Infinite Thoughts

Thoughts beyond imagination

ಮತದಾರನಿಗೇ ಆಲಸ್ಯ ಬಂದರೆ; ಅದು ಪ್ರಜಾಪ್ರಭುತ್ವಕ್ಕೇ ತೊಂದರೆ!

ಮತದಾರನಿಗೇ ಆಲಸ್ಯ ಬಂದರೆ; ಅದು ಪ್ರಜಾಪ್ರಭುತ್ವಕ್ಕೇ ತೊಂದರೆ!

ಯಾಕೋ ಈ "ಮತದಾನ" ಎಂಬ ಶಬ್ದ ಪ್ರಯೋಗದ ಬಗ್ಗೆಯೇ ನನ್ನಲ್ಲೊಂದು ಸಣ್ಣ ಅಸಮಾಧಾನ ದಶಕಗಳಿಂದಲೂ ಇದೆ.  ನನ್ನ ಪ್ರಕಾರ "ಮತ" ವನ್ನು ಯಾರೂ "ದಾನ" ಮಾಡಬಾರದು, ಮತ್ತು ತಾಂತ್ರಿಕವಾಗಿಯೂ, ತಾರ್ಕಿಕವಾಗಿಯೂ "ಮತ" ವನ್ನು ಯಾರಿಗೂ ದಾನ ಮಾಡಲು ಸಾಧ್ಯವೂ ಇಲ್ಲ..!  ಯಾಕೆಂದರೆ ನಾವಿರುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕ ಕೂಡಾ ಯುಕ್ತ ವಯಸ್ಸು ತಲುಪಿದ ಕೂಡಲೇ ಸಾಂವಿಧಾನಿಕವಾಗಿ ಪಡೆದುಕೊಳ್ಳುವ ಒಂದು ಸ್ವಾಭಾವಿಕ ಹಕ್ಕೇ ತನ್ನ ದೇಶವನ್ನು ಯಾರು ಮುನ್ನಡೆಸಬೇಕು  ಅಂತ ನಿರ್ಧಾರ ಮಾಡುವ ಹಕ್ಕು.  ತನ್ನನ್ನು ಮತ್ತು ದೇಶವನ್ನು ಐದು ವರ್ಷಗಳ ಕಾಲ ಯಾರು ಆಳಬೇಕು ಅಂತ ನಿರ್ಧರಿಸುವ ಪರಮಾಧಿಕಾರ ಇರುವುದು ಜನರ ಕೈಯಲ್ಲೇ.  ಹಾಗಾಗಿ "ಮತ" ಎಂಬುದು ಸಾಂವಿಧಾನಿಕವಾಗಿ ನಮಗೆ ದೊರಕಿರುವ "ಹಕ್ಕು" ಅಥವಾ ನಾವು ಪಡೆದಿರುವ "ಅಧಿಕಾರ".  ಈಗ ಹೇಳಿ, ನಿಮಗೊಂದು "ಹಕ್ಕು" ದೊರೆತಿದ್ದರೆ, ಅಥವಾ ನೀವೊಂದು "ಅಧಿಕಾರ" ಪಡೆದಿದ್ದರೆ ಅದನ್ನು ನೀವು "ದಾನ" ಮಾಡಲು ಸಾಧ್ಯವೇ..? ಖಂಡಿತಾ ಇಲ್ಲ!

"ಹಕ್ಕು" ಅಥವಾ "ಅಧಿಕಾರ" ಇರುವುದು ಜವಾಬ್ದಾರಿಯುತವಾಗಿ ಚಲಾಯಿಸುವುದಕ್ಕೆಯೇ ಹೊರತು ದಾನ ಮಾಡುವುದಕ್ಕಲ್ಲ ...! ಹಾಗಾಗಿ ದೇಶದ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಎಲ್ಲರೂ ತಮಗೆ ದೊರೆತಿರುವ ಹಕ್ಕಿನ ಅಧಿಕಾರವನ್ನು ಚಲಾಯಿಸಬೇಕು. ಅರ್ಥಾತ್ ಮತವನ್ನು ಚಲಾಯಿಸಬೇಕು.  ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡಾ ಈ ವಿಷಯದಲ್ಲಿ ಒಬ್ಬನಿಗೊಬ್ಬ ಸರಿಸಮಾನನೇ.  ಯಾರೂ ಮೇಲಲ್ಲ ಯಾರೂ ಕೀಳಲ್ಲ; ಎಲ್ಲರಿಗೂ ಸಮಾನ ಹಕ್ಕು, ಸಮಾನ ಅಧಿಕಾರ...;ಎಲ್ಲರಿಗೂ ಒಂದೇ ಓಟು...! 

ನಾವು ಯಾರ ಹೊಟ್ಟೆಯಲ್ಲಿ, ಯಾರ ಮನೆಯಲ್ಲಿ ಹುಟ್ಟಿದ್ದೀವಿ ಅನ್ನೋ ನೆಲೆಯಲ್ಲಿ, ನಮ್ಮ ಅಪ್ಪ ಅಮ್ಮನ ಹೆಸರಲ್ಲಿ ಎಷ್ಟು ಆಸ್ತಿ ಇದೆ ಅನ್ನೋ ನೆಲೆಯಲ್ಲಿ, ನಾವೆಷ್ಟು ಎತ್ತರ ಇದ್ದೀರಿ, ನೀವೆಷ್ಟು ತೂಕ ಇದ್ದೀರಿ ಅನ್ನೋ ನೆಲೆಯಲ್ಲಿ ನಮಗ್ಯಾರಿಗೂ ಎರಡು ಮೂರು ಮತ ಚಲಾಯಿಸಲು ಅವಕಾಶವಿಲ್ಲ. ದೇಶದ ರಾಷ್ಟ್ರಪತಿಗೂ ಒಂದೇ ಮತ, ಅಲ್ಲೇ ಕಾರ್ಯ ನಿರ್ವಹಿಸುವ ಓರ್ವ ಸಾಮನ್ಯ ನೌಕರನಿಗೂ ಒಂದೇ ಮತ.

ಆದರೆ, ಬಹು ಅಮೂಲ್ಯವಾದ "ಮತ" ಎಂಬ ಅಧಿಕಾರವಿದ್ದರೂ, ಅದನ್ನು ಚಲಾಯಿಸಲು ಸಂವಿಧಾನವೇ ಒಂದು ಅವಕಾಶ ಒದಗಿಸಿದ್ದರೂ ಕೂಡಾ ಅದನ್ನು ಚಲಾಯಿಸಲಾಗದಷ್ಟು ಆಲಸ್ಯ ಮತದಾರನಿಗೇ ಬಂದರೆ? ತನಗಿರುವ ಅಧಿಕಾರವನ್ನೇ ಚಲಾಯಿಸಲಾರದಷ್ಟು ತನಗಿರುವ ಹಕ್ಕನ್ನೇ ಬಳಸಿಕೊಳ್ಳಲಾರದಷ್ಟು ನಿರಾಸಕ್ತಿ ಮತದಾರನಿಗೆ ಬಂದರೆ?  ಅದರಿಂದ ಪ್ರಜಾಪ್ರಭುತ್ವಕ್ಕೇ ತೊಂದರೆ.  ಚುನಾವಣೆಯ ಒಟ್ಟು ಆಶಯಕ್ಕೇ ತೊಂದರೆ... ಅಲ್ಲವೇ..? 

ಸಾರ್ವತ್ರಿಕ ಚುನಾವಣೆ, ಅದರಲ್ಲೂ ಲೋಕಸಭಾ ಚುನಾವಣೆ ಅಂದರೆ ಅದು ಬಹಳ ದೊಡ್ಡ ಜವಾಬ್ದಾರಿಯನ್ನು ಮತದಾರನ ಮೇಲೆ ಹೊರಿಸುತ್ತದೆ.  ಇಡೀ ದೇಶವನ್ನು ಮುಂದಿನ ಐದು ವರ್ಷಗಳ ಕಾಲ ಮುನ್ನಡೆಸಲು, ಆಡಳಿತ ನಡೆಸಲು ಸರ್ಕಾರವೊಂದನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿಯದು.  ಆದರೆ ಕೆಲ ಸಂದರ್ಭದಲ್ಲಿ ಇಂತಹ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಬುದ್ಧ ವಿದ್ಯಾವಂತ ಪ್ರಜ್ಞಾವಂತ ಮತದಾರರೇ ವಿಫಲರಾಗುತ್ತಾರೆ ಎಂಬುದು ತುಂಬಾ ಕಳವಳಕಾರಿ ಮತ್ತು ಬೇಸರ ಮೂಡಿಸುವ ಸಂಗತಿ.  ನಮ್ಮ ರಾಜ್ಯದಲ್ಲಿ ರಾಜಧಾನಿ ಬೆಂಗಳೂರೇ ಈ ವಿಚಾರದಲ್ಲಿ ಯಾಕೋ ಸತತವಾಗಿ ದಾಖಲೆ ಮಾಡುತ್ತಿದೆ.  ಅಂದರೆ "ಮತ" ಎಂಬ ಸಂವಿಧಾನದತ್ತ ಅಧಿಕಾರ ಚಲಾಯಿಸಲು ಬೆಂಗಳೂರಿನ so-called ಬುದ್ಧಿವಂತ, ವಿದ್ಯಾವಂತ, ಮತ್ತು ಅನುಕೂಲವಂತ ಮತದಾರರೇ ನಿರಾಸಕ್ತಿ ತೋರಿಸುತ್ತಿದ್ದಾರೆಂದರೆ ಅದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕರ..! 

ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತೀರಾ ಈ ಪರಿ ಕಡಿಮೆಯಾಗಲೂ ಕಾರಣಗಳು ಹಲವಾರಿವೆ. ಅವುಗಳಲ್ಲಿ ಕೆಲವೊಂದು ಒಪ್ಪತಕ್ಕ ಕಾರಣಗಳೇ ಆದರೂ ಮತಚಲಾವಣೆಯ ಪ್ರಮಾಣ ಐವತ್ತು ಶೇಕಡಾದಷ್ಟೂ ಆಗದೇ ಇರೋದು ಮಾತ್ರ ತುಂಬಾ ಬೇಸರ ಮೂಡಿಸುವ ಸಂಗತಿ ಅಷ್ಟೇ ಅಲ್ಲ, ಅವಮಾನಕಾರಿ ಸಂಗತಿ ಕೂಡಾ..! ಅತ್ಯಂತ ಜನನಿಬಿಡ ನಗರವಾಗಿರುವುದರಿಂದ ಬೆಂಗಳೂರಿನ ಮತದಾರರಿಗೆ ಮತಚಲಾವಣೆ ಮಾಡಲು ತುಂಬಾ ಅನುಕೂಲಗಳಿವೆ.  ಗ್ರಾಮಾಂತರ ಪ್ರದೇಶಗಳಲ್ಲಿ, ಹಳ್ಳಿಗಾಡಿನಲ್ಲಿ ಜನಸಂಖ್ಯೆ ವಿರಳವಾಗಿರುವಲ್ಲಿ ಮತಗಟ್ಟೆಗಳು ಮನೆಗಳಿಂದ ದೂರದಲ್ಲಿದ್ದು, ಹೆಚ್ಚಿನ ಜನರಿಗೆ ಮನೆಯಿಂದ ಮತಗಟ್ಟೆ ತಲುಪಲು ಸರಿಯಾದ ವಾಹನ ಸೌಲಭ್ಯವೂ ಕಡಿಮೆ.  ಅದೇ ವೇಳೆ ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿ ಎಡವಿ ಬಿದ್ದರೊಂದು ಮತಗಟ್ಟೆ ಸಿಗುತ್ತದೇನೋ ಎಂಬಂತೆ ತುಂಬಾ ಹತ್ತಿರ ಹತ್ತಿರವವಾಗಿ ಮತಗಟ್ಟೆಗಳಿರುತ್ತವೆ.  ಮತದಾರರು ತಮ್ಮ ಮನೆಯಿಂದ ಮತಗಟ್ಟೆ ತಲುಪಲು ವಾಹನ ಸೌಕರ್ಯಗಳು ಕೂಡಾ ಬೇಕಾದಷ್ಟಿವೆ, ಜೊತೆಗೆ ಬೆಂಗಳೂರಿನಂಥ ಪ್ರದೇಶಗಳಲ್ಲಿನ ಮತದಾರರು ಸಾಮಾನ್ಯವಾಗಿ ಉದ್ಯೋಗಿಗಳಾಗಿದ್ದು, ಚುನಾವಣೆಯ ದಿನ ಹೆಚ್ಚಿನವರಿಗೆ ಸಂಬಳ ಸಹಿತ ರಜಾ ಸೌಲಭ್ಯವೂ ಇರುತ್ತದೆ.  ಅದೇ ಗ್ರಾಮಾಂತರ ಪ್ರದೇಶಗಳ ಮತದಾರನಿಗೆ ಇಂಥ ಸೌಲಭ್ಯಗಳು ಕಡಿಮೆ.

ಆದರೆ ಬೆಂಗಳೂರಿನಂತ ಮಹಾನಗರಗಳ ಮತದಾರ ಇಷ್ಟೆಲ್ಲಾ ಅನುಕೂಲಗಳಿದ್ದೂ ಮತಚಲಾಯಿಸುವುದಿಲ್ಲ!!  ಅದೇ ಕರ್ನಾಟಕದ ಗ್ರಾಮೀಣ ಭಾಗದ ಮತದಾರ ಅತ್ಯಂತ ಆಸ್ಥೆಯಿಂದ, ಮೂರೋ ನಾಲ್ಕೋ ಕಿಲೋಮೀಟರ್ ದೂರ ಬಿಸಿಲು ಮಳೆಯನ್ನೂ ಲೆಕ್ಕಿಸದೆಯೇ ನಡೆದುಕೊಂಡು ಹೋಗಿ ತನ್ನಪಾಲಿನ ಮತವನ್ನು ಚಲಾಯಿಸಿ ಎದೆ ಸೆಟೆಸಿ ಮರಳಿ ಬರುತ್ತಾನೆ. ಅದೇ ವೇಳೆ ಬೆಂಗಳೂರಿನ ವಿದ್ಯಾವಂತ ಮಂದಿ ಚುನಾವಣೆಯ ಹಿಂದಿನ ದಿನವೇ ತನ್ನ ಕುಟುಂಬದೊಂದಿಗೋ, ಗೆಳೆಯರೊಂದಿಗೋ ಸಾವಿರಾರು ರೂಪಾಯಿ ಖರ್ಚುಮಾಡಿಕೊಂಡು, ನೂರಾರು ಕಿಲೋಮೀಟರ್ ದೂರ ಪ್ರವಾಸ ಹೋಗಿ ರಜೆಯ ಮೋಜು ಉಡಾಯಿಸುತ್ತಾರೆ.  ಹಳ್ಳಿ ಗಾಡಿನವರು ಪ್ರಜಾಪ್ರಭುತ್ವದ ಮಹತ್ವವನ್ನರಿತು ತಮಗಿರುವ ಅಧಿಕಾರವನ್ನು ಹೆಮ್ಮೆಯಿಂದ ಚಲಾಯಿಸಿ ದೇಶ ಕಟ್ಟುವ ಜವಾಬ್ದಾರಿಯಲ್ಲಿ ಭಾಗಿಗಳಾದರೆ, ಅದೇ ಬೆಂಗಳೂರಿನಂತ ನಗರ ಪ್ರದೇಶದವರು ಪ್ರಜಾಪ್ರಭುತ್ವದ ಅರ್ಥವೇ ತಿಳಿಯದವರ ಹಾಗೆ ತಮಗೊಂದು ಈ ರೀತಿಯ ಅಧಿಕಾರ ಇದೆ ಎಂಬ ಅರಿವೇ ಇಲ್ಲದವರ ರೀತಿ ಮತಗಟ್ಟೆಯ ಹತ್ತಿರವೂ ಸುಳಿಯದೇ, ಮತವನ್ನೂ ಚಲಾಯಿಸದೇ ಜವಾಬ್ದಾರಿ ಮರೆಯುತ್ತಾರೆ..!  

ಆದರೆ ನನ್ನ ಕ್ಷೇತ್ರದ ಜನ, ನನ್ನ ಜಿಲ್ಲೆಯ ಜನ ಬುದ್ಧಿವಂತಿಕೆಗೆ, ಪ್ರಜ್ಞಾವಂತಿಕೆಗೆ, ಕ್ರಿಯಾಶೀಲತೆಗೆ, ಸೃಜನಶೀಲತೆಗೆ, ಇಡೀ ರಾಜ್ಯಕ್ಕೇ  ಹೆಸರಾದವರು.  ಇದುವರೆಗೂ ಅವರು ಅದನ್ನು ಪದೇ ಪದೇ ರಾಜ್ಯದ ಜನತೆಗೆ ನಿರೂಪಿಸುತ್ತಲೇ ಬಂದಿದ್ದಾರೆ.  ಚುನಾವಣೆಗಳಲ್ಲಿ ಬಾಗೀದಾರಿಕೆಯ ವಿಷಯ ಬಂದಾಗಲೂ ಅಷ್ಟೇ, ಮತವನ್ನು ಚಲಾಯಿಸುವ ಹಕ್ಕಿನ ವಿಚಾರ ಬಂದಾಗಲೂ ಅಷ್ಟೇ, ಅಸಾಮಾನ್ಯ ನಿಷ್ಠುರತೆಯಿಂದ, ನಿರ್ಧಾಕ್ಷಿಣ್ಯವಾಗಿ ತಮ್ಮ ಅಧಿಕಾರವನ್ನು ಚಲಾಯಿಸಿ, ತಮಗೆ ಬೇಡ ಅನಿಸಿದವರನ್ನು ತಿರಸ್ಕರಿಸಿ ಯುಕ್ತ ಕಂಡವರನ್ನು ಪ್ರೀತಿಯಿಂದ ಪುರಸ್ಕರಿಸಿದ್ದಾರೆ.

ಕಡಲತಡಿಯ ಭಾರ್ಗವ ಡಾ. ಶಿವರಾಮ ಕಾರಂತ, ಖ್ಯಾತ ಚಿತ್ರನಟ ಅನಂತನಾಗ್ ರಂತ ಘಟಾನುಘಟಿಗಳನ್ನೆಲ್ಲಾ ತಿರಸ್ಕರಿಸಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದರು ನನ್ನ ಕ್ಷೇತ್ರದ ಮತದಾರ ಪ್ರಭು.  ಕಾಲ ಕಾಲಕ್ಕೆ ತಾನು ಯಾವುದೇ ರೀತಿಯ ಆಮಿಷಕ್ಕೂ ಒಳಗಾಗುವುದಿಲ್ಲ ಎಂಬುದನ್ನು ಸಹ ಜಗಜ್ಜಾಹೀರುಪಡಿಸುತ್ತಾ ಬಂದಿದ್ದಾರೆ.  ಅದೇ ರೀತಿ ಹಿಂದುಳಿದ  ಸಮುದಾಯದ ಜಿ. ದೇವರಾಯ ನಾಯಕ್ ರನ್ನೂ ಸತತ ನಾಲ್ಕು ಭಾರಿ ಮತ್ತು ಮುಂದುವರಿದ  ಸಮುದಾಯದ ನನ್ನನ್ನೂ ಐದು ಭಾರಿ ಆರಿಸಿ ಪ್ರೀತಿಯಿಂದ ಲೋಕಸಭೆಗೆ ಕಳಿಸಿಕೊಟ್ಟು ತಾನು ಯಾವ ಜಾತಿ ಸಮುದಾಯದ ಪರವೂ ಅಲ್ಲ ಎಂಬ ಖಡಕ್ ಸಂದೇಶವನ್ನು ನನ್ನ ಕ್ಷೇತ್ರದ ಮತದಾರ ಸಾರಿ ಸಾರಿ ಹೇಳಿದ್ದಾನೆ. 

ಅದೇ ರೀತಿ ತನ್ನ ಹಕ್ಕನ್ನು ಚಲಾಯಿಸುವಲ್ಲೂ ಹಿಂದೆ ಬೀಳದೆ ಶೇಕಡಾವಾರು ಮತಚಲಾವಣೆಯಲ್ಲೂ ನನ್ನ ಕ್ಷೇತ್ರದ ಮತದಾರರು ಒಳ್ಳೆ ಸ್ಥಾನಮಾನವನ್ನೇ ಗಳಿಸಿದ್ದಾರೆ.  ಈ ಬಾರಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾವಣೆ ಮಾಡಿ ಎಲ್ಲ ಕ್ಷೇತ್ರಗಳನ್ನೂ ಹಿಂದಿಕ್ಕಬೇಕು, ಇಡೀ ರಾಜ್ಯಕ್ಕೆ ಮೊದಲಿಗರು ನಾವಾಗಬೇಕು ಎಂಬುದು ನನ್ನ ಆಸೆ.  ಈ ಆಸೆಯನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರ ಖಂಡಿತಾ ನೆರವೇರಿಸಬಲ್ಲ ಎಂಬ ಭರವಸೆ ನನ್ನದು...

#ಅನಂತಕುಮಾರಹೆಗಡೆ

Related posts