Infinite Thoughts

Thoughts beyond imagination

ಬಸವಜಯಂತಿಯ ಶುಭಾಶಯಗಳು!

ಕಲ್ಯಾಣದಲ್ಲಿ ಕ್ರಾಂತಿ ಕಹಳೆ ಮೊಳಗಿಸಿದ ವೀರ ಶರಣ...  
ಅಣ್ಣ ಬಸವಣ್ಣನಿಗೆ ಜನುಮದಿನದ  ಶರಣು ಶರಣಾರ್ಥಿಗಳಣ್ಣ...! 
 

ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು. 
 
ವೇದೋಕ್ತವಾದ ಪ್ರಣವಸಹಿತ ಶಿವಪಂಚಾಕ್ಷರೀ ಮಂತ್ರವೇ ಶ್ರೇಷ್ಠ ಅಂತ ಬೋಧಿಸಿದ ಬಸವಣ್ಣ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿಯೇ ಸರಿ.  ಮೂಲತಃ ಶೈವ ಬ್ರಾಹ್ಮಣನೇ ಆದ ಬಸವಣ್ಣ ಆಗಿನ ಕಾಲದಲ್ಲಾಗಲೇ ಪ್ರಚಲಿತದಲ್ಲಿದ್ದ ಶೈವ ಧರ್ಮದ ಹಲವಾರು ಕವಲುಗಳ ಅಧ್ಯಯನ ಮಾಡಿದವರು.  ಆದರೆ ವರ್ಣಾಶ್ರಮ ಪದ್ಧತಿಯ ಕರಾಳ ರೂಪವಾಗಿ ಮಾರ್ಪಾಡುಗೊಂಡಿದ್ದ ಜಾತೀಯತೆ, ಮೇಲು-ಕೀಳು ಎಂಬ ಬೇಧ ಭಾವ, ಅಸ್ಪೃಶ್ಯತೆ, ಅಸಮಾನತೆ ಇವೆಲ್ಲವನ್ನೂ ಕಂಡು ರೋಸಿ ಹೋಗಿ ಸಮಾಜದಲ್ಲಿ ಸಮಾನತೆ ತರಬೇಕೆಂಬ  ಆಶಯದೊಂದಿಗೆ ಎಂಟು ನೂರು ವರ್ಷಗಳಿಗೂ ಹಿಂದೆಯೇ ಪ್ರಜಾತಂತ್ರ ವ್ಯವಸ್ಥೆಯ ಹೊಳಹುಗಳೊಂದಿಗೆ ಅನುಭವ ಮಂಟಪವನ್ನು ಸ್ಥಾಪಿಸಿದ ಶ್ರೇಷ್ಠ ದಾರ್ಶನಿಕ.  ಜಾತಿವ್ಯವಸ್ಥೆಯ ವಿರುದ್ಧ ಒಂದು ವ್ಯವಸ್ಥಿತ ಚಳವಳಿಯನ್ನೇ ಶುರು ಮಾಡಿದ ಬಸವಣ್ಣ ಅದಕ್ಕಾಗಿ ಶರಣರ ಒಂದು ಬಹುದೊಡ್ಡ ಗುಂಪನ್ನೇ ಕಟ್ಟಿದರು.  ಮಹಾಮನೆಯನ್ನು ಸ್ಥಾಪಿಸಿದರು.  ಪ್ರತಿಯೊಬ್ಬರ ಕೆಲಸವೂ ಶ್ರೇಷ್ಠವೇ, ಅದರಲ್ಲ್ಯಾವುದೇ ಮೇಲು-ಕೀಳು ಇಲ್ಲ, ಎಲ್ಲರೂ ಅವರವರ ಕೆಲಸದಲ್ಲೇ ಶಿವನನ್ನು ಕಾಣಬೇಕು... ಹಾಗಾಗಿ ಕಾಯಕವೇ ಕೈಲಾಸ ಅಂತ ಸಾರಿದ ಮಹಾತ್ಮ.  ಕೂಡಲಸಂಗಮನ ಹೆಸರಲ್ಲೇ ಆಧ್ಯಾತ್ಮಿಕತೆಯ ಜಟಿಲತೆಯನ್ನು ನಿವಾರಿಸಿ ಜನ-ಸಾಮಾನ್ಯರಿಗೂ ತಲುಪುವ ರೀತಿಯ ವಚನಗಳನ್ನು ಮಾತೃಭಾಷೆ ಕನ್ನಡಲ್ಲೇ ರಚಿಸಿದ ಮಹಾನುಭಾವ..!!
 
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ. 
 
 
ಎನ್ನುತ್ತಾ ಶಿವನನ್ನೇ ಆರಾಧಿಸುತ್ತಾ, ಶಿವನನ್ನು ಹೊರತು ಪಡಿಸಿ ಬೇರೇನೂ ತನಗೆ ಗೊತ್ತಿಲ್ಲವೆಂತ ಆಂತರ್ಯದ ತನ್ನ ಮುಗ್ಧತೆಯನ್ನೂ ಶಿವ ಭಕ್ತಿಯ ಪರಾಕಾಷ್ಠೆಯನ್ನೂ ಹೇಳಿಕೊಂಡ ಭಾವಜೀವಿ, ಭಕ್ತಿ ಭಂಡಾರಿ ಬಸವಣ್ಣ ತನ್ನ ಅನುಭವ ಮಂಟಪದ ಅನುಯಾಯಿಗಳಿಗೆ ಶಿವಭಕ್ತಿಯ ದಾರಿಯನ್ನು ತೋರಿದರು..!!
 
ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು.   
 
ಪಂಚಾಕ್ಷರೀ ಮಂತ್ರದ ಮೂಲಕ ಕೂಡಲಸಂಗಮನ ರೂಪದಲ್ಲಿ ಶಿವನ ಆರಾಧನೆ ಮಾಡುವುದು ತನ್ನ ಹಣೆಯಲ್ಲಿ ಬರೆದಿದೆ, ಇದುವೇ ವಿಧಿಲಿಖಿತ ಅಂತ ಭಾವುಕರಾಗುವ ಬಸವಣ್ಣ ಸಮ-ಸಮಾಜದ ತನ್ನ ಪರಿಕಲ್ಪನೆಯನ್ನು ನನಸು ಮಾಡಲು ಆನುಭಾವಿಕ, ಆಧ್ಯಾತ್ಮಿಕ ಜ್ಞಾನವನ್ನು ಜನ-ಸಾಮಾನ್ಯರಿಗೆ ದಾಟಿಸಲೆಂದೇ ವಚನಸಾಹಿತ್ಯ ರಚನೆಗೆ ಮೂಲಕಾರಣರಾದರು.  ಅನುಭವ ಮಂಟಪವೆಂಬ ಒಂದು ವಿಶಿಷ್ಟ ಪ್ರಜಾತಾಂತ್ರಿಕ ವ್ಯವಸ್ಥೆಯೊಳಗಿದ್ದುಕೊಂಡೇ ಶರಣರೆಲ್ಲರೂ ಲೋಕ ಕಲ್ಯಾಣಕ್ಕಾಗಿ ವಚನ ಭಂಡಾರವನ್ನು ಸೃಷ್ಟಿಸಿದರು.  ಕನ್ನಡ ಸಾಹಿತ್ಯ-ಲೋಕಕ್ಕೆ , ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದರು..!!
 
ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು,
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ ನೋಡಾ.
ತಾನಾವಾವ ಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೆ ಧನ್ಯ 
 
ಅಣ್ಣ ಬಸವಣ್ಣ ಅಕ್ಷಯ ತೃತೀಯ ಪರ್ವದಿನದಂದು ಹುಟ್ಟಿದರು, ಕನ್ನಡ ನಾಡಿನಲ್ಲೇ ಅವರ ಜನನವಾದದ್ದು ನಮ್ಮೆಲ್ಲರ ಭಾಗ್ಯ ವಿಶೇಷ.  ಹನ್ನೆರಡನೆಯ ಶತಮಾನದಲ್ಲೇ ದಲಿತ ಬ್ರಾಹ್ಮಣ ಅಂತರ್ಜಾತೀಯ ವಿವಾಹ ಮಾಡಿಸಿದ ಮಹಾನ್ ಕ್ರಾಂತಿಕಾರೀ ಪುರುಷ, ತಾನೇ ಸ್ಥಾಪಿಸಿದ ಶೂನ್ಯ ಪೀಠದಲ್ಲಿ ತನ್ನ ಸಮಕಾಲೀನ ಅನುಭಾವಿಗಳನ್ನು ಪ್ರತಿಷ್ಠಾಪಿಸಿದ ವಿರಳಾತಿ ವಿರಳ ಗುರುಶ್ರೇಷ್ಠ..!!
 
ಆದ್ಯರಿಗಲ್ಲದೆ ವೇದ್ಯವಾಗದು; ಮಾಣಿ ಭೋ, ಮಾಣಿ ಭೋ !
ಶಿವಭಕ್ತನೇ ಕುಲಜ,
ಕೈವರ್ತಗರ್ಭಸಂಭೂತಮಾರ್ಕಂಡೇಯಮಹಾಮುನಿಃ
ತಪಸಾ ಜಾಯತೇ ವಿಪ್ರಕುಲಂ ಜಾತಿರ್ನ ವಿದ್ಯತೇ
ಜಾತನಲ್ಲ ಅಜಾತನಲ್ಲ,
ಕೂಡಲಸಂಗನ ಶರಣರು ನಿಸ್ಸೀಮರಯ್ಯಾ
 
ತನ್ನ ಶರಣ ಸಂಕುಲದೊಡನೆ ಸಮಾಜದ ಅನಿಷ್ಠ ಅಂಗವಾಗಿದ್ದ ಜಾತಿ-ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವ ಛಲದಿಂದ ಪರಿವರ್ತನೆಯನ್ನು ತನ್ನ ಹೋರಾಟ ಮಾಡಿಕೊಂಡ ಬಸವಣ್ಣ, ಜನ್ಮತಃ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಎಂಬ ಸತ್ಯವನ್ನು ಪ್ರತಿಪಾದಿಸಿದರು.  ದೇವಾಲಯ ಪ್ರವೇಶಕ್ಕಿದ್ದ ನಿರ್ಬಂಧವನ್ನು ನಿವಾರಣೆ ಮಾಡಲಿಕ್ಕೋಸುಗ ದೇವಾಲಯವೇ ಬೇಡ, ಎನ್ನ ದೇಹವೇ ದೇಗುಲ ಅಂತ ದೇವರನ್ನೇ ಅಂಗೈಯಲ್ಲಿಟ್ಟುಕೊಂಡು ಎಲ್ಲರೂ ಸ್ವತಃ ಪೂಜಿಸುವ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಇಷ್ಟಲಿಂಗ ಪರಿಕಲ್ಪನೆಯೇ ಅತ್ಯಂತ ವಿಶಿಷ್ಟ!
 
ಇಂತ ಮಹಾನ್ ಸಂತ ಹುಟ್ಟಿದ್ದು ನಮ್ಮ ನಾಡು ಕರುನಾಡಲ್ಲಿ, ಸರ್ವ ಶ್ರೇಷ್ಠ ಆಧ್ಯಾತ್ಮಿಕ ವೈಚಾರಿಕ ಸಾಹಿತ್ಯ ಪ್ರಾಕಾರವಾದ "ವಚನ"ಗಳನ್ನೂ ರಚಿಸಿದ್ದು ನಮ್ಮ ಸಿರಿಗನ್ನಡ ಭಾಷೆಯಲ್ಲಿ ಎಂಬುದೇ ನಮ್ಮ ಹೆಮ್ಮೆ..!!  ಅಣ್ಣ ಬಸವಣ್ಣನ ಜನುಮದಿನ "ಬಸವಜಯಂತಿಯ" ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನರಿಗೂ ನಲ್ಮೆಯ ಶುಭಕಾಮನೆಗಳನ್ನು ಬಯಸುತ್ತೇನೆ.
 
ಶರಣು ಶರಣಾರ್ಥಿಗಳು ....!!!
#ಅನಂತಕುಮಾರಹೆಗಡೆ 

Related posts