Infinite Thoughts

Thoughts beyond imagination

ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಜಯಂತಿ

ಹಿಂದೂ ಧರ್ಮ ಪುನರುತ್ಥಾನ ಮಾಡಿದ ಶಂಕರಾಚಾರ್ಯ ಎಂಬ ಪುಣ್ಯ ಪುರು಼ಷ…!!

ಇಂದು ಆ ಮಹಾಮಹಿಮನ ಜನ್ಮದಿನ!!

ಶಂಕರ ಜಯಂತಿ ಆಚರಣೆಯ ಹರುಷ ಎಲ್ಲರದಾಗಲಿ!!!

ಕೇರಳದ ಕಾಲಡಿಯಲ್ಲಿ ಜನಿಸಿದ ಶ್ರೀ ಶಂಕರಾಚಾರ್ಯರು, ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಸಂಪೂರ್ಣ ವೇದಾಧ್ಯಯನ, ಎಲ್ಲಾ ಶಾಸ್ತ್ರಾಧ್ಯಯನಗಳನ್ನು ಪೂರೈಸಿ ಸನ್ಯಾಸ ಸ್ವೀಕರಿಸಿ ಪರಿವ್ರಾಜಕರಾಗಿ ಭರತಖಂಡದುದದ್ದಕ್ಕೂ ಸಂಚರಿಸಿ ಬೌದ್ಧ ಧರ್ಮವನ್ನು ಖಂಡಿಸಿ ಹಿಂದೂ ಧರ್ಮವನ್ನು ಪುನಃಸ್ಥಾಪನೆ ಮಾಡಿದ ಮಹಾತ್ಮ. ಕಾಲಡಿಯ ಈ ಯುವ ಸನ್ಯಾಸಿ ತಮ್ಮ ಸಮಕಾಲೀನ ಪಂಡಿತರೆಲ್ಲರನ್ನೂ ತರ್ಕ ವಾದಗಳಲ್ಲಿ ಸೋಲಿಸಿ ತಮ್ಮ ಕಾಲಡಿಗೆರಗುವ ಹಾಗೆ ಮಾಡಿದ್ದೆಲ್ಲಾ ಪವಾಡ ಸದೃಶ ಸಂಗತಿಗಳೇ.

ಶಂಕರಾಚಾರ್ಯರ ಜನನ ವಿಭವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯಂದು ಆಯಿತೆಂದು ಕೆಲವರ ವಾದವಾದರೆ, ಇನ್ನೂ ಕೆಲವರು ಪಂಚಮೀ ತಿಥಿಯಂದು ಅಂತ ಹೇಳುತ್ತಾರೆ.! ಇನ್ನೂ ಕೆಲವರು ಅದು ವಿಭವ ಸಂವತ್ಸರ ಅಲ್ಲ ನಂದನ ಸಂವತ್ಸರ ಅಂತನ್ನುತ್ತಾರೆ. ಪಾಶ್ಚಾತ್ಯ ಇತಿಹಾಸಕಾರರು ಶಂಕರಾಚಾರ್ಯರ ಜನನ ಕ್ರಿಸ್ತ ಶಕ 788 ನೇ ಇಸವಿ ಅಂದರೆ ಎಂಟನೆಯ ಶತಮಾನ ಅಂತ ಅನ್ನುತ್ತಾರೆ. ಆದರೆ ಈ ಶಂಕರಾಚಾರ್ಯರೇ ಬೇರೆ. ಅವರು ಕಾಲಡಿಯ ಶಂಕರರಲ್ಲ, ಬದಲಿಗೆ ಕಾಂಚಿ ಕಾಮಕೋಟಿ ಪೀಠದ 38ನೇ ಪೀಠಾಧಿಪತಿ ಅಭಿನವ ಶಂಕರಾಚಾರ್ಯರು ಎನ್ನುವ ವಾದವಿದೆ.

ಶಂಕರಾಚಾರ್ಯ ಎಂಬ ಹೆಸರನ್ನೇ ಹೊಂದಿದ್ದ ಹಲವಾರು ಜ್ಞಾನಿಗಳು ಬೇರೆ ಬೇರೆ ಕಾಲಮಾನದಲ್ಲಿ ಜನಿಸಿರುವುದರಿಂದ, ಮತ್ತು ಪಾಶ್ಚಾತ್ಯ ಸಂಶೋಧಕರೆಲ್ಲಾ ಈ ಒಂದೇ ಹೆಸರಿನ ಸನ್ಯಾಸಿಗಳ ಬೇರೆ ಬೇರೆ ಕಾಲಘಟ್ಟಗಳನ್ನು ಅಂದಾಜು ಮಾಡಿ ವಿಂಗಡಿಸಲು ವಿಫಲವಾದುದರಿಂದ ಈ ಎಲ್ಲಾ ಗೊಂದಲಗಳುಂಟಾಗಿದೆ.
ಹಾಗಾಗಿಯೇ ಮೂಲ ಮತ್ತು ಮೊದಲ ಶಂಕರಾಚಾರ್ಯರನ್ನು ಗುರುತಿಸುವ ಸಲುವಾಗಿಯೇ ಆದಿಶಂಕರಾಚಾರ್ಯ ಎನ್ನುವ ಗುರುತನ್ನು ನೀಡಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ, ಹಾಗೂ ಸ್ಕಂದ ಮುಂತಾದ ಆರು ಮತಗಳನ್ನು ಒಗ್ಗೂಡಿಸಿ ಷಣ್ಮತ ಸ್ಥಾಪನೆ ಮಾಡಿ ವೈದಿಕ-ಧರ್ಮವನ್ನು ಪುನರುತ್ಥಾನ ಮಾಡಿದ ಕೀರ್ತಿ ಆದಿ ಶಂಕರರಿಗೆ ಸಲ್ಲುತ್ತದೆ. ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿಯೇ ನಾಲ್ಕು ಮಠಗಳನ್ನು ಸ್ತಾಪಿಸಿದರು. ಅವುಗಳ ಪೈಕಿ ದಕ್ಷಿಣಾಮ್ನಾಯ ಶಾರದಾ ಪೀಠ ನಮ್ಮ ರಾಜ್ಯದ ಶೃಂಗೇರಿಯಲ್ಲಿರುವುದು ನಮ್ಮೆಲ್ಲರ ಭಾಗ್ಯ ವಿಶೇಷ.

ಆದಿ ಶಂಕರರ ಕಾಲ-ಮಾನ ಈಗ ಪ್ರಚಲಿತದಲ್ಲಿರುವ ಕ್ರಿ.ಶ. ಎಂಟನೇ ಶತಮಾನವಲ್ಲ, ಬದಲಿಗೆ ಆದಿ ಶಂಕರರು ಸುಮಾರು ಸಾವಿರದಿನ್ನೂರು ವರ್ಷಗಳಷ್ಟು ಹಿಂದಿನವರು ಅಂದರೆ ಕ್ರಿಸ್ತ ಪೂರ್ವ ಆರನೆಯ ಶತಮಾನದವರು ಎಂಬ ವಾದವಿದೆ. ಶಂಕರರ ಸಮಕಾಲೀನರಾದ ಚಿತ್ಸುಖಾಚಾರ್ಯರ ಬೃಹತ್ ಶಂಕರ ವಿಜಯ, ಚತುರಾಮ್ನಾಯ ಪೀಠಗಳಲ್ಲಿರುವ ದಾಖಲೆಗಳು, (ಈ ನಾಲ್ಕೂ ಪೀಠಗಳು ಕ್ರಿಸ್ತ ಪೂರ್ವದಲ್ಲೇ ಸ್ಥಾಪಿತವಾದವು ಎಂಬ ವಾದಕ್ಕೆ ದಾಖಲೆಗಳ ಆಧಾರ ಇದೆ) ಇದಕ್ಕೆ ಪೂರಕವಾಗಿ ಕಾಶ್ಮೀರ ಮತ್ತು ನೇಪಾಳ ರಾಜಪರಂಪರೆಯ ದಾಖಲೆಗಳು ಕೂಡಾ ಆದಿಶಂಕರರ ಕಾಲಮಾನ ಕ್ರಿಸ್ತ ಪೂರ್ವ ಅಂತಲೇ ಸಂಕೇತಿಸುತ್ತದೆ! ಈ ಎಲ್ಲಾ ಆಧಾರಗಳನ್ನು ಕಲೆಹಾಕಿದಾಗ ನಮಗೆ ಆದಿ ಶಂಕರರು ಕ್ರಿಸ್ತ ಪೂರ್ವ 509 ರಲ್ಲಿ ಎಂಬುದು ಖಚಿತವಾಗುತ್ತದೆ!

ಅಂದರೆ ನಾವು ಈಗ ಆದಿಶಂಕರರ ಜನನ ಕ್ರಿಸ್ತ ಶಕ ಎಂಟನೆಯ ಶತಮಾನ ಅಂತ ನಂಬುತ್ತೇವೆಯೋ, ಅದಕ್ಕಿಂತ ಸಾವಿರದ ಇನ್ನೂರು ವರ್ಷ ಹಿಂದೆಯೇ ಆದಿಶಂಕರಾಚಾರ್ಯರು ಹುಟ್ಟಿದ್ದರಾ..? ಹೌದು ಎನ್ನುತ್ತವೆ ದಾಖಲೆಗಳು ಮತ್ತು ಪುರಾವೆಗಳು! ಹಾಗಾಗಿ ಈಗ ನಾವು ಕಲಿಯುತ್ತಿರುವ ಪಾಶ್ಚಾತ್ಯ ಮತ್ತು ಎಡಪಂಥೀಯ ಇತಿಹಾಸಕಾರರು ರಚಿಸಿದ ಸುಳ್ಳು ಇತಿಹಾಸವನ್ನು ಪೊಳ್ಳು ಚರಿತ್ರೆಯನ್ನು ಬಿಟ್ಟು ಹೊಸ ಇತಿಹಾಸವನ್ನು ಬರೆಯಬೇಕಿದೆ, ಹಳೆ ಚರಿತ್ರೆಯನ್ನು ತಿದ್ದಬೇಕಿದೆ, 
ಯಾರೇನೇ ಮಾಡಲಿ, ಇತಿಹಾಸವನ್ನೆಷ್ಟೇ ತಿರುಚಲಿ, ಆದಿಶಂಕರರ ಹುಟ್ಟಿದ ದಿನಾಂಕ ವರ್ಷವನ್ನಷ್ಟೇ ತಿದ್ದಬಹುದೇ ವಿನಃ ಅವರ ಅಮೋಘ ಸಾಧನೆಯನ್ನಲ್ಲ!!

ಹಾಗಾಗಿ ಈ ದೇಶದಲ್ಲಷ್ಟೇ ಅಲ್ಲದೆ ಪ್ರಪಂಚದಲ್ಲೇ ಇವತ್ತು ಸನಾತನ ಹಿಂದೂ ಧರ್ಮ ಉಳಿದು ಹೆಮ್ಮರವಾಗಿ ಬೆಳೆದಿದೆಯೆಂದರೆ ಅದಕ್ಕೆ ಆಚಾರ್ಯ ಶ್ರೀ ಆದಿಶಂಕರರಂತ ಮಹಾಮಹಿಮರ ಮಹತ್ತರ ಸಾಧನೆಯೆ ಕಾರಣ. ಅಂತ ಪುಣ್ಯ ಪುರುಷರ ಜನುಮದಿನದ ಈ ಶುಭಸಂದರ್ಭದಲ್ಲಿ ನಾಡಿನ ಜಗತ್ತಿನ ಅಷ್ಟೂ ಹಿಂದೂ ಬಾಂಧವರಿಗೆ ಕೇಸರೀ ಪ್ರಣಾಮಗಳು ….

 

Related posts