Infinite Thoughts

Thoughts beyond imagination

ಭಾರತಾಂಬೆಯ ವೀರ ಪುತ್ರ ವೀರ ವಿನಾಯಕ ದಾಮೋದರ ಸಾವರ್ಕರ್!

ಭಾರತಾಂಬೆಯ ವೀರ ಪುತ್ರ ವೀರ ವಿನಾಯಕ ದಾಮೋದರ ಸಾವರ್ಕರ್!  

ನೂರ ಮೂವತ್ತಾರು ವರ್ಷಗಳ, ಇದೆ ದಿನ - ಮೇ ೨೮, ೧೮೮೩ನೇ ಇಸವಿಯಲ್ಲಿ ಮಹಾರಾಷ್ಟ್ರದ ನಾಸಿಕ್ ಹತ್ತಿರದ ಭಾಗೂರಿನಲ್ಲಿ ಭಾರತಾಂಬೆಯ ಈ ವೀರ ಪುತ್ರನ ಜನನವಾಯಿತು.  ವಿನಾಯಕ ದಾಮೋದರ ಎಂಬ ಹೆಸರಿದ್ದರೂ ಇಡೀ ಜಗತ್ತೇ ಇವರನ್ನು ಇವತ್ತಿಗೂ ವೀರ ಸಾವರ್ಕರ್ ಅಂತಲೇ ಕರೆಯುತ್ತದೆ.  ಆದರೆ ವಿನಾಯಕ ದಾಮೋದರ ಸಾವರ್ಕರರಿಗೆ ಈ "ವೀರ" ಎಂಬ ಬಿರುದು ಬಹಳ ಚಿಕ್ಕವರಿರುವಾಗ, ಅಂದರೆ ಹನ್ನೆರಡನೆಯ ವಯಸ್ಸಿನಲ್ಲೇ ಸಿಕ್ಕಿರುತ್ತದೆ.  ಒಮ್ಮೆ ಸಾವರ್ಕರರ ಹಳ್ಳಿ ಭಾಗೂರಗೆ ಇಸ್ಲಾಮಿ ಮತಾಂಧರ ತಂಡವೊಂದು ದಾಳಿ ಮಾಡಿ, ಎಲ್ಲೆಂದರಲ್ಲಿ ನುಗ್ಗುತ್ತಾ ಕೊಳ್ಳೆ ಹೊಡೆಯುತ್ತ ಬರುತ್ತಿದ್ದ ಈ ಗುಂಪನ್ನು ಬಾಲಕ ವಿನಾಯಕ ದಾಮೋದರ್ ಸಾವರ್ಕರ್ ತನ್ನ ಸಹಪಾಠಿಗಳನ್ನೆಲ್ಲ ಸೇರಿಸಿಕೊಂಡು ತಂಡ ಕಟ್ಟಿ ಎದುರಿಸುತ್ತಾರೆ.  ಸಂಖ್ಯೆಯಲ್ಲಿ ಮತ್ತು ದೈಹಿಕ ಬಲದಲ್ಲಿ ಪ್ರಬಲರಾದ ಎದುರಾಳಿಗಳನ್ನೆದುರಿಸಲು ಅಡಗಿ ಮರೆಯಲ್ಲಿ ಕುಳಿತು ದಾಳಿಮಾಡುವ ಗೆರಿಲ್ಲಾ ಯುದ್ಧ ತಂತ್ರವನ್ನು ಬಾಲಕ ಸಾವರ್ಕರ್ ಆಗಲೇ ಯಶಸ್ವಿಯಾಗಿ ಮಾಡಿದ್ದರು.  ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ತನ್ನ ಹಳ್ಳಿಗೆ ನುಗ್ಗಿದ ಒಬ್ಬೊಬ್ಬ ದಾಳಿಕೋರ ಮತಾಂಧನನ್ನು ಕೂಡ ಬಿಡದೇ ಎಲ್ಲರನ್ನೂ ಓಡಿಸಿದ ಬಾಲಕ ವಿನಾಯಕ ದಾಮೋದರ ಸಾವರ್ಕರನ ಧೈರ್ಯ ಸಾಹಸಗಳನ್ನು ಕೊಂಡಾಡಿದ ಹಳ್ಳಿಯ ಜನರೇ ಇತ್ತ ಬಿರುದು "ವೀರ ಸಾವರ್ಕರ" ಮುಂದೆ ಶಾಶ್ವತವಾಗಿ ಇರುವಂತೆ ನೋಡಿಕೊಂಡಿತು.  

ಹೀಗೆ ಎಳವೆಯಲ್ಲೇ "ವೀರ" ಎಂಬ ಬಿರುದನ್ನೂ ಪಡೆದುಕೊಂಡ ಸಾವರ್ಕರ್ ಬಳಿಕ ಇಂಗ್ಲೆಂಡಿನಲ್ಲೇ ಇದ್ದುಕೊಂಡು ಬ್ರಿಟಿಷರ ವಿರುದ್ಧ ಕ್ರಾಂತಿಕಾರೀ ಹೋರಾಟ ರೂಪಿಸಿದ್ದರು.  ಅದಕ್ಕಾಗಿ ೧೮೫೭ರ ಸಿಪಾಯಿ ದಂಗೆಯನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿದ್ದೆಲ್ಲವೂ ಬಹಳ ರೋಚಕ ಸಂಗತಿಗಳೇ.  ಸಿಪಾಯಿ ದಂಗೆಯ ಬಗ್ಗೆ ಹಲವು ಮೂಲಗಳಿಂದ ಮತ್ತು ಅಧಿಕೃತ ಬ್ರಿಟಿಷ್ ಮೂಲಗಳಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದ ಸಾವರ್ಕರ್ ಆ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ ಅಂತ ಮೊತ್ತ ಮೊದಲ ಬಾರಿಗೆ ಕರೆದರು.  ಆ ಮಾಹಿತಿಗಳನ್ನೆಲ್ಲಾ ಕ್ರೋಡಿಕರಿಸಿ "ದಿ ಹಿಸ್ಟರಿ ಆಫ್ ದ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್" ಆ ಪುಸ್ತಕದಲ್ಲಿ ಸಾವರ್ಕರ್ ಆ ದಂಗೆಯನ್ನು ವರ್ಣಿಸಿದ ರೀತಿ, ನೀಡಿದ ವಿವರಗಳನ್ನೆಲ್ಲ ನೋಡಿಯೇ ಬ್ರಿಟಿಷ್ ಸರಕಾರ ಬೆಚ್ಚಿಬಿದ್ದಿತ್ತು. ಕೂಡಲೇ ಆ ಪುಸ್ತಕವನ್ನು ನಿಷೇಧಿಸಿ, ಪ್ರತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಂಡಿತು..!  ಆದರೆ ಸಾವರ್ಕರರ ಗೆಳತಿ, ಭಾರತದ ಇನ್ನೋರ್ವ ಕ್ರಾಂತಿಕಾರಿ ನಾಯಕಿ ಮೇಡಂ ಭಿಕಾಜೀ ಕಾಮಾ ಗೆಳೆಯನನ್ನು ಬಿಟ್ಟುಕೊಡಲಿಲ್ಲ.  ಆಕೆ ಈ ಪುಸ್ತಕವನ್ನು ದೂರದ ನೆದರ್ ಲ್ಯಾಂಡ್ ನಲ್ಲಿ ಪ್ರಿಂಟು ಮಾಡಿ ಪ್ರಕಟಿಸಿದರು.  ಬ್ರಿಟಿಷರ ಅದೆಷ್ಟೇ ಹದ್ದಿನ ಕಣ್ಣಿದ್ದರೂ ಈ ಪುಸ್ತಕ ಭಾರತದೆಲ್ಲೆಡೆ ಅತ್ಯಂತ ರಹಸ್ಯವಾಗಿ ವಿತರಣೆಯಾಯಿತು..!  ಬ್ರಿಟಿಷರು ಕೈ ಕೈ ಹಿಚುಕಿಕೊಂಡರು. 

ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ತುಂಬಾ ಗಂಭೀರವಾಗಿ ಅಧ್ಯಯನ ಮಾಡಿದ್ದ ಸಾವರ್ಕರ್. ಅದೇ ರೀತಿಯಲ್ಲಿ ಸಂಘಟನೆ ರೂಪಿಸಿ, ಸೂಕ್ತ ತಂತ್ರ ಹಣೆದು, ಅದೇ ರೀತಿಯಲ್ಲಿ ಪೂರ್ತಿ ಭಾರತದಲ್ಲಿ ಒಂದೇ ಸಾರಿಗೆ ಬ್ರಿಟಿಷರ ಮೇಲೆ ದಾಳಿ ನಡೆಸಿ ದೇಶವನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಒಂದು ಮಾಸ್ಟರ್ ಪ್ಲಾನ್ ರೆಡಿ ಮಾಡತೊಡಗಿದ್ದರು.  ಒಂದು ವೇಳೆ ಇದು ಕಾರ್ಯಗತವಾಗಿರುತ್ತಿದ್ದರೆ ಭಾರತಕ್ಕೆ ಮೂವತ್ತು ವರ್ಷ ಮೊದಲೇ ಸ್ವಾತಂತ್ರ್ಯ ಸಿಕ್ಕಿರುತ್ತಿತ್ತು...! 

ಸಾವರ್ಕರರ ಪಟ್ಟ ಶಿಷ್ಯ ಮದನ್ ಲಾಲ್ ಧಿಂಗ್ರಾ ಬ್ರಿಟಿಷ್ ಸೈನ್ಯಾಧಿಕಾರಿ ಸರ್ ವಿಲಿಯಮ್ ಹಟ್ ಕರ್ಜನ್ ನನ್ನ ಬಾಂಬಿಟ್ಟು ಉಡಾಯಿಸಿದ ನಂತರ ಸಾವರ್ಕರರ ಮೇಲೆ ಬ್ರಿಟಿಷ್ ಸರಕಾರ ಇನ್ನಷ್ಟು ಗೂಢಚರ್ಯೆ ನಡೆಸತೊಡಗಿತು. ೧೯೦೯ರಲ್ಲಿ ಭಾರತದಲ್ಲಿ ಬ್ರಿಟಿಷ್ ಸರಕಾರ ನೇಮಿಸಿದ್ದ ಮೋರ್ಲೆ ಮಿಂಟೋ ಕಮಿಷನ್ ಬಗ್ಗೆ ಭಾರೀ ಮಟ್ಟದ ವಿರೋಧ ವ್ಯಕ್ತವಾಯಿತು.  ಈ ಸಂದರ್ಭ ಸಾವರ್ಕರರ ಸಹೋದರ ಗಣೇಶ್ ಸಾವರ್ಕರ್ ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿಯೊಂದನ್ನು ಆಯೋಜಿಸಿದ್ದ ಎಂಬ ಆರೋಪದಲ್ಲಿಯೇ ವೀರ ಸಾವರ್ಕರ್ ಅವರನ್ನು ಇಂಗ್ಲೆಂಡಿನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲು ಬ್ರಿಟಿಷರು ಯೋಚಿಸಿದ್ದರು.  ಆ ಸಮಯದಲ್ಲೇ ಬ್ರಿಟಿಷರ ಹಡಗಿನಿಂದ ಸಾವರ್ಕರ್ ತಪ್ಪಿಸಿಕೊಂಡು ಸಮುದ್ರಕ್ಕೆ ಹಾರಿ ಈಜಿ ಫ್ರಾನ್ಸ್ ದೇಶದ ದಡ  ತಲುಪಿದ್ದು.  ಫ್ರಾನ್ಸ್ ನೆಲದಲ್ಲಿ ಭಾರತೀಯ ಪ್ರಜೆಯೊಬ್ಬರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದು ಬಹಳ ದೊಡ್ಡ ಪ್ರಕರಣವಾಗಿ ಅದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಯಿತು. ಕೊನೆಗೂ ಸಾವರ್ಕರನ್ನು ವಶಕ್ಕೆ ಪಡೆದ ಬ್ರಿಟಿಷರು ಅವರಿಗೆ ಎರಡೆರಡು ಜೀವಾವಧಿ ಶಿಕ್ಷೆಯನ್ನು ಒಂದೇ ಬಾರಿಗೆ ನೀಡಿ ಪೂರ್ತಿ ಐವತ್ತು ವರ್ಷ ಜೈಲಿನಲ್ಲಿ  ಕೊಳೆಯುವಂತೆ ತೀರ್ಪು ನೀಡಿತು. ಆಗ ಸಾವರ್ಕರರಿಗೆ ಕೇವಲ ೨೮ರ ಪ್ರಾಯ..! 

ಬ್ರಿಟಿಷ್ ಸರಕಾರ ಸಾವರ್ಕರರಿಗೆ ಅದೆಷ್ಟು ಹೆದರಿತ್ತೆಂದರೆ ಅವರನ್ನು ಭಾರತದ ಯಾವುದೇ ಜೈಲಲ್ಲಿ ಇಡಲಿಲ್ಲ,  ಬದಲಿಗೆ ದೂರದ ದ್ವೀಪ ಪ್ರದೇಶವಾದ ಅಂಡಮಾನ್ ಸೆಲ್ಯುಲರ್ ಜೈಲಿಗೆ ಅವರನ್ನು ಸಾಗಿಸಲಾಯಿತು.  ಅಲ್ಲಿನ ಕರಿನೀರಿನ ಶಿಕ್ಷೆಗೆ ಅವರನ್ನು ಗುರಿಪಡಿಸಲಾಯಿತು.  ಮುಂದೆ ಅವರ ಬಿಡುಗಡೆಯಾಯಿತಾದರು, ಭಾರತಕ್ಕೆ ಮರಳಿದರೂ ಬ್ರಿಟಿಷರು ಆವರನ್ನು ರತ್ನಗಿರಿ ಜಿಲ್ಲೆಗೆ ಮಾತ್ರ ಸೀಮಿತಗೊಳಿಸಿದರು.  ಅವರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲೂ ಭಾಗವಹಿಸದಂತೆ ನಿರ್ಬಂಧ ಹೇರಿದ್ದರು.  ಮುಂದೆ ೧೭ ವರ್ಷ ಕಳೆದು ೧೯೩೭ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾದರು. ಭಾರತದಲ್ಲಿ ಮುಸ್ಲಿಂ ಲೀಗ್ ಪ್ರಾರಂಭ ಆದ ಬಳಿಕ ಹಿಂದೂಗಳಿಗೂ ಒಂದು ವೇದಿಕೆ ಬೇಕೆಂಬ ಕಾರಣಕ್ಕೆ ಮದನ ಮೋಹನ ಮಾಳವೀಯರು ಹಿಂದೂ ಮಹಾಸಭಾ ಸ್ಥಾಪಿಸಿದ್ದರು.  ಅದೇ ಸಂಘಟನೆಗೆ ಅಧ್ಯಕ್ಷರಾದ ಸಾವರ್ಕರ್ "ಹಿಂದುತ್ವ" ಎಂಬ ಪರಿಕಲ್ಪನೆಗೆ ಹೊಸ ಬಲ ನೀಡಿದರು, ಹೊಸ ವ್ಯಾಖ್ಯಾನ ನೀಡಿದರು. ರಾಜಕೀಯವಾಗಿ ಗಾಂಧೀಜಿಯನ್ನು ಸತತವಾಗಿ ವಿರೋಧಿಸುತ್ತ, ಡಾ ಬಾಬಾ ಸಾಹೇಬ್ ಅಂಬೇಡ್ಕರ ಅವರನ್ನು ಬೆಂಬಲಿಸುತ್ತಾ ಬಂದಿದ್ದ ಸಾವರ್ಕರ್ ಬಳಿಕ ಮೊಹಮ್ಮದಲಿ ಜಿನ್ನಾ ದೇಶವಿಭಜನೆಯ ಬೇಡಿಕೆ ಇಟ್ಟಾಗ ಅದನ್ನು ತೀವ್ರವಾಗಿ ವಿರೋಧಿಸಿದರು.  ಬಹುಶಃ ಈ ಕಾರಣಕ್ಕಾಗಿ ಮತ್ತು ಗಾಂಧಿ ಹಂತಕ ಗೋಡ್ಸೆಯನ್ನು ಸಾವರ್ಕರ್ ಭೇಟಿ ಮಾಡಿದ್ದಾರೆಂಬ ಕಾರಣದಿಂದ ಸಾವರ್ಕರ್ ಮಹಾತ್ಮಾ ಗಾಂಧಿ ಹತ್ಯೆಯ ಆರೋಪಿಯಾಗಬೇಕಾಗಿ ಬಂತು. ಆದರೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ತೀರ್ಪಿತ್ತಿತು. 

ಆದರೂ ಸಾವರ್ಕರ್ ಅವರಿಗೆ ಸ್ವತಂತ್ರ ಭಾರತದಲ್ಲಿ ಸಿಗಬೇಕಾದ ಸ್ಥಾನಮಾನ, ಗೌರವ ಸಿಗಲಿಲ್ಲ.  ಸ್ವಾತಂತ್ರ್ಯ ಹೋರಾಟದ ಅಷ್ಟೆಲ್ಲಾ ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ಸಿನ ಒಬ್ಬ ಲೀಡರನ್ನು ಕೂಡಾ ಅಂಡಮಾನ್ ನ ಕರಿನೀರಿನ ಶಿಕ್ಷೆಗೆ ಬ್ರಿಟಿಷರು ಗುರಿಪಡಿಸಿರಲೇ ಇಲ್ಲ.  ಆದರೆ ವೀರ ಸಾವರ್ಕರ ಅವರನ್ನು ಅಷ್ಟು ದೂರದ ಅಂಡಮಾನಿಗೆ ಬ್ರಿಟಿಷ್ ಸರಕಾರ ಎರಡೆರಡು ಜೀವಾವಧಿ ಶಿಕ್ಷೆ ವಿಧಿಸಿ ಕಳಿಸಿತ್ತೆಂದರೆ, ಅವರ ಬಗ್ಗೆ ಇದ್ದ ಭಯದ ಪ್ರಮಾಣ ಎಷ್ಟಿರಬಹುದೆಂದು ಅಂದಾಜಿಸಬಹುದಾಗಿದೆ...!  ಬ್ರಿಟಿಷರು ಸಾವರ್ಕರ್ ಎಂಬ ಹೆಸರು ಕೇಳಿದರೇ ಬೆಚ್ಚಿ ಬೀಳುತ್ತಿದ್ದರು..! 

ಇಂಥ ಭಾರತಾಂಬೆಯ ವೀರಪುತ್ರ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿ ಎಂದರೆ ಅದು ಪ್ರತಿಯೊಬ್ಬ ನೈಜ ದೇಶಭಕ್ತನಿಗೂ ಅತ್ಯಂತ ಪೂಜ್ಯ ದಿನ.  ಆ ಪುಣ್ಯ ಪುರುಷನಿಗೆ ದೇಶದ ಅತ್ಯುಚ್ಚ ಪುರಸ್ಕಾರ ಭಾರತ ರತ್ನ ನೀಡಿ ಗೌರವಿಸಬೇಕೆಂಬ ಬೇಡಿಕೆ ಬಹಳ ವರ್ಷಗಳದ್ದು.  ಈ ಬಾರಿಯಾದರೂ ಹೊಸ ಸರಕಾರದ ಸುಪರ್ದಿಯಲ್ಲಿ ಅದು ನೆರವೇರಬಹುದೆನ್ನುವ ಆಸೆ ಹಲವರದು.  

#ಅನಂತಕುಮಾರಹೆಗಡೆ

Related posts