Infinite Thoughts

Thoughts beyond imagination

ಪ್ರಜಾಪ್ರಭುತ್ವದ ಬೃಹತ್ ಹಬ್ಬಕ್ಕೆ ನಮ್ಮ ಕ್ಷೇತ್ರದಲ್ಲಿ ಭಾರೀ ಯಶಸ್ಸು!

ಪ್ರಜಾಪ್ರಭುತ್ವದ ಬೃಹತ್ ಹಬ್ಬಕ್ಕೆ ನಮ್ಮ ಕ್ಷೇತ್ರದಲ್ಲಿ ಭಾರೀ ಯಶಸ್ಸು!

ಉತ್ತರಕನ್ನಡದ ಮತದಾರ ಪ್ರಭುಗಳಿಗೇ ಸಲ್ಲಬೇಕು ಅದರ ಶ್ರೇಯಸ್ಸು!! 

ದೇಶದ ಭವಿಷ್ಯದೊಂದಿಗೆ ನಮ್ಮ ಮುಂದಿನ ಪೀಳಿಗೆಗೆಳ ಭವಿಷ್ಯವನ್ನೂ, ನಮ್ಮ ಪರಂಪರೆ, ಧರ್ಮ, ಸಂಸ್ಕೃತಿಗಳ ಭವಿತವ್ಯವನ್ನೂ ರೂಪಿಸುವಂಥ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಘಟ್ಟವಾಗಿದೆ ಈ ಮಹಾಚುನಾವಣೆ.  ಇದು ಪ್ರಜಾಪ್ರಭುತ್ವದ ಬೃಹತ್ ಹಬ್ಬ!!  ನಮ್ಮ ಉತ್ತರ ಕನ್ನಡ ಕ್ಷೇತ್ರ ಕೂಡ ಈ ಪಥ-ನಿರ್ಣಾಯಕ ಪರ್ವದಿನದ, ಪರಮ ಪವಿತ್ರ ಕರ್ತವ್ಯ ನಿರ್ವಹಿಸಲು ಕಳೆದ ಕೆಲವು ದಿನಗಳಿಂದಲೇ ಸಂಭ್ರ,ಮದಿಂದ ಸಜ್ಜುಗೊಳ್ಳುತ್ತಿತ್ತು.  ಯಾವತ್ತಿನ ಹಾಗೆಯೇ ಇವತ್ತು ಕೂಡ ನಮ್ಮ ಉತ್ತರ ಕನ್ನಡದ ಮತದಾರ ಪ್ರಭು ಆತನ ಮೇಲಿಟ್ಟ ನಿರೀಕ್ಷೆಯನ್ನು ಹುಸಿಮಾಡದೆಯೇ ಬಹಳ ನಿಷ್ಠೆಯಿಂದ ತನ್ನ ಪಾಲಿನ ಕರ್ತವ್ಯವನ್ನು ನಿಭಾಯಿಸಿದ್ದಾನೆ.  ಇಂದು ಆಗಿರುವ ಮತ ಚಲಾವಣೆಯ ಪ್ರಮಾಣವನ್ನು (74.07 %) ನೋಡಿದಾಗ ಮನಸ್ಸಿಗೆ ಹರ್ಷ ನೀಡುತ್ತಿದೆ.  ಬಹುತೇಕ ಹೊಸ ದಾಖಲೆಯನ್ನು ನಾವೀಸಲ ಬರೆಯುತ್ತೇವೆಯೋ ಎನ್ನುವ ರೀತಿಯ ವಾತಾವರಣ. ಪ್ರಜಾಪ್ರಭುತ್ವದ ವಾರಸುದಾರಾದ ಮತದಾರರೆಲ್ಲ ಬಹಳ ಉತ್ಸಾಹದಿಂದಲೇ ಮತಚಲಾಯಿಸುವ ಪ್ರಕ್ರಿಯೆಯಲ್ಲಿ ಬೆಳಗ್ಗಿನಿಂದಲೇ ತೊಡಗಿಕೊಂಡಿದ್ದು ಶುಭ ಮುನ್ಸೂಚನೆ ನೀಡಿತು. 

ಪ್ರಜಾಪ್ರಭುತ್ವದ ಈ ಬೃಹತ್ ಹಬ್ಬದ ಯಶಸ್ಸಿಗೆ ಉತ್ತರ ಕನ್ನಡದ ಮತದಾರ ಪ್ರಭುಗಳಿಗೇ ಎಲ್ಲಾ ರೀತಿಯ ಶ್ರೇಯಸ್ಸೂ ಸಲ್ಲಬೇಕು!!  ಕಾರಣ, ಈ ಹಬ್ಬದಲ್ಲಿ ಮತಚಲಾವಣೆಯೇ ಅತ್ಯಂತ ಪ್ರಾಮುಖ್ಯತೆ ಇರುವ ಸಂಗತಿ.  ಹಾಗಾಗಿ ಇವತ್ತಿನ ಯಶಸ್ಸಿನ ಸಿಂಹಪಾಲು ಮತದಾರನಿಗೇ ಮುಡಿಪು.  ಮುಖ್ಯವಾಗಿ ಸುಡುವ ಬಿಸಿಲಿನ ತಾಪಮಾನ ಹಾಗು ಶಿರಸಿ-ಸಿದ್ದಾಪುರದಲ್ಲಿ, ಅನಿರೀಕ್ಷಿತ ಮಳೆಯ ನಡುವೆ ಮತದಾರರು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮೆರೆದಿದ್ದಾರೆ!  ಯಾವ ಗದ್ದಲ-ಗೊಂದಲಕ್ಕೂ ಅವಕಾಶವಿಲ್ಲದಂತೆ ಶಾಂತಿಯುತವಾಗಿ ಮತ ಚಲಾಯಿಸಿ ಪ್ರಜ್ಞಾವಂತಿಕೆಯನ್ನು, ಸಜ್ಜನಿಕೆಯನ್ನು ಮೆರೆದಿದ್ದೀರಿ.  

ವಿಶೇಷವಾಗಿ, ಜಗತ್ತಿನೆ ಮೂಲೆ-ಮೂಲೆಯಿಂದ ಮತ್ತು ದೇಶದ ವಿವಿಧ ಭಾಗಗಳಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ನೀಡಲೆಂದೇ ಕ್ಷೇತ್ರಕ್ಕೆ ಆಗಮಿಸಿದ ಅಸಂಖ್ಯಾತ ನಾಗರಿಕ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು!  ದೇಶದ ಭವಿಷ್ಯಕ್ಕಾಗಿ ನಿಮ್ಮ ಹಕ್ಕನ್ನು ಚಲಾಯಿಸಿದ್ದೀರಿ.  ಮತ ಚಲಾವಣೆಯಿಂದಲೇ ಜನತಂತ್ರದ ಆರಂಭ, ಮತ ಚಲಾವಣೆಯೇ ಜನತಂತ್ರದ ಆಧಾರ ಸ್ತಂಭ ಭಾರತದ ಜನತಂತ್ರವನ್ನು ಬಲಗೊಳಿಸಿದ ನಿಮ್ಮ ಪರಿಶ್ರಮಕ್ಕೆ ಮತ್ತೊಮ್ಮೆ ಧನ್ಯವಾದಗಳು!!!     

ಆದರೆ ಈ ಮಹಾ ಚುನಾವಣೆ ಇಷ್ಟು ಸುಸೂತ್ರವಾಗಿ, ಯಶಸ್ವಿಯಾಗಿ ನಡೆಯಬೇಕಿದ್ದರೆ ಅದಕ್ಕೆ ಅಸಂಖ್ಯಾತ ಜನರ ಕೊಡುಗೆಯಿದೆ, ಅನೇಕರ ದುಡಿಮೆಯಿದೆ.  ಚುನಾವಣೆಯ ಉಸ್ತುವಾರಿ ನೋಡಿಕೊಂಡು ಪ್ರತಿಯೊಂದೂ ಕೆಲಸದ ಜವಾಬ್ದಾರಿ ಹೊತ್ತುಕೊಂಡ ಚುನಾವಣಾ ಆಯೋಗಕ್ಕೆ, ಅದರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದ ಅಸಂಖ್ಯಾತ ಸರಕಾರೀ ನೌಕರರು, ಶಾಲಾ ಶಿಕ್ಷಕ ವರ್ಗದವರು, ದೂರ ದೂರದ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಅಕ್ಷರಶಃ ಹಗಲು ರಾತ್ರಿ ಸೇವೆ ಸಲ್ಲಿಸಿದೆ.  ಆಧುನಿಕ ತಂತ್ರಜ್ಞಾನದ ನೆರೆವಿನಿಂದ ಕಾಲಕಾಲಕ್ಕೆ ಅಗತ್ಯವಾದ ಎಲ್ಲ ಮಾಹಿತಿ-ಮಾರ್ಗದರ್ಶನಗಳನ್ನು ಪಾರದರ್ಶಕವಾಗಿ ನೀಡಿದೆ.   

ಮತಯಂತ್ರಗಳನ್ನೂ, ಇತರ ಪರಿಕರಗಳನ್ನೂ ಸಕಾಲಕ್ಕೆ ತಲುಪಿಸಿ ಚುನಾವಣಾ ಮುಗಿದ ಬಳಿಕ ಮತ್ತೆ ಅವರನ್ನೆಲ್ಲ ಗಮ್ಯ ಸ್ಥಾನ ತಲುಪಿಸುವ ವಾಹನ ಚಾಲಕರು ಮತ್ತು ಇತರ ಸಿಬ್ಬಂದಿಗಳು, ಚುನಾವಣೆ ಸುಸೂತ್ರವಾಗಿ ಯಾವುದೇ ಗಲಭೆ ಗೊಂದಲಗಳಿಲ್ಲದಂತೆ ನಡೆಯಲು ಸಹಾಯ ಮಾಡಿದ ಆರಕ್ಷಕ ಇಲಾಖೆಯ ಸಿಬ್ಬಂದಿಗಳು, ಭದ್ರತಾ ಪಡೆಗಳು, ಅರೆಸೈನಿಕ ಪಡೆಗಳು, ಮತ್ತು ಇವರೆಲ್ಲರ ಜೊತೆಗೆ ಅಷ್ಟೇ ಅಮೂಲ್ಯ ಸೇವೆ ಸಲ್ಲಿಸಿದ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆ ಸಹ ಮನನೀಯ.  

ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ ರಾಜಕೀಯ ಪಕ್ಷಗಳು, ಸ್ಪರ್ಧಿಗಳು, ಅವರನ್ನು ಬೆಂಬಲಿಸಿ ಕಳೆದ ಕೆಲವು ವಾರ ತಿಂಗಳಿನಿಂದ ಎಡೆಬಿಡದೆ, ದಣಿವರಿಯದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತ ಬಂಧುಗಳು, (ಅದರಲ್ಲೂ ವಿಶೇಷವಾಗಿ ನನ್ನ ಪಕ್ಷದ ಕಾರ್ಯಕರ್ತರು) ಮತ್ತು ಈ ಕೆಲವು ದಿನಗಳ ನಿರಂತರ ಕಷ್ಟಕರ ದುಡಿಮೆಯ ವೇಳೆಗೆ ಸಹಕರಿಸಿದ ಇವರೆಲ್ಲರ ಮನೆಯವರು, ಕುಟುಂಬಸ್ಥರು, ಹೀಗೆ ಮಹಾಚುನಾವಣೆ ಎಂಬ ಪ್ರಜಾಪ್ರಭುತ್ವದ ಈ ಬೃಹತ್ ಹಬ್ಬ ಯಶಸ್ಸಾಗಲು ಅಸಂಖ್ಯಾತ ಜನರ ಕೊಡುಗೆ ಇದೆ.  

ಹಾಗೆಯೇ ಲೋಕ ಶಿಕ್ಷಣ ನೀಡುವಲ್ಲಿ ಶ್ರಮಿಸಿದ ಮಾಧ್ಯಮಗಳ ಪ್ರಯತ್ನವು ಗಣನೀಯ.  ಹಾಗಾಗಿ ಯಶಸ್ಸಿನ ಶ್ರೇಯಸ್ಸೆಲ್ಲಾ ಇವರೆಲ್ಲರಿಗೂ ಸಲ್ಲಬೇಕು.  ಆದುದರಿಂದ ಇವರೆಲ್ಲರಿಗೂ, ಇವರಲ್ಲಿ ಪ್ರತಿಯೊಬ್ಬರಿಗೂ ನಾನು ಈ ಮೂಲಕ ನತಮಸ್ತಕನಾಗಿ ಧನ್ಯವಾದ ಸಲ್ಲಿಸುತ್ತೇನೆ.!! ಅಭಿನಂದನೆ ಅರ್ಪಿಸುತ್ತೇನೆ!!!

ಜೊತೆಗೆ ವೈಯುಕ್ತಿಕವಾಗಿ ನಾನು, ನನ್ನಲ್ಲಿ ನಂಬಿಕೆಯಿಟ್ಟು ನನ್ನನ್ನು ಆರನೆಯ ಬಾರಿಗೆ ಉತ್ತರ ಕನ್ನಡ ಸಂಸತ್ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಮಾಡಿದ ಭಾರತೀಯ ಜನತ ಪಕ್ಷದ ವರಿಷ್ಟರೆಲ್ಲರಿಗೂ, ಪಕ್ಷದ ಜಿಲ್ಲಾ ಪ್ರಮುಖರೆಲ್ಲರಿಗೂ, ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯದ ಇತರೆಲ್ಲ ಪದಾಧಿಕಾರಿಗಳು ಮತ್ತು ನಾಯಕರಿಗೂ, ಪಕ್ಷದ ರಾಷ್ಟ್ರಾಧ್ಯಕ್ಷ ಶ್ರೀ ಅಮಿತ್ ಷಾ ಅವರಿಗೂ, ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  

ಮತ್ತು ನನ್ನ ಜೊತೆಗೆ ಹೆಗಲೆಣೆಯಾಗಿ ಕೆಲಸ ಮಾಡಿದ ನನ್ನ ಎಲ್ಲ ಹಿತೈಷಿಗಳಿಗೂ, ಮಾರ್ಗದರ್ಶನ ಮಾಡಿದ ಹಿರಿಯರಿಗೂ, ಕುಟುಂಬ ಸದಸ್ಯರಿಗೂ, ನನ್ನ ಕಾರ್ಯಾಲಯದ ಸಿಬ್ಬಂದಿ ವರ್ಗಕ್ಕೂ, ಅಪಾರ ಅಭಿಮಾನಿಗಳಿಗೂ ಮತ್ತು ನನ್ನನ್ನು ಆಶಿರ್ವಾದಿಸಿದ ಉತ್ತರ ಕನ್ನಡ ಕ್ಷೇತ್ರದ ಮತದಾರ ಪ್ರಭುವಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ  ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ.

ಇಂತಿ ನಿಮ್ಮವ,

#ಅನಂತಕುಮಾರಹೆಗಡೆ

Related posts