Infinite Thoughts

Thoughts beyond imagination

ಗುರು ಪೂರ್ಣಿಮೆಯ ಶುಭಾಶಯಗಳು

ಗುರು ಪೂರ್ಣಿಮೆ ಎಂಬ ಅರ್ಥಪೂರ್ಣ ಅಪೂರ್ವ ಆಚರಣೆ.
ಅಜ್ಞಾನ ಕಳೆದು ಜ್ಞಾನ ನೀಡಿದಾತನಿಗೆಂದೇ ಸಮರ್ಪಣೆ. 

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ| ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ || 


ಅಜ್ಞಾನವೆಂಬ ಅಂಧಕಾರದಿಂದ ಕುರುಡರಾಗಿರುವವರನ್ನು  ಜ್ಞಾನವೆಂಬ ಅಂಜನದಿಂದ ಕಣ್ಣುತೆರೆಯುವಂತೆ ಮಾಡುವವನೇ ಗುರು.   ನಮ್ಮ ಸನಾತನ ಪರಂಪರೆಯಲ್ಲಿ ಜ್ಞಾನದಾತ  ಗುರುವಿಗೆ ಪರಮೋಚ್ಚ ಸ್ಥಾನಮಾನವಿದೆ. ಗುರು ಶಿಷ್ಯ ಪರಂಪರೆ ನಮ್ಮಲ್ಲಿ ವೇದಾರಂಭಕಾಲದಿಂದಲೂ ಇದೆ. ವೇದಗಳನ್ನು ರಚಿಸಿದ ಅಷ್ಟೂ ಮಹರ್ಷಿಗಳನ್ನು ಹಿಂದೂ ಧರ್ಮ ಗುರುಗಳೆಂದೇ ಪೂಜಿಸುತ್ತದೆ.


ಪರಾಶರ ಮಹರ್ಷಿ ಮತ್ತು ಸತ್ಯವತಿಯವರ ಸತ್ಪುತ್ರ, ದ್ವೀಪದಲ್ಲಿ ಜನಿಸಿ ಕಪ್ಪು ವರ್ಣ ಹೊಂದಿದವರಾದ್ದರಿಂದ ಕೃಷ್ಣ ದ್ವೈಪಾಯನರೆಂದೇ ಹೆಸರು ಪಡೆದ ಮಹರ್ಷಿಗಳು  ಅನರ್ಘ್ಯ ಜ್ಞಾನಸಂಪತ್ತಾಗಿದ್ದ ವೇದಗಳನ್ನು ವಿಂಗಡಿಸಿ ನಾಲ್ಕು ವೇದಗಳನ್ನಾಗಿ ವಿಭಜಿಸಿದ ಕಾರಣವೇ ವೇದವ್ಯಾಸರೆಂದು ಪ್ರಖ್ಯಾತಿ ಪಡೆದರು. 


ವ್ಯಸ್ಯತಿ ವೇದಾನ್ ಇತಿ ವ್ಯಾಸಃ 


ವೇದವ್ಯಾಸರನ್ನು ಮಹಾವಿಷ್ಣುವಿನ ರೂಪವೆಂದೇ ವೈಷ್ಣವರು ಆರಾಧಿಸುತ್ತಾರೆ 

ವೇದವ್ಯಾಸರು ಮಾಹಾವಿಷ್ಣುವಿನ ರೂಪವೆಂದು ವಿಷ್ಣು ಪುರಾಣದಲ್ಲಿ ಉಲ್ಲೇಖವಾಗಿದೆ. ಈ ಮನ್ವಂತರದ ಇಪ್ಪತ್ತೆಂಟು ದ್ವಾಪರಯುಗಗಳಲ್ಲಿ ಇಪ್ಪತ್ತೆಂಟು ವ್ಯಾಸರು ಬಂದು ಹೋದರು.  ಅವರು ಪ್ರತೀ ದ್ವಾಪರಯುಗದಲ್ಲಿ ವೇದವನ್ನು ನಾಲ್ಕು ಭಾಗ ಮಾಡಿದರು.  ಮೊದಲನೇ ದ್ವಾಪರದಲ್ಲಿ ಸೃಷ್ಟಿಕರ್ತ ಬ್ರಹ್ಮನೂ, ಎರಡನೆಯದರಲ್ಲಿ ಮನುವೂ, ಮೂರನೆಯದರಲ್ಲಿ ಶುಕ್ರನೂ, ನಾಲ್ಕನೆಯದರಲ್ಲಿ ಬೃಹಸ್ಪತಿಯೂ, ಐದನೆಯದರಲ್ಲಿ ಸೂರ್ಯನೂ, ಆರನೆಯದರಲ್ಲಿ ಮೃತ್ಯುವೂ, ಏಳನೆಯದರಲ್ಲಿ ಚಂದ್ರನೂ, ಎಂಟನೆಯದರಲ್ಲಿ ವಸಿಷ್ಠನೂ, ಒಂಭತ್ತನೆಯದರಲ್ಲಿ ಸಾರಸ್ವತನೂ, ಹತ್ತನೆಯದರಲ್ಲಿ ತ್ರಿಧಾಮನೂ ವ್ಯಾಸರಾಗಿದ್ದರು.  ಕ್ರಮವಾಗಿ ಹನ್ನೊಂದರಿಂದ ಇಪ್ಪತ್ತೆಂಟರವರೆಗೂ ತ್ರಿವೃಷಾ, ಭರದ್ವಾಜ, ಅಂತರಿಕ್ಷ, ಧರ್ಮಿ, ತ್ರಯ್ಯಾರುಣಿ, ಧನಂಜಯ, ಕೃತಂಜಯ, ಸಂಜಯ, ಭಾರದ್ವಾಜ, ಗೌತಮ, ಉತ್ತಮ, ವೇನ, ವಾಜಶ್ರವ, ಋಕ್ಷಭಾರ್ಗವ, ಶಕ್ತಿ, ಪರಾಶರ, ಜಾತೂಕರ್ಣ, ಕೃಷ್ಣದ್ವೈಪಾಯನ ಎಂಬುವರು ವ್ಯಾಸರಾದರು.  ವೇದವು ಪ್ರತಿದ್ವಾಪರಯುಗದ ಕೊನೆಯ ಸಂಧಿಕಾಲದಲ್ಲಿ ಈ ವ್ಯಾಸರಿಂದ ನಾಲ್ಕು ಭಾಗವಾಗಿ ವಿಭಜಿಸಲ್ಪಟ್ಟಿತು.  ಕೃಷ್ಣದ್ವೈಪಾಯನ ನಂತರ ದ್ರೋಣನ ಮಗನಾದ ಅಶ್ವತ್ಥಾಮನು ವ್ಯಾಸನಾಗುವನು.

 
ಅದೇ ರೀತಿ ಶೈವರೂ ವ್ಯಾಸರನ್ನು ಶಿವನ ರೂಪವೆಂದೇ ತಿಳಿಯುತ್ತಾರೆ 
ವರಾಹ ಕಲ್ಪದಲ್ಲಿ ವೈವಸ್ವತ ಮನ್ವಂತರದ ಪ್ರತಿಯೊಂದು ದ್ವಾಪರಯುಗದಲ್ಲಿಯೂ ರುದ್ರನು ನಾನಾ ರೂಪಗಳಲ್ಲಿ , ಜ್ಞಾನವನ್ನು ಪ್ರಕಟ ಗೊಳಿಸುವದರ ಸಲುವಾಗಿ ವ್ಯಾಸನ ಅವತಾರವನ್ನು ತಾಳುವನು. ಸಾಕ್ಷಾತ್ ಶಿವನ ಅವತಾರವೇ ಆದ ವ್ಯಾಸನು ವೇದಗಳ ವಿಭಾಗವನ್ನೂ  ಪುರಾಣಗಳನ್ನೂ ರಚಿಸುವಂತವನಾದನು ಎಂಬ ಉಲ್ಲೇಖ ಲಿಂಗಪುರಾಣದಲ್ಲಿ ಇದೆ. 

ವಿಷ್ಣು ಪಾರಮ್ಯವನ್ನು ಹೇಳುವ ವಿಷ್ಣುಪುರಾಣ ವ್ಯಾಸರು ವಿಷ್ಣುವಿನ ಅವತಾರವೆಂದೂ, ಶಿವ ಪಾರಮ್ಯವನ್ನು ಹೇಳುವ ಲಿಂಗಪುರಾಣ ವ್ಯಾಸರು ಸದಾಶಿವನ ಆವತಾರವೆಂದು ಹೇಳುತ್ತಿದೆ. ಅಂದರೆ  ತತ್ತ್ವತಃ  ಶೈವ - ವೈಷ್ಣವ ಬೇಧವನ್ನು ನಿವಾರಿಸಿ ಹರಿ-ಹರ ಅಭೇದವನ್ನು ತಿಳಿಸುವದೇ ಇದರ ಮುಖ್ಯ ಉದ್ದೇಶ.  ಹಾಗಾಗಿ ವ್ಯಾಸರು ಸರ್ವಯಾಪಿಯಾಗಿ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟ, ಎಲ್ಲರೂ ಒಪ್ಪಲ್ಪಟ್ಟ ಮಹಾ ಗುರು. 

ವ್ಯಾಸರ ಜನನ ಕೂಡಾ ಅತ್ಯಂತ ವಿಶಿಷ್ಟವಾದುದು.  ಅವರದು ವರ್ಣಸಂಕರದಿಂದಾದ ಹುಟ್ಟು. ಅವರು ಪರಾಶರ ಮಹರ್ಷಿಗಳಿಗೆ ಶೂದ್ರಕನ್ಯೆ ಸತ್ಯವತಿಯಲ್ಲಿ ಜನಿಸಿದವರು.  ವೇದಗಳ ಕಾಲಘಟ್ಟದಲ್ಲಿ ಈಗಿರುವಂಥ ರೀತಿಯ ಸಾಮಾಜಿಕ ಮೇಲುಕೀಳುಗಳ ಪರಿಕಲ್ಪನೆಯೇ ಇರಲಿಲ್ಲ ಎಂಬುದಕ್ಕೆ ಕೃಷ್ಣ ದ್ವೈಪಾಯನ ಎಂಬ ಹೆಸರು ಪಡೆದ ಕಪ್ಪು ಮೈಬಣ್ಣದ ವೇದವ್ಯಾಸರೇ ಸಾಕ್ಷಿ. 


ಹುಟ್ಟಿನಿಂದ ಎಲ್ಲರೂ ಶೂದ್ರರೇ ಅರ್ಥಾತ್ ಅಜ್ಞಾನಿಗಳೇ ಆಗಿರುತ್ತಾರೆ; ಸಂಸ್ಕಾರ ಅಥವಾ ಬ್ರಹ್ಮವಿದ್ಯಾರ್ಜನೆಯಿಂದ ಶ್ರೇಷ್ಠರಾಗುತ್ತಾರೆ ಎಂಬುದಾಗಿ ಶಾಸ್ತ್ರಗಳೇ ಸಾರಿ-ಸಾರಿ ಹೇಳುತ್ತಿವೆ. ಆದ್ದರಿಂದಲೇ ಪ್ರಸ್ತುತ ಸಾಮಾಜಿಕ ಜಾತಿ ವ್ಯವಸ್ಥೆಗೂ ಶಾಸ್ತ್ರಗಳು ಹೇಳುತ್ತಿರುವ ಜಾತಿಗೂ ಬೆಳಕು ಕತ್ತಲಿನಷ್ಟೇ ವ್ಯತ್ಯಾಸವಿದೆ.  ಕ್ಷೇತ್ರವು ಬೀಜವು ಮೊಳಕೆ ಒಡೆದು ಸಸಿಯೋ ಹೆಮ್ಮರವಾಗಿಯೋ ಬೆಳೆಯಲು ಅನುಕೂಲಮಾಡಿ ಕೊಡುತ್ತದೆಯೇ ಹೊರತು ಕ್ಷೇತ್ರಕ್ಕೆ ಪ್ರಕೃತಿ ಎಂಬ ಭಗವಂತನ ಸೃಷ್ಟಿ ವಿಶೇಷ ಕಾರ್ಯ ಎಂಬದನ್ನು ಬಿಟ್ಟರೇ ತನ್ನದೇ ಆದ ಯಾವ ಜಾತಿಯೂ ಇರುವದಿಲ್ಲ.  ಹಾಗಾಗಿ ಹುಟ್ಟು ಜಾತಿಯನ್ನು ಕೊಡುವುದಿಲ್ಲ , ಬದಲಿಗೆ ಸಂಸ್ಕಾರ ಶಿಕ್ಷಣ, ಜ್ಞಾನಾರ್ಜನೆಗಳೇ ವ್ಯಕ್ತಿಯ ಜಾತಿ ನಿರ್ಧಾರ ಮಾಡುತ್ತಿದ್ದವು. 


ವ್ಯಾಸರು ಹದಿನೆಂಟು ಪುರಾಣಗಳನ್ನೂ, ಬ್ರಹ್ಮಸೂತ್ರಗಳನ್ನೂ , ಯೋಗ ಭಾಷ್ಯವನ್ನೂ ಬರೆದಿರುತ್ತಾರೆ. ಆದುದರಿಂದಲೇ ಆತ ಮಹಾಗುರುವಿನ ಸ್ಥಾನವನ್ನೂ ಪಡೆದಿದ್ದಾರೆ.  ವ್ಯಾಸರು ಈ ದಿನದಂದೇ ಜನ್ಮ ತಾಳಿದರು ಎಂಬ ಕಾರಣಕ್ಕೆ ಅವರ ಸ್ಮರಣೆಗಾಗಿಯೇ ಆಷಾಢದ ಪೌರ್ಣಮಿಯನ್ನು ಗುರು ಪೂರ್ಣಿಮೆಯೆಂದು ನಮ್ಮ ಸನಾತನ ಹಿಂದೂ ಧರ್ಮ ಆಚರಿಸುತ್ತಿದೆ.  ಜೊತೆಗೆ ಆಷಾಢ ಶುದ್ಧ ಪಾಡ್ಯಮಿಯಂದು ಬ್ರಹ್ಮಸೂತ್ರ ರಚನೆಗೆ ತೊಡಗಿದ ವ್ಯಾಸರು ಅದನ್ನು ಈ ದಿನ ಪೂರ್ತಿಗೊಳಿಸಿದರೆಂಬ ನಂಬಿಕೆಯೂ ತಳುಕು  ಹಾಕಿಕೊಂಡಿದೆ.   ಆದುದರಿಂದ ಈ ದಿನ ಹಿಂದೂ ಧರ್ಮೀಯರಿಗೆ ಬಹುಮುಖ್ಯ. ಯೋಗೋಪಾಸಕರಾಗಲು ಆದಿ ಗುರುವಾದ ಶಿವ ಸಪ್ತರ್ಷಿಗಳಿಗೆ ಯೋಗ ಜ್ಞಾನವನ್ನು ಧಾರೆಯೆರೆದ ದಿನವೆಂದೂ, ಜೈನರು ಮಹಾವೀರನ ನೆನಪಿನಲ್ಲಿಯೂ, ಬೌದ್ಧ ಧರ್ಮೀಯರು ಬುದ್ಧನ ನೆನಪಿಗೋಸ್ಕರವೂ ಈ ದಿನವನ್ನು ಗುರುಪೂರ್ಣಿಮೆಯೆಂದು ಉಪಾಸನೆ ಮಾಡುತ್ತಾರೆ. 


ವಿದ್ಯೆ ಸಂಸ್ಕಾರ ಕಲಿಸಿದ ಗುರುಗಳನ್ನು ಸ್ಮರಣೆ ಮಾಡಲು ಗುರು ಪೂರ್ಣಿಮೆ ಪ್ರಶಸ್ತ ದಿನ. ನನಗೆ ವೈಯುಕ್ತಿಕವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಸಂಸ್ಕಾರಗಳನ್ನೂ , ಧ್ಯೇಯ ನಿಷ್ಠೆಗಳನ್ನೂ, ತತ್ವ ಸಿದ್ಧಾಂತಗಳನ್ನೂ ಕಲಿಸಿದ ಪವಿತ್ರ ಗುರುಕುಲ.  ಆದ್ದರಿಂದ ಹೆತ್ತ ತಾಯಿಂದ ಮೊದಲ ಪಾಠ-ಸಂಸ್ಕಾರ ಪಡೆದು, ಸಂಘವನ್ನು ಕಟ್ಟಿ ಬೆಳೆಸಿದ ಅಷ್ಟೂ ಹಿರಿಯರನ್ನು ಗುರುಸ್ಥಾನದಲ್ಲಿಟ್ಟು  ಪೂಜಿಸುವವನು ನಾನು.  ಹಾಗಾಗಿ ನನಗೆ ಆ ಪುಣ್ಯ ಪುರುಷರೆಲ್ಲರ ಸ್ಮರಣೆಯೇ ಗುರುಪೂರ್ಣಿಮೆಯ ನಿಜವಾದ ಆಚರಣೆ. 


ಈ ಸಂಧರ್ಭದಲ್ಲಿ ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.

#ಅನಂತಕುಮಾರಹೆಗಡೆ

Related posts