ್ನಾಚರಿಸುವ ಭಕ್ತ ಜನರ ಹೃದಯದಲ್ಲಿ ಪಟ್ಟಾಭಿಷಿಕ್ತನಾಗಿರುವ ಪ್ರಭು ಶ್ರೀರಾಮಚಂದ್ರನ ದಿವ್ಯ ಮೂರ್ತಿಯನ್ನು ಒಂದಿಷ್ಟು ಮುಟ್ಟ ಹೊರಟರೂ ಕೈಸುಟ್ಟು ಹೋದೀತು...! 

ಆದರೂ, ಇಷ್ಟೆಲ್ಲಾ ಪರಕೀಯರ ಅಮಾನುಷ ಕ್ರೌರ್ಯಕ್ಕೆ ತುತ್ತಾಗಿಯೂ, ಸಹಸ್ರ ವರ್ಷಗಳ ದೌರ್ಜನ್ಯ, ಕಷ್ಟ ಕಾರ್ಪಣ್ಯಗಳನ್ನು ಸಹಿಸಿಯೂ, ತಮ್ಮ ಧರ್ಮ, ಪರಂಪರೆ, ಜೀವನ ಮೌಲ್ಯ, ನಂಬಿಕೆ, ಆಚರಣೆಗಳೆಲ್ಲವನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಬಂದ ಮುಗ್ಧ ಹಿಂದೂಗಳಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೋಸವಾದದ್ದು, ಘಾಸಿಯಾದದ್ದು ಮಾತ್ರ ನಮ್ಮವರಿಂದಲೇ ಅನ್ನುವುದು ನಿಜಕ್ಕೂ ಘೋರ..! ರಾಮ. ಕೃಷ್ಣ, ಈಶ್ವರ, ಶಂಕರ  ಹೀಗೆ ಹಿಂದೂ ದೇವರುಗಳ ಹೆಸರುಗಳನ್ನೇ ಇಟ್ಟುಕೊಂಡ ಪಾಖಂಡಿಗಳೇ ಹಿಂದೂಗಳ ಬೆನ್ನಿಗೆ ಚೂರಿಯಿಕ್ಕುವ ಕೆಲಸ ಮಾಡಿದರು.  ಅವರೆಲ್ಲರ ವೇಷಭೂಷಣಗಳೂ, ನೇಮ ನಡತೆಗಳೂ, ಹೆಸರು ಕೊಸರುಗಳೂ ಕೂಡಾ ಪಕ್ಕಾ ಹಿಂದೂಗಳ ರೀತಿಯೇ ಇದ್ದವು!  ಹಣೆಗೆ ದೊಡ್ಡ ತಿಲಕ ಇಟ್ಟುಕೊಂಡೇ ಝಲಕ್ ತೋರಿಸಿ ಮೋಸ ಮಾಡುವುದನ್ನು ಕರತಲಾಮಲಕ ಮಾಡಿಕೊಂಡವರ ಕೈಯಲ್ಲಿಯೇ ಅಧಿಕಾರದ ಚುಕ್ಕಾಣಿಯಿತ್ತು!  ರಾಮ ಹುಟ್ಟಿದ್ದೇ ಸುಳ್ಳು, ಕೃಷ್ಣ ಹುಟ್ಟಿದ್ದೇ ಪೊಳ್ಳು ಅಂತನ್ನೋ ಜನಗಳ  ಗುಂಪೇ ನಮ್ಮನ್ನಾಳಲು ನಿಂತಿತ್ತು! ಮೊದಮೊದಲು ಅಡಗಿ ಕುಳಿತೇ ಅಡ್ಡಗಾಲು ಹಾಕುತ್ತಿದ್ದ ಮಂದಿ ಬಳಿಕ ಎದ್ದು ನಿಂತೇ ಎದುರುತ್ತರ ನೀಡತೊಡಗಿದ್ದರು!  

ಹಿಂದೂ ಧರ್ಮವನ್ನು, ಅದರ ದೈವದೇವರುಗಳನ್ನು, ಅದರ ಆಚರಣೆಗಳನ್ನು, ಅದರ ನಂಬಿಕೆಗಳನ್ನು ಲೇವಡಿ ಮಾಡುವುದೇ ವೈಚಾರಿಕತೆ ಅನ್ನಿಸಿಕೊಂಡು ಬಿಟ್ಟಿತು...!

ಆದರೆ ಕಾಲ ಖಂಡಿತಾ  ಸುಮ್ಮನಿರಲಿಲ್ಲ.  ರಾಮ ಇಲ್ಲ ಅಂತ ಹೇಳಿದವರಿಗೆ ಆರಾಮವೇ ಇಲ್ಲದಂತೆ ಮಾಡಿಬಿಟ್ಟ ಭಗವಂತ...! ತಿಲಕ ಇಟ್ಟುಕೊಂಡೇ ಲಕಲಕ ಅಂತ ಆಸ್ತಿಕರಂತೆ ಮೆರೆಯುತ್ತ ತಿರುಗುತ್ತಿದ್ದ ನಾಸ್ತಿಕರಿಗೆ ಲಕ್ ಕೈಕೊಟ್ಟಿತು..!  ಹಿಂದೂಗಳಿಗೆ ಮೋಸ ಮಾಡಿ ಅಧಿಕಾರ ಚಲಾಯಿಸುತ್ತಿದ್ದವರಿಗೆ ಅಂಧಕಾರ ಆವರಿಸಿಕೊಂಡಿತು.  ಜನ ತಿರಸ್ಕರಿಸಿದರು, ಮತ ಹಾಕದೇ ಸೋಲಿಸಿದರು, ಕುರ್ಚಿ  ಕೈಬಿಟ್ಟು ಹೋಯಿತು, ಗಾದಿ ಕೈತಪ್ಪಿ ಹೋಯಿತು!

ಆದರೂ ಈ ಮಂದಿ ಪಾಠ ಕಲಿಯಲಿಲ್ಲ.  ತಪ್ಪು ತಿದ್ದಿ ಕೊಳ್ಳಲಿಲ್ಲ.  ರಾಮನೇ ಇಲ್ಲ, ರಾಮ ಜನ್ಮಿಸಲೇ ಇಲ್ಲ, ರಾಮನ ಜನ್ಮ ದಿನವೇ ಇಲ್ಲ, ಹಾಗಾಗಿ ರಾಮನಿಗೆ ಜನ್ಮ ಭೂಮಿಯೂ ಇಲ್ಲ... ಜನ್ಮ ಭೂಮಿಯೇ ಇಲ್ಲದಿದ್ದ ಮೇಲೆ ರಾಮ ಮಂದಿರವೂ ಇಲ್ಲವೆಂತ ವಿತಂಡವಾದ ಮಂಡಿಸತೊಡಗಿದರು.  ಅರ್ಜಿ ಮೇಲೆ ಅರ್ಜಿ ಹಾಕಿದರು.  ರಾಮ ಹುಟ್ಟಿದ್ದೇ ಸುಳ್ಳು ಅಂತ ಸಾಧಿಸಲು ಪ್ರಯತ್ನಿಸಿದರು.  ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಬಹುತೇಕ ಎಲ್ಲಾ ಸಿದ್ಧತೆಗಳಾಗಿದ್ದರೂ, ನ್ಯಾಯಾಲಯದಲ್ಲಿ ಭಗವಾನ್ ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುತ್ತಾ, ಅಡಿಗಡಿಗೆ ತೊಡರುಗಾಲು ಹಾಕುತ್ತಾ, ಇಲ್ಲಿಯತನಕ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗುತ್ತಲೇ ಬಂದರು. 

ಈಗ ಮತ್ತೆ ಅಧಿಕಾರಕ್ಕೆ ಮರಳಲು, ಮತ್ತೆ ಆಡಳಿತದ ಸೂತ್ರ ಹಿಡಿಯಲು, ಮತ್ತೆ ಮುಗ್ಧ ಹಿಂದೂಗಳನ್ನು ವಂಚಿಸಿ ಗದ್ದುಗೆ ಮೇಲೆ ಕೂರಲು ಹಗಲು ವೇಷ ಧರಿಸತೊಡಗಿದ್ದಾರೆ!  ಹಣೆಗೆ ನಾಮ ಹಾಕುತ್ತಾ, ನೊಸಲಿಗೆ ವಿಭೂತಿ ಬಳಿಯುತ್ತಾ, ಹೆಗಲಿಗೆ ಜನಿವಾರ ಜೋತುಹಾಕುತ್ತಾ, ಕುತ್ತಿಗೆಗೆ ಕೇಸರಿ ಶಾಲು ಹೊದೆಯುತ್ತಾ ಹಿಂದೂಗಳ ಮತಬೇಟೆಗೆ ಇಳಿದಿದ್ದಾರೆ!  ತಾವು ಮಾಡಿದ ವಿಶ್ವಾಸಘಾತಕತನವನ್ನು ಮುಚ್ಚಿಕೊಳ್ಳುತ್ತಾ, ತಾವೇ ರಾಮಮಂದಿರ ನಿರ್ಮಾಣಕ್ಕೆ ಸತತವಾಗಿ ಅಡ್ಡಿಪಡಿಸಿದ್ದನ್ನು ಅಡಗಿಸಿಡುತ್ತಾ  "ಇನ್ನೂ ಯಾಕೆ ರಾಮ ಮಂದಿರ ನಿರ್ಮಾಣವಾಗಿಲ್ಲಾ?" ಅಂತ ಪ್ರಶ್ನಿಸುತ್ತಾ, ಹಿಂದೂಗಳ ದಾರಿತಪ್ಪಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದೆ, ರಾಮ ಜನ್ಮಭೂಮಿಯ ವಿಚಾರಣೆಯೇ ಬೇಡವೆಂತ ಹೇಳಲು ಸಾಲು-ಸಾಲು ಎಂಜಲು ಹಳಸಲು ವಿಷ-ಜಂತುಗಳು ಸುಪ್ರೀಮ್ ಕೋರ್ಟ್ ಅಂಗಣದಲ್ಲಿ  ಸಾಲುಗಟ್ಟಿ ನಿಂತು, ಸಾರ್ವಜನಿಕವಾಗಿ ಇನ್ನು ಯಾಕೆ ರಾಮ ಮಂದಿರ ಕಟ್ಟಿಲ್ಲವೆಂತ ಪ್ರಶ್ನಿಸುತ್ತಿವೆ!!!!

ಆದರೆ ಈ ಬಾರಿ ಇವರ ಕುಟಿಲ ನೀತಿಗಳು ಯಶಸ್ವಿಯಾಗುವುದಿಲ್ಲ. ಜಾಗೃತ ಪ್ರಜ್ಞಾವಂತ ಪ್ರಜೆಗಳ ನಿರ್ಧಾರಗಳು ಖಂಡಿತಾ ಸರಿಯಾಗಿಯೇ ಇರುತ್ತದೆ.  ಭವಿಷ್ಯದ ಸರಕಾರ ಭವ್ಯ ಮಂದಿರವನ್ನು ಶ್ರೀರಾಮನಿಗಾಗಿ ಖಂಡಿತಾ ನಿರ್ಮಿಸಲಿದೆ ಮತ್ತು ಬಹುತೇಕ ಮುಂದಿನ ಬಾರಿಯ ಶ್ರೀರಾಮನವಮಿ ಆ ಭವ್ಯ ಮಂದಿರದಲ್ಲೇ ನೆರವೇರಲಿ ಅಂತ ಹೃದಯಪೂರ್ವಕ ಆಶಿಸುತ್ತಾ... 

ಎಲ್ಲರಿಗೂ ಶ್ರೀ ರಾಮನವಮಿಯ ಶುಭಹಾರೈಕೆಗಳು !!!

 

#ಶ್ರೀ_ರಾಮನವಮಿ

#ಅನಂತಕುಮಾರಹೆಗಡೆ

Related posts