Infinite Thoughts

Thoughts beyond imagination

ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ....!!!!

ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ....!!!!

 
 
ಅಂದಾಜು ಇಪ್ಪತ್ತಮೂರು ವರ್ಷಗಳ ನನ್ನ ರಾಜಕೀಯ ಪಯಣದ ಪೂರ್ಣ ಹಾದಿಯಿಂದ ಹಿಡಿದು, ಬಹುತೇಕ ಮೆಟ್ಟಿಲುಗಳನ್ನು ಒಂದೊಂದಾಗಿ ನನ್ನ ಕ್ಷೇತ್ರದ ಜನರೇ ಏರಿಸಿದ್ದೇ ವಿನಹ, ಮಿಕ್ಕಿದೆಲ್ಲವೂ ಗೌಣ...!!
 
ಏಳು ಚುನಾವಣೆಗಳನ್ನು ಎದುರಿಸಿ ಆರನೇ ಭಾರಿ ಆಯ್ಕೆಗೊಂಡ ಈ ಸಂದರ್ಭ, ಹಿಂದಿನ ಅನುಭವಗಳನ್ನು ಮತ್ತೊಮ್ಮೆ ಸ್ಮೃತಿ-ಪಟಲದಿಂದ ಆಯ್ದು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.  ಒಂದು ಸಣ್ಣ ಮಟ್ಟದ ಚುನಾವಣೆಯನ್ನು ಎದುರಿಸದ ನನ್ನಂತವನನ್ನು ಭಾರತೀಯ ಜನತಾ  ಪಕ್ಷವು ೧೯೯೬ರಲ್ಲಿ ನೇರವಾಗಿ ಲೋಕಸಭೆಗೇ ಸ್ಪರ್ಧಿಸಲು ಅವಕಾಶ ನೀಡಿದ್ದು, ನಿಜಕ್ಕೂ ನನ್ನ ಪಾಲಿನ ಧನ್ಯತೆಯ ಸರಿ!   ಆಗ ಜನರು ನನ್ನ ಮೇಲಿಟ್ಟ ವಿಶ್ವಾಸ ಮತ್ತು ಅಭಿಮಾನ, ಕಾಲು ಶತಮಾನ ಕಳೆದ ಬಳಿಕವೂ, ಹಲವಾರು ಪಟ್ಟು ಹೆಚ್ಚಿತೇ ವಿನಃ  ಕಡಿಮೆಯಾಗಲಿಲ್ಲ. 
 
ಉತ್ತರ ಕನ್ನಡ ಕ್ಷೇತ್ರ ಈ ಹಿಂದೆ ಕೆನರಾ ಕ್ಷೇತ್ರವೆಂದು ಕರೆಯಲ್ಪಟ್ಟಿದ್ದು, ಚುನಾವಣೆ ಅಖಾಡದಲ್ಲಿ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಅವರದೇ ಆದ ಸಾಮಾಜಿಕ ಛಾಪು ಮೂಡಿಸಿದ್ದವರೇ ಆಗಿದ್ದರು.  ಚುಟುಕು ಬ್ರಹ್ಮ ದಿನಕರ ದೇಸಾಯಿಯಂತ ಮೇಧಾವಿ ಪ್ರತಿನಿಧಿಸಿದ್ದ ಈ ಕ್ಷೇತ್ರ, ನಂತರ ಇಲ್ಲಿಯ ಜನತೆ, ಕಡಲತೀರದ ಭಾರ್ಗವ ಶಿವರಾಮ ಕಾರಂತ, ಕನ್ನಡ ಚಲನಚಿತ್ರ ರಂಗದ ಮೇರು ನಟ ಅನಂತನಾಗ್, ನಮ್ಮೆಲ್ಲರ ಹಿರಿಯ ರಾಜಕೀಯ ಮುತ್ಸದಿಯಾಗಿದ್ದ ರಾಮಕೃಷ್ಣ ಹೆಗಡೆಯಂತವರೆನ್ನೆಲ್ಲ ಬದಿಗಿಟ್ಟು, ದೇವರಾಯ ನಾಯ್ಕ್ ರಂತ ಒಬ್ಬ ಸರಳ-ಸಜ್ಜನ ರಾಜಕಾರಣಿಯನ್ನು ಒಪ್ಪಿಕೊಂಡ್ಡಿದ್ದರು!   ಹೀಗಿರುವಾಗ  ೧೯೯೬ರಲ್ಲಿ ಮೊಟ್ಟ ಮೊದಲ ಬಾರಿಗೆ ನಾನು ಸ್ಪರ್ಧಿಸಿದಾಗ ರಾಜಕೀಯಕ್ಕೇ ತೀರಾ ಹೊಸಬ.  ಆದರೂ ಪಕ್ಷ ನನ್ನನ್ನು ಆರಿಸಿ ಸ್ಪರ್ಧೆಗೆ ನಿಯೋಜಿಸಿದಾಗ, ಜಿಲ್ಲೆಯ ಮತದಾರ ಪ್ರಭುಗಳು ನನ್ನ ಅಭ್ಯರ್ಥಿತನವನ್ನು ಉತ್ತಮವಾದ ಬಹುಮತದೊಂದಿಗೆ (೫೫,೮೯೬ ಮತಗಳ ಅಂತರ) ಅಂಗೀಕರಿಸಿದ್ದರು.  ಅಂದು ಕ್ಷೇತ್ರದಲ್ಲಿ ನನ್ನ ಎದುರಾಳಿಯಾಗಿದ್ದು ಇಂದು ನನ್ನ ಆತ್ಮೀಯ ಮಿತ್ರರಾದ ಹಾಗು ಅಂದಿನಗಳಲ್ಲೆ ಬಹಳ ಪ್ರಬುದ್ಧರೆಂದೇ ಪರಿಚಿತರಾಗಿದ್ದ ಶ್ರೀ ಪ್ರಮೋದ್ ಹೆಗಡೆಯವರು.  ನಂತರ ಕೇವಲ ಎರಡು ವರ್ಷಗಳಲ್ಲೇ ನಡೆದ ಮರು ಚುನಾವಣೆಯಲ್ಲಿ ನನಗೆ ಎದುರಾಳಿಯಾಗಿದ್ದು,  ಕಾಂಗ್ರೆಸ್ ಪಕ್ಷದ ಹಿರಿಯ ಅನುಭವಿ ನಾಯಕಿ ಶ್ರೀಮತಿ ಮಾರ್ಗರೇಟ್ ಆಳ್ವ!   ಈ ಸಂದರ್ಭದಲ್ಲಿ ಕ್ಷೇತ್ರದ ಜನತೆ ಇನ್ನು ಹೆಚ್ಚಿನ ಅಂತರದಿಂದ (೮೭,೦೪೭ ಮತಗಳ ಮುನ್ನಡೆ) ನನ್ನನ್ನು ಆಯ್ಕೆ ಮಾಡಿದರು.   ದೇಶದ ರಾಜಕಾರಣ ತೀರಾ ಹದಗೆಟ್ಟು ಮತ್ತೊಮ್ಮೆ ೧೯೯೯ರಲ್ಲಿ ನಡೆದ ಚುನಾವಣೆಯ ಹೊತ್ತಿಗೆ ನಾನೇ ರಾಜಕಾರಣದಿಂದ ವಿಮುಖನಾಗಿದ್ದೆ.  ಆದರೆ ಅಂತ ಸಂದರ್ಭದಲ್ಲೂ ಕ್ಷೇತ್ರದ ಜನತೆ, ನನ್ನನ್ನು ಅಂದು ಸಹ ಜಯದ ಹೊಸ್ತಿಲವರೆಗೂ ಕರೆ ತಂದಿದ್ದರು (ಸೋಲಿನ ಅಂತರ ಕೇವಲ ೧೦,೫೯೧ ಮತಗಳು).  ಆದರೆ ಅಂದಿನ ಆ ವಿದ್ಯಮಾನ ನನ್ನನ್ನು ಇನ್ನಷ್ಟು ಹೆಚ್ಚಾಗಿ ಸಮಾಜಮುಖಿಯನ್ನಾಗಿ ಮಾಡಿತು; ಅದರ ಪರಿಣಾಮವೇ ಇಂದಿನ ಕದಂಬ ಸಂಸ್ಥೆ!!!  ರಾಜಕಾರಣವಿಲ್ಲದೆಯೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬಹುದು ಎಂದು, ಅಂದು ಕಂಡುಕೊಂಡ ನನ್ನ ಮಾರ್ಗವಾಗಿತ್ತು. 
 
೨೦೦೪ರಲ್ಲಿ ನಡೆದ ಲೋಕ ಸಭೆ ಚುನಾವಣೆಯಲ್ಲಿ, ಮತ್ತೆ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿಸಿ ನಿಲ್ಲಿಸಿದಾಗ ಜನತೆ ಕೊಟ್ಟ ವಿಶ್ವಾಸದ ತೀರ್ಮಾನ ಬರೋಬ್ಬರಿ ೧,೭೨,೨೨೬ ಮತಗಳ ಅಂತರದ ಗೆಲುವು!!   ೨೦೦೯ ರಲ್ಲಿ ಮತ್ತೊಮ್ಮೆ ಚುನಾವಣೆ.... ಮತ್ತೆ ಶ್ರೀಮತಿ ಮಾರ್ಗರೇಟ್ ಆಳ್ವ ರಂತ ಬಹಳ ಅನುಭವಿ ನಾಯಕಿ ಎದುರಾಳಿ.... ಮತ್ತದೇ ಜನತೆಯ ವಿಶ್ವಾಸದ ಅಂಗೀಕಾರ..!!!   ೨೦೧೪ರಲ್ಲಿ ದೇಶದ ಜನತೆ ಮೋದಿಯವರ ನೇತ್ರತ್ವವನ್ನು ಮಾನ್ಯ ಮಾಡಿದಾಗ ನನ್ನ ಕ್ಷೇತ್ರದ ಜನತೆ ನನಗೆ ಕೊಟ್ಟ ಮತಗಳ ಗೆಲುವಿನ ಅಂತರ ೧,೪೦,೭೦೦ ಮತಗಳು.  ಈ ಸಂದರ್ಭದಲ್ಲಿ ನನ್ನ ಎದುರಾಳಿಯಾಗಿದ್ದು ಜಿಲ್ಲೆಯ ಮತ್ತೊಬ್ಬ ಹಿರಿಯ ರಾಜಕಾರಣಿ ಹಾಗು ಮುತ್ಸದಿ ಶ್ರೀ ಆರ್ ವಿ ದೇಶಪಾಂಡೆಯವರ ಮಗ ಶ್ರೀ ಪ್ರಶಾಂತ್ ದೇಶಪಾಂಡೆ.  ಅಭ್ಯರ್ಥಿಯೇನೋ ಹೊಸಬರಿದ್ದಿರಬಹುದು, ಆದರೆ ತಂದೆಯ ಸಂಪೂರ್ಣ ರಾಜಕೀಯ ಸಂಘಟನೆ ಮತ್ತು ಆರ್ಥಿಕ ಬೆಂಬಲದೊಂದಿಗೆ ನಮ್ಮ ಪಕ್ಷದ ವಿರುದ್ಧ ತೀವ್ರ ಸ್ಪರ್ಧೆ ಒಡ್ಡಿದ್ದರು.  ಆದರೂ ಜನತೆ ನನ್ನ ಮೇಲಿನ ವಿಶ್ವಾಸ ಮುಂದುವರಿಸಿದ್ದರು.  
 
ಈ ಬಾರಿಯ ಚುನಾವಣೆ ಇದುವರೆಗಿನ ಎಲ್ಲ ಚುನಾವಣೆಗಿಂತ ಬಹಳ ಭಿನ್ನವಾಗಿತ್ತು.  ಜನತೆಯ ತೀರ್ಮಾನ ಕಾಂಗ್ರೆಸ್ ಪಕ್ಷದ ಆತ್ಮ-ಸ್ಥೈರ್ಯವನ್ನೇ ಕುಗ್ಗಿಸಿತ್ತು.  ಹಾಗಾಗಿ ಕ್ಷೇತ್ರವನ್ನು ಜನತಾದಳಕ್ಕೆ ಬಿಟ್ಟುಕೊಟ್ಟಿದ್ದರು.  ಇದರ ಪರಿಣಾಮ ಜನತೆ ಮತ್ತೊಮ್ಮೆ ನನ್ನ ಪರವಾಗಿ ಕೇವಲ ಅಲ್ಪ ವಿಶ್ವಾಸವಲ್ಲ, ಬದಲಿಗೆ ಅತೀವ ಅಭಿಮಾನದ ಅಂಗೀಕಾರವನ್ನು ಸುಮಾರು ೪,೭೭,೦೮೧ ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ತಮ್ಮ ತೀರ್ಮಾನ ನೀಡಿದ್ದಾರೆ.  
 
ಹಾಗೆಂದು, ನಾನು ಸರ್ವಜ್ಞನು ಅಲ್ಲ, ಹಾಗು ಸರ್ವಶಕ್ತನೂ ಅಲ್ಲ!  ನಾನೊಬ್ಬ ಕೇವಲ ಪಕ್ಷ ಹಾಗು ಸಂಘಟನೆಯ ಪ್ರತಿನಿಧಿ!!!  ಈ ಗೆಲುವು ಸಂಪೂರ್ಣವಾಗಿ ನಮ್ಮ ಸಂಘಟನೆ ಹಾಗು ಪಕ್ಷದ ಸಿದ್ಧಾಂತಕ್ಕೆ ಸಲ್ಲಬೇಕು!!    
 
ಈ ಗೆಲುವಿನ ಮೂಲಕ ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಖುಷಿಗಿಂತ, ಕ್ಷೇತ್ರದ ಜನತೆಯ ಸೇವೆಯ ಜವಾಬ್ದಾರಿ ನನ್ನನ್ನು ಇನ್ನಷ್ಟು ವಿನಮ್ರನಾಗಿಸಿದೆ.  ನಾನು ಇಂದು, ಜನರ ಅಭಿಮಾನದ ವಿಶ್ವಾಸ, ಪಕ್ಷದ ಕಾರ್ಯಕರ್ತರ ದುಡಿಮೆ, ಉನ್ನತ ನಾಯಕರ ನಂಬಿಕೆ, ಹಾಗು ಪರಿವಾರದ ಎಲ್ಲ ಕಾರ್ಯಕರ್ತರ ಒಟ್ಟು ಶ್ರಮದ ರೂವಾರಿಯಾಗಿದ್ದೇನೆ. 
 
ನನ್ನ ಕ್ಷೇತ್ರದ ಜನತೆ, ಮತದಾರ ಪ್ರಭು ತೋರಿರುವ ಇಂತಹ ಅಗಾಧ ಔಧಾರ್ಯದ ನಂಬಿಕೆಯ ಮುಂದೆ ನಾನು ಅಕ್ಷರಶಃ ತಲೆ ಬಾಗಿದ್ದೇನೆ..!
  
ಜೊತೆಗೆ ಚುನಾವಣೆಯ ವೇಳೆಗೆ ಹಗಲೂ ರಾತ್ರಿ ದುಡಿದ, ದಣಿವರಿಯದೆ ಊರೂರು ತಿರುಗಿದ, ಪಕ್ಷಕ್ಕಾಗಿ ಮತ ಯಾಚಿಸಿದ, ನನ್ನನ್ನು ಒಂದಿಷ್ಟೂ ಬಿಟ್ಟು ಕೊಡದೆ ಸಮರ್ಥಿಸಿ ಕೊಂಡು ಎಲ್ಲವನ್ನೂ.... ಎಲ್ಲರನ್ನೂ..... ಎದುರಿಸಿದ ಪರಿವಾರದ ಕಾರ್ಯಕರ್ತರ ಅಖಂಡ ನಿಷ್ಠೆಯ ಮುಂದೆ, ಅವರ ಸೇವಾ ತತ್ಪರತೆಯ ಮುಂದೆ ಮಾತಿಲ್ಲದೆ ಮೂಕನಾಗಿದ್ದೇನೆ...!  ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ....!  
 
ಎಲ್ಲರಿಗೂ ಅನನ್ಯ ಕೃತಜ್ಞತೆಯ ಭಾವದಿಂದ ಮನದುಂಬಿ  ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತೇನೆ...! 
 
#ಅನಂತಕುಮಾರಹೆಗಡೆ 

Related posts