Infinite Thoughts

Thoughts beyond imagination

ರಾಷ್ಟ್ರೀಯ ತಂತ್ರಜ್ಞಾನ ದಿವಸದ ಹಾರ್ದಿಕ ಶುಭಕಾಮನೆಗಳು!

೧೯೯೮ರ ಮೇ ೧೧ರಂದು ಸರಣಿ ಅಣುಬಾಂಬುಗಳ ಸ್ಪೋಟಕ್ಕೆ ಜಗತ್ತೇ ಅದುರಿ ಹೋಯಿತು..!! 

ಭಾರತದ  ಅಣು ತಂತ್ರಜ್ಞಾನದ ಶ್ರೇಷ್ಠತೆ ಎಂಥದ್ದು ಎಂದು ಪ್ರಪಂಚಕ್ಕೆ ಅರಿವಾಯಿತು...!!! 

 

೧೯೯೮ರ ಮಾರ್ಚ್ ೧೯ನೇ ತಾರೀಖು ವಾಜಪೇಯಿ ಬಹುಮತದೊಂದಿಗೆ ಸರಕಾರ ರಚಿಸಿ ಪ್ರಧಾನಿಯಾದರು.  ಅದಾಗಿ ಎರಡೇ ತಿಂಗಳೊಳಗೆ ಭಾರತ ಐದು ಸರಣಿ ಅಣು ಬಾಂಬುಗಳನ್ನು ಸ್ಪೋಟಿಸಿ ಇಡೀ ವಿಶ್ವವನ್ನೇ ದಂಗುಬಡಿಸಿತ್ತು...!  ಈ ಮೂಲಕ ಅಣ್ವಸ್ತ್ರ ತಂತ್ರಜ್ಞಾನ ಹೊಂದಿದ ಜಗತ್ತಿನ ಆರನೆಯ ರಾಷ್ಟ್ರವೆಂದು ಪ್ರಪಂಚಕ್ಕೇ  ಸಾರಿ ಹೇಳಿತು!  ೧೯೭೪ರಲ್ಲಿ  ಪ್ರಥಮ ಭಾರಿಗೆ ಪರೀಕ್ಷಾರ್ಥ ಅಣುಸ್ಫೋಟ ನಡೆಸಿದ ಬಳಿಕ ೮೦ರ ದಶಕದಲ್ಲಿ ಮತ್ತು ೯೦ರ ದಶಕದಲ್ಲಿ ಮತ್ತೊಮ್ಮೆ ಅಣುಸ್ಫೋಟ ನಡೆಸಲು ಭಾರತ ಪ್ರಯತ್ನಿಸಿತ್ತಾದರೂ ಅಮೆರಿಕ ಮುಂತಾದ ಬಲಿಷ್ಠ ರಾಷ್ಟ್ರಗಳ ಗೂಢಚಾರಿಕಾ ಉಪಗ್ರಹಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದೇ ಈ ದೇಶಗಳ ಬೆದರಿಕೆಗೆ ಜಗ್ಗಿ ಭಾರತ ಅಣ್ವಸ್ತ್ರ ಪರೀಕ್ಷೆಯನ್ನೇ ಮಾಡಿರಲಿಲ್ಲ.  ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹಿನ್ನಡೆಯುಂಟು ಮಾಡಿತ್ತು.  ಆದರೆ ಅಟಲ್ ಜೀಯ ಯೋಚನೆಗಳೇ ಬೇರೆ ರೀತಿಯಿತ್ತು! ಮತ್ತು ಅವರ ಯೋಜನೆಗಳು ಕೂಡ ಅತ್ಯಂತ ತ್ವರಿತ ಮತ್ತು ಅತೀ ರಹಸ್ಯಮಯವಾಗಿತ್ತು.

ಭಾರತೀಯ ಅಣು ಶಾಸ್ತ್ರಜ್ಞರು ಕಳೆದ ಮೂರು ದಶಕಗಳಿಂದಲೂ ಆಧುನಿಕ ಅಣು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಲೇ ಇದ್ದರು.  ಇತ್ತ ಡಿ ಆರ್ ಡಿ ಓ ವಿಜ್ಞಾನಿಗಳೂ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿಗಳ ವಿನ್ಯಾಸ, ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.  ಈ ಎಲ್ಲ ವಿಜ್ಞಾನಿಗಳಿಗಿದ್ದ ಒಂದೇ ಮಹತ್ತರ ಆಸೆಯೆಂದರೆ ತಮ್ಮ ಸಂಶೋಧನೆಗಳನ್ನು ಪರೀಕ್ಷೆಗೊಡ್ಡುವುದು ಮತ್ತು ಈ ಪರೀಕ್ಷೆಗಳಿಂದ ಬರುವಂಥ ಫಲಿತಾಂಶದ ಅಂಕಿ-ಅಂಶಗಳ ಆಧಾರದ ಮೇಲೆ ಇನ್ನಷ್ಟು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.  ಆದರೆ ದುರಾದೃಷ್ಟವಶಾತ್ ದೇಶ  ಆಳುವವರಲ್ಲಿದ್ದ ದೂರದೃಷ್ಟಿಯ ಕೊರತೆ ಮತ್ತು ಬಲಾಢ್ಯ ದೇಶಗಳ ಭಯದಿಂದ ಈ ಪರೀಕ್ಷಾ ಸ್ಫೋಟಗಳನ್ನು ನಡೆಸಲು ಸಾಧ್ಯವಾಗಲಿಲ್ಲ.  ಆದರೆ ತಾವು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುಂಚಿತವಾಗಿಯೇ ಅಟಲ್ ಜೀ ಭಾರೀ ದೂರದೃಷ್ಟಿಯ ನಿರ್ಧಾರ ಮಾಡಿದ್ದರು.  ಹಾಗಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು ಭಾರತೀಯ ಅಣು ವಿಜ್ಞಾನಿಗಳೊಂದಿಗೆ ಮತ್ತು ರಕ್ಷಣಾ ಸಂಶೋಧನಾ ವಿಜ್ಞಾನಿಗಳೊಂದಿಗೆ ಈ ಬಗ್ಗೆ ಚರ್ಚಿಸಿದರು.  ಕೇವಲ ಮೂರು ವರ್ಷಗಳ ಕೆಳಗೆ ೧೯೯೫ರಲ್ಲಿ ಪ್ರಧಾನಿ ಪಿ ವಿ ನರಸಿಂಹರಾಯರು,  ಈ ಹಿಂದೆ ಇಂದಿರಾ ಕಾಲದಲ್ಲಿ  ಅಣುಪರೀಕ್ಷೆ ಮಾಡಿದ್ದ ರಾಜಸ್ತಾನದ ಥಾರ್  ಮರುಭೂಮಿಯ ಪೋಕ್ರಾನ್ ನಲ್ಲೆ ಮತ್ತೊಮ್ಮೆ ಅಣುಪರೀಕ್ಷೆ ನಡೆಸಲು ಯೋಜಿಸಿ ಕಾರ್ಯ ಶುರು ಮಾಡಿದ್ದರೂ, ಈ ಎಲ್ಲ ಚಟುವಟಿಕೆಗಳು ಅಮೆರಿಕದ ಗೂಢಚರ್ಯೆ ಉಪಗ್ರಹಗಳ ಕಣ್ಣಿಗೆ ಬಿದ್ದು, ಭಾರತದ ಗುಟ್ಟೆಲ್ಲಾ ಬಯಲಾಗಿತ್ತು.  ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ತೀವ್ರ ರೀತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಒತ್ತಡ ಹೇರಿದ್ದರಿಂದ ಪಿ ವಿ ನರಸಿಂಹರಾಯರು ಅಣುಸ್ಫೋಟ ಯೋಜನೆಯನ್ನು ತಣ್ಣಗೆ ಕೈಬಿಟ್ಟರು. 

ಆದರೆ ಇದನ್ನೆಲ್ಲಾ ಗಮನಿಸುತ್ತಾ ಇದ್ದ ಮಹಾಚತುರ ವಾಜಪೇಯಿ ಮೂರು ವರ್ಷದ ಬಳಿಕ ತಾವು ಅಧಿಕಾರಕ್ಕೆ ಬಂದ  ಮೊದಲಿಗೆ ಕೈಗೆತ್ತಿಕೊಂಡದ್ದೇ ಈ ಅಣು ಪರೀಕ್ಷೆಯ ವಿಚಾರವನ್ನು. ಯಾಕೆಂದರೆ ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಹೊಸ ಸರಕಾರದ ಹೊಸ ಪ್ರಧಾನಿ, ಪಟ್ಟಕ್ಕೇರಿದ ಒಂದೆರಡು  ತಿಂಗಳಲ್ಲೇ ಇಂತ ಭಾರೀ ಸಾಹಸಕ್ಕೆ ಕೈಹಾಕಲಾರ, ಯಾಕೆಂದರೆ ಇದಕ್ಕೆಲ್ಲಾ ತೀವ್ರತರದ ತಯಾರಿ ಬೇಕಾಗುತ್ತದೆ, ಆದ ಕಾರಣ ಅಧಿಕಾರಕ್ಕೇರಿದ ಈ ಅಲ್ಪ ಸಮಯದಲ್ಲಿ ಅಣುಪರೀಕ್ಷೆಯಂತ ನಿರ್ಧಾರ ಕೈಗೊಳ್ಳುವುದಾಗಲೀ, ಪರೀಕ್ಷೆ ನಡೆಸುವುದಾಗಲೀ ಅಸಾಧ್ಯ ಅಂತ ಎಲ್ಲರೂ ಭಾವಿಸುವುದು ಸಹಜವಾಗಿತ್ತು.  ಈ ಸಮಯವನ್ನೇ ವಾಜಪೇಯಿ ಉಪಯೋಗಿಸಿ ಕೊಂಡು ಬಿಟ್ಟರು!  ಅತ್ಯಂತ ರಹಸ್ಯವಾಗಿ ಪರೀಕ್ಷೆಯ ತಯಾರಿಯನ್ನು ಭಾರೀ ತುರುಸಿನಿಂದ ಕೈಗೊಳ್ಳಲಾಯಿತು!  ಅಂದಿನ ಡಿ ಆರ್ ಡಿ ಓ ಮುಖ್ಯಸ್ಥ ಡಾ. ಅಬ್ದುಲ್ ಕಲಾಂ, ಅಣು ವಿಜ್ಞಾನಿ ಆರ್ ಚಿದಂಬರಂ ಜೊತೆಗೆ ಅಟಲ್ ಜೀ ಚರ್ಚೆ ಆರಂಭಿಸಿದರು. ಚಿದಂಬರಂ ೧೯೭೪ ರಲ್ಲಿ ಭಾರತ ನಡೆಸಿದ ಪ್ರಥಮ ಅಣುಪರೀಕ್ಷೆಯ ಉಸ್ತುವಾರಿಯನ್ನೂ ವಹಿಸಿದ್ದ ಅನುಭವಿಯಾದರೆ,  ಡಾ. ಕಲಾಂ ಅಣ್ವಸ್ತ್ರ ಒಯ್ಯುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊತ್ತಿದ್ದ ವಿಜ್ಞಾನಿ!  ಭಾರತೀಯ ಅಣು ವಿಜ್ಞಾನಿಗಳು, ಅಣುಶಕ್ತಿ ಇಲಾಖೆಯ ತಂತ್ರಜ್ಞರು ಡಿ ಆರ್ ಡಿ ಓ ದಲ್ಲಿನ ವಿಜ್ಞಾನಿಗಳು ಮತ್ತು ತಂತ್ರಜ್ಞರು ಎಲ್ಲರೂ ಬಹಳಷ್ಟು ವರ್ಷಗಳಿಂದ ಇಂತದ್ದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ತಾವು ಸತತವಾಗಿ ಸಂಶೋಧನೆ ನಡೆಸಿ ಅಭಿವೃದ್ಧಿ ಪಡಿಸಿದ್ದ ತಂತ್ರಜ್ಞಾನ, ಉಪಕರಣಗಳನ್ನು ಪರೀಕ್ಷೆಗೊಡ್ಡುವ ಅವಕಾಶವೇ ಸಿಗದೇ, ಬೇರೆ ದೇಶಗಳ ವಿಜ್ಞಾನಿಗಳು ಅಣುವಿಜ್ಞಾನದಲ್ಲಿ ಬಹಳ ವೇಗದಲ್ಲಿ ಮುಂದುವರಿಯುತ್ತಿರುವಾಗ ನಾವು ಭಾರತೀಯರು ಮಾತ್ರ ಹಿಂದುಳಿಯುವಂಥ ಸ್ಥಿತಿ ಉಂಟಾಗಿತ್ತು.  ಹಾಗಾಗಿ ಅಣು ಪರೀಕ್ಷೆ ಅತ್ಯಂತ ಜರೂರಾಗಿ ಆಗಲೇಬೇಕಿತ್ತು. 

 

ಆದರೆ ಅಮೆರಿಕ ಮತ್ತಿತರ ಬಲಾಢ್ಯ ರಾಷ್ಟ್ರಗಳ ಉಪಗ್ರಹಗಳ ಕಣ್ಣು ತಪ್ಪಿಸಿ ಈ ಕಾರ್ಯವನ್ನು ಸಾಧಿಸುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು.  ಹಿಂದಿನ ಸರಕಾರಗಳು ಪ್ರಯತ್ನಿಸಿ ಸೋತುಹೋದ ಉದಾಹರಣೆಯೂ ಇತ್ತು.  ವಾಜಪೇಯಿ ಚುನಾವಣೆ ಗೆಲ್ಲುವುದಕ್ಕೂ ಮೊದಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ರಾಷ್ಟ್ರೀಯ ಭದ್ರತೆಯ ವಿಷಯ ಬಂದರೆ ಅಣ್ವಸ್ತ್ರ ಸಹಿತ ಎಲ್ಲಾ ಸಾಧ್ಯತೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಅಂತಲೇ ಹೇಳಿದ್ದ ವಾಜಪೇಯಿ ಪ್ರಧಾನಿಯಾಗಿ ಹತ್ತೇ ದಿನಗಳ ಒಳಗೆ ಈ ಕುರಿತು ಅಣು ವಿಜ್ಞಾನಿಗಳಲ್ಲಿ ಮಾತಾಡಿದ್ದರು.  ಬಹಳ ತುರ್ತಾಗಿ ಅಣು ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದರಿಂದ ಸಮರೋಪಾದಿಯಲ್ಲಿ ಸಿದ್ಧತೆಗಳಾಗಬೇಕಿತ್ತು.  ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ರಾಜಸ್ತಾನದ ಥಾರ್ ಮರುಭೂಮಿಯ ಪೋಕ್ರಾನ್ ನಲ್ಲೆ ಈ ಬಾರಿಯೂ ಪರೀಕ್ಷೆ ನಡೆಸಬೇಕಿತ್ತು. ಆದರೆ ಆ ಸ್ಥಳದ ಮೇಲೆ ಅಮೆರಿಕದ ನಾಲ್ಕು ಅತ್ಯಾಧುನಿಕ ಗೂಢಚರ್ಯ ಉಪಗ್ರಹಗಳ ಕಣ್ಣಿತ್ತು.  ಹಾಗಾಗಿ ಅಲ್ಲಿ ಏನೇ ಚಟುವಟಿಕೆ ನಡೆಸಿದ್ದರೂ ಅಮೆರಿಕದ ಗೂಢಚಾರರ ದೃಷ್ಟಿಗೆ ಬೀಳುತ್ತಿತ್ತು. ಆದುದರಿಂದ  ಕೇವಲ ರಾತ್ರಿ ಹೊತ್ತು ಮಾತ್ರ ಕೆಲಸ ನಿರ್ವಹಿಸಬೇಕಿತ್ತು. ಭೂಮಿಯೊಳಗೆ ಆಳದಲ್ಲಿ ಅಣ್ವಸ್ತ್ರ ಸ್ಫೋಟಿಸಿ ಪರೀಕ್ಷೆ ನಡೆಸಬೇಕಿದ್ದರೆ ಐನೂರು - ಆರುನೂರು ಫೀಟ್ ಆಳದ ಸುರಂಗ ಕೊರೆಯಬೇಕಿತ್ತು. ಒಟ್ಟು   ಐದು ಸುರಂಗಗಳ ಅಗತ್ಯವಿತ್ತು. ಇಂತ ಕ್ಲಿಷ್ಟ ಕೆಲಸವನ್ನು ನಿರ್ವಹಿಸಲಿಕ್ಕಾಗಿಯೇ ಭಾರತೀಯ ಸೈನ್ಯದ ಕಾರ್ಪ್ಸ್ ಆಫ್ ಎಂಜಿನೀಯರ್ಸ್ ನ ೫೮ನೇ ರೆಜಿಮೆಂಟ್ ಅನ್ನು ಈ ಕೆಲಸಕ್ಕಾಗಿ ಆಯ್ಕೆ ಮಾಡಲಾಯಿತು.  ಕರ್ನಲ್ ಗೋಪಾಲ್ ಕೌಶಿಕ್ ನೇತೃತ್ವದ ತಂಡ ಪೋಕ್ರಾನ್ ನಲ್ಲಿ ಅಣುಸ್ಫೋಟದ ಸುರಂಗಗಳನ್ನು ಸಿದ್ಧಪಡಿಸುವ ಕಾರ್ಯದ ಉಸ್ತುವಾರಿ ವಹಿಸಿಕೊಂಡು ಅಮೆರಿಕದ ಉಪಗ್ರಹಗಳ ಕಣ್ಣು ತಪ್ಪಿಸಿ ಯಶಸ್ವಿಯಾಗಿ ಪೂರೈಸಿತು.  ಈ ಸುರಂಗ ಕೊರೆಯುವ ವೇಳೆ ಹೊರತೆಗೆದ ಮಣ್ಣು ಮರಳು ಕೂಡಾ ಉಪಗ್ರಹಗಳ ಕಣ್ಣಿಗೆ ಬೀಳದಂತೆ ಉಪಾಯಮಾಡಿ, ಹೊರತೆಗೆದ ಭಾರೀ ಪ್ರಮಾಣದ ಮಣ್ಣನ್ನೆಲ್ಲಾ ಮರುಭೂಮಿಯ ಮರಳಿನ ಗುಡ್ಡಗಳಂತೆಯೇ ಪೇರಿಸಿಡಲಾಗಿತ್ತು.  ನಮ್ಮ ಸೈನ್ಯದ ಇಂಜಿನೀಯರ್ ಗಳು ಪೋಕ್ರಾನ್  ನಲ್ಲಿ ಕೆಲಸ ನಿರ್ವಹಿಸುವಾಗ ಆಗಾಗ ಡಿ ಆರ್ ಡಿ ಓ ಮತ್ತು ಅಣುವಿಜ್ಞಾನ ಇಲಾಖೆ ವಿಜ್ಞಾನಿಗಳು ಆಗಾಗ ಭೇಟಿ ನೀಡಿ ಪರಿಶೀಲಿಸುತ್ತಿದ್ದರು ಆಗ ಅವರು ಕೂಡಾ ಮಿಲಿಟರಿ ದಿರಿಸಿನಲ್ಲಿಯೇ ಇರುತ್ತಿದ್ದರು. 

ನಮ್ಮ ಸೈನ್ಯದ ಎಂಜಿನೀಯರ್ ಗಳು  ಅಷ್ಟೆಲ್ಲ ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದರೂ ತಾವು ಸಿದ್ಧಪಡಿಸಿದ್ದ ಸುರಂಗಗಳಿಗೆಲ್ಲಾ ಅತ್ಯಂತ ತಮಾಷೆಯ ಹೆಸರಿಟ್ಟಿದ್ದರು.  ಅಮೆರಿಕವನ್ನೇ ಬೇಸ್ತು ಬೀಳಿಸಿದ್ದಕ್ಕಾಗಿ ಮೊದಲ ಅತ್ಯಂತ ದೊಡ್ಡ ಸುರಂಗಕ್ಕೆ ವೈಟ್ ಹೌಸ್ ಅಂತ ಹೆಸರಿಡಲಾಗಿತ್ತು! ಮತ್ತೊಂದಕ್ಕೆ ತಾಜ್ ಮಹಲ್ ಅಂತ ಹೆಸರಿಟ್ಟಿದ್ದರೆ ಇನ್ನೊಂದಕ್ಕೆ ಕುಂಭಕರ್ಣ ಅಂತ ಹೆಸರಿಡಲಾಗಿತ್ತು.  ವೈಟ್ ಹೌಸ್ ಎಲ್ಲಕ್ಕಿಂತ ಆಳದ ಸುರಂಗವಾಗಿತ್ತು ಮತ್ತು ಇದರಲ್ಲಿ ಭಾರತದ ಪ್ರಥಮ ಹೈಡ್ರೋಜನ್ ಬಾಂಬ್ ಅನ್ನು ಸ್ಫೋಟಿಸಿ ಪರೀಕ್ಷೆ ನಡೆಸಲಾಯಿತು.  ಮೇ೧೧ ರಂದು ಮೂರು ಮತ್ತು ಎರಡು ದಿನ ಕಳೆದು ಮೇ ೧೩ರಂದು ಮತ್ತೆ ಎರಡು; ಹೀಗೆ ಒಟ್ಟು ಐದು ಅಣು-ಸ್ಫೋಟಗಳನ್ನು ನಡೆಸಲಾಗಿತ್ತು.  ಎಲ್ಲ ಮುಗಿದು 

ಪ್ರಧಾನಿ ಅಟಲ್ ಜೀಯವರು ಪತ್ರಿಕಾಗೋಷ್ಠಿಯಲ್ಲಿ ಈ ಚಾರಿತ್ರಿಕ ಅಣುಸ್ಫೋಟ ಮತ್ತು ಅಣು-ಪರೀಕ್ಷೆಗಳ ಸುದ್ದಿಯನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೆಮ್ಮೆಯಿಂದ ಘೋಷಿಸುವವರೆಗೆ ಹೊರಜಗತ್ತಿಗೆ ಇದರ ಅರಿವೇ ಇರಲಿಲ್ಲ. 

ಈ ಮಹತ್ತರ ಕೆಲಸದಲ್ಲಿ ಮೇಜರ್ ಜನರಲ್ ಪ್ರಿಥ್ವಿರಾಜ್ ಮತ್ತು ನಟರಾಜ್ ಅವರ ಪಾತ್ರ ಹಿರಿದಾಗಿತ್ತು.  ಇವರೊಂದಿಗೆ ಮಿಲಿಟರಿ, ಅಣು-ಇಲಾಖೆ ಡಿ ಆರ್ ಡಿ ಓ. ದ  ಡಾ ಹಲವಾರು ಉನ್ನತ ವಿಜ್ಞಾನಿಗಳು ಪಾಲ್ಗೊಂಡಿದ್ದರು.   ಡಾ ಕೆ ಸಂತಾನಂ, ಡಾ ದೀಕ್ಷಿತುಲು,  ಡಾ ಅನಿಲ್ ಕಾಕೋಡ್ಕರ್, ಡಾ ಸತೀಂದರ್ ಸಿಕ್ಕಾ, ಡಾ ಎಂ. ಎಸ್ ರಾಮಕುಮಾರ್ ಮುಂತಾದ ಘಟಾನುಘಟಿ ವಿಜ್ಞಾನಿಗಳಿದ್ದರು.. ಭಾರತ ಇಡೀ ಜಗತ್ತಿಗೇ ತನ್ನಲ್ಲಿರುವ ಅತಿ ಉತ್ಕೃಷ್ಟ ತಂತ್ರಜ್ಞಾನದ ಪರಿಚಯ ಮಾಡಿಕೊಟ್ಟಿತ್ತು.  ತನ್ನ ತಂತ್ರಜ್ಞರ ಪ್ರತಿಭೆ ಎಂತದ್ದೆಂದು ತೋರಿಸಿಕೊಟ್ಟಿತ್ತು!  ಅಂದ ಹಾಗೆ ಈ ಮಹತ್ತರ ರಹಸ್ಯ ಕಾರ್ಯಾಚರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಮೇಜರ್ ಜನರಲ್ ಪ್ರಿಥ್ವಿರಾಜ್ ಮತ್ತು ನಟರಾಜ್ ಯಾರು ಎಂಬುದು ಎಲ್ಲರಿಗೂ ಕುತೂಹಲದ ವಿಷಯವಾಗಿತ್ತು.  ಸ್ಫೋಟ ನಡೆದು ಕೆಲಕಾಲದ ನಂತರ ಈ ರಹಸ್ಯ ಬಯಲಾಗಿತ್ತು ಮೇಜರ್ ಜನರಲ್ ಪ್ರಿಥ್ವಿರಾಜ್ ಎಂಬ ನಕಲಿ ಹೆಸರಲ್ಲಿ ಮಿಲಿಟರಿ ಅಧಿಕಾರಿಯ ವೇಷದಲ್ಲಿ ಇದ್ದದ್ದು ಡಾ. ಎ ಪಿ ಜೆ ಅಬ್ದುಲ್ ಕಲಾಂ..!   ಮೇಜರ್ ಜನರಲ್ ನಟರಾಜ್ ಬೇರೆ ಯಾರೂ ಅಲ್ಲ ಭಾರತದ ಖ್ಯಾತ ಅಣುವಿಜ್ಞಾನಿ ಆರ್ ಚಿದಂಬರಂ! ಪೂರ್ತಿ ಕಾರ್ಯಾಚರಣೆಯಲ್ಲಿ ಪ್ರಧಾನಿ ಅಟಲ್ ಜೀಯವರಿಗೆ ಹೆಗಲಿಗೆ ಹೆಗಲು ಕೊಟ್ಟು ಸಾಥ್ ನೀಡಿದ ಇನ್ನೋರ್ವ ಚಾಣಾಕ್ಷ ಇದ್ದರು.!! ಅವರು ಇಡೀ ಕಾರ್ಯಾಚರಣೆಯ ಉಸ್ತುವಾರಿಯನ್ನು ಬಹಳ ರಹಸ್ಯವಾಗಿಯೇ ವಹಿಸಿಕೊಂಡಿದ್ದರು.. ಅವರೇ ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ ಶ್ರೀ ಜಾರ್ಜ್ ಫೆರ್ನಾಂಡಿಸ್!!!!

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞರು ತಮ್ಮ ಜ್ಞಾನ, ಪ್ರತಿಭೆ, ಯಾವ ಮಟ್ಟದೆಂದು ಸಾಧಿಸಿ ತೋರಿಸಿದ ಮೇ ೧೧ರ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಘೋಷಿಸಿ, ಭಾರತೀಯ ತಂತ್ರಜ್ಞರಿಗೆಲ್ಲಾ ಗೌರವ ಸೂಚಿಸುವ ಕೆಲಸ ಮಾಡಲಾಗಿದೆ.  ನಮ್ಮ ದೇಶಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಿರುವ ಎಲ್ಲ ತಂತ್ರಜ್ಞರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿವಸದ ಹಾರ್ದಿಕ ಶುಭಕಾಮನೆಗಳು  

 

#ಅನಂತಕುಮಾರಹೆಗಡೆ

Related posts