Infinite Thoughts

Thoughts beyond imagination

ಫಣಿ ಚಂಡಮಾರುತದ ಭಾರೀ ಫೂತ್ಕಾರಕ್ಕೆ ಬೆದರಲಿಲ್ಲ ಭಾರತ ಸರಕಾರ...!

ಫಣಿ ಚಂಡಮಾರುತದ ಭಾರೀ ಫೂತ್ಕಾರಕ್ಕೆ ಬೆದರಲಿಲ್ಲ ಭಾರತ ಸರಕಾರ...! 

ವಿಪತ್ತು ನಿರ್ವಹಣೆಯ ರೀತಿಗೆ ವಿಶ್ವ ಸಂಸ್ಥೆಯೇ ಮಾಡಿತು ಹರ್ಷೋದ್ಘಾರ...! 
 
ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ 
 
 
ಅಂತ ಕುಮಾರವ್ಯಾಸ ವರ್ಣಿಸುವುದೇನೋ ಚೆಂದವೇ... "ಫಣಿ" ಅಂದರೆ ಆದಿಶೇಷ ನಾಗ, ಅಂತಹ ಹೆಸರನ್ನೇ, ಭಯಂಕರ ವೇಗದ ಭೀಕರ ಚಂಡಮಾರುತಕ್ಕೆ ಇಟ್ಟರೆ ... ?  ಮತ್ತು ಅಂತ ಭೀಕರ ಚಂಡಮಾರುತ ಭಾರತಕ್ಕೇ ದಾಳಿಯಿಟ್ಟರೆ..?  ಗಂಟೆಗೆ ಸರಾಸರಿ ಇನ್ನೂರು ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿಗೆ ಎದುರುಂಟೆ..?  ಮೊನ್ನೆ ಒಡಿಸ್ಸಾ ಕರಾವಳಿಗೆ "ಫಣಿ" ಹೆಸರಿನ ಈ ಚಂಡಮಾರುತ ದಾಳಿ ಮಾಡಿತು.  ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತಕ್ಕೆ ಇಂತ ಭಾರೀ ವೇಗದ ಭೀಕರ ಬಿರುಗಾಳಿ ಬಂದಿರಲೇ ಇಲ್ಲ...!!  ೧೯೯೯ ರಲ್ಲಿ ಒಡಿಸ್ಸಾಗೆ ಬಂದೆರಗಿದ್ದ  ಬಿರುಗಾಳಿಗೆ ಗಂಟೆಗೆ ಸರಾಸರಿ ಇನ್ನೂರೈವತ್ತು ಕಿಲೋಮೀಟರ್ ಭಯಂಕರ ವೇಗವಿತ್ತು ಮತ್ತು ಅದು ಊಹಿಸಲೂ ಆಗದಷ್ಟು ಜನ, ಜಾನುವಾರು, ಮೃಗ, ಪಕ್ಷಿಗಳ ಪ್ರಾಣಹಾನಿಯ ಜೊತೆಗೆ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ಧಕ್ಕೆಯುಂಟುಮಾಡಿತ್ತು.  ಅಂದಿನ ಆ ಚಂಡಮಾರುತದ ಬಿರುಸಿಗೆ ಸಿಕ್ಕಿ ಸತ್ತವರು ಸುಮಾರು ಹತ್ತು ಸಾವಿರ ಮಂದಿ!  ಒಡಿಸ್ಸಾದ ಜನಜೀವನ ಈ ಬಿರುಗಾಳಿಯ ರುದ್ರ ನರ್ತನಕ್ಕೆ ಸಿಲುಕಿ ಛಿದ್ರವಾಗಿತ್ತು...!   ಆ ಬಳಿಕವೂ ಆಗಾಗ ಇಂತ ಚಂಡಮಾರುತಗಳು ಬಂದವಾದರೂ ಅವಕ್ಕೆಲ್ಲ ಇಷ್ತು ವೇಗವಿರಲಿಲ್ಲ ಮತ್ತು ಅವೇನೂ ಇಷ್ಟೊಂದು ಪ್ರಮಾಣದ ಹಾನಿಯೆಸಗಿರಲಿಲ್ಲ.   ೨೦೧೪ ರಲ್ಲಿ ಒಡಿಸ್ಸಾಗೆ ಅಪ್ಪಳಿಸಿದ ಹುಡ್ ಹುಡ್ ಗಂಟೆಗೆ ಸುಮಾರು ಇನ್ನೂರು ಕಿಲೋಮೀಟರ್ ವೇಗವಿತ್ತಾದರೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡ ಕಾರಣಕ್ಕೆ ಜೀವಹಾನಿಯನ್ನು ಬಹಳ ಕಡಿಮೆ  ಪ್ರಮಾಣಕ್ಕೆ ನಿಯಂತ್ರಿಸಲಾಯಿತು.  ಹುಡ್ ಹುಡ್ ಗೆ ಸುಮಾರು ಎಂಭತ್ತು ನಾಗರೀಕರು ಮೃತಪಟ್ಟಿದ್ದರೆ, ಆ ಬಳಿಕ  ಕಳೆದ ವರ್ಷ ಬಂದೆರಗಿದ್ದ ತಿತ್ಲಿ ಚಂಡಮಾರುತಕ್ಕೆ ಅರವತ್ತು ಜನ ನಾಗರಿಕರು ಬಲಿಯೆಯಾಗಿದ್ದರು. 
 
೧೯೯೯ ರ ಹೊತ್ತಿಗೆ ತಂತ್ರಜ್ಞಾನ ಮುಂದುವರಿದಿರಲಿಲ್ಲ, ಉಪಗ್ರಹಗಳ ಚಿತ್ರಗಳೂ ಕೂಡ ಇರಲಿಲ್ಲ, ಹಾಗಾಗಿ ಅವು ಕರಾವಳಿ ಪ್ರದೇಶಕ್ಕೆ ಬಂದೆರಗುವ ನಿಖರ ಕಾಲಗಣನೆ ಮಾಡಲು ಸಾಧ್ಯವಿರುತ್ತಿರಲಿಲ್ಲ.  ಆದರೆ ಈಗ ಉಪಗ್ರಹಗಳ ಚಿತ್ರಗಳ ಜೊತೆಗೆ ಡಾಪ್ಲರ್ ರಾಡಾರ್ ಗಳಂಥ ಅತ್ಯಾಧುನಿಕ ತಂತ್ರಜ್ಞಾನವೂ ಇರುವುದರಿಂದ ನಮ್ಮ ವಿಜ್ಞಾನಿಗಳು ಈ ಬಾರಿ ಫಣಿ ಚಂಡಮಾರುತ ಬರುತ್ತಿರುವ ದಿಕ್ಕು, ವೇಗ ಮತ್ತು ಅದು ಕರಾವಳಿಗೆ ಬಂದೆರಗುವ ಸ್ಥಳ ಮತ್ತು ಸಮಯವನ್ನು ಅತ್ಯಂತ ಕರಾರುವಾಕ್ಕಾಗಿ ಕಂಡು ಹಿಡಿಯುವಲ್ಲಿ ಯಶಸ್ವಿಯಾದರು.  ಹಾಗಾಗಿ ಇಂದು ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಕಂಡು ಜಾಗತಿಕ ಹವಾಮಾನ ಸಂಸ್ಥೆಗಳೇ ಮೂಕವಿಸ್ಮಿತವಾಗಿ ಶ್ಲಾಘನೆ ವ್ಯಕ್ತಪಡಿಸಿವೆ..!!
 
ಬಂಗಾಳ ಕೊಲ್ಲಿಯಲ್ಲಿ ಫಣಿ ಚಂಡಮಾರುತ ಹುಟ್ಟುತ್ತಿದೆ ಅಂತ ನಮ್ಮ ಭಾರತೀಯ ಹವಾಮಾನ ಶಾಸ್ತ್ರಜ್ಞರಿಗೆ ಮೊನ್ನೆ ಏಪ್ರಿಲ್ ೨೫ ರಂದೇ ಖಚಿತ ಮಾಹಿತಿ ದೊರಕಿತ್ತು, ಮತ್ತು ಅದು ತಮಿಳುನಾಡು ಕರಾವಳಿಗೆ ಅಪ್ಪಳಿಸಬಹುದೆಂಬ ಅಂದಾಜು ಮಾಡಲಾಗಿತ್ತು.  ಆದರೆ ನಡುವೆ ತನ್ನ ಪಥ ಬದಲಿಸಿದ ಫಣಿ, ವೇಗ ವೃದ್ಧಿಸಿಕೊಳ್ಳುತ್ತಾ ಒಡಿಸ್ಸಾ ಕರಾವಳಿಯತ್ತ ಧಾವಿಸತೊಡಗಿತ್ತು.  ಕೂಡಲೇ ಕೇಂದ್ರ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ರಾಜ್ಯ ಸರಕಾರ ಈ ಭಾರೀ ಅಪಾಯವನ್ನು ಎದುರಿಸಲು ಸಜ್ಜಾಗತೊಡಗಿತ್ತು.  ಈ ಬಾರಿ ನೈಸರ್ಗಿಕ ವಿಪತ್ತುಗಳ ನಿರ್ವಹಣೆಗೆಂದೇ ವಿಶ್ವಸಂಸ್ಥೆ ೨೦೧೫ ರಲ್ಲಿ ನಿಗದಿ ಪಡಿಸಿದ ಸೆಂಡಾಯ್ ಫ್ರೇಮ್ ವರ್ಕ್ ಅನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಮೋದೀಜಿಯವರ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿತ್ತು ಮತ್ತು ಅದನ್ನು ಜಾರಿಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು.  ನೈಸರ್ಗಿಕ ವಿಪತ್ತುಗಳು ಉಂಟಾದಾಗ ಯಾವುದೇ ಜೀವಹಾನಿಯೂ ಸಂಭವಿಸಲೇ ಬಾರದು ಎಂಬ ಧ್ಯೇಯ ಇಟ್ಟುಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವ "Zero Casulty Approach" (ಶೂನ್ಯ ದುರ್ಘಟನೆ ಮಾರ್ಗ) ಅನುಸರಿಸಿದ ಕೇಂದ್ರ ಸರಕಾರ ವಿಜ್ಞಾನಿಗಳ ಸಹಾಯ ಪಡೆದು ಚಂಡಮಾರುತ ಒಡಿಸ್ಸಾ ಕರಾವಳಿಗಪ್ಪಳಿಸುವ ಖಚಿತ ಸಮಯ ಮತ್ತು ಸ್ಥಳದ ಮಾಹಿತಿಗಳನ್ನೆಲ್ಲಾ ಪಡೆದು ಭರದಿಂದ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು...!
 
ತಮ್ಮ ನಿರಂತರ ಚುನಾವಣಾ ಪ್ರಚಾರ ಕಾರ್ಯದ ನಡುವೆಯೂ ಸರಕಾರದ ಕೆಲಸ-ಕಾರ್ಯಗಳನ್ನು ಸಸೂತ್ರವಾಗಿ ನಿರ್ವಹಿಸುತ್ತಾ, ದಿನಕ್ಕೆ ಮೂರು-ನಾಲ್ಕು ಬೃಹತ್ ಪ್ರಚಾರ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ ಪ್ರಧಾನಮಂತ್ರಿ ಶ್ರೀ ಮೋದೀಜಿಯವರು ಸತತವಾಗಿ ಎಲ್ಲ ಸಂಬಂದಿಸಿದ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದರು.  Indian Meteorological Departmentನ ಮುಖ್ಯಸ್ಥರು ಮತ್ತು ವಿಜ್ಞಾನಿಗಳು, ಎನ್ ಡಿ ಆರ್ ಎಫ್. (National Disaster Response Force), ಎನ್ ಡಿ ಎಂ ಎ (National Disaster Management Authority), ಒಡಿಸ್ಸಾ ಸರಕಾರ, ಒಡಿಸ್ಸಾ ಮುಖ್ಯಮಂತ್ರಿ, ಬಂಗಾಳ ಸರ್ಕಾರ ಎಲ್ಲರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು, ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದರು.  ಚಂಡಮಾರುತ ಅಪ್ಪಳಿಸಲಿದ್ದ ಅಪಾಯಕಾರಿ ಸ್ಥಳಗಳಿಂದ ಲಕ್ಷಾಂತರ ಜನರನ್ನು ಬೇರೆ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೂಲಂಕುಷವಾಗಿ ಗಮನಿಸುತಿದ್ದು, ಪರಿಹಾರ ಕಾರ್ಯಗಳಿಗೆ ಯಾವುದೇ ತೊಡಕುಂಟಾಗಬಾರದೆಂದು ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಮುಂಗಡವಾಗಿಯೇ ಒಡಿಸ್ಸಾ ಸರಕಾರಕ್ಕೆ ಬಿಡುಗಡೆ ಮಾಡಿದ್ದರು.  ಒಂದು ವಾರದ ಹಿಂದೆಯೇ ಒಡಿಸ್ಸಾ ಜನರಿಗೆ ಈ ಚಂಡಮಾರುತದಿಂದ ಯಾವುದೇ ರೀತಿಯ ಅಪಾಯವಾಗದೇ ಇರಲಿ ಅಂತ ದೇಶದ ಜನರೆಲ್ಲಾ ಪ್ರಾರ್ಥಿಸುವಂತೆ ಟ್ವಿಟ್ಟರ್ ಮೂಲಕ ಕರೆಕೊಟ್ಟಿದ್ದರು.. !  
 
ಬರಲಿರುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಿ, ಅದನ್ನು ಎದುರಿಸಲು ಸಕಲ ವ್ಯವಸ್ಥೆ ಕೈಗೊಂಡು ಮತ್ತು ದುರಂತ ನಡೆದಲ್ಲಿ, ಕೂಡಲೇ ಸ್ಪಂದಿಸುವಂತೆ ಆರ್ಥಿಕವಾಗಿಯೂ ಸನ್ನದ್ಧರಾಗಿರುವ ಈ ದಿಟ್ಟ ಕ್ರಮ ಇನ್ನೆಲ್ಲಿಯಾದರು ಕಾಣಲು, ಕೇಳಲು ಸಾಧ್ಯವಿದೆಯೇ ಎಂಬ ಒಂದು ಪ್ರಶ್ನೆ ನನ್ನನು ಕಾಡುತ್ತಿದೆ..!!
 
ಹೌದು... ಸತತವಾಗಿ ದೇಶಾದ್ಯಂತ ಪ್ರವಾಸಮಾಡಿ ಅಸಂಖ್ಯಾತ ಪ್ರಚಾರ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿ ದಣಿದಿದ್ದರೂ, ಮೋದೀಜಿ ಒಂದೇ ಒಂದು ದಿನ ಸುಸ್ತು ಅಂತ ಮಲಗಲಿಲ್ಲ..!!  ಯಾವುದೊ ರೆಸಾರ್ಟ್ ನಲ್ಲಿ ಎಣ್ಣೆ ಹಚ್ಚಿಸಿಕೊಂಡು ಮಸಾಜ್ ಮಾಡಿಸುತ್ತಾ ಸಮುದ್ರ ತೀರದಲ್ಲಿ ಓಡಾಡಲಿಲ್ಲ...!!  ಆ ಮನುಷ್ಯ ದಣಿವರಿಯದೆ ಸತತವಾಗಿ ಭಾಜಪ ಪಕ್ಷದ ಗೆಲುವಿಗಾಗಿ ಹೇಗೆ ಪ್ರಚಾರ ಮಾಡಿದರೋ ಅದೇ ರೀತಿ ಪ್ರಧಾನ-ಮಂತ್ರಿಯಾಗಿಯೂ ತನ್ನ ಪಾಲಿನ ಕರ್ತವ್ಯಗಳನ್ನು ಅಷ್ಟೇ ಶ್ರದ್ಧಾ ಭಕ್ತಿಯಿಂದ ನಿರ್ವಹಿಸಿದರು.... !  ಮೋದೀಜಿಯವರ ದೈತ್ಯ ಶಕ್ತಿಯ ಮುಂದೆ ಬಹುಶ ಫೂತ್ಕರಿಸುತ್ತಾ ಹೆಡೆಯೆತ್ತಿಕೊಂಡು ಬಂದ ಫಣಿ ಚಂಡಮಾರುತವೂ ಬಾಲ ಮಡಿಚಿಕೊಂಡು ತೆಪ್ಪಗೆ ಹೋಯಿತು...!
 
ಫಣಿಯಂಥಾ  ಭಾರೀ ಬಿರುಗಾಳಿಯೇ ಬಂದರೂ ಯಾವುದೇ ದೊಡ್ಡ ಪ್ರಮಾಣದ ಜೀವ ಹಾನಿಯಾಗದಂತ ಪರಿಪೂರ್ಣ ವ್ಯವಸ್ಥೆಯನ್ನು ಕೇಂದ್ರ ಸರಕಾರದ ಸುಪರ್ದಿಯಲ್ಲಿ ಮುಂಚಿತವಾಗಿಯೇ  ಮಾಡಲಾಗಿತ್ತು.  ಸುಮಾರು ಹನ್ನೊಂದು ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂದರೆ ಅದೆಂತ ದೈತ್ಯ ಶಕ್ತಿ ಕಾರ್ಯಾಚರಣೆ ಮಾಡುತ್ತಿತ್ತು ಎಂದು ನೀವೇ ಲೆಕ್ಕಾಚಾರ ಮಾಡಬಹುದು..!!  ಇಷ್ಟು ಲಕ್ಷ ಜನರ ವಸತಿಗೆಂದೇ ಸುಮಾರು ನಾಲ್ಕು ಸಾವಿರ ರಕ್ಷಣಾ ಕೇಂದ್ರಗಳನ್ನು ಸಿದ್ಧವಾಗಿಡಲಾಗಿತ್ತು.  ಅದರಲ್ಲೂ ಸುಮಾರು ೮೮೦ ವಿಶೇಷವಾದ ರಕ್ಷಣಾ ಕೇಂದ್ರಗಳಿದ್ದವು.  ಇವುಗಳು ಅದೆಂತ ಬಿರುಗಾಳಿಯನ್ನೂ ತಡೆದು ಕೊಳ್ಳುವ ವಿಶೇಷವಾಗಿ ನಿರ್ಮಿಸಿದ್ದ ಆಶ್ರಯ ಕೇಂದ್ರಗಳಾಗಿದ್ದವು...!  ಇಲ್ಲಿಗೆ ಜನರನ್ನು ಸಾಗಿಸಲು ರೈಲು ಬಸ್ಸು ಸೇರಿದಂತೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.  ನಲವತ್ತಮೂರು ಸಾವಿರ ಸ್ವಯಂಸೇವಕರು ಮತ್ತು ಒಂದು ಸಾವಿರ ತುರ್ತುಪರಿಸ್ಥಿತಿ ನಿರ್ವಹಣಾ ಕಾರ್ಯಕರ್ತರು ಸೇವೆಗೆ ಸಿದ್ಧರಾಗಿದ್ದರು..!  ಜನಜಾಗೃತಿಗಾಗಿ ಟಿವಿ ಗಳಲ್ಲಿ ಸತತವಾಗಿ ಘೋಷಣೆಗಳು, ಎಚ್ಚರಿಗೆಗಳು ಮತ್ತು ರಕ್ಷಣಾ ಶಿಬಿರಗಳ ಮಾಹಿತಿಗಳು ಮೊಳಗುತ್ತಿದ್ದವು.  ಚಂಡಮಾರುತದ ಎಚ್ಚರಿಕೆಯನ್ನು ಮೆಸೇಜ್ ಗಳ ಮೂಲಕವೂ ಬಿತ್ತರಿಸಲಾಯಿತು, ಇದಕ್ಕೆಂದೇ ಪ್ರಸಾರಗೊಂಡ ಮೆಸೇಜುಗಳ ಸಂಖ್ಯೆ ಇಪ್ಪತ್ತಾರು ಲಕ್ಷ ...! 
 
ಅಂತೂ  ಮೊತ್ತ ಮೊದಲ ಬಾರಿಗೆ ಭಾರೀ  ಪ್ರಾಕೃತಿಕ ಗಂಡಾಂತರವೊಂದನ್ನು ಎದುರಿಸಲು ಕೇಂದ್ರ ಸರಕಾರವೊಂದು ಈ ರೀತಿ ವೈಜ್ಞಾನಿಕವಾಗಿ, ಯೋಜನಾಬದ್ಧವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ರೀತಿ,  ಇಡೀ ಸರಕಾರೀ ವ್ಯವಸ್ಥೆಯೇ ಮೈಕೊಡವಿ ಎದ್ದು ನಿಂತು ಕ್ಷಿಪ್ರವಾಗಿ ಕೆಲಸ ನಿರ್ವಹಿಸಿದ ರೀತಿ,  ಜೀವಹಾನಿ ತಡೆಗಟ್ಟಿದ ರೀತಿಗೆ ಇಡೀ ಜಗತ್ತಿನಿಂದಲೇ, ವಿಶ್ವಸಂಸ್ಥೆಯಿಂದಲೇ ಪಡೆದ ಮೆಚ್ಚುಗೆ... ಇದೆಲ್ಲವೂ ಸಾಧ್ಯವಾದದ್ದು ಅಮೋಘ ನಾಯಕತ್ವದಿಂದ, ದಣಿವರಿಯದ ದುಡಿಮೆಯಿಂದ ಮತ್ತು ಅದೆಲ್ಲಕ್ಕಿಂಥಾ ಹೆಚ್ಚಾಗಿ ಪ್ರಧಾನಮಂತ್ರಿ ಮೋದೀಜಿಯವರ  ಧೀಶಕ್ತಿ ಮತ್ತು ಕೇಂದ್ರ್ರ ಸರಕಾರದ ಇಚ್ಛಾಶಕ್ತಿಯಿಂದಲೇ...!!  ಸರ್ಕಾರಿ ವ್ಯವಸ್ಥೆ ಮತ್ತು ಆ ವ್ಯವಸ್ಥೆಯನ್ನು ಜನಸೇವೆಗಾಗಿಯೇ ಮಾರ್ಪಡಿಸಿದ ಸರ್ಕಾರಿ ಉದ್ಯೋಗಿಗಳಿಗೆ ನಮೋ ನಮಃ! 
 
ಒಡಿಸ್ಸಾ ಬಳಿಕ ಈ ಚಂಡಮಾರುತ ಬಂಗಾಳದ ಕಡೆ ತಿರುಗಿತು.  ಅಲ್ಲಿಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೂ ಪ್ರಧಾನ ಮಂತ್ರಿ ಮೋದೀಜಿಯವರು ಎರಡು ಮೂರು ಬಾರಿ ಫೋನ್ ಕರೆ ಮಾಡಿದರು.  ಆದರೆ ದೀದಿ ಮೋದೀಜಿಯವರ ಕರೆಗೆ ಉತ್ತರಿಸಲೇ ಇಲ್ಲ..!!  ಚಂಡಮಾರುತದಂತ ನೈಸರ್ಗಿಕ ವಿಪತ್ತೇ ತನ್ನ ರಾಜ್ಯದ ಕರಾವಳಿಗೆ ಅಪ್ಪಳಿಸುವ ಅಪಾಯಕರ ಹೊತ್ತಿನಲ್ಲೂ ಪ್ರಧಾನಮಂತ್ರಿಯೊಬ್ಬರು ತಮ್ಮ ಸಂವಿಧಾನದತ್ತ ಅಧಿಕಾರ ನಿರ್ವಹಣೆಗಾಗಿ, ಬಂಗಾಳದ ನಾಗರಿಕರ ಪ್ರಾಣ-ರಕ್ಷಣೆಯ ಮುತುವರ್ಜಿಯಿಂದ ಆ ರಾಜ್ಯದ ಮುಖ್ಯಮಂತ್ರಿಗೆ ಕರೆ ಮಾಡಿದರೆ, ಕನಿಷ್ಠ ಅದನ್ನು ಸ್ವೀಕರಿಸುವ ಸೌಜನ್ಯವನ್ನೇ ತೋರಿಸದ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಮಮತ ಬ್ಯಾನರ್ಜಿ ಎಂಬ ಆ ಕ್ಷುದ್ರ ಹೆಂಗಸಿಗೆ ತನ್ನ ಹೇಸಿಗೆ ರಾಜಕಾರಣವೇ ಮುಖ್ಯವಾಯಿತು.  ಇಂದು ಮೋದೀಜಿಯವರ ಮತ್ತು ಭಾರತ ಸರಕಾರದ ಕಾರ್ಯಕ್ಷಮತೆಗೆ ವಿಶ್ವ-ಸಂಸ್ಥೆಯೇ ಪರಾಕು ಹಾಕುತ್ತಿರುವಾಗ ಇಲ್ಲಿ ನಮ್ಮದೇ ದೇಶದೊಳಗಿರುವ ಕೊಳೆತ ಮನಸ್ಸುಗಳ ಪದರ-ಪದರದೊಳಗೂ ಮೋದೀ ದ್ವೇಷವೇ ಮಡುಗಟ್ಟಿದೆ... !!
 
#ಅನಂತಕುಮಾರಹೆಗಡೆ 

Related posts