Infinite Thoughts

Thoughts beyond imagination

ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು...!

ಚೈತ್ರ ಮಾಸದ ಚಿತ್ತಾ ನಕ್ಷತ್ರದ ದವನದ ಹುಣ್ಣಿಮೆಯ ದಿನ, ಅಕ್ಕಮಹಾದೇವಿ ಎಂಬ ಮಹಾಮಾತೆ ಜನಿಸಿದ ಮಹಾಸುದಿನ!

ಆಕೆ ಪರಮ ವೈರಾಗ್ಯ ಮೂರುತಿಯಾಕೆ!  ಲೌಕಿಕ ಪ್ರಪಂಚದ ಲೋಲುಪತೆಗಳನ್ನೆಲ್ಲ ಲುಪ್ತವಾಗಿಸಿ ನಿರ್ಲಿಪ್ತವಾಗಿ ನಡೆದುಹೋದಾಕೆ.  ಭೌತಿಕವಾದುದನ್ನೆಲ್ಲ ತ್ಯಜಿಸಿ ಬಟ್ಟೆಬರೆ ವರ್ಜಿಸಿ, ಕೇಶವನ್ನೇ ಉಡುಪುಮಾಡಿಕೊಂಡಾಕೆ!  ' ಭವಿ ' ತನವನ್ನು ತೊರೆದು ' ಅನುಭಾವಿ ' ತನವನ್ನು ಮೆರೆದು ಶರಣ ಚಳವಳಿಯ ಮುಂಚೂಣಿಯಲ್ಲಿ ಕಲ್ಯಾಣಕ್ರಾಂತಿಯನ್ನು ನಡೆಸಿದಾಕೆ. ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಗಳಂಥಾ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯಿತ್ರಿಯಾಕೆ.  ಶಿವನನ್ನೇ ಪತಿಯೆಂದು ಪರಿಭಾವಿಸಿ " ಚೆನ್ನಮಲ್ಲಿಕಾರ್ಜುನ "ನನ್ನೇ ವರಿಸಿದಾಕೆ!

ಇವತ್ತು ಆ ಮಹಾಮಾತೆ ಜನಿಸಿದ ಮಹಾಸುದಿನ.  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಳಿಯೇ ಅಕ್ಕಮಹಾದೇವಿಯವರ ಜನನವಾಯಿತು.  ಶಿಕಾರಿಪುರ ಮತ್ತು ಶಿರಾಳಕೊಪ್ಪದ ಮಧ್ಯೆ ಇರುವ ಉಡುತಡಿಯೇ ಮಾತೆಯವರ ಜನ್ಮಸ್ಥಳ.  ಆಕೆ ಸನ್ಯಾಸತ್ವ ಸ್ವೀಕರಿಸಿ ಬಸವಣ್ಣನವರ ಅನುಭವ ಮಂಟಪ ಸೇರಿ ರಚಿಸಿದ ವಚನಗಳು ಕನ್ನಡ ಸಾರಸ್ವತ ಲೋಕದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಮಹತ್ತರ ಕೊಡುಗೆಗಳೇ.  ಆಕೆ ಕನ್ನಡಭಾಷೆಯಲ್ಲಿ ಕಾವ್ಯ ರಚಿಸಿದ ಮೊದಲ ಮಹಿಳೆ.  ಆಕೆ ಸ್ವತಃ ರಚಿಸಿದ ವಚನಗಳ ಸಂಗ್ರಹ ಮಾತ್ರವಲ್ಲದೆ ಆಕೆಯ ಸಮಕಾಲೀನರಾದ ಹರಿಹರ ಮಹಾಕವಿಗಳು ರಚಿಸಿದ " ಮಹಾದೇವಿಯಕ್ಕನ ರಗಳೆ " ಎಂಬ ಕೃತಿ ಅಕ್ಕಮಹಾದೇವಿಯವರ ಮೇರುವ್ಯಕ್ತಿತ್ವದ ವ್ಯಾಪ್ತಿಯೆಂಥಾದ್ದು ಅಂತ ತಿಳಿಸಿಕೊಡುತ್ತದೆ.

ಅಕ್ಕಮಹಾದೇವಿಯವರ ವಚನಗಳ ಪೈಕಿ ಹಲವಾರು ವಚನಗಳು ಅಪಾರವಾಗಿ ಜನಪ್ರಿಯತೆ ಪಡೆದಿವೆ.  ಅವುಗಳನ್ನು ಅರಿಯದವರೇ ತೀರಾ ವಿರಳ. ಉದಾಹರಣೆಗೆ " ಬೆಟ್ಟದಾ ಮೇಲೊಂದು ಮನೆಯ ಮಾಡಿ, ಮೃಗಗಳಿಗೆ ಅಂಜಿದೊಡೆಂತಯ್ಯಾ " ಎಂಬ ವಚನವಂತೂ ಅತ್ಯಂತ ಜನಪ್ರಿಯ.  ಅನುಭವ ಮಂಟಪಕ್ಕೆ ಅಕ್ಕಮಹಾದೇವಿ ಮೊತ್ತ ಮೊದಲ ಬಾರಿಗೆ ತೆರಳಿದಾಗ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತಲ್ಲಾ ; ಆ ಸಂದರ್ಭದಲ್ಲಿ ಶರಣ  ಅಲ್ಲಮ ಪ್ರಭುಗಳಿಗೂ ಶರಣೆ ಅಕ್ಕಮಹಾದೇವಿಯವರಿಗೂ ನಡೆದ ಸಂಭಾಷಣೆ ಪಾರಮಾರ್ಥಿಕ ಜ್ಞಾನದ ಪರಮ ಪವಿತ್ರ ಗಣಿ, ಮೊಗೆದಷ್ಟೂ ದಕ್ಕುವ ನಿಧಿ.!!

ಅಂಥಾ ಮೇರು ವ್ಯಕ್ತಿತ್ವದ ಮಹಾಮಾತೆ ಜನಿಸಿದ ಇಂದಿನ ಮಹಾ ಸುದಿನದಂದು ಆಕೆಯನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ ಶರಣ ಶರಣೆಯರೆಲ್ಲರಿಗೂ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳನ್ನು ಅರ್ಪಿಸುತ್ತೇನೆ.! 

ಶರಣು ಶರಣಾರ್ಥಿಗಳು!!!

#ಅನಂತಕುಮಾರಹೆಗಡೆ

Related posts