ಮತಚಲಾವಣೆಯ ಪ್ರಮಾಣದಲ್ಲಿ ನಾವು ಮಂಡ್ಯವನ್ನೇ ಹಿಂದಿಕ್ಕಬೇಕು...!
ಮತಚಲಾವಣೆಯ ಪ್ರಮಾಣದಲ್ಲಿ ನಾವು ಮಂಡ್ಯವನ್ನೇ ಹಿಂದಿಕ್ಕಬೇಕು...!
ಉತ್ತರಕನ್ನಡ ಅತೀ ಹೆಚ್ಚಿನ ಮತ ದಾಖಲಿಸಿ ಮೊದಲ ಸ್ಥಾನ ಪಡೀಬೇಕು..!
ಮೇಲಿನ ತಲೆಬರಹ ನೋಡಿ ಕೆಲವರಿಗಾದರೂ ಅಚ್ಚರಿಯಾಗಿರಬಹುದು! "ಉತ್ತರ ಕನ್ನಡ ಅತೀ ಹೆಚ್ಚು ಮತ ಚಲಾವಣೆ ಮಾಡಿ ಮೊದಲ ಸ್ಥಾನ ಪಡೀಬೇಕು ಎಂಬ ಕಳಕಳಿಯ ಹೇಳಿಕೆಯನ್ನೇನೋ ಒಪ್ಪೋಣ; ಆದರೆ ಅದಕ್ಕಾಗಿ ಮಂಡ್ಯವನ್ನು ನಾವ್ಯಾಕೆ ಹಿಂದಿಕ್ಕಬೇಕು..?" ಅಂತನ್ನೋ ಪ್ರಶ್ನೆ ಹೆಚ್ಚಿನವರ ತಲೆಯಲ್ಲಿ ಸುಳಿದಿರಬಹುದು...!
ಆದರೆ ಆ ಪ್ರಶ್ನೆಗೊಂದು ನಿಖರವಾದ ಉತ್ತರವಿದೆವಿಲ್ಲಿ. ಈ ಬಾರಿ ಕರ್ನಾಟಕದಲ್ಲಿ ನಡೆದ ಪ್ರಥಮ ಹಂತದ ಚುನಾವಣೆಯ ಮತ ಚಲಾವಣೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದದ್ದು ನಮ್ಮ ರಾಜ್ಯದ ಸಕ್ಕರೆ ನಾಡು ಮಂಡ್ಯ...!
ಹೌದು...ಕಳೆದ ಬಾರಿಯ...ಅಂದರೆ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೭೫ ರಷ್ಟು ಮತಚಲಾಯಿಸಿ ದಕ್ಷಿಣ ಕನ್ನಡದ ಮಂದಿ ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿದ ಕ್ಷೇತ್ರ ತಮ್ಮದೇ ಅಂತ ಕುಣಿದು ಕುಪ್ಪಳಿಸಿದ್ದರು. ಆದರೆ ಮೊನ್ನೆ ತಾನೇ ನಡೆದ ರಾಜ್ಯದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಕಳೆದ ಬಾರಿಯ ಶೇ. ೭೫ ನ್ನು ಮೀರಿಸುವಂತೆ ಶೇ.೭೭.೬೯ ಮತ ಚಲಾಯಿಸಿದರೂ ಕೂಡಾ ಪ್ರಥಮ ಸ್ಥಾನದಿಂದ ವಂಚಿತರಾಗಬೇಕಾಯಿತು! ಅದಕ್ಕೆ ಕಾರಣವೇ ಮಂಡ್ಯ..!
ದಕ್ಷಿಣ ಕನ್ನಡದ ಮಂದಿ ಅತ್ಯುತ್ಸಾಹದಿಂದ ಕಳೆದ ಬಾರಿಗಿಂತ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದ್ದರೂ ಸಹ ಈ ಬಾರಿ ಮಂಡ್ಯದ ಸಂಖ್ಯೆಯನ್ನು ಮೀರಿಸಲು ಸಾಧ್ಯವಾಗಲಿಲ್ಲ! ಬಹುಶಃ ಇದಕ್ಕೆ ನೇರವಾದ ಕಾರಣವೆಂದರೆ ಮಂಡ್ಯದಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆಗೆ ಇಳಿದದ್ದು ಸ್ವತಃ ಮುಖ್ಯಮಂತ್ರಿಯ ಪುತ್ರ ಮತ್ತು ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ! ಹಾಗಾಗಿ ಇಡೀ ದೇಶದ ಕಣ್ಣೇ ಮಂಡ್ಯದ ಹೈ ವೋಲ್ಟೇಜ್ ಚುನಾವಣೆಯ ಮೇಲೆ ಕೇಂದ್ರೀಕೃತವಾದಾಗ, ಸಹಜವಾಗಿಯೇ ಅಲ್ಲಿನ ಜನ ಸಕಾರಾತ್ಮಕವಾಗಿ ಸ್ಪಂದಿಸಿ ಸಾರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿ ಶೇಕಡಾ ೮೦. ೨೩ ರಷ್ಟು ಮತ ಚಲಾವಣೆ ಮಾಡಿದ್ದಾರೆ. ಆ ಮೂಲಕ ೭೭. ೬೯ ರಷ್ಟು ಮತ ಚಲಾವಣೆಯಾದ ದಕ್ಷಿಣ ಕನ್ನಡವನ್ನು ಮಂಡ್ಯದ ಜನ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಆದರೆ ಇಲ್ಲೊಂದು ವಿಶೇಷವಿದೆ. ಕಳೆದ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಾಗ ಮಂಡ್ಯ ಶೇ. ೬೫ ರಷ್ಟು ಮತಚಲಾವಣೆ ಮಾಡಿ ಉತ್ತರ ಕನ್ನಡದೊಂದಿಗೇ ಸ್ಥಾನ ಹಂಚಿಕೊಂಡಿತ್ತು. ಆದರೆ ಅದೇ ಈ ಬಾರಿ ಎಲ್ಲರಿಗೂ ಸೆಡ್ಡು ಹೊಡೆದು ಪ್ರಥಮ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಿದೆ. ಈಗ ನಿಜವಾದ ಸವಾಲ್ ಇರೋದು ಉತ್ತರಕನ್ನಡ ಕ್ಷೇತ್ರಕ್ಕೇ..!!
ಯಾಕೆಂದರೆ ಕಳೆದ ಬಾರಿ ಉತ್ತರ ಕನ್ನಡದೊಂದಿಗೆ ಸ್ಥಾನ ಹಂಚಿಕೊಂಡಿದ್ದ ಮಂಡ್ಯ ಈ ಬಾರಿ ಪ್ರಥಮ ಸ್ಥಾನ ಪಡೆದಿದೆ. ಹಾಗಾಗಿ ಈ ಬಾರಿ ಹೇಗಾದರೂ ಮಂಡ್ಯವನ್ನು ಸೋಲಿಸಬೇಕು ಅನ್ನುವ ಮನಸ್ಥಿತಿಯಲ್ಲಿ ಉತ್ತರ ಕನ್ನಡದ ಮತದಾರ ಉಮ್ಮೇದಿನಿಂದ ಮತ ಚಲಾಯಿಸಬೇಕು...!
ಹಾಗಂತ ಅದೇನೂ ಕಷ್ಟದ ಕೆಲಸವಲ್ಲ. ನಮ್ಮ ಉತ್ತರ ಕನ್ನಡದ ಯುವಕರು, ಹುಡುಗರು ಬಿಡಿ.. ಮಕ್ಕಳೂ ಕೂಡಾ ತಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿರುವ ಪ್ರಶ್ನೆಗಳಿಗೆಲ್ಲಾ ನಿರರ್ಗಳವಾಗಿ, ಕರಾರುವಕ್ಕಾಗಿ ಉತ್ತರಿಸಿ ಪರೀಕ್ಷೆಗಳನ್ನೆಲ್ಲ ಸುಲಭವಾಗಿಯೇ ಪಾಸು ಮಾಡಿ ಅದು ಎಸ್ಸೆಸ್ಸೆಲ್ಸಿಯೇ ಇರಲಿ ಪಿಯುಸಿಯೇ ಇರಲಿ ರಾಜ್ಯಕ್ಕೇ ಅತ್ಯುತ್ತಮ ಸ್ಥಾನ ಪಡೆಯುವುದು ಮಾಮೂಲಿ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡದ ವಿದ್ಯಾರ್ಥಿಗಳು ಅದೆಂತ ಸಾಧನೆ ಮಾಡಿದ್ದರೆಂದರೆ, ಶೇ.೮೮.೧೨ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉತ್ತರ ಕನ್ನಡ ಇಡೀ ರಾಜ್ಯಕ್ಕೇ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಮೊನ್ನೆ ಮೊನ್ನೆ ಬಂದಿರುವ ಪಿಯುಸಿ ಫಲಿತಾಂಶಗಳೂ ಕೂಡ ಇದನ್ನೇ ಹೇಳುತ್ತಿವೆ. ಉತ್ತರ ಕನ್ನಡ ಜಿಲ್ಲೆ ಶೇ. ೭೭. ೯೯ ರಷ್ಟು ಗಳಿಸಿ ಇಡೀ ರಾಜ್ಯದಲ್ಲೇ ಮೂರನೆಯ ಸ್ಥಾನ ಪಡೆಯಿತು.
ಅದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯಕ್ಕೆ ೨೮ ನೇ ಸ್ಥಾನವಾಗಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ೧೭ ನೇ ಸ್ಥಾನ! ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ, ಪಿಯುಸಿ ಪರೀಕ್ಷೆಗಿಂತೆಲ್ಲಾ ತುಂಬಾ ಪ್ರಮುಖವಾದ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಮಂಡ್ಯ ೮೦. ೨೩ ರಷ್ಟು ಮತ ಚಲಾವಣೆ ಮಾಡಿ ಮೊದಲ ಸ್ಥಾನ ಪಡೆದಿದೆ..! ಆದ ಕಾರಣವೆ ನಾನು ಹೇಳುತ್ತಿರುವುದು, ಈ ಪ್ರಜಾ ಪ್ರಭುತ್ವದ ಮಹತ್ತರ ಪರೀಕ್ಷೆಯ ಫಲಿತಾಂಶದಲ್ಲೂ ಸಹ ಮಂಡ್ಯವನ್ನು ಹಿಂದಿಕ್ಕಿ ಉತ್ತರ ಕನ್ನಡ ಅತೀ ಹೆಚ್ಚಿನ ಮತವನ್ನು ಚಲಾಯಿಸಿ ಪ್ರಥಮ ಸ್ಥಾನ ಪಡೆಯಬೇಕೆಂದು.
ಖಂಡಿತಾ ಇದೇನೂ ಅಂತ ಕಷ್ಟದ ಕೆಲಸವೇನಲ್ಲ ಬಿಡಿ. ನಮ್ಮ ಉತ್ತರ ಕನ್ನಡದ ಜನ ಮನಸ್ಸು ಮಾಡಿದರೆ ಇದನ್ನು ಸುಲಭವಾಗಿಯೇ ಸಾಧಿಸಬಲ್ಲರು!
ಆದರೆ ಇಲ್ಲೊಂದು ಚಿಕ್ಕ ತೊಡಕಿದೆ. ಅದೇನೆಂದರೆ ಈ ಚುನಾವಣೆಯಲ್ಲಿ ನಮ್ಮ ಉದಾರ ಮನಸ್ಥಿತಿಯ ಉತ್ತರ ಕನ್ನಡ ಜನರ ಮನಸ್ಸಿನ ಆಳದಲ್ಲೆಲೋ ಒಂದು ರೀತಿಯ ನಿರಾಸಕ್ತಿಯ ಭಾವ ಅಡಗಿ ಕುಳಿತಿದೆ ಮತ್ತು ಅದು ನನ್ನ ಗಮನಕ್ಕೂ ಬಂದಿದೆ. ಹಲವರಲ್ಲಿ "ಹೇಗಿದ್ದರು ಗೆಲ್ತಾನೆ ಬಿಡು" ಅನ್ನುವ ಒಂದು ರೀತಿಯ ನಿರಾಳತೆಯ ಭಾವ..! ಕೆಲವರಲ್ಲಿ "ಈ ಬಾರಿ ಏನೇ ಮಾಡಿದರೂ ಗೆಲ್ಲೋದಿಲ್ಲ" ಅನ್ನುವ ರೀತಿಯ ನಿರಾಸೆಯ ಭಾವ.! ಈ ಎರಡೂ ರೀತಿಯ ಭಾವವನ್ನು ನಾನು ಜನರಲ್ಲಿ ಗುರುತಿಸಿದ್ದೇನೆ...! ಜನರಲ್ಲಿ ಈಗಾಗಲೇ ಬಂದಿರುವ ಈ ಭಾವವೇ ಉತ್ತರ ಕನ್ನಡಕ್ಕೆ ಮತಚಲಾವಣೆಯಲ್ಲಿ ಪ್ರಥಮ ಸ್ಥಾನ ಬಾರದೇ ಇರುವಂತೆ ಮಾಡಬಹುದೆಂಬ ಆತಂಕ ನನಗಿದೆ. ಆದರೆ "ಹೇಗಿದ್ರೂ ಗೆಲ್ತಾನೆ ಬಿಡು" ಅನ್ನುವವರೂ, "ಈ ಬಾರಿ ಏನೇ ಮಾಡಿದ್ರೂ ಗೆಲ್ಲೋದಿಲ್ಲ" ಅನ್ನುವವರೂ ಸೋಲು ಗೆಲುವಿನ ವಿಷಯವನ್ನು ಮತ್ತು ಆ ಬಗೆಗಿನ ಊಹೆಯನ್ನು ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಸಂವಿಧಾನದತ್ತವಾಗಿ ಸಿಕ್ಕಿರುವ ಮತಾಧಿಕಾರವನ್ನು ಚಲಾಯಿಸಬೇಕು ಮತ್ತು ಆ ಮೂಲಕ ರಾಜ್ಯದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗಿ ಉತ್ತರ ಕನ್ನಡ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಅನ್ನುವುದು ನನ್ನ ವಿನಮ್ರ ವಿನಂತಿ ಮತ್ತು ಕೋರಿಕೆ...!
ನನ್ನ ಆಶಯವನ್ನು ಉತ್ತರ ಕನ್ನಡದ ಪ್ರಬುದ್ಧ ಮತದಾರ ಖಂಡಿತವಾಗಿಯೂ ನೆರವೇರಿಸಿ ಕೊಡುತ್ತಾನೆಂಬುದು ನನ್ನ ಬಲವಾದ ನಂಬಿಕೆ! ಹಾಗೆ ಆರಾಷ್ಟ್ರೀಯ ಮತ್ತು ಅರಾಜಕತೆ ಪಡೆಗಳಿಗೆ ನಮ್ಮ ಉತ್ತರ ಕನ್ನಡದ ಮಂದಿ ಸೂಕ್ತವಾಗಿ ಉತ್ತರ ನೀಡುತ್ತಾರೆ ಎಂದು ಸಹ ಆಶಿಸುತ್ತ.......
ನಿಮ್ಮವ
#ಅನಂತಕುಮಾರಹೆಗಡೆ