Infinite Thoughts

Thoughts beyond imagination

योग: कर्मसु कौशलम्

योग: कर्मसु कौशलम्
 
ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಈ ಶ್ಲೋಕವು ಬಹಳ ಸರಳ ಹಾಗು ಅತ್ಯಂತ ಅರ್ಥಗರ್ಭಿತವಾಗಿದೆ.  ನಾವು ನಿರ್ವಹಿಸುವ ಯಾವುದೇ ಕೆಲಸವಾದರೂ ಅದನ್ನು ನಿಷ್ಠೆ- ಪ್ರಾಮಾಣಿಕತೆ, ಅತ್ಯುತ್ತಮವಾಗಿ ಕೌಶಲ್ಯಪೂರ್ಣವಾಗಿ ನಿರ್ವಹಿಸುವುದಿದೆಯಲ್ಲಾ, ಅದೇ ಯೋಗ ಅಂತ ಶ್ರೀಕೃಷ್ಣ ಹೇಳಿದ್ದಾನೆ.  ಯೋಗ ಅನ್ನುವ ಪದದ ಅರ್ಥವೇ ಜೋಡಿಸುವುದು, ಒಟ್ಟು ಸೇರಿಸುವುದು ಅಂತ.  ಕ್ರಿಸ್ತ ಪೂರ್ವ ಅಂದಾಜು ನಾಲ್ಕು ಸಾವಿರ ವರ್ಷಗಳಿಗೂ ಮುನ್ನವೇ ಯೋಗಾಭ್ಯಾಸ ಭಾರತದಲ್ಲಿ ಪ್ರಚಲಿತದಲ್ಲಿತ್ತು ಅಂತ ವಿದೇಶೀ ವಿದ್ವಾಂಸರೇ ಒಪ್ಪಿಕೊಂಡ ಸತ್ಯ.  ಋಗವೇದದಲ್ಲಿಯೇ ಯೋಗದ ಪ್ರಸ್ತಾಪ ಇದೆ.  ಇಂತ ಅತ್ಯಂತ ಪ್ರಾಚೀನ ಇತಿಹಾಸವಿರುವ ಯೋಗ ಎಂಬ ಈ ದೈಹಿಕ-ಬೌದ್ಧಿಕ-ಆಧ್ಯಾತ್ಮಿಕ ಸಾಧನೆಯ ಈ ವಿಶಿಷ್ಟ ಹಿಂದೂ ಧಾರ್ಮಿಕ ಪ್ರಕ್ರಿಯೆಯನ್ನು ಇವತ್ತು ವಿಶ್ವಸಂಸ್ಥೆಯ ನೂರ ಎಪ್ಪತ್ತೇಳು ದೇಶಗಳು ಒಪ್ಪಿಕೊಂಡಿವೆ ಮತ್ತು ಪ್ರತೀ ವರ್ಷವೂ ಅಂತರರಾಷ್ಟ್ರೀಯ ಯೋಗ ದಿನವನ್ನು ಅಧಿಕೃತವಾಗಿ ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ಆಚರಿಸುತ್ತಿವೆ.  ಇಂತಹ ಹಿರಿಮೆ ಹೊಂದಿರುವ ಆ ಶ್ರೇಷ್ಠ ಪದ್ದತಿಯನ್ನು ವಿಶ್ವ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪವನ್ನು ಮೊತ್ತ ಮೊದಲ ಬಾರಿಗೆ ಮಂಡಿಸಿ ಜಗತ್ತೇ ಒಪ್ಪುವಂತೆ ಮಾಡಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಬರಬೇಕಾಯ್ತು.  ಹಿಂದಿನ ಯಾವುದೇ ಸರ್ಕಾರಕ್ಕೆ ನಮ್ಮ ಹಿರಿಮೆಯನ್ನು ಎತ್ತಿ ಹಿಡಿಯುವ ಧೈರ್ಯ ಅಥವಾ ಪ್ರೌಡಿಮೆ ಇರಲೇ ಇಲ್ಲ.  ವಿಶ್ವಸಂಸ್ಥೆಯ ಇತಿಹಾಸದಲ್ಲೇ  ಅದರ ಜನರಲ್ ಅಸೆಂಬ್ಲಿಯಲ್ಲಿ ಅತ್ಯಪೂರ್ವ ಬಹುಮತದೊಂದಿಗೆ, ಸದಸ್ಯ ರಾಷ್ಟ್ರಗಳು ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರತಿವರ್ಷ ಜೂನ್ ೨೧ ರಂದು ಆಚರಿಸುವ ನಿರ್ಣಯ ಕೈಗೊಂಡವು.  ಇದು ಭಾರತದ ಪ್ರಾಚೀನ ಪರಂಪರೆಗೆ ಸಿಕ್ಕಿದ ಮನ್ನಣೆ ಮತ್ತು ಮೋದಿಯವರ ಪ್ರಯತ್ನಕ್ಕೆ ದೊರಕಿದ ಯಶಸ್ಸು. 
 
ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪನೆಯನ್ನು ಮಾಡುವುದಕ್ಕೂ ಬಹಳಷ್ಟು ವರ್ಷಗಳ ಹಿಂದೆಯೇ ಯೋಗ ವಿದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.  ಆದರೆ ಈ ಅಪೂರ್ವ ವಿದ್ಯೆಯನ್ನು, ಹಿಂದೂ ಆಧ್ಯಾತ್ಮಿಕ ಹಾಗು ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿರುವ ಯೋಗವನ್ನು ಹೈಜಾಕ್ ಮಾಡುವ, ಅದನ್ನು ಭಾರತದಿಂದ, ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಬಹಳ ವ್ಯವಸ್ಥಿತವಾದ ಬೃಹತ್ ಹುನ್ನಾರ ವಿದೇಶಗಳಲ್ಲಿ ಸದ್ದಿಲ್ಲದೆಯೇ ನಡೆಯುತ್ತಿತ್ತು!   ಭಾರತದ ಪ್ರಖ್ಯಾತ ಯೋಗ ಗುರು ಪರಮಹಂಸ ಯೋಗಾನಂದರ ಹೆಸರನ್ನೂ ಇದಕ್ಕೆ ಎಳೆತಂದು ಜನರ ದಾರಿ ತಪ್ಪಿಸಲಾಗುತ್ತಿದೆಯೋ ಎಂಬ ಗಾಢ ಸಂಶಯವೂ ಇದೆ.  ಪರಮಹಂಸ ಯೋಗಾನಂದರು ೧೯೨೦ರ ಸುಮಾರಿಗೆ ಅಮೆರಿಕಕ್ಕೆ ತೆರಳಿ ಅಲ್ಲೇ ವಾಸವಾಗಿದ್ದು ಅಲ್ಲಿನ ಜನರಿಗೆ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾಗ ಭಗವಾನ್ ಕೃಷ್ಣನ ಜೊತೆಗೇ ಯೇಸು ಕ್ರಿಸ್ತನ ಚಿತ್ರವನ್ನೂ ಇಟ್ಟು, ಕ್ರಿಸ್ತನ ಬೋಧನೆಗೂ ಹಿಂದೂ ಧರ್ಮದ ಬೋಧನೆಗಳಿಗೂ ಇರುವ ಸಾಮ್ಯತೆಯನ್ನು ತಿಳಿಯಪಡಿಸುತ್ತಿದ್ದರು.  ಯೋಗಾನಂದರು ತೀರಿ ಹೋದದ್ದು ೧೯೫೨ರಲ್ಲಿ.  ಆದರೆ ಅವರ ಕಾಲವಾದ ಬಹಳ ವರ್ಷಗಳ ನಂತರ ಅವರ ಹೆಸರಿನಲ್ಲಿ ಹಲವು ಪುಸ್ತಕಗಳು ಪ್ರಕಟವಾಗಿದ್ದು, ಇವೆಲ್ಲ ಪುಸ್ತಕಗಳಲ್ಲಿಯೂ ಯೇಸು ಕ್ರಿಸ್ತನಿಗೂ ಯೋಗಕ್ಕೂ ಇರುವ ನಂಟನ್ನು ಪ್ರಸ್ತಾಪಿಸಲಾಗಿದೆ.  ಕಳೆದ ಎರಡು ದಶಕಗಳಿಂದೀಚೆಗೆಂತು ಯೇಸು ಕ್ರಿಸ್ತನನ್ನು ಒಬ್ಬ ಯೋಗಿಯಂತೆ ಚಿತ್ರಿಸುವ ಪ್ರಯತ್ನ ವ್ಯಾಪಕವಾಗಿ ನಡೆಯಿತು.  ಯೇಸು ಕ್ರಿಸ್ತ ಕಾಷಾಯ ವಸ್ತ್ರ ಧರಿಸಿ ಪದ್ಮಾಸನದ ಭಂಗಿಯಲ್ಲಿ ಧ್ಯಾನ ಮುದ್ರೆಯೊಂದಿಗೆ ಕುಳಿತಿರುವ ಚಿತ್ರಗಳು ಪ್ರಸಾರವಾಗತೊಡಗಿದವು.  ನಿಧಾನವಾಗಿ ಯೋಗವನ್ನು ಭಾರತದಿಂದ, ಭಾರತೀಯರಿಂದ, ಹಿಂದೂಗಳಿಂದ ದೂರ ಮಾಡುವ, ಅದನ್ನು ಪಾಶ್ಚ್ಯಾತ್ಯ ಮೂಲದ ವಿದ್ಯೆ, ಯೇಸು ಕ್ರಿಸ್ತ ಸ್ವತಹಾ ಬೋಧಿಸಿದ ವಿದ್ಯೆ ಅಂತ ಪ್ರಚಾರ ಮಾಡುವ ಹುನ್ನಾರ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿದೆ..!! 
 
 ಆದರೆ ೨೦೧೪ರಲ್ಲಿ ಮೋದಿಯವರು ಭಾರತದ ಪ್ರಧಾನಿಯಾಗಿ, ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪವನ್ನು ಸ್ವತಃ ಅವರೇ ಮಂಡಿಸಿ,  ವಿಶ್ವ ಸಮುದಾಯದಲ್ಲಿ ಅಭೂತಪೂರ್ವ ಬೆಂಬಲ ದೊರಕಿಸಿಕೊಂಡರು.  ವಿಶ್ವವೇ ಯೋಗವನ್ನು ಒಪ್ಪಿಕೊಂಡು ಭಾರತದ ಪಾರಂಪರಿಕ ಪದ್ಧತಿಯನ್ನು ಮಾನ್ಯಮಾಡಿ ಧಾರ್ಮಿಕ ಡಂಬಾಚಾರಿಗಳ ಕಪಟತನಕ್ಕೆ ಸೂಕ್ತ ಉತ್ತರ ನೀಡಿತು. 
 
  #ಅನಂತಕುಮಾರಹೆಗಡೆ

Related posts