Infinite Thoughts

Thoughts beyond imagination

ಸಂಘಟನೆಯ ಪರ್ವಕಾಲ!

ಭಾರತೀಯ ಜನತಾ ಪಕ್ಷ ಇಂದು ದೇಶದ ಮೂಲೆ-ಮೂಲೆಯಲ್ಲೂ ತನ್ನ ಅಸ್ಥಿತ್ವವನ್ನು ಭದ್ರಗೊಳಿಸುತ್ತಿದೆ. ಪಕ್ಷದ ಸಿದ್ಧಾಂತವನ್ನು ಹಾಗು ಪಕ್ಷದ ನಾಯಕತ್ವವನ್ನು ಮುಕ್ತ ಮನಸ್ಸಿನಿಂದ ಜನರು ಸ್ವೀಕರಿಸುತ್ತಿದ್ದಾರೆ. ಬದಲಾಗುತ್ತಿರುವ ತಲೆಮಾರಿನ ಆಶೋತ್ತರಗಳಿಗೆ ಹಾಗು ಜಗತ್ತಿನ ನೂತನ ತಂತ್ರಜ್ಞಾನ ಆವಿಷ್ಕಾರಗಳಿಗೆ ಸ್ಪಂದಿಸುತ್ತ ಪಕ್ಷವನ್ನು ಇನ್ನಷ್ಟು ಜನಸ್ನೇಹಿಯಾಗಿಸುತ್ತಿರುವ ನಾಯಕತ್ವವನ್ನು ದೇಶದ ಜನ ಗುರುತಿಸಿ ಒಪ್ಪಿಕೊಂಡಿದ್ದಾರೆ. ಹಾಗೆ, ಇದೆ ಅಳತೆಗೋಲಿನಲ್ಲಿ ಅನ್ಯ ಪಕ್ಷಗಳ ವೈಫಲ್ಯವು ಕೂಡ ಭಾಜಪ ವನ್ನು ಜನ ಒಪ್ಪಿಕೊಳ್ಳಲಿಕ್ಕೆ ಸಕಾರಣವಾಗಿದೆ. ಪ್ರಪಂಚದ ಅತಿ ದೊಡ್ಡ ಜೀವಂತಿಕೆಯ ಪ್ರಜಾಪ್ರಭುತ್ವ ನಮ್ಮ ದೇಶದ್ದಾಗಿದ್ದು, ಇದೆ ರೀತಿಯಲ್ಲಿ ಪ್ರಪಂಚದ ಅತ್ಯಂತ ಬೃಹತ್ ರಾಜಕೀಯ ಸಂಘಟನೆ ನಮ್ಮ ಭಾರತೀಯ ಜನತಾ ಪಕ್ಷದ್ದು ಎಂದು ಹೇಳಲು ಬಹಳ ಹೆಮ್ಮೆ ಎನಿಸುತ್ತದೆ.

ಕೆಲವೇ ವರ್ಷಗಳ ಹಿಂದೆ, ಕೇವಲ ಉತ್ತರದ ಬೆರೆಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಅಸ್ಥಿತ್ವ ಹೊಂದಿದ ನಮ್ಮ ಪಕ್ಷ, ಇಂದು ದೇಶದಾದ್ಯಂತ ತನ್ನ ಚಿಹ್ನೆಯಾದ ಕಮಲವನ್ನು ಅರಳಿಸುತ್ತಿರುವುದು ಇಂದಿನ ನಾಯಕತ್ವದ, ಕರ್ತತ್ವ ಶಕ್ತಿಯ ಪ್ರಭಾವ ಅಂದಾಜಿಸಬಹುದಾಗಿದೆ. ಕಾರ್ಯಕರ್ತರೇ ಇಲ್ಲದಂತ ಕಡೆಗಳಲ್ಲಿ ಸಂಪೂರ್ಣ ಒಂದು ನೂತನ ಸಂಘಟನೆಯ ವ್ಯವಸ್ಥೆಯನ್ನೇ ನಿರ್ಮಾಣ ಮಾಡಿ ಪಕ್ಷದ ಕೀರ್ತಿ ಧ್ವಜ ಹಾರುವಂತೆ ಮಾಡಿದ ಈ ಪ್ರಬಲ ನಾಯಕತ್ವಕ್ಕೆ ನಮೋ ನಮಃ!

ಕುಸಿದು ಹೋಗಿದ್ದ ಪಕ್ಷದ ಸಂಘಟನೆಯ ನೇತೃತ್ವವನ್ನು, ೨೦೦೬ರಲ್ಲಿ ರಾಷ್ಟ್ರೀಯ ಸ್ವಯಂ-ಸೇವಕ ಸಂಘದಿಂದ ಎರವಲು ಸೇವೆಗೆಂದೇ ನಿಯುಕ್ತರಾಗಿದ್ದ ಶ್ರೀ ರಾಮಲಾಲ್ ರವರು ವಹಿಸಿಕೊಂಡಾಗಿನಿಂದ ಪಕ್ಷ ಸದೃಢಗೊಳ್ಳುತ್ತಲೇ ಮುಂದುವರೆಯಿತು. ಸಂಘಟನೆ ಮತ್ತು ಪಕ್ಷದ ಆದರ್ಶವನ್ನೇ ಪರಮೋಚ್ಚ ಗುರಿಯಾಗಿಸಿಕೊಂಡು ಪಕ್ಷ ಬೆಳೆಸಿದ ಮಹಾನ್ ಮುತ್ಸದ್ಧಿ ನಾಯಕ ಸನ್ಮಾನ್ಯ ರಾಮಲಾಲ್ ರು. ಸಂಘದ ಧ್ಯೇಯೋದ್ದೇಶವನ್ನು ಚಾಚು ತಪ್ಪದೆ ಪಾಲಿಸಿಕೊಂಡು ರಾಜಕೀಯ ಕ್ಷೇತ್ರದಲ್ಲೇ ಮಾದರಿ ಪುರುಷರೆಂದೇ ಖ್ಯಾತರಾದವರು ರಾಮಲಾಲ್ ರು. ಇಂತಹ ವಂದನೀಯ ನಾಯಕತ್ವಕ್ಕೆ ಪೂರಕ ವಾತಾವರಣ ಕಲ್ಪಿಸಿ ಸೂಕ್ತ ಸಂಪನ್ಮೂಲವನ್ನು ಹಾಗು ಮುಂದಿನ ಜನಾಂಗಕ್ಕೆ ಕರೆದೊಯ್ಯುವ ನಿರ್ಣಾಯಕ ನಾಯಕತ್ವ ನೀಡಿದವರು ಪ್ರಧಾನಿ ಮೋದಿ ಹಾಗು ಪಕ್ಷ ಅಧ್ಯಕ್ಷರಾದ ಅಮಿತ್ ಶಾರವರು. ಈ ಪ್ರಬಲ ನಾಯಕತ್ವವನ್ನು ಕೇವಲ ಅವರ ಸಂವಹನಕ್ಕೆ ಸೀಮಿತಗೊಳಿಸದೆ, ಸಿಕ್ಕ ಅಧಿಕಾರವನ್ನು ಸದುಪಯಯೋಗ ಪಡಿಸಿಕೊಂಡು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ಕಲ್ಯಾಣ ಕಾರ್ಯಕ್ರಮಗಳನ್ನೂ ರೂಪಿಸಿ ತಲುಪಿಸಿದ ಕೀರ್ತಿ ಈ ನಾಯಕರಿಗೆ ಸಲ್ಲುತ್ತದೆ.

ಇಂತಹ ಸಕಾರಾತ್ಮಕ ಬೆಳೆವಣಿಗೆಯ ನಡುವೆಯೂ ಪಕ್ಷ ಇನ್ನಷ್ಟು ವಿಸ್ತಾರಗೊಳ್ಳುವ ಹಂತದಲ್ಲಿ ಸಮಾಜದ ಎಲ್ಲ ವಿಧದ ಜನರು ಸೇರುತ್ತಿದ್ದು ಪಕ್ಷದ ನಾಯಕತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲುಗಳನ್ನು ಎದುರಿಸಲಿದೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಕುಶಾಗ್ರಮತಿಯಿರುವ ತಂಡದ ಅಗತ್ಯ ಹೆಚ್ಚಿದೆ. ಇಂತಹ ಸಂಕ್ರಮಣದ ಘಟ್ಟದಲ್ಲಿ ನಮ್ಮವರೇ ಆದ ಸನ್ಮಾನ್ಯ ಬಿ ಎಲ್ ಸಂತೋಷರವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನಿಯುಕ್ತರಾಗಿದ್ದಾರೆ. ನಿರ್ಣಾಯಕ ಹಂತದಲ್ಲಿ ಅತ್ಯಂತ ಜಾಣ್ಮೆಯಿಂದ ಪಕ್ಷ ಸಂಘಟಿಸುವಲ್ಲಿ, ಮೋದಿ ಪರ್ವಕಾಲದಲ್ಲಿ ಯುವಜನತೆಯನ್ನು ಪಕ್ಷಕ್ಕೆ ಹತ್ತಿರಗೊಳಿಸಿದ ಕೀರ್ತಿ ಸಂತೋಷರದ್ದಾಗಿದೆ. ಮುಂದಿನ ದಿನಗಳಲ್ಲಿ ಇವರ ನಾಯಕತ್ವದಲ್ಲಿ ಇನ್ನಷ್ಟು ಸಂಘಟನೆ ಬಲಗೊಳ್ಳಲಿ ಎಂದು ಶುಭ ಹಾರೈಸುತ್ತೇನೆ. ಅವರಿಗೂ ಹಾಗು ಮಾತೃ ಸಂಸ್ಥೆಗೆ ಮರಳಿದ ಹಿರಿಯರಾದ ರಾಮಲಾಲ್ ರಿಗೂ ಶುಭವಾಗಲಿ.

#ಅನಂತಕುಮಾರಹೆಗಡೆ

Related posts