Infinite Thoughts

Thoughts beyond imagination

ಪ್ರಧಾನಿಯವರಿಗೆ ಹಾಗು ನೂತನ ಮಂತ್ರಿಮಂಡಲದ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆ!

ಸಮರ್ಥ ನಾಯಕತ್ವಕ್ಕೆ ಮತ್ತೊಮ್ಮೆ ದೇಶಾದ್ಯಂತ ಅಭೂತಪೂರ್ವ ಸಮರ್ಥನೆಯನ್ನು ಗಳಿಸಿ, ಮತ್ತೊಮ್ಮೆ ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕ ಶ್ರೀ ನರೇಂದ್ರ ಮೋದೀಜಿಯವರನ್ನು  ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.  ಜೊತೆಗೆ ಭಾರತೀಯ ಜನತಾ ಪಕ್ಷದಿಂದ ಮತ್ತು ಎನ್.ಡಿ.ಎ ಮಿತ್ರ ಪಕ್ಷಗಳಿಂದ ಇಂದು ಮೋದೀಜಿಯವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿರುವ  ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಭಾರತದ ಪ್ರಧಾನಿಯ ಪ್ರಮಾಣವಚನ ಸ್ವೀಕಾರಕ್ಕೆ ದೇಶ ವಿದೇಶಗಳಿಂದ ಗಣ್ಯ ಅತಿಥಿಗಳು ಆಗಮಿಸಿದ್ದಾರೆ. ಶ್ರೀ ಮೋದೀಜಿಯವರು ಈ ಬಾರಿ ತಮ್ಮ ಪ್ರಮಾಣವಚನಕ್ಕೆ ವಿದೇಶೀ ಗಣ್ಯರನ್ನು ಆಹ್ವಾನಿಸುವಾಗ ಬಹಳ ಗಂಭೀರ ಮತ್ತು ಚಾಕಚಕ್ಯತೆಯ ರಾಜತಾಂತ್ರಿಕ ನಡೆಯೊಂದರಲ್ಲಿ BIMSTEC (Bay of Bengal Initiative for Multi-Sectoral Technical and Economic Cooperation)  ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಾರೆ.  ಬಂಗಾಳ ಕೊಲ್ಲಿಯನ್ನು ಆಧರಿಸಿಕೊಂಡು ತಮ್ಮ ವಾಣಿಜ್ಯ ವ್ಯವಹಾರಗಳನ್ನು ನಡೆಸುವ ಬಾಂಗ್ಲಾದೇಶ, ನೇಪಾಳ, ಭೂತಾನ, ಮಯನ್ಮಾರ್, ಶ್ರೀಲಂಕಾ ಮತ್ತು ಥಾಯಿಲ್ಯಾಂಡ್ ದೇಶಗಳ ಮುಖ್ಯಸ್ಥರನ್ನು ಬರಮಾಡಿಕೊಂಡು ಆ ದೇಶಗಳೊಂದಿಗೆ ತನ್ನ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಮತ್ತು ಏಷ್ಯಾದಲ್ಲಿ ತನ್ನ ಮಿತ್ರ ರಾಷ್ಟ್ರಗಳ ಬಲ ವೃದ್ಧಿಸಿಕೊಳ್ಳುತ್ತಿರುವ ಸಂಜ್ಞೆಯನ್ನು ಸ್ಪಷ್ಟವಾಗಿ ವಿಶ್ವಕ್ಕೆ ಸಾರಿ ಹೇಳುವ ಕೆಲಸವನ್ನೂ ಸರಳವಾಗಿ ಮಾಡಿದ್ದಾರೆ. ಜೊತೆಗೆಯೇ ಇನ್ನೊಂದು ಮಹತ್ವದ ರಾಜತಾಂತ್ರಿಕ ನಡೆಯಲ್ಲಿ ಕಿರ್ಗಿಜ್ ಸ್ಥಾನದ ಮುಖ್ಯಸ್ಥರಿಗೂ ವಿಶೇಷ ಆಹ್ವಾನ ನೀಡಲಾಗಿದೆ.  ಸಧ್ಯಕ್ಕೆ ಕಿರ್ಗಿಜಸ್ಥಾನ ಶಾಂಘಾಯ್ ಕೋ ಆಪರೇಷನ್ ಆರ್ಗನೈಝೇಶನ್ ನ ಮುಖ್ಯಸ್ಥ ದೇಶವಾಗಿದೆ.  ಚೀನಾ ಕಝಕಸ್ತಾನ್, ಕಿರ್ಗಿಜಸ್ತಾನ್, ತಾಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ರಷ್ಯಾ ದೇಶಗಳ ಈ ಸಂಘಟನೆಯ ರೂವಾರಿಯೇ ಚೀನಾ.  ಭೌಗೋಳಿಕವಾಗಿ ಏಷ್ಯಾದ ರಾಜಕೀಯ ಆರ್ಥಿಕ ಮತ್ತು ರಕ್ಷಣಾ ವಿಷಯಗಳಲ್ಲಿ ಮಹತ್ತರ ಪಾತ್ರ ವಹಿಸುವ ಈ ಸಂಘಟನೆಯ ಅಧ್ಯಕ್ಷ ಹುದ್ದೆಯಲ್ಲಿರುವ ಕಿರ್ಗಿಜಸ್ಥಾನದ ಮುಖ್ಯಸ್ಥರಿಗೆ ಆಹ್ವಾನ ನೀಡಿ ಚತುರ ರಾಜತಾಂತ್ರಿಕ ನಡೆಯನ್ನು ಮೆರೆದಿದ್ದಾರೆ.  ಮುಂದಿನ ತಿಂಗಳು ನಡೆಯಲಿರುವ ಶಾಂಘಾಯ್ ಕೋ ಆಪರೇಷನ್ ಆರ್ಗನೈಝೇಶನ್ ನ ಶೃಂಗ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸುವ ಪೂರ್ವಭಾವಿಯಾಗಿ ಆ ಸಂಘಟನೆಯ ಅಧ್ಯಕ್ಷ ರಾಷ್ಟ್ರದ ಮುಖ್ಯಸ್ಥರು ಪ್ರಮಾಣವಚನದಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ದ್ಯೋತಕ.  ಆಹ್ವಾನ ಕಳಿಸುವ  ಸಂದರ್ಭದಲ್ಲಿ ಜಾಗರೂಕವಾಗಿ ದೇಶಗಳನ್ನು ಆಯ್ಕೆ ಮಾಡಿಕೊಂಡದ್ದು ಮೋದೀಜಿಯ ನೇತೃತ್ವದ ನೂತನ ಭಾರತದ ರಾಜತಾಂತ್ರಿಕ ನೀತಿಯ ದಿಶೆಯ ಮತ್ತು ತಮ್ಮ ಮುತ್ಸದ್ಧಿತನವನ್ನು ಉಪಯೋಗಿಸಿದ್ದಾರೆ.  ಕಳೆದ ಬಾರಿಯ ಪ್ರಮಾಣ ವಚನಕ್ಕೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದ ಮೋದೀಜಿಯವರು ಈ ಬಾರಿ ಸಾರ್ಕ್ ಅನ್ನು ಬದಿಗಿರಿಸಿ ಆ ಮೂಲಕ ಪಾಕಿಸ್ತಾನಕ್ಕೆ ಆಹ್ವಾನವನ್ನೇ ನೀಡದೆ ರಾಜತಾಂತ್ರಿಕ ನೈಪುಣ್ಯ ಮೆರೆದಿದ್ದಾರೆ...! 

ಹೀಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮವನ್ನೇ ದೇಶದ ರಾಜತಾಂತ್ರಿಕ ನೀತಿಯ ನಿರೂಪಣೆಗೆ ವೇದಿಕೆಯಾಗಿಸಿಕೊಂಡ ಮೋದೀಜಿಯವರ ಜಾಣ್ಮೆ ಮೆಚ್ಚುವಂತದೆ.  ಪ್ರಧಾನಿಯಾಗಿ ದೇಶದಿಂದ ಅಭೂತಪೂರ್ವ ಜನಾದೇಶವನ್ನು ಪಡೆದುಕೊಂಡು ಅದಮ್ಯ ಆತ್ಮವಿಶ್ವಾಸದಿಂದ ಇರುವ  ಮೋದೀಜಿ ತಾವು ಎರಡನೆಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕ್ಷಣದಿಂದಲೇ ಕೆಲಸ ಶುರು ಹಚ್ಚಿಕೊಂಡಿದ್ದಾರೆ!  BIMSTEC ದೇಶಗಳಿಗೆ ಹಿರಿಯಣ್ಣನ ಸ್ಥಾನದಲ್ಲಿರುವ ಭಾರತ ಆ ದೇಶಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರಗಳನ್ನು ನೀಡುವ ದೃಢ ವಿಶ್ವಾಸವನ್ನು ತುಂಬುವ ಕೆಲಸವನ್ನು ತಾವಿನ್ನೂ ಪ್ರಧಾನಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸುವ ಮೊದಲೇ ಮೋದೀಜಿ ಮಾಡಿದ್ದಾರೆ.  ಇದುವೇ ನಿಪುಣ ಮುತ್ಸದ್ಧಿಯ, ದಣಿವರಿಯದೆ ದೇಶಕ್ಕಾಗಿ ದುಡಿಯುವ ರಾಜಕಾರಣಿಯ ಲಕ್ಷಣ.  ನವಭಾರತವನ್ನು ಹೊಸದಿಸೆಯತ್ತ ಕೊಂಡೊಯ್ಯುವ ಪ್ರಬಲ ಮತ್ತು ಪ್ರಜ್ಞಾವಂತರಿರುವ ಮಂತ್ರಿಮಂಡಲ ದೊಂದಿಗೆ ಎರಡನೆಯ ಬಾರಿಗೆ ದೇಶದ ಚುಕ್ಕಾಣಿ ಹಿಡಿಯುತ್ತಿರುವ ನಮ್ಮ ಹೆಮ್ಮೆಯ ಮೋದೀಜಿಯವರು ಪ್ರಮಾಣವಚನವನ್ನು ಸ್ವೀಕರಿಸುತ್ತಿರುವ ಕ್ಷಣಕ್ಕೆ ಸಾಕ್ಷಿಯಾಗಿರುವುದೇ ಒಂದು ಅನಿರ್ವಚನೀಯ ಅನುಭವ.

ಪ್ರಧಾನಿಯವರಿಗೂ, ನೂತನ ಮಂತ್ರಿಮಂಡಲದ ಸದಸ್ಯರಿಗೂ ಮತ್ತೊಮ್ಮೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತಾ ಈ ಪ್ರಾಚೀನ ದೇಶ ಮತ್ತೊಮ್ಮೆ ಜಗತ್ತಿಗೇ ಗುರುವಾಗಲಿ ಅಂತ ಆಶಿಸುತ್ತೇನೆ.

#ಅನಂತಕುಮಾರಹೆಗಡೆ

Related posts