ಅಂಬೇಡ್ಕರ್ ಜಯಂತಿಯ ಶುಭಾಶಯಗಳು!
ಇಂದು ಅಂಬೇಡ್ಕರ್ ಜಯಂತಿ!
ಸಂವಿಧಾನ ಶಿಲ್ಪಿ ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಎಂಬ ಮಹಾತ್ಮ ಈ ಭೂಮಿ ಮೇಲೆ ಹುಟ್ಟಿ ಅದಾಗಲೇ ನೂರಾ ಇಪ್ಪತ್ತೆಂಟನೇಯ ವರ್ಷ. ೧೮೯೧ ರಲ್ಲಿ ರಾಮಜೀ ಮಾಲೋಜಿ ಸಕ್ಪಾಲ್ ಮತ್ತು ಭೀಮಾಬಾಯಿ ಸಕ್ಪಾಲ್ ದಂಪತಿಯ ಹದಿನಾಲ್ಕನೆಯ ಮಗನಾಗಿ ಏಪ್ರಿಲ್ ಹದಿನಾಲ್ಕರಂದು ಜನಿಸಿದ ಭೀಮರಾವ್ ರಾಮಜೀ ಅವರ ಮೂಲ ಉಪನಾಮ ಸಕ್ಪಾಲ್ ಅಂತಲೇ ಇತ್ತು. ಆದರೆ ಅವರ ಕುಟುಂಬದ ಮೂಲ ಸ್ಥಳ ರತ್ನಗಿರಿ ಜಿಲ್ಲೆಯ "ಅಂಬಾದಾವೆ" ಆದುದರಿಂದ ಅವರ ತಂದೆ ರಾಮಜೀ "ಸಕ್ಪಾಲ್" ಎಂಬ ತಮ್ಮ ಕೌಟುಂಬಿಕ ಉಪನಾಮದ ಬದಲಿಗೆ ತನ್ನೂರಿನ ನೆನಪಿಗೆ ತನ್ನ ಮಗನನ್ನು ಶಾಲೆಗೇ ಸೇರಿಸುವಾಗ "ಅಂಬಾದಾವೇಕರ್" ಎಂಬ ಉಪನಾಮ ಕೊಟ್ಟರು. ಮುಂದೆ ಶಾಲೆಯಲ್ಲಿ ಕೃಷ್ಣಾಜಿ ಕೇಶವ್ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರೊಬ್ಬರು ಈ ಭೀಮರಾವ್ ರಾಮಜೀ "ಅಂಬಾದಾವೇಕರ್" ಎಂಬ ಹುಡುಗನಿಗೆ ತಮ್ಮ ಕುಲನಾಮ "ಅಂಬೇಡ್ಕರ್" ಎಂಬುದನ್ನೇ ನೀಡಿ ಶಾಲಾ ದಾಖಲಾತಿಯಲ್ಲಿ ಹಾಗೆಯೇ ಬರೆಸಿದರು!! ಅದ್ಯಾವ ಘಳಿಗೆಯಲ್ಲಿ ಆ ಉಪಾಧ್ಯಾಯರು ಈ ಹೆಸರಿಟ್ಟರೋ... "ಅಂಬೇಡ್ಕರ್" ಎಂಬ ಹೆಸರಿವತ್ತು ಜಾಗತಿಕ ಮಟ್ಟದಲ್ಲೇ ಅಜರಾಮರವಾಗಿದೆ! ಅಂದಹಾಗೆ ಇವತ್ತು ನಾವೆಲ್ಲಾ ತುಂಬಾ ಹೆಮ್ಮೆಯಿಂದ ಆಚರಿಸುವ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರ ಜಯಂತಿ ಅಧಿಕೃತವಾಗಿ ಒಂದು ಸಾರ್ವಜನಿಕ ಸಮಾರಂಭದ ರೂಪ ಪಡೆದಿದ್ದು ೧೯೨೮ರಲ್ಲಿ. ಸಾಮಾಜಿಕ ಕಾರ್ಯಕರ್ತ ಮತ್ತು ಅಂಬೇಡ್ಕರ್ ಅವರ ಅಭಿಮಾನಿ ಜನಾರ್ಧನ ಸದಾಶಿವ ರಾಂಪಿಸೆ ಎಂಬೊಬ್ಬರು ಪುಣೆಯಲ್ಲಿ ತೊಂಭತ್ತೊಂದು ವರ್ಷಗಳ ಹಿಂದೆ ಡಾ.ಅಂಬೇಡ್ಕರ ಅವರ ಜನ್ಮದಿನವನ್ನು ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಆಚರಿಸಿದರು. ಅವತ್ತಿನಿಂದ ಇವತ್ತಿನವರೆಗೆ "ಅಂಬೇಡ್ಕರ್ ಜಯಂತಿ" ಯನ್ನು ಪ್ರತಿಯೊಬ್ಬ ಭಾರತೀಯ ಕೂಡ ಅತೀವ ಹೆಮ್ಮೆಯಿಂದ ಆಚರಿಸುತ್ತಾನೆ.
ಸ್ವತಂತ್ರ ಭಾರತಕ್ಕೆ ಡಾ.ಅಂಬೇಡ್ಕರ್ ಕೊಟ್ಟ ಕೊಡುಗೆ ಬಹು ಅಮೂಲ್ಯ. ಆದರೆ ಡಾ.ಅಂಬೇಡ್ಕರ ಅವರನ್ನು ಕೇವಲ ಓರ್ವ ಸಂವಿಧಾನ ತಜ್ಞ, ಓರ್ವ ಕಾನೂನು ತಜ್ಞ ಅಂತ ಬಿಂಬಿಸಿ ಅವರ ಬಹುಮುಖೀ ಪ್ರತಿಭೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು, ಮುಚ್ಚಿಡಲಾಯಿತು! ಇವತ್ತು ಡಾ. ಅಂಬೇಡ್ಕರ್ ಭಾರತದ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರಜ್ಞ ಅನ್ನುವುದು ಸಾಮಾನ್ಯ ಜನರ ಅರಿವಿನಲ್ಲಿಲ್ಲ!
ಡಾ.ಅಂಬೇಡ್ಕರ್ ಅವರೊಳಗೊಬ್ಬ ಪ್ರಕಾಂಡ ನೀರಾವರಿ ತಜ್ಞನಿದ್ದ, ಗ್ರಾಮೀಣಾಭಿವೃದ್ಧಿ ತಜ್ಞ ಇದ್ದ ಅಂತೆಲ್ಲ ನಾನು ಹೇಳಿದರೆ ಬಹುಶ ಜನ ನಂಬಲಿಕ್ಕಿಲ್ಲ. ಅದೆಲ್ಲ ಹೋಗಲಿ ಡಾ.ಅಂಬೇಡ್ಕರ್ ಈ ದೇಶದ ನದಿಗಳ ಬಗ್ಗೆ, ನೀರಾವರಿಯ ಬಗ್ಗೆ, ಜಲಮೂಲಗಳ ಸಂರಕ್ಷಣೆಯ ಬಗ್ಗೆ ಅವರು ನಡೆಸಿದ್ದ ಅಧ್ಯಯನಗಳ ಬಗ್ಗೆ ನಾನು ಮಾತಾಡಿದರೆ, ಭಾರತದ ಮೊತ್ತ ಮೊದಲ ಜಲಸಂರಕ್ಷಣಾ ಹೋರಾಟಗಾರ ಡಾ.ಅಂಬೇಡ್ಕರ್ ಅಂತ ನಾನೆಲ್ಲಾದರೂ ಹೇಳಿದರೆ ಇವತ್ತಿನ ಪತ್ರಕರ್ತರು ಬಹುಷಃ ಅದನ್ನೂ ದೊಡ್ಡ ವಿವಾದವಾಗಿಸಲೂಬಹುದು...!
ಆದರೆ ಭಾರತದ ಪ್ರಪ್ರಥಮ ಸವಿಸ್ತಾರ ನೀರಾವರಿ ಪಾಲಿಸಿಯನ್ನು ರೂಪಿಸಿದ್ದು ಇದೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ! ಹೌದು, ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ತಜ್ಞ ಅಂತ ಬ್ರಾಂಡ್ ಮಾಡಿ, ಇತರ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಪಾಂಡಿತ್ಯವನ್ನು, ಈ ಎಲ್ಲಾ ಕ್ಷೇತ್ರಗಳಿಗೆ ಅವರು ನೀಡಿದ ಅಪಾರ ಕೊಡುಗೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಯಿತು...!! ಅವರು ಮತ್ತು ಅವರ ತಂಡ ರೂಪಿಸಿದ ಸಂವಿಧಾನವನ್ನು ಪ್ರತಿಷ್ಠಾಪಿಸಿದ ದೇವಾಲಯದಂತ ಭಾರತದ ಸಂಸತ್ತಿನ ಲೋಕಸಭೆಗೆ ಡಾ.ಅಂಬೇಡ್ಕರ್ ಅವರು ಒಂದೇ ಒಂದು ಬಾರಿ ಕೂಡ ಆಯ್ಕೆಯಾಗಲು ಅಂದಿನ ಕಾಂಗ್ರೆಸ್ ನೇತ್ರತ್ವದ ರಾಜಕೀಯ ವ್ಯವಸ್ಥೆ ಅವಕಾಶ ಮಾಡಿಕೊಡಲಿಲ್ಲ. ಲೋಕಸಭೆಗೆ ಡಾ.ಅಂಬೇಡ್ಕರ್ ಅವರು ಪ್ರವೇಶಿಸಲೇ ಬಾರದು ಅಂತ ನೆಹರೂ ಮತ್ತವರ ಕಾಂಗ್ರೆಸ್ ನಿಶ್ಚಯ ಮಾಡಿತ್ತು...! ಭಾರತದ ಪ್ರಥಮ ಆರ್ಥಿಕ ತಜ್ಞನಾಗಿದ್ದ ಡಾ.ಅಂಬೇಡ್ಕರ್ ಕಮ್ಯುನಿಸಮ್ಮಿನ ಆರ್ಥಿಕ ನೀತಿಗಳಿಗೆ ವಿರೋಧವಾಗಿದ್ದರು...!
"ಕಮ್ಯುನಿಸಮ್ಮು.... ಸೊಷಿಯಲಿಸಮ್ಮು" ಅಂತ ಜೋತಾಡುತ್ತಾ ಅವರ ಆರ್ಥಿಕ ನೀತಿಯನ್ನೇ ದೇಶದಲ್ಲಿ ಜಾರಿಗೆ ತರಹೊರಟಿದ್ದ ನೆಹರೂಗೆ ಡಾ.ಅಂಬೇಡ್ಕರ್ ಅವರ ಆರ್ಥಿಕ ನೀತಿಗಳೆಲ್ಲಾ ದೊಡ್ಡ ತೊಡಕಾಗಿದ್ದವು. ಹಾಗಾಗಿ ನೆಹರೂ ಮತ್ತವರ ಕಾಂಗ್ರೆಸ್ಸು ಡಾ.ಅಂಬೇಡ್ಕರ್ ಅವರನ್ನು ದೇಶದ ಆಡಳಿತದಿಂದ ಸಂಪೂರ್ಣವಾಗಿ ಮತ್ತು ಅಷ್ಟೇ ವ್ಯವಸ್ಥಿತವಾಗಿ ದೂರ ಇಟ್ಟಿತು. ಡಾ..ಅಂಬೇಡ್ಕರ್ ಸತ್ತ ಬಳಿಕವೂ ಇದೆ ನೀತಿ ಮುಂದುವರೆಯಿತು. ಇದಕ್ಕೊಂದು ಚಿಕ್ಕ ಮತ್ತು ಸ್ಪಷ್ಟ ಉದಾಹರಣೆಯೆಂದರೆ ಪಾರ್ಲಿಮೆಂಟಿನ ಸೆಂಟ್ರಲ್ ಹಾಲಿನೊಳಗೆ ಡಾ.ಅಂಬೇಡ್ಕರ ಅವರ ಒಂದೇ ಒಂದು ಭಾವಚಿತ್ರ ಕೂಡಾ ಇರದಂತೆ ಕಾಂಗ್ರೆಸ್ ನೋಡಿಕೊಂಡಿತು!! ೧೯೯೦ರಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರಕಾರ ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಡಾ..ಅಂಬೇಡ್ಕರ ಅವರ ಭಾವಚಿತ್ರವನ್ನು ಅನಾವರಣ ಮಾಡಿತು....! ಆದರೆ ಅಂಬೇಡ್ಕರ ಅವರನ್ನು ಮೂಲೆಗುಂಪು ಮಾಡಿದ್ದ ಅದೇ ಕಾಂಗ್ರೆಸ್ಸು ಡಾ.ಅಂಬೇಡ್ಕರ್ ಅವರನ್ನು ಉತ್ಸವಮೂರ್ತಿಯಾಗಿಸಿ ದಲಿತರ ಮತಪಡೆಯುವ ತಂತ್ರವನ್ನು ಯಶಸ್ವಿಯಾಗಿ ದಶಕಗಳ ಕಾಲ ನಡೆಸುತ್ತಾ ಬಂತು...!
ಡಾ.ಅಂಬೇಡ್ಕರ ಅವರ ಬಗ್ಗೆ ಬರೆಯುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ. ಇಂದು ಆ ಮಹಾತ್ಮನ ಜನುಮದಿನ, ಅದನ್ನು ತುಂಬಾ ಅರ್ಥಪೂರ್ಣವಾಗಿ, ಸಂತೋಷ ಸಂಭ್ರಮಗಳಿಂದ ಆಚರಿಸೋಣ...ಜೈ ಭೀಮ್...!
#ಅನಂತಕುಮಾರಹೆಗಡೆ