Infinite Thoughts

Thoughts beyond imagination

ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು...!

ಇಂದು ಬಜರಂಗಿಯ ಜನುಮ ದಿನ... 

ಕನ್ನಡಿಗ ಹನುಮನ ಜಯಂತಿಯ ದಿನ...! 

 

ಚೈತ್ರ ಶುದ್ಧ ಪೌರ್ಣಮಿಯ ದಿನ ವೇ ಹನುಮನ ಜನನವಾಯಿತು.  ಅಂಜನೀ ಗರ್ಭ ಸಂಜಾತ ಹನುಮ ನಮ್ಮವನೇ, ಅಂದರೆ ಕನ್ನಡಿಗನೇ!

ನಮ್ಮ ಹೆಮ್ಮೆಯ ಹಂಪೆಯ ಬಳಿಯ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ.  ಹಾಗಾಗಿಯೇ ನಮ್ಮ ನಾಡಗೀತೆ " ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು " ಬರೆದ ಹುಯಿಲಗೋಳರು ಕರುನಾಡನ್ನು ಬಣ್ಣಿಸುವಾಗ " ಹನುಮನುದಿಸಿದ ನಾಡು " ಅಂತಲೇ ಕರೆದಿದ್ದಾರೆ!

 

" ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು. "  

ಹುಯಿಲಗೋಳ ನಾರಾಯಣರಾಯರೇ ಹೀಗೆ ಬರೆದು ನಮ್ಮ ಚೆಲುವಕನ್ನಡ ನಾಡು ಉದಯವಾಗಲಿ ಅಂತ ಹಾಡಿದ್ದಾರೆ.  ಹಾಗಾಗಿ ಹನುಮ ನಮ್ಮವನೇ, ಕರುನಾಡಿನವನೇ!!

ಹನುಮನ ಹುಟ್ಟು, ಬದುಕು, ಸಾಹಸ, ರಾಮಭಕ್ತಿಯ ಕುರಿತು ಹಲವಾರು ಕಥೆಗಳಿವೆ.  ಅವುಗಳಲ್ಲಿ ಹೆಚ್ಚಿನವು ಎಲ್ಲರಿಗೂ ಗೊತ್ತಿರುವಂಥದ್ದೇ.  ಆದರೂ ಕೆಲವೊಂದು ಕುತೂಹಲಕಾರೀ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ!!

ಹನುಮನನ್ನು " ಭಜರಂಗಬಲಿ " ಅಂತ ಕರೆಯುತ್ತಾರೆ; ಅದೇ ರೀತಿ ಹನುಮನ ಹೆಸರಲ್ಲೇ " ಬಜರಂಗದಳ  " ಎಂಬ ನಮ್ಮವರದೇ ಸಂಘಟನೆಯೂ ಇದೆ.  ಆದರೆ ಹೆಚ್ಚಿನವರಿಗೆ ಈ ಹೆಸರಿನ ಹಿನ್ನೆಲೆ ಮತ್ತು ಅರ್ಥವೇ ಗೊತ್ತಿರುವುದಿಲ್ಲ.

"ಬಜರಂಗ" ಎಂಬುದು "ವಜ್ರಾಂಗ" ಎಂಬುದರ ಅಪಭ್ರಂಶ.  ಹನುಮನ ದೇಹ ವಜ್ರದಷ್ಟು ಕಠಿಣ ಹಾಗೂ ಅವನ ಎಲ್ಲಾ ಅಂಗಾಂಗಗಳೂ ವಜ್ರದಂತೆಯೇ.  ಹಾಗಾಗಿಯೇ ಅವನು ವಜ್ರಾಂಗಬಲ....! ಇದೇ ಹೆಸರು ಅಪಭ್ರಂಶಗೊಂಡು ಬಜರಂಗಬಲಿ ಅಂತ ಆಯ್ತು! ಇದರಿಂದಲೇ ಬಜರಂಗ ದಳ ಎಂಬ ಹೆಸರು ಹುಟ್ಟಿಕೊಂಡಿತು.

ಇವತ್ತು ನಮ್ಮ ಬಜರಂಗ ದಳದ ಹುಡುಗರು ಕೇಸರೀ ಬಣ್ಣದ ಬಟ್ಟೆ ಧರಿಸಿದಾಗ ಕೆಲವರ ಕಣ್ಣು ಕೆಂಪಗಾಗುತ್ತದೆ...!  ಆದರೆ ನಮ್ಮ ಹುಡುಗರಿಗೆ ಕೇಸರಿ ಬಣ್ಣ ಅಂದರೇ ಹೆಮ್ಮೆ... ಗರ್ವ... ಅಭಿಮಾನ.... ಆದುದರಿಂದಲೇ ಅವರು ಕೇಸರೀ ಶಾಲು, ಕೇಸರೀ ರುಮಾಲು ಧರಿಸಿ ಕೇಸರೀ ಬಾವುಟ ಹಿಡಿದು ಸಿಂಹದಂತೆ ಗಂಭೀರವಾಗಿ ಮುಂದಡಿಯಿಡುವಾಗ ಅದನ್ನು ನೋಡಿ ಕೆಲವು ಮಂದಿ ಎದೆಯಲ್ಲಿ ನಡುಕ.....!

ಬಜರಂಗ ದಳದ ಕೆಚ್ಚಿನ ಹುಡುಗರು ಕೇಸರೀ ಬಣ್ಣ ಪ್ರೀತಿಸುವುದಕ್ಕೆ ಅವರದ್ದೇ ಆದ ಕಾರಣವೂ ಇದೆ.  ಯಾಕೆಂದರೆ ಬಜರಂಗಬಲಿಯ ತಂದೆಯ ಹೆಸರೇ ಕೇಸರಿ..!  ಹನುಮ ಅಂಜನಾ ದೇವಿ ಮತ್ತು ಕೇಸರೀ ದಂಪತಿಗಳ ಪುತ್ರ...! ಆದುದರಿಂದಲೇ ಸಹಜವಾಗಿಯೇ ಮತ್ತು ಸಕಾರಣವಾಗಿಯೇ ಹನುಮನ ಹೆಸರಿನ ದಳದ ಹುಡುಗರು ಕೇಸರೀ ಬಣ್ಣವನ್ನೇ ಎಲ್ಲಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ!

ತನ್ನ ರಾಜ್ಯದ  ಗಡಿದಾಟಿ ವೈರಿ ದೇಶ ಲಂಕೆಯೊಳಗೆ ನುಗ್ಗಿ ಮೊತ್ತ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿ ಲಂಕೆಗೇ ಬೆಂಕಿಹಚ್ಚಿ ಸರ್ವನಾಶ ಮಾಡಿದ್ದೂ ಹನುಮಂತನೇ ಅಲ್ಲವೇ..?!! ಆದುದರಿಂದ ಮೊತ್ತ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕೀರ್ತಿಯೂ ಕನ್ನಡಿಗ ಹನುಮಂತನಿಗೇ ಸಲ್ಲುತ್ತದೆ...! 

ನಮ್ಮ  ಪ್ರೀತಿಯ ಶ್ರೀ ನರೇಂದ್ರ ಮೋದೀಜಿಯವರು ದೇಶದ ಪ್ರಧಾನಮಂತ್ರಿಯಾದ ಬಳಿಕ ತಾವು ಪ್ರಧಾನಮಂತ್ರಿಯಲ್ಲ, ಬದಲಿಗೆ " ಪ್ರಧಾನ ಸೇವಕ " ಅಂತ ತಮ್ಮನ್ನು ತಾವೇ ಕರೆದುಕೊಂಡಿದ್ದರು. ಸಾವಿರಾರು ವರ್ಷಗಳ ಹಿಂದೆ ಹನುಮ ಕೂಡಾ ಇದನ್ನೇ ಮಾಡಿದ್ದ...!  ನಮ್ಮ ಹನುಮ, ಸುಗ್ರೀವ ಆಳುತ್ತಿದ್ದ ಕಿಷ್ಕಿಂಧೆಯ ವಾನರ ರಾಜ್ಯದ ಪ್ರಧಾನಮಂತ್ರಿಯಾಗಿದ್ದ.  ಆದರೆ ತನ್ನನ್ನು ತಾನು ಭಗವಾನ್ ಶ್ರೀರಾಮಚಂದ್ರನ ಪ್ರಧಾನ ಸೇವಕ ಅಂತ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಘೋಷಿಸಿಕೊಂಡ.! ಅಂತೆಯೇ ನಡೆದುಕೊಂಡ ಕೂಡಾ.! 

ಹೀಗೆ ಹನುಮನ ಮಹಿಮೆ ಅಪಾರ.  ಆತನನ್ನು ಬಣ್ಣಿಸಿದಷ್ಟೂ ಕಡಿಮೆಯೇ.  ನಮ್ಮ ಕನ್ನಡಿಗ ಹನುಮನ ಜನ್ಮದಿನ ಕನ್ನಡಿಗರಿಗೆಲ್ಲ ಅತ್ಯಂತ ಸಂಭ್ರಮದ ದಿನ!  ಹಾಗಾಗಿ ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು...! 

 

#ಅನಂತಕುಮಾರಹೆಗಡೆ

Related posts