Infinite Thoughts

Thoughts beyond imagination

ಇತಿಹಾಸದ ಪುಟಗಳೊಳಗಿನ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ಎಂಬ ರಕ್ತಸಿಕ್ತ ಅಧ್ಯಾಯ!! ನೂರು ವರ್ಷಗಳೇ ಉರುಳಿಹೋದರೂ ಮರೆತುಹೋಗದು, ಈ ಘೋರ ಅಮಾನವೀಯ ಅನ್ಯಾಯ !

ಇತಿಹಾಸದ ಪುಟಗಳೊಳಗಿನ  ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ಎಂಬ ರಕ್ತಸಿಕ್ತ ಅಧ್ಯಾಯ!!

ನೂರು ವರ್ಷಗಳೇ ಉರುಳಿಹೋದರೂ ಮರೆತುಹೋಗದು, ಈ ಘೋರ ಅಮಾನವೀಯ ಅನ್ಯಾಯ !

 

ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ , ಅಂದರೆ ೧೯೧೯ರ ಏಪ್ರಿಲ್ ಹದಿಮೂರನೆಯ ತಾರೀಕು ಬೈಶಾಖೀ ಹಬ್ಬದ ದಿನ. ಪಂಜಾಬಿಗಳಿಗೆ ಅದರಲ್ಲೂ ಸಿಖ್ಖರಿಗೆ ತುಂಬಾ ವಿಶೇಷವಾದ ಹಬ್ಬ... ಸೌರ ಪಂಚಾಂಗದ ಹೊಸವರುಷದ ದಿನ.

ಅವತ್ತು ಅಮೃತಸರದ ಜಲಿಯನ್ ವಾಲಾ ಭಾಗ್ ಎಂಬ ವಿಶಾಲವಾದ ಉದ್ಯಾನದಲ್ಲಿ ಬೈಶಾಖೀ ಹಬ್ಬದ ಸಂಭ್ರಮ.  ಆರೇಳು ಎಕರೆ ವಿಶಾಲವಾದ ಉದ್ಯಾನದಲ್ಲಿ ಅವತ್ತು ಹೊಸವರ್ಷದ  ಸಂಭ್ರಮವನ್ನಾಚರಿಸಲು ಸುಮಾರು ಹತ್ತು ಹದಿನೈದು ಸಾವಿರ ಜನ ಸೇರಿದ್ದರು. ಹೊಸವರುಷದ ಮೊದಲ ದಿನ ಇನ್ನು ಕೆಲವೇ ಕ್ಷಣಗಳಲ್ಲಿ ಕರಾಳ ಭೀಭತ್ಸಕರ ದಿನವಾಗಲಿದೆ ಎಂಬ ಸಣ್ಣದೊಂದು ಸುಳಿವೂ ಇಲ್ಲದೆ ಹೆಂಗಸರು ಮಕ್ಕಳೆಲ್ಲಾ ಸಂತಸದಿಂದಿದ್ದರು.  ಆದರೆ ಭಾರತವನ್ನಾಳುತ್ತಿದ್ದ ಬ್ರಿಟಿಷರ ಕುಟಿಲ ಅಧಿಕಾರಿಗಳು ಅವತ್ತು ಅಮಾಯಕ ಜನರ ಮೇಲೆ ಅಮಾನವೀಯ ಕ್ರೌರ್ಯ ಮೆರೆಯಲು ಸದ್ದಿಲ್ಲದೇ ಸಿದ್ಧತೆ ನಡೆಸಿದ್ದರು.  ಬ್ರಿಟಿಷ್ ಸೈನ್ಯಾಧಿಕಾರಿ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಎಂಬ ರಕ್ತಪಿಪಾಸು ಅಮೃತಸರದಲ್ಲಿ ಅವತ್ತು ರಕ್ತದೋಕುಳಿ ಹರಿಸಲೇ ಬೇಕು ಎಂಬ ಧೃಢನಿಶ್ಚಯ ಮಾಡಿದ್ದನೋ ಏನೋ ತನ್ನ ಸೈನಿಕರ ಪಡೆಯೊಂದಿಗೆ ಜಲಿಯನ್ ವಾಲಾ ಭಾಗ್ ಗೆ ತೆರಳಿ....

ಅವತ್ತು ಜನರು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂಬ ಸುತ್ತೋಲೆಯನ್ನು ಬ್ರಿಟಿಷ್ ಸರಕಾರ ಹೊರಡಿಸಿತ್ತು.  ಆದರೆ ಈ ಸುತ್ತೋಲೆ ಜಾರಿಯಾದದ್ದು ಬಹುತೇಕ ಜನರಿಗೆ ಗೊತ್ತೇ ಇರಲಿಲ್ಲ.   ಹಾಗಾಗಿ ಬೈಶಾಖೀ ಹಬ್ಬ ಆಚರಿಸಲು ಅಂದು ಹೆಂಗಸರು ಮಕ್ಕಳ ಸಹಿತ ಹತ್ತು ಹದಿನೈದು ಸಾವಿರ ಜನ ಜಲಿಯನ್ ವಾಲಾ ಭಾಗ್ ನಲ್ಲಿ ಸೇರಿದ್ದರು.  ಈ ಸುದ್ದಿ ತಿಳಿದು ಕ್ರುದ್ಧನಾದ ಜನರಲ್ ಡೈಯರ್ ಕೇವಲ ಐವತ್ತು ಮಂದಿ ಬಂಧೂಕುಧಾರೀ ಸೈನಿಕರೊಂದಿಗೆ ಅಲ್ಲಿಗೆ ತೆರಳಿದ. ಜಲಿಯನ್ ವಾಲಾ ಭಾಗ್ ನೊಳಗೆ ಹೋಗಲು ಮತ್ತು ಹೊರ ಬರಲು ಇದ್ದ ಕೆಲವೇ ಕೆಲವು ಇಕ್ಕಟ್ಟಾದ ದಾರಿಗಳಲ್ಲಿ ತನ್ನ ಸೈನಿಕರನ್ನು ಸಿದ್ಧವಾಗಿ ಇರಿಸಿದ್ದ  ಕ್ರೂರಿ ಡೈಯರ್ ಹೊಸವರ್ಷದ ಮೊದಲ ದಿನವನ್ನಾಚರಿಸುತ್ತಿದ್ದ ಆ ಮುಗ್ಧ ಜನರ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಲು ಆದೇಶಿಸಿದ. ಆಗಿನ ಕಾಲಕ್ಕೆ ಅತ್ಯಂತ ಅತ್ಯಾಧುನಿಕ ಬಂದೂಕು ಎಂದೇ ಹೆಸರು ಪಡೆದಿದ್ದ 303 Lee Enfield ರೈಫಲ್ ಗಳ ಮೂಲಕ ಗುಂಡು ಹಾರಿಸಲಾಯಿತು.  ಹತ್ತು ನಿಮಿಷಗಳ ಕಾಲ ಅವ್ಯಾಹತವಾಗಿ ಗುಂಡುಗಳನ್ನು ಹಾರಿಸಲಾಯಿತು. ಅವತ್ತು ಬಂದೂಕುಗಳ ಬಾಯಿಯಿಂದ ಸಿಡಿದ ಒಟ್ಟು ಗುಂಡುಗಳ ಸಂಖ್ಯೆ ೧೬೫೦..!  ಈ ಬರ್ಭರ ದಾಳಿಗೆ ಸಿಲುಕಿ ೩೭೯ ಜನ ಸ್ಥಳದಲ್ಲೇ ಪ್ರಾಣ ಕಳಕೊಂಡರೆ ಸುಮಾರು ೧೧೦೦ ಜನ ಗಾಯಗೊಂಡರು.  ಅದರಲ್ಲೂ ಸುಮಾರು ೧೯೨ ಜನ ತೀವ್ರವಾಗಿ ಗಾಯಗೊಂಡರು.  ಬ್ರಿಟಿಷರ ಈ ಕಾರ್ಯಕ್ಕೆ ಇಡೀ ಜಗತ್ತೇ ಕ್ರುದ್ಧಗೊಂಡಿತ್ತು...!  ಜನರಲ್ ಡೈಯರ್ ಎಂಬ ಈ ರಕ್ತಪಿಪಾಸು ಬ್ರಿಟಿಷ್ ಅಧಿಕಾರಿಯ ಅಮಾನವೀಯ ಕ್ರೌರ್ಯಕ್ಕೆ ಭಾರತವೇ ತಲ್ಲಣಗೊಂಡಿತ್ತು...! 

ಅವತ್ತು ಜಲಿಯನ್ ವಾಲಾ ಭಾಗ್ ನಲ್ಲಿ ಹರಿದ ಅಮಾಯಕರ ರಕ್ತದೋಕುಳಿ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕು ದೆಸೆಯನ್ನೇ ಬದಲಿಸಿತು. ಇವತ್ತು ಆ ಭೀಕರ ಘಟನೆ ನಡೆದು ನೂರು ವರ್ಷಗಳು ಕಳೆದ ಬಳಿಕವೂ ಇತಿಹಾಸದ ಕರಾಳ ಅಧ್ಯಾಯ ನಮ್ಮನ್ನು ಅಷ್ಟೇ ತೀವ್ರವಾಗಿ ಕಾಡುತ್ತಿದೆ!

ಆದರೆ, ಈ ಭೀಭತ್ಸಕರ ಘಟನೆಯ ಹಿನ್ನೆಲೆಯಲ್ಲಿ ನಮಗೆ ಪದೇ ಪದೇ  ಜನರಲ್ ಡೈಯರ್ ಎಂಬ ಕ್ರೂರಿ ಬ್ರಿಟಿಷ್ ಜನರಲ್ಲನೇ ಕಣ್ಣೆದಿರು ಬರುತ್ತಾನಾದರೂ, ಇದರ ಆಳದಲ್ಲಿ ಹುದುಗಿರುವ ಆ ದುರ್ಘಟನೆಯ ಇನ್ನೊಂದು ಮುಖ, ಇನ್ನೊಂದು ಆಯಾಮ ಸುಲಭದಲ್ಲಿ ನಮ್ಮ ಕಣ್ಣಿಗೆ ಗೋಚರಿಸುವುದೇ ಇಲ್ಲ. ಹೌದು, ನಾವೆಲ್ಲಾ ಜಲಿಯನ್ ವಾಲಾ ಭಾಗ್  ಎಷ್ಟು ಎಕರೆ ಇತ್ತು? ಅಲ್ಲಿ ಸೇರಿದ್ದ ಜನರ ಸಂಖ್ಯೆ ಎಷ್ಟು? ಅವತ್ತು ಹಾರಿಸಲಾದ ಬುಲೆಟ್ಟುಗಳೆಷ್ಟು? ಒಟ್ಟು ಸತ್ತವರೆಷ್ಟು? ಗಾಯಗೊಂಡವರೆಷ್ಟು ? ಅಂತೆಲ್ಲ ಇವತ್ತಿಗೂ ಲೆಕ್ಕ ಹಾಕುತ್ತೇವೆ.. ನಿಜ! ಆದರೆ ಒಂದು ವಿಚಾರದಲ್ಲಿ ಮಾತ್ರ ಎಡವುತ್ತೇವೆ, ಅದೇನೆಂದರೆ ಅಷ್ಟೆಲ್ಲ ಜನರ ಸಾವು ನೋವುಗಳಿಗೆ ನಿಜಕ್ಕೂ ಕಾರಣವಾದದ್ದು ಯಾರು? ಸಾಮಾನ್ಯವಾಗಿ ಥಟ್ಟನೆ ಇದಕ್ಕೆಲ್ಲಾ ಕ್ರೂರಿ ಬ್ರಿಟಿಷ್ ಜನರಲ್ ಡೈಯರ್ ನೇ ಕಾರಣ ಅಂತನ್ನುತ್ತೇವೆ, ಆದರೆ ಜನರಲ್ ಡೈಯರ್ ಸ್ವತಹಾ ೧೬೫೦ ಗುಂಡುಗಳನ್ನು ಹಾರಿಸಿ ೩೭೯ ಜನರನ್ನು ಕೊಂದನಾ? ಕೇವಲ ಹತ್ತು ನಿಮಿಷದಲ್ಲಿ ಅವನೊಬ್ಬನಿಗೇ ಅಷ್ಟೊಂದು ಜನರನ್ನು ಕೊಲ್ಲಲು ಸಾಧ್ಯವಿತ್ತಾ? 

ಉಹೂಂ ... ನಾವ್ಯಾವತ್ತೂ ಈ ಕೋನದಲ್ಲಿ ವಿಚಾರ ಮಾಡುವುದೇ ಇಲ್ಲ.  ಅವತ್ತು ಜನರಲ್ ಡೈಯರ್ ತನ್ನ ಜೊತೆಗೆ ಕರೆದುಕೊಂಡು ಹೋದ ಸೈನಿಕರು ಯಾರು? ಅವರೆಲ್ಲ ಬ್ರಿಟಿಷರೇನಲ್ಲ, ಬದಲಿಗೆ ನಮ್ಮವರೇ... ಭಾರತೀಯರೇ...!  ಆ ಸೈನಿಕರೆಲ್ಲ ಗೂರ್ಖಾ ರೆಜಿಮೆಂಟ್, ಸಿಖ್ ರೆಜಿಮೆಂಟ್ , ಸಿಂಧ್ ರೆಜಿಮೆಂಟಿಗೆ ಸೇರಿದ್ದ ಭಾರತೀಯ ಸೈನಿಕರೇ!!!  

ಅಂದು ಬೈಶಾಖೀ ಹಬ್ಬ ಆಚರಿಸುತ್ತಿದ್ದ ಹೆಂಡಗಸರು ಮತ್ತು ಮಕ್ಕಳ ಮೇಲೆ ಇವರೇ ಗುಂಡು ಹಾರಿಸಿದ್ದು !  ಅದರಲ್ಲಿ ಸಿಖ್ ಸೈನಿಕರೂ ಇದ್ದರು!!  ಅವರಿಗೂ ಅವತ್ತು ಬೈಶಾಖಿಯ ಹೊಸ ವರ್ಷವೇ!  ಆದರೂ ಅವರು ತಮ್ಮವರ ಮೇಲೆಯೇ ಗುಂಡು ಹಾರಿಸಿ ಕೊಂದರಲ್ಲಾ?  ಯಾಕೆ ಆ ಭಾರತೀಯ ಸೈನಿಕರೇ ಒಂದಿಷ್ಟೂ ವಿವೇಚನೆಯಿಲ್ಲದೆ ನಮ್ಮವರ ಮೇಲೆಯೇ ಅಮಾನವೀಯವಾಗಿ ದಾಳಿ ನಡೆಸಿ ಕೊಂದುಹಾಕಿದರು? ಡೈಯರ್ ಕೇವಲ ಆಜ್ಞೆ ಮಾತ್ರ ಮಾಡಿದ್ದ, ಆದರೆ ಗೊತ್ತು ಗುರಿಯಿಲ್ಲದೇ ಆತನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ನಮ್ಮದೇ ಮಂದಿಯ ಬಗ್ಗೆ ಏನೆನ್ನೋಣ?  ಇದಕ್ಕೇನು ಕಾರಣ...?

ಕಾರಣ  ಹುಡುಕ ಹೊರಟರೆ ದೊರಕುವ ಉತ್ತರ ಒಂದೇ! ಅದು ಗುಲಾಮೀ ಮನಸ್ಥಿತಿ!!  ತಮ್ಮ ಬುದ್ಧಿಯನ್ನೂ , ಆತ್ಮಾಭಿಮಾನವನ್ನೂ ಇನ್ನೊಬ್ಬರಿಗೆ ಅಡವಿಡುವ ಗುಲಾಮೀ ಮನಸ್ಥಿತಿ!!  ಸ್ವಂತಿಕೆಯಿಲ್ಲದೆ... ಇನ್ನೊಬ್ಬರ ಕಾಲಕೆಳಗೆ ಬೀಳುವ ಆತ್ಮಾಭಿಮಾನ ಶೂನ್ಯ ಮನಸ್ಥಿತಿ... ಅವರೇನು ಹೇಳಿದರೂ ತೆಪ್ಪಗೆ ಬಾಯಿಮುಚ್ಚಿಕೊಂಡು ಅನುಸರಿಸುವ ಅಸಹ್ಯಕರ ದಾಸ್ಯ ಪ್ರವೃತ್ತಿ!  ವಿವೇಚನೆಯನ್ನೇ ಕಳೆದುಕೊಂಡು ಒಡೆಯರ ಮಾತಿಗೆ ಗೋಣು ಹಾಕುವ ಜೀತದಾಳುಗಳ ಪ್ರವೃತ್ತಿ!  

ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ನಡೆದು ನೂರು ವರ್ಷಗಳು ಕಳೆದ ಬಳಿಕವೂ ಈ ಗುಲಾಮೀತನ ಇವತ್ತಿಗೂ ಢಾಳಾಗಿ ಕಣ್ಣಿಗೆ ರಾಚುತ್ತದೆ.  ಯಾವುದೊ ವ್ಯಕ್ತಿ, ಕುಟುಂಬಕ್ಕೆ, ವಂಶಕ್ಕೆ ನಿಷ್ಠೆಯ ಹೆಸರಿನಲ್ಲಿ ಗುಲಾಮರಾಗಿ ಬಾಳುವ ಮಂದಿ ಇವತ್ತಿಗೂ ನಮ್ಮ ನಡುವೆಯೇ ಇದ್ದಾರೆ!  ಇದು ಕೊನೆಯಾಗಬೇಕು!!  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೂ ನಮ್ಮಲ್ಲಿನ್ನೂ ಈ ಗುಲಾಮೀತನ ನಾಶವಾಗಲಿಲ್ಲವೆಂದರೆ ಅದು ನಾಚಿಕೆಗೇಡು.  ಇವತ್ತು ಜಲಿಯನ್ ವಾಲಾ ಭಾಗ್ ಹತ್ಯಾಕಾಂಡಕ್ಕೆ ನೂರು ವರ್ಷ ತುಂಬಿದೆ ನಿಜ, ಆದರೆ ಇದರಿಂದ ನಾವು ಕಲಿತ ಪಾಠ ಏನು...? 

ಇವತ್ತಿಗೂ ನಮ್ಮವರನ್ನೇ ನಮ್ಮವರ ಮೇಲೆಯೇ ಛೂ ಬಿಡುವ ಜನರಲ್ ಡೈಯರ್ ರಂಥ ಸಾವಿರಾರು ಜನ ನಮ್ಮ ನಡುವೆಯೇ ಇದ್ದಾರೆ.  ಅಂಥವರ ಆಜ್ಞೆಯನ್ನು ಟೊಂಕ ಕಟ್ಟಿ ಪಾಲಿಸುವ, ನಮ್ಮವರ ಮೇಲೆಯೇ ದಾಳಿ ಮಾಡುವ ಗುಲಾಮೀ ಮನಸ್ಥಿತಿಯ ಜನರೂ ಇದ್ದಾರೆ.  ಈ ಪ್ರವೃತ್ತಿ ಕೊನೆಗೊಳ್ಳಬೇಕು.  ಗುಲಾಮೀತನ, ದಾಸ್ಯ ಪ್ರವೃತ್ತಿ ಕೊನೆಗೊಳ್ಳಬೇಕು.  ನಮ್ಮ ನಡುವಿನ ಜನರಲ್ ಡೈಯರ್ ಗಳಂಥಾ ವ್ಯಕ್ತಿತ್ವಗಳನ್ನು ನಿರಾಕರಿಸಬೇಕು.  ತಿರಸ್ಕರಿಸಬೇಕು! ಆತ್ಮಾಭಿಮಾನದಿಂದ ಎದೆತಟ್ಟಿ ನಾವು  ಭಾರತೀಯರೆಲ್ಲಾ ಒಂದು ಎನ್ನುವ ಗಟ್ಟಿತನ ನಮ್ಮಲ್ಲಿರಬೇಕು!  ಇಲ್ಲದಿದ್ದರೆ, ಜಲಿಯನ್ ವಾಲಾ ಭಾಗ್ ಎಂಬ ಭೀಕರ ಹತ್ಯಾಕಾಂಡವನ್ನು ವರ್ಷ ವರ್ಷವೂ ಸ್ಮರಿಸುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ... ಅಲ್ಲವೇ..? 

#ಅನಂತಕುಮಾರಹೆಗಡೆ

Related posts