Infinite Thoughts

Thoughts beyond imagination

ಅಪ್ರತಿಮ ಮಹಾವೀರ ಮಹಾರಾಣಾ ಪ್ರತಾಪ ಸಿಂಗ್ ಜಯಂತಿ ಇಂದು!

ಅಪ್ರತಿಮ ಮಹಾವೀರ  ಮಹಾರಾಣಾ ಪ್ರತಾಪ ಸಿಂಗ್ ಜಯಂತಿ ಇಂದು!

 

ಹಿಂದೂ ಪಂಚಾಂಗದ ಪ್ರಕಾರ ವಿಕ್ರಮ ಶಕೆ ೧೫೯೭ರ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ತೃತೀಯದಂದು ಹುಟ್ಟಿದ ಮಹಾರಾಣಾ ಪ್ರತಾಪರ ೪೭೯ನೇ ಜನ್ಮ ದಿನವಿಂದು. ಭಾರತವನ್ನು ಆಕ್ರಮಿಸಿದ ಮುಘಲರಿಗೆ ಸೆಡ್ಡು ಹೊಡೆದ ಈ ಮಹಾಪರಾಕ್ರಮಿ ಹುಟ್ಟಿ ಇಷ್ಟು ವರ್ಷಗಳು ಕಳೆದರೂ ನಾವು, ಆತನ ಜಯಂತಿಯ ದಿನ ಯಾವುದೇ ರೀತಿಯ ಆಚರಣೆ ಮಾಡುತ್ತಿರಲಿಲ್ಲ.  ಒಟ್ಟಾರೆ ಸಂಪೂರ್ಣವಾಗಿ ಈ ಮಹಾನ್ ಯೋಧನನ್ನು ನೆನಪು ಮಾಡಿಕೊಳ್ಳದೆ ಕಳೆದು ಹೋಗುತ್ತಿತ್ತು.  ಇದಕ್ಕೆಲ್ಲ ಕಾರಣ ನಮಗೆ ಅನೂಚಾನವಾಗಿ ಶಾಲಾ ದಿನಗಳಿಂದಲೇ ಬೋಧಿಸಿದ ತಿರುಚಿದ ಚರಿತ್ರೆ-ಇತಿಹಾಸ.  ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ತೀವ್ರವಾಗಿ ವ್ಯಾಪಿಸಿದ ಕಾರಣ, ಎಲ್ಲರಿಗೂ ಎಲ್ಲಾ ಮಾಹಿತಿಗಳೂ ಸುಲಭ ಲಭ್ಯವಾದ ಕಾರಣ, ಸ್ವಾತಂತ್ರ್ಯ ದೊರೆತಾಗಿನಿಂದಲೂ ಸತತವಾಗಿ ಭಾರತೀಯ ಮಕ್ಕಳಿಗೆ ಸುಳ್ಳಿನ ಕಂತೆಯನ್ನೇ ಇತಿಹಾಸವಾಗಿ ಬೋಧಿಸುತ್ತಾ ಬಂದಿದ್ದ ಎಡಚರ ತಿರುಚು ಸಿದ್ಧಾಂತಗಳ ಲಾಬಿ ಸೋಲತೊಡಗಿದೆ.  ಭಾರತೀಯರ ಪ್ರಭುದ್ಧ ಮನಸುಗಳಿಗೆ ನೈಜ ಇತಿಹಾಸ ಏನು ಎಂಬ ಬಗ್ಗೆ, ನೈಜ ಹೀರೋಗಳು ಯಾರು ಎಂಬ ಬಗ್ಗೆ ಮಾಹಿತಿ ಸಿಗತೊಡಗಿದೆ.  ಹಾಗಾಗಿ ಪರದೇಶದಿಂದ ಬಂದ ದಾಳಿಕೋರ ಮತಾಂಧರನ್ನೆಲ್ಲಾ "ಗ್ರೇಟ್" ಅನ್ನುತ್ತಾ ಪರಾಕು ಹಾಡುವ ಕಾಲ ಮುಗಿದು ಮಹಾರಾಣಾ ಪ್ರತಾಪ್ ರಂಥ ಶೂರರನ್ನು, ಈ ದೇಶ, ಧರ್ಮ ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ. ಗೌರವ, ಸ್ವಾಭಿಮಾನಗಳನ್ನೂ ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ರಾಣಾ ಪ್ರತಾಪ್ ರಂಥ ವೀರರನ್ನು ಆರಾಧಿಸುವ ಕಾಲ ಬಂದಿದೆ. 

 

ರಾಣಾ ಪ್ರತಾಪ್ ಇತಿಹಾಸದ ನೈಜ ಹೀರೊ ಅಗಲಿಕ್ಕೂ ಹಲವಾರು ಕಾರಣಗಳಿವೆ. ಆತ ಎಂದೂ ಪರಕೀಯ ದಾಳಿಕೋರರಾದ ಮುಘಲರನ್ನು, ಅವರ ಪರಕೀಯ ಧರ್ಮ, ಸಂಸ್ಕೃತಿಯನ್ನೂ ಒಪ್ಪಲೇ ಇಲ್ಲ.  ಅಕ್ಬರ್ ಅದೆಷ್ಟೇ ಆಮಿಷಗಳನ್ನು ಒಡ್ಡಿದರೂ ಅದಕ್ಕೆ ಬಲಿಯಾಗಲಿಲ್ಲ.  ಅಕ್ಬರ್ ನ ಜೊತೆಗೆ ತನ್ನದೇ ಸಮುದಾಯದ ರಜಪೂತರು ಸೇರಿಕೊಂಡು ತನ್ನ ವಿರುದ್ಧ ಪಿತೂರಿ, ದಾಳಿಗಳನ್ನು ಮಾಡಿದರೂ ಮಹಾರಾಣಾ ಬೆದರಲಿಲ್ಲ...ತಲೆಬಾಗಲಿಲ್ಲ!!! ತನಗೊಂದು ರಾಜಧಾನಿಯೇ ಇಲ್ಲದಿದ್ದರೂ, ತನ್ನ ಅರ್ಧ ರಾಜ್ಯವನ್ನೇ ಮೊಘಲರ ಜೊತೆಗೆ ಸೇರಿದ್ದ ತನ್ನವರೇ ವಶಪಡಿಸಿಕೊಂಡರೂ ಆತ ಜಗ್ಗಲಿಲ್ಲ.  ತನ್ನ ಹೋರಾಟಗಳಿಂದ ಹಿಂದೆ ಸರಿಯಲಿಲ್ಲ.  ಕಾಡಿನಲ್ಲೇ ವಾಸಿಸಿ, ಮತ್ತೆ ಸೈನ್ಯ ಕಟ್ಟಿ, ತಾನು ಕಳೆದುಕೊಂಡ ರಾಜ್ಯದ ಬಹುಪಾಲನ್ನು ಮರಳಿ ವಶಪಡಿಸಿಕೊಂಡ ಧೀರ ಆತ. ತಾನು ಸಾಯುವವರೆಗೂ ಯಾವತ್ತಿಗೂ. ಯಾರಿಗೂ ತಲೆಬಾಗದ ಯಾರಿಗೂ ಸೋಲದ, ಸೋಲೊಪ್ಪಿಕೊಳ್ಳದ ಅದಮ್ಯ ಸ್ವಾಭಿಮಾನಿ ಆತ.  ದೊಡ್ಡ ಸೈನ್ಯವನ್ನು ಎದುರಿಸಲು, ತನ್ನ ಸಣ್ಣ ಪರಾಕ್ರಮಶಾಲೀ ಸೈನ್ಯದೊಡನೆ ಆತ ಮಾಡುತ್ತಿದ್ದ ಯುದ್ಧವ್ಯೂಹಗಳಿಗೆ ಅವನಿಗೆ ಅವನೇ ಸಾಟಿ.  ಕೆಲವೇ ಕೆಲವು ಸೈನಿಕರ ಜೊತೆಗೆ ಆತ ನಡೆಸುತ್ತಿದ್ದ ಮಿಂಚಿನ ವೇಗದ ದಾಳಿಗಳು, ಗುಡ್ಡಗಾಡು ಭಿಲ್ ಜನರ ಬಿಲ್ಲುಗಾರರ ತಂಡ ಕಟ್ಟಿಕೊಂಡು ಆತ ಬೃಹತ್ ಮೊಘಲ್ ಸೈನ್ಯಕ್ಕೆ ಎಸಗುತ್ತಿದ್ದ ಹಾನಿ, ಇದೆಲ್ಲದರ ಜೊತೆಗೆಯೇ ಆತನ ದೇಹಧಾರ್ಡ್ಯ, ಎತ್ತರ, ಗಾತ್ರ, ಆತ ಬಳಸುತ್ತಿದ್ದ ಖಡ್ಗ, ಭರ್ಚಿ ಮುಂತಾದ ಆಯುಧಗಳ ಗಾತ್ರ, ತೂಕ, ಆತನ ಶಿರಸ್ತ್ರಾಣ, ಯುದ್ಧಕವಚಗಳ  ಭಾರಿ ಗಾತ್ರ ಮತ್ತು ತೂಕ ಮತ್ತಿತರ ವಿಷಯಗಳ ಕುರಿತು ಅನೇಕ ದಂತಕತೆಗಳೇ ಇವೆ.  ಆತನ ಮೆಚ್ಚಿನ ಕುದುರೆ ಚೇತಕ್ ಬಗ್ಗೆಯೂ ರಸವತ್ತಾದ ದಂತಕಥೆಗಳಿವೆ. ಯುದ್ಧಕಾಲದಲ್ಲಿ ಆತ ತನ್ನ ಕುದುರೆ ಚೇತಕ್ ಗೆ ಆನೆಯ ರೀತಿಯೇ ಕಾಣಿಸುವಂತೆ ಅದರ ಮೂತಿಗೆ ಕೃತಕ ಸೊಂಡಿಲನ್ನು ಸಿಕ್ಕಿಸಿ ದಾಳಿ ಮಾಡುವ ತಂತ್ರದ ಬಗ್ಗೆ, ಚೇತಕ್ ರಾಣಾ ಮತ್ತವನ ಆಯುಧ, ಯುದ್ಧಕವಚಗಳ ಭರವನ್ನೆಲ್ಲ ಹೊತ್ತುಕೊಂಡು ಒಂದೇ ನೆಗೆತಕ್ಕೆ ೨೦ ಅಡಿಗಿಂತಲೂ ಹೆಚ್ಚು ಅಗಲದ ಕಂದರವನ್ನು ಹಾರುತ್ತಿದ್ದ ರೋಚಕ ಕತೆಗಳನ್ನು, ಹಳದೀಘಾಟ್ ಯುದ್ಧದಲ್ಲಿ ಹೀಗೆಯೇ ಹಾರುವಾಗ ವೈರಿ ಸೈನಿಕರ ಬಣಕ್ಕೆ ತುತ್ತಾಗಿ ಸಾಯುವ ಹೃದಯವಿದ್ರಾವಕ ಕತೆಗಳನ್ನೆಲ್ಲಾ ಇವತ್ತಿಗೂ ರಾಜಸ್ತಾನ ಜಾನಪದೀಯ ಗಾಯಕರು ರಸವತ್ತಾಗಿ ಹಾಡುತ್ತಾರೆ..!!  ಹತ್ತತ್ತಿರ ಐನೂರು ವರ್ಷಗಳ ನಂತರವೂ ಜನಮಾನಸದಲ್ಲಿ ದಂತಕತೆಯಾಗಿ ನೆಲೆಯಾಗಿರುವ ಮಹಾರಾಣಾ ನಂತವರ ಜೀವನಚರಿತ್ರೆಯನ್ನು  ನಮ್ಮ ಆಧುನಿಕ ಭಾರತದ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದ್ದರಿಂದಲೇ ಅಂದಿನಿಂದ ಇಂದಿನವರೆಗೂ ಭಾರತೀಯ ವಿದ್ಯಾರ್ಥಿಗಳು "ಅಕ್ಬರ್ ದಿ  ಗ್ರೇಟ್" ಎಂಬಂತ ಶುದ್ಧ ಅಪದ್ಧವನ್ನೇ ಉರುಹೊಡೆದು ಸತ್ಯವೆಂದೇ ತಿಳಿದಿದ್ದರು. 

ರಾಣಾ ಪ್ರತಾಪ್ ಸಿಂಗ್ ತಾನು ಮೇವಾಡದ ರಾಜನಾಗಿ ಅಧಿಕಾರ ಸ್ವೀಕರಿಸುವ ಮೊದಲೇ ಆತನ ತಂದೆ ಉದಯ ಸಿಂಗ್ ಅಕ್ಬರನ ಸೈನ್ಯಕ್ಕೆ ಸೋತು ತನ್ನ ಚಿತ್ತೋಡಗಢ ಕೋಟೆಯನ್ನೊಪ್ಪಿಸಿ ರಾಜ್ಯಭ್ರಷ್ಟನಾಗಿದ್ದ.  ಅಕ್ಬರ್ ಚಿತ್ತೋಡಗಢ ಕೋಟೆಯನ್ನು ವಶಪಡಿಸಿಕೊಳ್ಳುವಾಗ ಅಲ್ಲಿದ್ದ ರಜಪೂತ ಸ್ತ್ರೀಯರು ತಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ "ಜೌಹರ್" ಆಚರಿಸಿ ಸಾಮೂಹಿಕವಾಗಿ ಉರಿಯುವ ಅಗ್ನಿ ಪ್ರವೇಶಿಸಿ ಆತ್ಮಾಹುತಿ ಮಾಡಿಕೊಂಡರು. ಅಕ್ಬರ್ ಆ ಕೋಟೆಯೊಳಗಿದ್ದ ಸುಮಾರು ಇಪ್ಪತ್ತೈದು ಸಾವಿರ ಜನರ ಕಗ್ಗೊಲೆ ಮಾಡಿದ. ಇದನ್ಯಾವ ಎಡಚ ಇತಿಹಾಸಕಾರನೂ ಬರೆಯುವುದಿಲ್ಲ.  ಅಕ್ಬರನ ಕ್ರೌರ್ಯವನ್ನು ಕಣ್ಣಾರೆ ಕಂಡರೂ, ಆತನಿಗೆ ಹೆದರಿಯೋ, ಅಥವಾ ಆತನ ಆಮಿಷಗಳಿಗೆ ಒಳಗಾಗಿಯೋ ಆತನ ಜೊತೆಗೆ ರಜಪೂತರೇ ಕೈಜೋಡಿಸಿದರು. ರಾಜಾ ಅಥವಾ ಮಿರ್ಜಾ ಮಾನ್ ಸಿಂಗ್ ಕೂಡಾ ಅಂಥವರಲ್ಲೊಬ್ಬ. ಆತ ಹೆಸರಿಗೇನೋ ಮಾನ್ ಸಿಂಗ್ ಆದರೆ ಆತನಿಗೆ ಮಾನವೇ ಇರಲಿಲ್ಲ!  ಅಂದು ಅಕ್ಬರ್ ಕೊಡುವ ಹಣ, ಸ್ಥಾನಮಾನಗಳ ಆಮಿಷಕ್ಕೆ ತಮ್ಮನ್ನೇ ಮಾರಿಕೊಂಡ ಹಿಂದೂ ರಾಜರುಗಳಿಗೇನೂ ಕೊರತೆ ಇರಲಿಲ್ಲ.  ಇವರ ಪೈಕಿ ಈ ಮಾನ್ ಸಿಂಗ್ ಪ್ರಮುಖ.  ಮಹಾರಾಣಾ ಪ್ರತಾಪನ ಮೇಲೆ ದಾಳಿನಡೆಸಲು ಅಕ್ಬರನಿಗೆ ಸಾಥ್ ನೀಡಿದ್ದೇ ಈ ಮಾನ್ ಸಿಂಗ್.  ಅದ್ಯಾಕೋ ಗೊತ್ತಿಲ್ಲ , ಅಕ್ಬರ್ ಚಿತ್ತೋಡಗಢ ವಶಪಡಿಸಿಕೊಂಡಾಗ ರಾಣಾ ಪ್ರತಾಪ್ ಇನ್ನೂ ಮೇವಾಡದ ರಾಜನಾಗಿರಲಿಲ್ಲ.  ರಾಣಾ ಪ್ರತಾಪ್ ನ ಪೂರ್ವಜರಾಳುತ್ತಿದ್ದ ಮೇವಾಡದ ಬಹುಭಾಗವನ್ನು ಅಕ್ಬರ್ ಇತರ ರಜಪೂತರ ಸಹಾಯದಿಂದಲೇ ಗೆದ್ದಿದ್ದರೂ ಹೇಗಾದರೂ ಮಹಾರಾಣಾ ತನಗೆ ಶರಣಾಗಬೇಕು ಅಂತ ಅಕ್ಬರನಿಗೆ ಕೆಟ್ಟ ಹಠವಿತ್ತು.  ಅದಕ್ಕೋಸ್ಕರ ರಾಣಾ ಪ್ರತಾಪನಲ್ಲಿಗೆ ಹಲವಾರು ರಾಯಭಾರಿಗಳನ್ನು ಅಕ್ಬರ್ ಕಳಿಸಿದ್ದ.  ಆದರೂ ರಾಣಾ, ಅಕ್ಬರನ ಯಾವುದೇ ಆಮಿಷಗಳಿಗೆ ಬಲಿಯಾಗದೆ ರಜಪೂತ ಸ್ವಾಭಿಮಾನದ ಸಂಕೇತವಾಗಿ ಎದೆಸೆಟೆಸಿ ನಿಂತಿದ್ದ.  ಇದನ್ನು ಸಹಿಸದ ಅಕ್ಬರ ರಜಪೂತನಾದ ಮಾನಸಿಂಗನನ್ನೇ ಕಳಿಸಿದ. 

ಮಾನ ಸಿಂಗ್, ಸಯ್ಯದ್ ಅಹ್ಮದ್ ಖಾನ್, ಅಹ್ಮದ್ ಖಾನ್ ಬರ್ಹಾ, ಸಯ್ಯದ್ ಹಶೀಮ್ ಬರ್ಹಾ, ಘಿಯಾಸುದ್ದೀನ್ ಅಲಿ ಅಸಫ್ ಖಾನ್, ಮುಲ್ಲಾ ಖಾಜಿ ಖಾನ್, ಮೀಹ್ತಾರ್ ಖಾನ್ ಮೊದಲಾದ ಮುಸ್ಲಿಂ ಸರದಾರರ ಜೊತೆಗೇ ಜಗನ್ನಾಥ್ ಕಚ್ವಾ, ಮಾಧೋ ಸಿಂಗ್ ಕಚ್ವಾ ಮುಂತಾದ ರಜಪೂತರನ್ನೂ ಸೇರಿಸಿಕೊಂಡು ಮಹಾರಾಣಾ ಪ್ರತಾಪನ ಮೇಲೆ ದಾಳಿ ಮಾಡುತ್ತಾನೆ.  ಹಳದೀಘಾಟ್ ಯುದ್ಧವೆಂದೇ ಹೆಸರಾದ ಈ ಯುದ್ಧದಲ್ಲಿ ಮಹಾರಾಣಾ ಸೋತರೂ ಶರಣಾಗುವುದಿಲ್ಲ, ತನ್ನ ಸೋಲನ್ನೊಪ್ಪಿಕೊಳ್ಳದೆ, ಮತ್ತೆ ಸೈನ್ಯ ಸಂಘಟಿಸಿ ನಿಧಾನವಾಗಿ ಒಂದೊಂದಾಗಿ ತಾನು ಕಳೆದುಕೊಂಡ ರಾಜ್ಯದ ಭಾಗಗಳನ್ನು ಮತ್ತೆ ಗೆಲ್ಲುತ್ತಾನೆ.  ತಾನು ಸಾಯುವವರೆಗೂ ಆತ ಅಕ್ಬರನ ಮುಂದೆ ಸೋತು ತಲೆಬಾಗುವುದೇ ಇಲ್ಲ. 

ಆದರೂ ನಮ್ಮ ಎಡಬಿಡಂಗಿ ಇತಿಹಾಸಕಾರರು ದಾಳಿಕೋರ ಅಕ್ಬರನನ್ನು "ದಿ ಗ್ರೇಟ್" ಎಂಬ ಬಿರುದು ಕೊಟ್ಟು ಸ್ತುತಿಸಿ, ಮಹಾರಾಣಾ ಪ್ರತಾಪರಂತ ಭಾರತಮಾತೆಯ ವೀರಪುತ್ರನನ್ನು ಕಡೆಗಣಿಸಿ ಆತನ ಶೌರ್ಯವನ್ನು, ಆತನ ಕೆಚ್ಚೆದೆಯ ಹೋರಾಟವನ್ನು ಜನಮಾನಸದಿಂದ ಮುಚ್ಚಿಡುವ ಕೆಲಸ ಮಾಡಿದರು.  

ರಾಣಾ ಪ್ರತಾಪರಂತ ಮಹಾನ್ ಯೋಧರನ್ನು, ಧರ್ಮ ಸಂಸ್ಕೃತಿ ಉಳಿಸಲು, ತನ್ನ ಜನರನ್ನು ಅಮಾನುಷ  ದಾಳಿಕೋರರಿಂದ  ರಕ್ಷಿಸಲು ಆತ ಕೈಗೊಂಡ ಕೆಚ್ಚೆದೆಯ ಹೋರಾಟಗಳನ್ನು ಈಗಿನ ಪೀಳಿಗೆಯ ಯುವಜನತೆ ಅರಿಯುತ್ತಿದೆ.  ಇತಿಹಾಸದ ಪುಟಗಳನ್ನೂ ಮತ್ತೆ ತೆರೆದು,  ತಿರುಚಿದ ಕತೆಗಳನ್ನು ಕಿತ್ತೆಸೆದು, ಹೊಸ ಇತಿಹಾಸವನ್ನು ಬರೆಯುವ, ಅದರ ಬಗ್ಗೆ ಅರಿವು ಮೂಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ.  ಮಹಾರಾಣಾ ಪ್ರತಾಪನಂತ ಈ ಮಣ್ಣಿನ ನೈಜ ಹೀರೋಗಳನ್ನು ಆರಾಧಿಸುವ ಕೆಲಸ ಬಹಳ ಪುಣ್ಯದ ಕೆಲಸ. ಇದರಿಂದಾಗಿ ಭಾರತ ಮಾತೆಯ ನೈಜ ವೀರಪುತ್ರರ ಸ್ಮರಣೆ ನಡೆಯಲಿ. 

 

ಜೈ ಹಿಂದ್....!!

#ಅನಂತಕುಮಾರಹೆಗಡೆ

Related posts