Infinite Thoughts

Thoughts beyond imagination

ಕಾರ್ಗಿಲ್ ವಿಜಯ ದಿವಸ - ಶತ್ರು ಪಾಕಿಸ್ತಾನದ ಪಿತೂರಿಯನ್ನು ಬಲಿಷ್ಠ ಭಾರತದ ಸೇನೆ ಬಗ್ಗು ಬಡಿದ ದಿವಸ

ಕಾರ್ಗಿಲ್ ವಿಜಯ ದಿವಸ - ಶತ್ರು ಪಾಕಿಸ್ತಾನದ ಪಿತೂರಿಯನ್ನು ಬಲಿಷ್ಠ ಭಾರತದ ಸೇನೆ ಬಗ್ಗು ಬಡಿದ ದಿವಸ 


ಕ್ರಿಸ್ತ ಶಕ ೬೧೦ನೇ  ಇಸವಿಯಿಂದ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸತತ ಹನ್ನೆರಡು ವರ್ಷಗಳ ಕಾಲ ಅಂದರೆ ೬೨೨ರ ವರೆಗೆ ಪ್ರವಾದಿ ಮೊಹಮ್ಮದ್ ತನ್ನ ನೂತನ ಮತ ಪ್ರಚಾರವನ್ನು ಮಾಡಿದರೂ ಮೆಕ್ಕಾದ ಜನ ಆತನನ್ನು ಒಪ್ಪಿಕೊಳ್ಳಲೇ ಇಲ್ಲ.  ಕೊನೆಗೂ ಮೆಕ್ಕಾದ ಜನರ ವಿರೋಧಕ್ಕೆ ಮಣಿದು ಆತ ತನ್ನ ಒಂದಷ್ಟು ಸಹಚರರೊಡನೆ ಯಾತ್ರಿಬ್ ಎಂಬ ಪಟ್ಟಣಕ್ಕೆ ಓಡಿ ಹೋಗಬೇಕಾಯಿತು.  ಈಗ ಯಾತ್ರಿಬ್ ಅನ್ನೇ ಮದೀನಾ ಅಂತ ಕರೆಯಲಾಗುತ್ತದೆ.  ಮದೀನಾಕ್ಕೆ ತೆರಳಿದ ಬಳಿಕವೇ ಪ್ರವಾದಿ ಮೊಹಮ್ಮದ್ ಪ್ರವಚನದ ಹಾದಿ ಬಿಟ್ಟು ಯುದ್ಧದ ಹಾದಿ ಹಿಡಿದದ್ದು.  ಮೆಕ್ಕಾಗೆ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದ ನೂರಾರು ಒಂಟೆಗಳ ಕ್ಯಾರವಾನ್ ಮೇಲೆ ಮೊಹಮ್ಮದ್ ಅನುಚರರು ದಾಳಿ ಮಾಡತೊಡಗಿದರು.  ಈ ಚಿಕ್ಕಪುಟ್ಟ ಘಟನೆಗಳೇ ಕ್ರಿಶ ೬೨೪ರಲ್ಲಿ ಯುದ್ಧದ ಸ್ವರೂಪ ಪಡೆಯುತ್ತದೆ.  ಮೆಕ್ಕಾದ ಖುರೇಷಿ ಪಂಗಡದ (ಮೊಹಮ್ಮದ್ ಕೂಡಾ ಇದೆ ಖುರೇಷಿ ಪಂಗಡದಲ್ಲೇ ಜನಿಸಿದ್ದು) ಸೈನ್ಯದ ಮೇಲೆ ಪ್ರವಾದಿ ಮೊಹಮ್ಮದ್ ನೇತೃತ್ವದ ಮುಸ್ಲಿಂ ಸೈನ್ಯ ದಾಳಿ ಮಾಡುತ್ತದೆ.  ಬದ್ರ್ ಎಂಬ ಸ್ಥಳದಲ್ಲಿ ನಡೆದ ಈ ಯುದ್ಧ ಇಸ್ಲಾಮಿನ ಪ್ರಪ್ರಥಮ ಯುದ್ಧ.  ಈ ಯುದ್ಧದಲ್ಲಿ ಪ್ರವಾದಿಯ ನೇತೃತ್ವದ ಮುಸ್ಲಿಮರ ಸೈನ್ಯ ಜಯಗಳಿಸುತ್ತದೆ, ಹಾಗು ಇದು ಮುಸ್ಲಿಮರ ಪ್ರಥಮ ಜಯವೂ ಹೌದು.  ಈ ಅಲ್ ಬದ್ರ್ ಯುದ್ಧದ ಬಗ್ಗೆ ಸಾಕ್ಷಾತ್ ಕುರಾನ್ ನಲ್ಲೂ ಉಲ್ಲೇಖಗಳಿವೆ!  ಹೀಗಾಗಿ ಬದ್ರ್ ಯುದ್ಧ ಮುಸ್ಲಿಮರಿಗೆ ಅತ್ಯಂತ ಪ್ರಿಯವಾದ ಮತ್ತು ಪವಿತ್ರವಾದ ಘಟನೆ.  

ಪ್ರಾಯಶಃ, ಈ ಯುದ್ಧದ ನೆನಪಿಗೋಸ್ಕರವೋ ಏನೋ, ಕಳೆದ ಐವತ್ತ-ಅರವತ್ತು ವರ್ಷಗಳಿಂದ ಆಧುನಿಕ ಜಗತ್ತಿನಲ್ಲಿ ಇಸ್ಲಾಂ ರಾಷ್ಠ್ರಗಳು ನಡೆಸಿದ ಯುಧ್ದಗಳಲ್ಲಿ ಬದ್ರ್ ಪದ ಪದೇ-ಪದೇ ಪ್ರಯೋಗವಾಗಿದೆ.  “ಆಪರೇಶನ್ ಬದ್ರ್” ಎಂಬ ಹೆಸರಲ್ಲಿ ೧೯೭೩ರಲ್ಲಿ ಈಜಿಪ್ಟ್ ಸೂಯೆಝ್ ಕಾಲುವೆಯನ್ನು ದಾಟಿ ಇಸ್ರೇಲ್ ಮೇಲೇ ದಾಳಿ ಮಾಡಿತು.  ಆದರೆ “ಆಪರೇಶನ್ ಬದ್ರ್” ಫೇಲ್ ಆಗಿ ಈಜಿಪ್ಟ್ ಸೋತು ಹೋಯಿತು. 

೧೯೮೫ರಲ್ಲಿ ಇರಾನ್ ಮತ್ತು ಇರಾಕ್ ಮಧ್ಯೆ ನಡೆದ ಯುದ್ಧದಲ್ಲಿ ಮತ್ತೊಮ್ಮೆ “ಆಪರೇಶನ್ ಬದ್ರ್” ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಯಿತು.  ಆದರೆ ಅ ಹೆಸರೇ ದುರಾದೃಷ್ಟ ತಂದಿತೋ ಏನೋ… ಇರಾನ್ ನ “ಆಪರೇಶನ್ ಬದ್ರ್” ಮಕಾಡೆ ಮಲಗಿತು! 

ಮತ್ತೆ ೧೯೯೯ರಲ್ಲಿ ಪಾಕಿಸ್ತಾನದ ಸೈನ್ಯಾಧಿಕಾರಿಗಳ ಹುಚ್ಚು ಮತ್ತೊಮ್ಮೆ ಗರಿಗೆದರಿತು..!  ಪಾಪಿ ಪಾಕಿಸ್ತಾನ ಸದ್ದಿಲ್ಲದೆಯೇ ಆ ವರ್ಷ ಕಾಶ್ಮೀರವನ್ನು ಭಾರತದ ಭೂಭಾಗದಿಂದ ಪ್ರತ್ಯೇಕಿಸುವ ಬೃಹತ್ ಒಳಸಂಚೊಂದನ್ನು ನಡೆಸಿತು.  ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಲೇಹ್ ಗೆ ಸಂಪರ್ಕಿಸುವ ಪ್ರಮುಖ ರಸ್ತೆ ರಾಷ್ಟ್ರೀಯ ಹೆದ್ದಾರಿ ನಂಬರ್ ೧ ಸರಹದ್ದಿನ ಮೂಲಕ ಕಡಿದಾದ ಎತ್ತರದ ಬೆಟ್ಟಗಳ ಸಾಲಿನ ತುತ್ತ ತುದಿಗಳನ್ನು ಸದ್ದಿಲ್ಲದೆಯೇ ಪಾಕಿ ಸೈನಿಕರು ಆಕ್ರಮಿಸಿಕೊಂಡರು.  ರಾಷ್ಟ್ರೀಯ ಹೆದ್ದಾರಿ ನಂಬರ್ ೧ಅನ್ನು ವಶಪಡಿಸಿಕೊಂಡರೆ ಕಾರ್ಗಿಲ್ ನಿಂದ ಸಿಯಾಚಿನ್ ವರೆಗಿನ ಪ್ರದೇಶಗಳ ಮೇಲೆ ಭಾರತ ತನ್ನ ಹಿಡಿತ ಕಳೆದುಕೊಳ್ಳುವ ಸಂಭವವಿತ್ತು.  ಮೇಲಾಗಿ ಕಾಶ್ಮೀರದ ರಾಜಧಾನಿ ಶ್ರೀನಗರ ಭಾರತದಿಂದ ಸಂಪರ್ಕ ಕಡಿದುಕೊಳ್ಳುತಿತ್ತು!  ಪಾಪಿ ಪಾಕಿಗಳು ಈ ಧೂರ್ತ ಯೋಜನೆಗೆ ಮತ್ತೊಮ್ಮೆ “ಆಪರೇಶನ್ ಬದ್ರ್” ಎಂಬ ಹೆಸರನ್ನೇ ಇಟ್ಟಿದ್ದರು! 

ಪಾಕಿಗಳು ಹೀಗೆ ಈ ಹೆಸರಿಡಲು ಬಲವಾದ ಕಾರಣವೊಂದಿತ್ತು.  ಕಾಶ್ಮೀರದಲ್ಲಿ ಕಣಿವೆಯಿದ್ದ ಹಾಗೆಯೇ ಮದೀನಾ ಮತ್ತು ಮೆಕ್ಕಾ ಮಧ್ಯೆ ಇದ್ದ ಬದ್ರ್ ಪ್ರದೇಶದಲ್ಲಿ ಯಾಲ್ಯಾಲ್ ಎಂಬ ಕಣಿವೆಯೂ ಅದಕ್ಕೆ ಹೊಂದಿಕೊಂಡಂತೆಯೇ ಅಖಂಖಾಲ್ ಎಂಬ ಎತ್ತರದ ಬೆಟ್ಟವೂ ಇತ್ತು.  ಇಲ್ಲೂ ಕಾಶ್ಮೀರದ ಕಣಿವೆ ಪಕ್ಕದಲ್ಲೇ ಕಾರ್ಗಿಲ್ ಬೆಟ್ಟಗಳ ಸಾಲು ಇತ್ತು. ಅಂದು ಆರನೆಯ ಶತಮಾನದಲ್ಲಿ ಮುಸ್ಲಿಮರ ಸೈನ್ಯ ಅಖಂಖಾಲ್ ಬೆಟ್ಟ ಹತ್ತಿಯೇ ಮೆಕ್ಕಾದ ಸೈನ್ಯದ ಮೇಲೆ ದಾಳಿ ಮಾಡಿದ್ದು!  ಇಲ್ಲೂ ಹಾಗೆಯೇ… ಪಾಕಿಸ್ತಾನ ದುರ್ಗಮ ಬೆಟ್ಟಗಳ ಗಿರಿಕಂದರಗಳ ನಡುವೆ ತಮ್ಮ ಬಂಕರುಗಳನ್ನು ನಿರ್ಮಿಸಿಕೊಂಡು ಕೆಳಗೆ ರಾಷ್ಟ್ರೀಯ ಹೆದ್ದಾರಿ ನಂಬರ್ ೧ರ ಮೇಲೆ ಬಂಬ್ ದಾಳಿ ನಡೆಸಿ ಕಾಶ್ಮೀರಕ್ಕಿರುವ ಏಕಮಾತ್ರ ಸಂಪರ್ಕ ಕೂಡಾ ಕಡಿದುಕೊಂಡು ಭಾರತದಿಂದ ಬೇರ್ಪಡುತ್ತದೆ ಎಂಬ ದುರಾಲೋಚನೆ ಮಾಡಿಯೇ ಇದಕ್ಕೆ “ಆಪರೇಶನ್ ಬದ್ರ್” ಎಂಬ ಹೆಸರಿಟ್ಟದ್ದು! 

ಆದರೆ ದುರಾದೃಷ್ಟ ಹೇಗಿತ್ತೆಂದರೆ, ಭಾರತೀಯ ಸೈನಿಕರ ಪೌರುಷದ ಮುಂದೆ ಶತ್ರು ಪಾಕಿಗಳ ಆಟ ನಡೆಯಲೇ ಇಲ್ಲ.  “ಆಪರೇಶನ್ ಬದ್ರ್” ಮತ್ತೊಮ್ಮೆ ಘೋರವಾಗಿ ವಿಫಲವಾಯಿತು!  ೧೯೯೯ರ ಮೇ ೩ನೇ ತಾರೀಕು ಪಾಕಿಗಳ ಸಂಚಿನ ಸುಳಿವು ತಿಳಿಯಿತು.  ಅದಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಅಂದರೆ ಜುಲೈ ೨೬ನೇ ತಾರೀಕಿಗೆ ಕಾರ್ಗಿಲ್ ಬೆಟ್ಟದ ಮೇಲೆ ಅವಿತಿದ್ದ ಕೊನೆಯ ಪಾಕಿಯೂ ಕಾಲ್ಕಿತ್ತಿದ್ದ..!!  ಕಾರ್ಗಿಲ್ ಬೆಟ್ಟದ ಮೇಲೆ ಮತ್ತು ಕಣಿವೆಯಲ್ಲಿ  ಭಾರತೀಯ ಸೈನಿಕರು ಒಬ್ಬೊಬ್ಬ ಪಾಕಿಯನ್ನೂ ಹುಡುಕಿ ಹುಡುಕಿ ಕೊಂದುಹಾಕಿದ್ದರು.  ಹಾಗಾಗಿ ಜುಲೈ ೨೬ನೇ ತಾರೀಕಿನಂದೇ ಕಾರ್ಗಿಲ್ ಯುದ್ಧದಲ್ಲಿ ನಾವು ಗೆದ್ದ ದ್ಯೋತಕವಾಗಿ “ಕಾರ್ಗಿಲ್ ವಿಜಯ್ ದಿವಸ್” ಅನ್ನು ಆಚರಿಸುತ್ತೇವೆ. 

ಪಾಕಿಸ್ತಾನದ ಈ ಸಂಚಿಗೆ ನಮ್ಮ ಹಲವಾರು ಮಂದಿ ಯೋಧರು ಬಲಿಯಾದರು… ವೀರಮರಣವನ್ನಪ್ಪಿದರು… ದೇಶದ ಸಾರ್ವಭೌಮತೆಯನ್ನು ಕಾಪಾಡಲು ಬಲಿದಾನವನ್ನಿತ್ತ ಪ್ರತಿಯೋರ್ವ ಯೋಧನೂ ನಮ್ಮ ಪಾಲಿಗೆ ಆರಾಧ್ಯ ದೈವ…!! ಅವರೆಲ್ಲರಿಗೂ ನಾನು ಹೃದಯಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ..!!!

#ಜೈ_ಹಿಂದ್ 

#ಅನಂತಕುಮಾರಹೆಗಡೆ

Related posts