ಮೃತ್ತಿಕಾ ಸೂಕ್ತದಿಂದ ಭೂಮಾತೆಯನ್ನು ಆರಾಧಿಸಿದ ಜನರೂ ನಾವೇ..! ಪ್ರಕೃತಿಯನ್ನು- ಪರಿಸರವನ್ನು ಹೊಲಸು ಮಾಡಿ ಪಾಪ ಎಸಗಿದ್ದೂ ನಾವೇ..!
ಮೃತ್ತಿಕಾ ಸೂಕ್ತದಿಂದ ಭೂಮಾತೆಯನ್ನು ಆರಾಧಿಸಿದ ಜನರೂ ನಾವೇ..!
ಪ್ರಕೃತಿಯನ್ನು- ಪರಿಸರವನ್ನು ಹೊಲಸು ಮಾಡಿ ಪಾಪ ಎಸಗಿದ್ದೂ ನಾವೇ..!
ಭೂಮಿ-ಧೇನುರ್ಧರಿಣಿ ಲೋಕಾಧಾರಿಣಿ
ಉಧೃತಾಸಿ ವರಾಹೇಣ ಕೃಷ್ಣೇನ ಶತಬಾಹುನಾ
ಮೃತ್ತಿಕೇ ಹನ ಮೇ ಪಾಪಂ ಯನ್ಮಯಾ ದುಷ್ಕೃತಂ ಕೃತಂ
ಮೃತ್ತಿಕೇ ಬ್ರಹ್ಮದತ್ತಾಸಿ ಕಾಶ್ಯಪೇನಭಿಮಂತ್ರಿತಾ
ಮೃತ್ತಿಕೇ ದೇಹಿ ಮೇ ಪುಷ್ಠಿಮ್ ತ್ವಯಿ ಸರ್ವಂ ಪ್ರತಿಷ್ಠಿತಂ
ಮೃತ್ತಿಕೇ ಪ್ರತಿಷ್ಠಿತೇ ಸರ್ವಂ ತನ್ಮೇ ನಿರ್ಣುದ ಮೃತ್ತಿಕೇ
ತ್ವಯಾ ಹತೇನ ಪಾಪೇನ ಗಚ್ಛಾಮಿ ಪರಮಾಂ ಗತೀಂ
ಓಂ ಶಾಂತಿ ಶಾಂತಿ ಶಾಂತಿಃ
"ಮೃತ್ತಿಕಾ ಸೂಕ್ತ", ಅಂದರೆ ಮಣ್ಣಿನ ಬಗ್ಗೆ ಇರುವ ಸೂಕ್ತ. ನಾರಾಯಣೋಪನಿಷತ್ತಿನಲ್ಲಿ ಇರುವ ಈ ಸೂಕ್ತದ ಭಾವಾರ್ಥ ಬಹಳಷ್ಟು ಅರ್ಥಪೂರ್ಣ. ಭೂಮಿ ಜಗತ್ತಿನ ಅಷ್ಟೂ ಜೀವಿಗಳಿಗೆ ಆಶ್ರಯದಾತೆ... ಹಾಲು ನೀಡುವ ಹಸುವಿನ ರೀತಿಯೇ ಸಂತೋಷ ನೀಡುವವಳು... ನಾನು ಎಸಗಿದ ಪಾಪಗಳನ್ನು, ಕೆಟ್ಟ ಕೆಲಸಗಳನ್ನೆಲ್ಲ ನಾಶ ಮಾಡು.... ನೀನೆ ಬ್ರಹ್ಮ....! ನಮಗೆ ನೀಡಿದ ಉಡುಗೊರೆ, ನನಗೆ ಪುಷ್ಟಿಯನ್ನು (ಐಶ್ವರ್ಯ) ನೀಡು, ಯಾಕೆಂದರೆ ಎಲ್ಲವೂ ನಿನ್ನ ಮೇಲೆಯೇ ಆಧಾರಪಟ್ಟಿದೆ. ಎಲ್ಲಾ ಜೀವಿಗಳಿಗೂ ಆಶ್ರಯ ನೀಡುವ ನೀನು ನನ್ನೆಲ್ಲಾ ದೋಷಗಳನ್ನೂ ಪರಿಹರಿಸು, ನನ್ನ ಕೆಟ್ಟಕೆಲಸಗಳನ್ನೆಲ್ಲಾ ನಾಶಪಡಿಸು, ಅಂತ ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯರು ಭೂಮಿ-ತಾಯಿಯ ಶ್ರೇಷ್ಠತೆಯನ್ನೊಪ್ಪಿ ಆಕೆಯನ್ನು ಸ್ತುತಿಸುವ, ಬೇಡಿಕೊಳ್ಳುವ ಒಂದು ಭಾವಪೂರ್ಣವಾದ, ಈಗಿನ ಕಾಲಕ್ಕೂ ಅನ್ವಯಿಸಬಹುದಾದ ತುಂಬಾ ಅದ್ಭುತವಾದ ಅರ್ಥಗರ್ಭಿತ ಸಾಲುಗಳಿವು.
ಹೌದು, ನಾವು ಭರತಖಂಡದ ಪುಣ್ಯ ಮಣ್ಣಿನಲ್ಲಿ ಹುಟ್ಟಿದವರು ಭೂಮಾತೆಯನ್ನು ಗೌರವಿಸುತ್ತೇವೆ. ಆಕೆಯನ್ನು ಪ್ರೀತಿಸುತ್ತೇವೆ, ಎಲ್ಲ ಚರಾಚರ ಜೀವಕೋಟಿಗೆ ಆಶ್ರಯದಾತೆಯಾಗಿರುವವಳ ಬಳಿ ತಾನೆಸಗಿದ ಪಾಪ ದುಷ್ಕೃತ್ಯ ಗಳೆಲ್ಲವನ್ನೂ ನಾಶಮಾಡು ಎಂದು ಆಕೆಯನ್ನೇ ಬೇಡಿಕೊಳ್ಳುತ್ತೇವೆ. ಇಂಥಾ ಅದ್ಭುತವಾದ ಪರಿಕಲ್ಪನೆ ಬಹುಷಃ ಇಡೀ ಭೂಮಂಡಲದ ಯಾವುದೇ ಮೂಲೆಯಲ್ಲಾದರೂ ಇರಲು ಸಾಧ್ಯವೇ... ? ಅಂತಹ ನಾವು ಭೂಮಿ ಮತ್ತಾಕೆಯ ಒಡಲೊಳಗೆ ಹುದುಗಿರುವ ಪ್ರಕೃತಿಯನ್ನು ಹಾಳುಗೆಡವುವ ಮಾತೇ ಇಲ್ಲ. ಕಾಡನ್ನೂ, ಕಾಡಿನ ಮರಗಳನ್ನೂ ಪೂಜಿಸುವ ನಾವು ಕಾಡಿನಲ್ಲಿನ ಒಂದೊಂದು ಮರವನ್ನು ತಮ್ಮ ಉಪಯೋಗಕ್ಕಾಗಿ ಕತ್ತರಿಸುವಾಗಲೂ ಆ ಮರವನ್ನು ಸ್ತುತಿಸಿ, ಪ್ರಾರ್ಥಿಸಿ, ಆ ಮರದ ಅನುಮತಿಯನ್ನು ಬೇಡಿ ಆ ಬಳಿಕವೇ ಕೊಡಲಿಯೇಟು ಹಾಕುತ್ತಿದ್ದ ತುಂಬಾ ಅಪರೂಪದ ಸಂಸ್ಕೃತಿ ಈ ದೇಶದ್ದು. ನಾವು ಯಾವತ್ತೂ ಆಕೆಯನ್ನು ಕಲುಷಿತಗೊಳಿಸುವ ಸಾಧ್ಯತೆಯೇ ಇರಲಿಲ್ಲ. ಹಾಗಾಗಿ ಪರಿಸರ ರಕ್ಷಿಸಿ, ಪರಿಸರ ಉಳಿಸಿ, ಅಂತೆಲ್ಲಾ ಅರಚಾಡುವ ಅಗತ್ಯವೇ ನಮಗಿರಲಿಲ್ಲ. ಆದುದರಿಂದ ಯಾವತ್ತೋ ಒಂದು ದಿನವನ್ನು ಪರಿಸರ ದಿನವನ್ನಾಗಿ ಆಚರಿಸುವ ಪ್ರಮೇಯವೇ ನಮಗೆ ಬರುತ್ತಿರಲಿಲ್ಲ. ಯಾಕೆಂದರೆ ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನವೂ ಪ್ರಕೃತಿಯನ್ನು ಸಂಭ್ರಮಿಸುವ ದಿನವೇ..!
ಆದರೆ , ನಮ್ಮ ದುರಾದೃಷ್ಟಕ್ಕೆ, ನಮ್ಮ ಹೆಮ್ಮೆಯ ಪುರಾತನ ಸಂಸ್ಕೃತಿ ಪರಕೀಯ ದಾಳಿಗೆ ಸಿಲುಕಿ ನಲುಗಿತು. ಅದೆಷ್ಟೋ ಅರ್ಥಪೂರ್ಣ ಆಚರಣೆಗಳು ನೆಲೆ ಕಳೆದುಕೊಂಡವು. ನಾವು ಭಾರತೀಯರು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ತೊರೆದು ಆಧುನಿಕತೆಯ ಗುಂಗಿಗೆ ಬಿದ್ದು, ಕೈಗಾರಿಕಾ ಕ್ರಾಂತಿಯ ಭ್ರಾಂತಿಯಲ್ಲಿ ತೇಲಿ, ನಮ್ಮ ಗೋರಿ ನಾವೇ ತೋಡಿಕೊಂಡೆವು.
ಮನುಷ್ಯ ಆಧುನಿಕತೆಯತ್ತ ಹೆಚ್ಚೆಚ್ಚು ವಾಲತೊಡಗಿದಂತೆಲ್ಲಾ, ಆತ ಬೃಹತ್ ಕೈಗಾರಿಕೆಗಳೇ ನಿಜವಾದ ಅಭಿವೃದ್ಧಿ ಅಂತ ಭಾವಿಸತೊಡಗಿ, ವಿಪರೀತ ನಗರೀಕರಣ, ಕೈಗಾರಿಕೀಕರಣಕ್ಕೆ ತೊಡಗಿದಂತೆಲ್ಲ, ಆತ ಭೂಮಿತಾಯಿಯನ್ನು ಮರೆಯತೊಡಗಿದ..!! ತನ್ನ ಸ್ವಂತ ಲಾಭಕ್ಕಾಗಿ ಬೆಟ್ಟ ಗುಡ್ಡ ಕಾಡುಗಳನ್ನೆಲ್ಲ ನಾಶಮಾಡಿದ. ಕೃತಕ ರಾಸಾಯನಿಕಗಳನ್ನು ಉತ್ಪಾದಿಸಿ ಭೂಮಿಯ ಒಡಲನ್ನು ಕಲುಷಿತಗೊಳಿಸತೊಡಗಿದ. ಸಹಜವಾಗಿ ಬದುಕುವುದನ್ನು ಮರೆತ ಮನುಷ್ಯ ಪ್ರಕೃತಿ ಸಹಜವಾಗಿ ದೊರಕುತ್ತಿದ್ದ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳತೊಡಗಿದ. ಪ್ರಾಕೃತಿಕವಾಗಿದ್ದ ಶುದ್ಧ ಮಣ್ಣು , ಶುದ್ಧ ನೀರು, ಶುದ್ಧ ಗಾಳಿ ಇವೆಲ್ಲವನ್ನೂ ಕಲುಷಿತಗೊಳಿಸಿ, ವಿಷಮಯವಾಗಿಸಿದ. ಕೊನೆಗೆ ತನ್ನ ಜೀವಕ್ಕೇ ಸಂಚಕಾರ ಬರುತ್ತದೆ ಅನ್ನುವ ಪರಿಸ್ಥಿತಿ ತಂದುಕೊಂಡ..!! ಈ ಮನುಷ್ಯ ಅದೆಷ್ಟು ಕೃತಘ್ನ ಅಂದರೆ, ತಾನು ಚೆನ್ನಾಗಿ ಬದುಕಬೇಕು ಅನ್ನುವ ಸ್ವಾರ್ಥದಲ್ಲಿ ಜಗತ್ತಿನ ಇತರೆಲ್ಲವನ್ನೂ ನಾಶಗೊಳಿಸುವ ರಾಕ್ಷಸೀ ಪ್ರವೃತ್ತಿ ಬೆಳೆಸಿಕೊಂಡ. ಭೂಮಿಯ ಮೇಲೆ ಪ್ರಾಕೃತಿಕವಾಗಿದ್ದ ಎಲ್ಲವನ್ನೂ ಬೇಕಾದಂತೆ ಬಳಸಿ ಬಿಸುಟು, ತನಗಿಚ್ಛೆ ಬಂದದ್ದನ್ನು ಕೃತಕವಾಗಿ ಸೃಷ್ಟಿಸಿ, ಅದನ್ನೂ ಬಳಸಿ ಎಲ್ಲೆಂದರಲ್ಲಿ ಬಿಸಾಡುವ ಮನುಷ್ಯನ ಸ್ವಾರ್ಥಕ್ಕೆ ಭೂಮಿಯ ಒಡಲೇ ಕೊಳಚೆ ಪ್ರದೇಶದಂತಾಯಿತು. ಬಳಿಕ ಈಗ ಜೀವಿಸುವುದೇ ಕಷ್ಟವೆಂದಾಗ, ಉಸಿರಾಡುವುದೇ ಕಷ್ಟವೆಂದಾಗ ಮನುಷ್ಯ ಅಸಹಾಯಕತೆಯಿಂದ ಪರಿತಪಿಸಿಕೊಳ್ಳತೊಡಗಿದ್ದಾನೆ
ಬೆಳೆಯುವ ಮಣ್ಣು ವಿಷಮಯವಾಗುತ್ತಿದ್ದಾಗ ಆತ ನಿರ್ಲಕ್ಷಿಸಿದ, ಕುಡಿಯುವ ನೀರು ವಿಷಮಯವಾಗುತ್ತಿದೆ ಅಂದಾಗಲೂ ಮನುಷ್ಯ ತಲೆಕೆಡಿಸಿಕೊಳ್ಳದೆ ಶುದ್ಧೀಕರಿಸಿದ ಬಾಟಲಿ ನೀರು ಕುಡಿದು ದರ್ಪ ತೋರಿಸಿದ..!! ಆದರೆ, ಯಾವಾಗ ಉಸಿರಾಡುವ ಗಾಳಿಯೇ ವಿಷಯುಕ್ತವಾಗತೊಡಗಿತೋ, ಬೃಹತ್ ನಗರಗಳಲ್ಲಿ ಯಾವಾಗ ವಾತಾವರಣ ಜೀವನವನ್ನೇ ದುಸ್ತರವಾಗಿಸುವಷ್ಟರ ಮಟ್ಟಿಗೆ ವಿಷಯುಕ್ತವಾಗತೊಡಗಿತೋ, ಆಗ ನಗರವಾಸಿ ಆಧುನಿಕ ಮನುಷ್ಯ ಗಾಬರಿ ಬೀಳತೊಡಗಿದ್ದಾನೆ. ಆತನಿಗೆ ಈಗ ವಾತಾವರಣ ಕೆಡಬಾರದು, ಉಸಿರಾಡಲು ಶುದ್ಧವಾದ ಗಾಳಿ ಬೇಕು, ಅಂತ ನಿಧಾನವಾಗಿಯಾದರೂ ಅನ್ನಿಸತೊಡಗಿದೆ...!! ಮಣ್ಣು, ನೀರು ಕಲುಷಿತವಾಗುವುದನ್ನು ತಿಳಿದೂ ನಿರ್ಲಕ್ಷ್ಯ ತೋರಿದ ಆಧುನಿಕ ಮನುಷ್ಯ ಈಗ ಗಾಳಿ ಕೂಡಾ ಉಸಿರಾಡಲು ಆಗದಷ್ಟು ಕೆಟ್ಟ ಮೇಲೆ ಕನಿಷ್ಠವಾದರೂ ಬುದ್ಧಿ ಕಲಿಯುವ ಸೂಚನೆ ಕಾಣಿಸುತ್ತಿದೆ..!! ೧೯೭೦ ರ ದಶಕದ ಆರಂಭದಿಂದಲೂ ವಿಶ್ವ ಸಂಸ್ಥೆ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಜಾಗೃತಿ ಮೂಡಿಸಲು, ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ, ಅದನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದು ಎಂಬುದರ ಅರಿವು ಮೂಡಿಸಲು, ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಕಳೆದ ಬಾರಿ ಭಾರತವೇ ಇದರ ಆತಿಥ್ಯ ವಹಿಸಿತ್ತು ಮತ್ತು ನಮ್ಮ ಭೂಮಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಘೋಷವಾಕ್ಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸಿತ್ತು. ಈ ಬಾರಿ ಆತಿಥ್ಯದ ಹೊಣೆ ಚೀನಾ ದೇಶದ್ದು. ವಾಯುಮಾಲಿನ್ಯವನ್ನು ಬಗ್ಗುಬಡಿಯೋಣ (Beat Air Pollution) ಎಂಬ ಘೋಷ ವಾಕ್ಯದೊಡನೆ ಇಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.
ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಲು, ಇಂಗಾಲ ಮುಂತಾದ ಅನಿಲಗಳ ಜೊತೆಗೆ ಬೇರೆ ವಿಷಯುಕ್ತ ಅನಿಲಗಳ ಪ್ರಮಾಣ ಹೆಚ್ಚಾಗಲು ಪ್ರಾಕೃತಿಕ ಕಾರಣಗಳಿಗಿಂತಲೂ ಮನುಷ್ಯಕೃತ ಕಾರಣಗಳೇ ಹೆಚ್ಚು. ಕೃಷಿ ಮಾಡಿ ತಾನು ಉಣ್ಣಲು ಬೆಳೆ ಬೆಳೆಯುವ ಮನುಷ್ಯ, ಕಟಾವು ಮಾಡಿದ ನಂತರ ಉಳಿದ ಹುಲ್ಲುಗಳ ಕಾಂಡಗಳನ್ನು ಉರಿಸಿ ವಾತಾವರಣದ ಗಂಭೀರ ಮಾಲಿನ್ಯಕ್ಕೆ ಕಾರಣವಾಗುತ್ತಾನೆ. ಬೆಳೆದ ಬೆಳೆಯನ್ನು ಬೇಯಿಸಿ ತಿನ್ನುವಾಗಲೂ ಕಸಕಡ್ಡಿಗಳನ್ನು, ಮರದ ಟೊಂಗೆಗಳನ್ನು ಉರಿಸಿ ಮತ್ತಷ್ಟು ಮಾಲಿನ್ಯಕ್ಕೆ ಕಾರಣನಾಗುತ್ತಾನೆ. ಜಗತ್ತಿನ ೧೯೩ ದೇಶಗಳಲ್ಲಿ ೯೭ ದೇಶಗಳೀಗ ಕಡಿಮೆ ಹೊಗೆ ಉತ್ಪಾದಿಸುವ ಅಡುಗೆ ಇಂಧನಗಳ ಬಳಕೆ ಮಾಡತೊಡಗಿವೆ. ಭಾರತ ಕೂಡಾ ೨೦೧೪ರ ನಂತರ ಶ್ರೀ ಮೋದೀಜಿಯವರ ಆಡಳಿತ ಬಂದ ಮೇಲೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯನ್ವಯ ದೇಶಾದ್ಯಂತ ಸುಮಾರು ೭೧೪ ಜಿಲ್ಲೆಗಳಲ್ಲಿ ಸುಮಾರು ಏಳು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲದ ಸಂಪರ್ಕ ಒದಗಿಸುವ ಮೂಲಕ ಭಾರೀ ಪ್ರಮಾಣದಲ್ಲಿ ವಾತಾವರಣ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ವಾಹನಗಳಿಂದ ಹೊರಸೂಸುವ ವಿಷಮಯ ಗಾಳಿಯನ್ನು ನಿಯಂತ್ರಿಸಲೂ ಭಾರತ್ ಸ್ಟೇಜ್ ಎಮಿಶನ್ ಸ್ಟ್ಯಾಂಡರ್ಡ್ (Bharat stage emission standards -BSES ) ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ೨೦೧೦ ರಲ್ಲೇ ನಾಲ್ಕನೆಯ ಹಂತದ BSES ಕೇವಲ ಆಯ್ದ ಕೆಲವೇ ನಗರಗಳಲ್ಲಿ ಜಾರಿಯಲ್ಲಿದ್ದರೂ ಮೋದೀಜಿಯವರ ಸರಕಾರ ಬಂದ ನಂತರ ೨೦೧೭ರಲ್ಲಿ ಇದನ್ನು ಪೂರ್ತಿ ದೇಶಕ್ಕೆ ಅನ್ವಯಿಸಿ ಜಾರಿಗೊಳಿಸಲಾಯಿತು. ಈಗ ಐದನೆಯ ಹಂತದ BSES ಬದಲಿಗೆ ನೇರವಾಗಿ ಆರನೆಯ ಹಂತದ BSES ಅನ್ನೇ ಜಾರಿಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ದೇಶದಲ್ಲೇ ಅತ್ಯಂತ ಗಂಭೀರವಾದ ವಾತಾವರಣ ಮಾಲಿನ್ಯವಿರುವ ದೆಹಲಿಯಲ್ಲಿ ೨೦೧೮ರಲ್ಲೇ ಆರನೆಯ ಹಂತದ BSES ಅನ್ನೇ ಜಾರಿಗೊಳಿಸಲಾಗಿದೆ ಮತ್ತು ೨೦೨೦ರಲ್ಲಿ ದೇಶದಾದ್ಯಂತ ಇದನ್ನು ಜಾರಿಗೊಳಿಸಲಾಗುವುದು.
ಗಾಳಿಯಲ್ಲಿ ಪ್ರಾಕೃತಿಕವಾಗಿ ಇಂಗಾಲದ ಪ್ರಮಾಣ ಜಾಸ್ತಿಯಾದಾಗಲೆಲ್ಲಾ ಇಂಗಾಲವನ್ನು ಹೀರಿಕೊಂಡು ವಾತಾವರಣದಲ್ಲಿ ಅದರ ಪ್ರಮಾಣವನ್ನು ತಗ್ಗಿಸಿ, ಸರಿದೂಗಿಸುವ ಕೆಲಸವನ್ನು ಪ್ರಕೃತಿದತ್ತವಾಗಿ ಮಾಡುತ್ತಿದ್ದದ್ದು ನಮ್ಮ ಸಮುದ್ರಗಳು ಮತ್ತು ದಟ್ಟ ನಿತ್ಯ ಹರಿದ್ವರ್ಣ ಕಾಡುಗಳು. ಸಮುದ್ರಗಳು ವಾತಾವರಣದಲ್ಲಿದ್ದ ಇಂಗಾಲವನ್ನು ತಮ್ಮೊಡಲಲ್ಲಿ ಕರಗಿಸುವ ಸಾಮರ್ಥ್ಯ ಮಾತ್ರ ಹೊಂದಿದ್ದರೆ ನಮ್ಮ ಮಳೆಕಾಡುಗಳು ಇಂಗಾಲವನ್ನು ಹೀರಿಕೊಳ್ಳುವುದಲ್ಲದೆ ತಿರುಗಿ ಮನುಷ್ಯನ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಹಾಗಾಗಿ ಭಾರತದಲ್ಲಿ ಇದ್ದ ಮಳೆಕಾಡುಗಳು ಹಿಂದೆಲ್ಲಾ ವಾತಾವರಣವನ್ನು ಶುದ್ಧೀಕರಿಸಿ, ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದವು. ನಮ್ಮ ದೇಶದಲ್ಲಿ ನಿತ್ಯ ಹರಿದ್ವರ್ಣ ಮಳೆಕಾಡುಗಳು ದೊಡ್ಡ ವಿಸ್ತಾರದಲ್ಲಿದ್ದದ್ದು ಪಶ್ಚಿಮ ಘಟ್ಟದ ಸೆರಗಿನಲ್ಲೇ, ಅದರಲ್ಲೂ ನಮ್ಮ ಜಿಲ್ಲೆಯ ಕಾಡುಗಳು ನಮ್ಮ ಜಿಲ್ಲೆಗೆ ಮಾತ್ರವಲ್ಲದೆ ನಮ್ಮ ರಾಜ್ಯಕ್ಕೇ ಪರಿಶುದ್ಧ ಗಾಳಿ ಸರಬರಾಜು ಮಾಡುವ ಬೃಹತ್ ಕಾರ್ಖಾನೆಗಳಂತಿದ್ದವು . ಆದರೆ ಕಳೆದೊಂದು ಶತಮಾನದಿಂದ ಅವ್ಯಾಹತವಾಗಿ ಅರಣ್ಯ ನಾಶ ನಡೆಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಅಂದಾಜು ಮೂವತ್ತು ಸಾವಿರ ಚದರ ಕಿಮೀ ಅರಣ್ಯ ಭಾರತದಲ್ಲಿ ನಾಶವಾಗಿದೆ ಅಂತ ವರದಿಗಳು ಹೇಳುತ್ತವೆ. ಇದರಲ್ಲಿ ಅರ್ಧದಷ್ಟು ಕೈಗಾರಿಕೆಗಳಿಗೆ ಬಲಿಯಾದರೆ ಇನ್ನರ್ಧ ಜನರೇ ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡರು. ಕಾಡಿನ ವಿಸ್ತಾರ ವಿಪರೀತವಾಗಿ ಚಿಕ್ಕದಾದವು. ಆಕಾಶಕ್ಕೆ ಚಪ್ಪರ ಹಾಕುತ್ತಿದ್ದ ಬೃಹತ್ ಮರಗಳೆಲ್ಲಾ ಕೊಡಲಿಗಳಿಗೆ ಬಲಿಯಾಗಿ ಶ್ರೀಮಂತರ ಮನೆಯ ಫರ್ನೀಚರ್ ಗಳಾದವು. ಆ ಮರಗಳು ತಾವು ಇಂಗಾಲವನ್ನು ಉಸಿರಾಡಿಕೊಂಡು ಜೀವಂತ ಇದ್ದಾಗ, ಮನುಷ್ಯನಿಗೆ ತಿರುಗಿ ಉಸಿರಾಡಲು ಆಮ್ಲಜನಕ ಕೊಡುತ್ತಿದ್ದವು. ಆದರೆ ತಾವೇ ಕೊಡಲಿಗೆ ಬಲಿಯಾಗಿ ಉಸಿರಾಟ ನಿಲ್ಲಿಸಿದ ಮೇಲೆ ಆಮ್ಲಜನಕವನ್ನೆಲ್ಲಿಂದ ಕೊಟ್ಟಾವು? ಸತ್ತ ಮರಗಳ ಫರ್ನೀಚರ್ ಗಳಿಂದ ಆಮ್ಲಜನಕ ಹೊರಸೂಸಲೇ ಇಲ್ಲ...!! ಅವುಗಳ ಮೇಲೆ ಕುಳಿತ ದೊಡ್ಡ ಮನುಷ್ಯರಿಗೀಗ ಉಸಿರು ಕಟ್ಟುತ್ತಿರುವ ಅನುಭವ. ಈ ಮಳೆ ಕಾಡುಗಳ ವಿಸ್ತಾರ ಚಿಕ್ಕದಾದಂತೆಲ್ಲ, ಒಂದು ಆಘಾತಕಾರೀ ವಿಷಯ ಹೊರಬಿದ್ದಿದೆ. ಮಳೆಕಾಡುಗಳು ವಾತಾವರಣದಲ್ಲಿನ ಇಂಗಾಲವನ್ನು ಹೀರಿಕೊಳ್ಳುವುದನ್ನು ಈಗ ನಿಲ್ಲಿಸಿಬಿಟ್ಟಿವೆ ಅಂತ ಇತ್ತೀಚಿನ ಹೊಸ ಸಂಶೋಧನೆಗಳು ಹೇಳುತ್ತಿವೆ...! ಈ ಸುದ್ದಿ ಬೆಚ್ಚಿ ಬೀಳಿಸುವಂತಿದೆ...! ಶತಮಾನಗಳ ಕಾಲ ಮನುಷ್ಯ ನಡೆಸಿದ ಭೀಕರ ಅತ್ಯಾಚಾರಕ್ಕೆ ನಮ್ಮ ಕಾಡುಗಳೀಗ ಪ್ರತೀಕಾರ ತೀರಿಸುತ್ತಿವೆಯ? ಪ್ರಕೃತಿಯೇ ದುರುಳ ಮನುಷ್ಯನಿಗೆ ಬುದ್ಧಿ ಕಲಿಸಲು ಇಂಥದ್ದೊಂದು ಆಟವಾಡಿದೆಯ?
ಈಗ ಉಸಿರಾಡುವ ಗಾಳಿಗೇ ಸಂಚಕಾರ ಒದಗಿದೆ ಅಂದಾಗ ನಿಜಕ್ಕೂ ಭಯವಾಗುತ್ತದೆ..!! ಪ್ರಸಕ್ತ ಪರಿಸ್ಥಿತಿಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಸಮಸ್ಯೆಯಿನ್ನೂ ತೀವ್ರ ರೂಪ ಪಡೆದಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ದೆಹಲಿ ಮತ್ತು ಸುತ್ತಮುತ್ತ ಅದು ಅಪಾಯಕಾರೀ ಮಟ್ಟ ತಲುಪಿದೆ. ಮನುಷ್ಯನಿಗೆ ಪ್ರಾಣಭಯವೂ ಶುರುವಾಗಿದೆ. ಇಂತ ಪರಿಸ್ಥಿತಿ ಬೆಂಗಳೂರು ಮತ್ತು ಕರ್ನಾಟಕದ ಇತರ ನಗರಗಳಿಗೂ ಸಧ್ಯದಲ್ಲೇ ಕಾಲಿಡುವ ಸಾಧ್ಯತೆಯೂ ಇದೆ...!! ಆದರೆ ಅಷ್ಟರಲ್ಲಾಗಲೇ ಇದೊಂದು ಬಿಸಿನೆಸ್ ನ ರೂಪವನ್ನೂ ಪಡೆದುಕೊಂಡಾಗಿದೆ! ಹತ್ತು ಹದಿನೈದು ವರ್ಷದ ಹಿಂದೆ ಕುಡಿಯಲು ಶುದ್ಧ ನೀರಿನ ಸಮಸ್ಯೆ ತಲೆದೋರಿದಾಗ ಹೇಗೆ ಕಾರ್ಪೊರೇಟ್ ಕಂಪೆನಿಗಳು ಬಾಟಲಿ ನೀರನ್ನು ಮಾರುಕಟ್ಟೆಗೆ ತಂದು ನೀರನ್ನು ಕೂಡ ಒಂದು ಸರಕಿನಂತೆ ತಂದು ನಿಲ್ಲಿಸಿದವೋ ಹಾಗೆ, ಅದೇ ರೀತಿ ಈಗ ಶುದ್ಧ ಗಾಳಿಯ ಕೊರತೆಯನ್ನು ತುಂಬಲು ಕಾರ್ಪೊರೇಟ್ ಜಗತ್ತು ಗಾಳಿಯನ್ನೇ ಮಾರಲು ತುದಿಗಾಲಲ್ಲಿ ನಿಂತಿವೆ..!! ಈಗಾಗಲೇ ಏರ್ ಪ್ಯೂರಿಫೈಯರ್ ಗಳು ಮಾರುಕಟ್ಟೆಗೆ ಬಂದಾಗಿದೆ, ಏರ್ ಕಂಡೀಷನರ್ ಗಳ ರೀತಿಯೇ ಒಂದು ಕಚೇರಿಯಲ್ಲೋ ಮನೆಯಲ್ಲೋ ಹಾಲಿನ, ರೂಮಿನ ಮೂಲೆಯಲ್ಲಿ ತೆಪ್ಪಗೆ ಏರ್ ಪ್ಯೂರಿಫೈಯರ್ ಒಂದು ಸದ್ದಿಲ್ಲದೇ ನೀವು ಉಸಿರಾಡಲೆಂದೇ ಗಾಳಿಯನ್ನು ಶುದ್ಧೀಕರಿಸುತ್ತಾ ಕುಳಿತುಬಿಟ್ಟಾಗಿದೆ..! ಏರ್ ಪ್ಯೂರಿಫೈಯರ್ ಗಳಲ್ಲಿ ಈಗಾಗಲೇ ವಿವಿಧ ಕಂಪೆನಿಗಳ ವಿವಿಧ ಗಾತ್ರಗಳ ಮಾಡೆಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ..!
ಇಂಥ ಸಂದರ್ಭದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಈ ವಾತಾವರಣವನ್ನು ಕಲುಷಿತವಾಗದಂತೆ ಕಾಯ್ದುಕೊಳ್ಳಲು, ನಿಜಕ್ಕೂ ಕಠಿಣ ಕಾನೂನುಗಳ ಅಗತ್ಯವಿದೆ..!! ಯಾಕೆಂದರೆ ನಮ್ಮದೇ ನೆಲದ ಭವ್ಯ ಸಂಸ್ಕೃತಿಯನ್ನು, ಉದಾತ್ತ ಚಿಂತನೆಗಳನ್ನು, ಮೌಲ್ಯಗಳನ್ನು ತೊರೆದು ನಾವೀಗ ಬಹುದೂರ ಬಂದಿದ್ದೇವೆ. ಈ ಹಿಂದೆ ೨೦೦೯ರಲ್ಲಿ ಅಂದಿನ ಯು ಪಿ ಏ ಸರಕಾರ ಅವಸರವಾಗಿ ಗ್ರೀನ್ ಟ್ರಿಬ್ಯುನಲ್ ಮಸೂದೆಯನ್ನು ತರಲು ಹೊರಟಾಗ ಆ ಮಸೂದೆಯಲ್ಲಿದ್ದ ಲೋಪದೋಷಗಳನ್ನು ಅಂದು ಎಳೆ-ಎಳೆ ಯಾಗಿ ಸದನದಲ್ಲೇ ಬಿಡಿಸಿಟ್ಟು, ಅದರಲ್ಲಿ ಸೂಕ್ತ ಮಾರ್ಪಾಡುಗಳನ್ನು,ಬದಲಾವಣೆಗಳನ್ನು ತರಲು ಸಾಕಷ್ಟು ಪ್ರತ್ನಪಟ್ಟಿದ್ದೆ. ಇಂದು ಮೋದೀಜಿಯವರು ಪ್ರಧಾನಿಗಳಾದ ಮೇಲೆ ಪರಿಸರದ ರಕ್ಷಣೆಗಾಗಿ ಅತ್ಯಂತ ವಿಸ್ತಾರವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಇನ್ನಷ್ಟು ಕಾಯ್ದೆಗಳು, ಯೋಜನೆಗಳು ಬರಲಿಕ್ಕಿವೆ. ಒಟ್ಟಿನಲ್ಲಿ ಸ್ವಚ್ಛ ಭಾರತದ ಪರಿಕಲ್ಪನೆಯ ಒಳಗೆಯೇ ಸ್ವಚ್ಛ ಕಲುಷಿತ ರಹಿತ ಪರಿಸರ, ಪ್ರಕೃತಿಯ ಪರಿಕಲ್ಪನೆಗಳೂ ಮಿಳಿತವಾಗಿದೆ.
ಒಟ್ಟಾರೆ ನಮ್ಮ ಜೀವನ ಪದ್ಧತಿ ನಮ್ಮ ಮೂಲ ಸನಾತನ ಆಶಯದಂತೆ ನಡೆದರೆ ಈ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ!