Infinite Thoughts

Thoughts beyond imagination

ಹಲವು ಪ್ರಥಮಗಳ ಸರದಾರ.... ರಾಮೇಶ್ವರದ ಈ ಪಕೀರ..!

ಹಲವು ಪ್ರಥಮಗಳ ಸರದಾರ.... ರಾಮೇಶ್ವರದ ಈ ಪಕೀರ..! 

ಬ್ರಾಹ್ಮಣನಾದ ರಾವಣನನ್ನು ಸಂಹರಿಸಿ ಬ್ರಹ್ಮಹತ್ಯ ಪಾಪಕ್ಕೆ ಗುರಿಯಾದ ಶ್ರೀ ರಾಮ; ಪಾಪ ಪರಿಹಾರಾರ್ಥವಾಗಿ ಲಂಕೆಯಿಂದ ಮರಳಿ ಬರುವ ದಾರಿಯಲ್ಲಿ ರಾಮಸೇತುವನ್ನು ದಾಟಿದ ತಕ್ಷಣವೇ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಸೀತಾ-ಲಕ್ಶ್ಮಣ-ಹನುಮ ಸಮೇತನಾಗಿ ತನ್ನ ವಾನರ ಪರಿವಾರದೊಂದಿಗೆ ಈಶ್ವರನನ್ನು ಆರಾಧಿಸುತ್ತಾನೆ.  ಈ ಲಿಂಗವನ್ನು ಸೀತಾಮಾತೆಯೇ ಸ್ವತಃ ಮರಳಿನಿಂದ ರಚಿಸಿದ್ದಳೆಂಬ ಪುರಾಣಕಥೆಯೂ ಇದೆ.  ಹಾಗೆ ಪ್ರತಿಷ್ಠಾಪಿಸಿದ ಲಿಂಗವೇ ಮುಂದೆ ಶ್ರೀ ರಾಮನಾಥ ಸ್ವಾಮೀ ಕ್ಷೇತ್ರವೆಂದೂ, ಆ ಸ್ಥಳ ರಾಮೇಶ್ವರವೆಂದೂ  ಪ್ರಸಿದ್ಧವಾಗಿದೆ.  ಇದು ಹನ್ನೆರಡು ಜ್ಯೋತಿರ್ಲಿಂಗ  ಕ್ಷೇತ್ರಗಳಲ್ಲೊಂದು.  ಶೈವರಿಗೆ ಅದು ಹೇಗೆ ರಾಮೇಶ್ವರ ಪುಣ್ಯ ಕ್ಷೇತ್ರವೋ ಹಾಗೆಯೆ ವೈಷ್ಣವ ಸಂಪ್ರದಾಯದವರಿಗೂ ಚತುರ್ಧಾಮ ಯಾತ್ರಾ ಸ್ಥಳಗಳ ಪೈಕಿ ಬದರೀನಾಥ, ದ್ವಾರಕಾ, ಪುರಿ ಕ್ಷೇತ್ರಗಳ  ಜೊತೆಗೇ ನಾಲ್ಕನೆಯ ಧಾಮವೇ ರಾಮೇಶ್ವರ.  ಹೀಗೆ ಹಿಂದೂಗಳಿಗೆ ಅತ್ಯಂತ ಮಹತ್ವದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ರಾಮೇಶ್ವರದ ದರ್ಶನಕ್ಕಾಗಿ ಬರುವ ಭಕ್ತರನ್ನು ರಾಮೇಶ್ವರದಿಂದ ರಾಮಸೇತು ಇರುವ ಧನುಶ್ಕೋಡಿಗೆ ಸಾಗಿಸಲು ಮತ್ತು ಮರಳಿ ತರಲು ಪ್ರಯಾಣಿಕ ದೋಣಿಯೊಂದನ್ನು ಹೊಂದಿದ್ದ ಅಲ್ಲಿನ ಸ್ಥಳೀಯ ಮಸೀದಿಯ ಇಮಾಮನೂ ಆಗಿದ್ದ ಜೈನುಲ್ ಆಬಿದೀನ್ ಮತ್ತು ಅಯಿಸಮ್ಮ ದಂಪತಿಗಳ ಕಿರಿಯ ಮಗನೇ  ಅವುಲ್ ಫಕೀರ್ ಜೈನುಲ್ ಆಬಿದೀನ್ ಅಬ್ದುಲ್ ಕಲಾಂ.  ತಲೆತಲಾಂತರಗಳಿಂದಲೂ ಸಾಮಾನು ಸರಂಜಾಮುಗಳನ್ನು, ದಿನಸಿ ಪದಾರ್ಥಗಳನ್ನು, ಯಾತ್ರಾರ್ಥಿಗಳನ್ನು ಮರದ ದೋಣಿಗಳಲ್ಲಿ ಸಾಗಿಸುತ್ತಿದ್ದುದರಿಂದ ಆ ಕುಟುಂಬಕ್ಕೆ "ಮರ ಕಲಾಂ ಇಯಕ್ಕಿವರ್" ಅಂತ ಹೆಸರು ಬಂತು. ಮುಂದೆ 'ಮರಕ್ಕಿಯರ್ ' ಅಂತಲೂ ಆಯಿತು. 

 
ಸಾಮಾನ್ಯ ಮರದ ದೋಣಿಯಲ್ಲಿ ಜನಸಾಮಾನ್ಯರನ್ನು ಸಮುದ್ರ ದಾಟಿಸುವ ಕೆಲಸ ಮಾಡುತ್ತಿದ್ದ ಕುಟುಂಬದಲ್ಲಿ ಹುಟ್ಟಿದ ಹುಡುಗನೊಬ್ಬ ಮುಂದೆ ಬೆಳೆದು ವಿಜ್ಞಾನಿಯಾಗಿ, ರಾಕೆಟ್ ಮತ್ತು ಕ್ಷಿಪಣಿ ತಜ್ಞನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಭಾರತದ ಮೊತ್ತ ಮೊದಲ ಬಾರಿಗೆ ಅಂತರಿಕ್ಷದ ಕಕ್ಷೆಗೆ ತನ್ನದೇ ಉಪಗ್ರಗಳನ್ನು ಕಳುಹಿಸಲು ಅಂತರಿಕ್ಷ ನೌಕೆಯನ್ನೇ ಸೃಷ್ಟಿಸಿದ್ದು ಈಗ ಇತಿಹಾಸ.  ಎ.ಪಿ.ಜೆ. ಅಬ್ದುಲ್ ಕಲಾಂ ಎಂಬ ಪ್ರತಿಭಾವಂತನನ್ನು ರಾಕೆಟ್ ಮತ್ತು ಕ್ಷಿಪಣಿ ತಜ್ಞನಾಗಿ, ಭಾರತ ಪ್ರಧಾನಿ ಅಟಲ್ ಜೀಯವರ ನೇತೃತ್ವದಲ್ಲಿ ನಡೆಸಿದ್ದ ಎರಡನೆಯ ಅಣುಪರೀಕ್ಷೆ ಪೊಖರಾನ್ ಅಣುಸ್ಫೋಟದ ರೂವಾರಿಯಾಗಿ, ಅಗ್ನಿ ಕ್ಷಿಪಣಿಯ ಜನಕನಾಗಿ ಮತ್ತು ಭಾರತರತ್ನ ಪ್ರಶಸ್ತಿಗೆ ಭಾಜನರಾದ ನಮ್ಮ ದೇಶದ ಹೆಮ್ಮೆಯ ರಾಷ್ಟ್ರಪತಿಯಾಗಿ ಎಲ್ಲರೂ ಬಲ್ಲರು.  ಆದರೆ ರಾಮೇಶ್ವರದ ಪುಣ್ಯ ಭೂಮಿಯಲ್ಲಿ ಹುಟ್ಟಿದ ಸರಳ ವ್ಯಕ್ತಿತ್ವದ ಫಕೀರನ ಜೋಳಿಗೆಯಲ್ಲಿ ಹಲವು ಪ್ರಥಮಗಳ ಗಂಟು ಇದೆ.  ಭಾರತ ಮೊಟ್ಟಮೊದಲ ಬಾರಿಗೆ ಖ್ಯಾತ ವಿಜ್ಞಾನಿ ಶ್ರೀ ವಿಕ್ರಂ ಸಾರಾಭಾಯಿ ಅವರ ನೇತೃತ್ವದಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದಕ್ಕಾಗಿಯೇ ಒಂದು ಸಮಿತಿಯನ್ನು ಪ್ರಾರಂಭಿಸಿತ್ತು.  Indian National Committee for Space Research (INCOSPARಎಂಬ ಈ ಸಮಿತಿಯಲ್ಲಿ ಅಬ್ದುಲ್ ಕಲಾಂ ರಾಕೆಟ್ ಎಂಜಿನೀರ್ ಆಗಿ ಕೆಲಸ ಪ್ರಾರಂಭಿಸಿದರು.  ಆ ಬಳಿಕ ಇಸ್ರೋ ಸ್ಥಾಪನೆಯಾಗಿ ಅದರಲ್ಲಿ ಬಾಹ್ಯಾಕಾಶ ಉಡ್ಡಯನ ವಾಹನ ಎಸ್.ಎಲ್.ವಿ. (ಸ್ಪೇಸ್ ಲಾಂಚ್ ವೆಹಿಕಲ್) ಅಭಿವೃದ್ಧಿಪಡಿಸುವ ಹೊಣೆ ಹೊತ್ತು, ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಭಾರತದ ಪ್ರಪ್ರಥಮ ಉಪಗ್ರಹ ಉಡ್ಡಯನ ವಾಹನ ಎಸ್.ಎಲ್.ವಿ. III ಅನ್ನು ರೂಪಿಸಿ ಆ ಮೂಲಕ ಭಾರತವೇ ಸ್ವಂತ ಶಕ್ತಿಯಿಂದ ಸ್ವಂತ ನೆಲದಿಂದ ಭಾರತದ ರೋಹಿಣಿ ಉಪಗ್ರಹವನ್ನು ಅಂತರಿಕ್ಷದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ಕೀರ್ತಿ ಅಬ್ದುಲ್ ಕಲಾಂಗೇ ಸಲ್ಲುತ್ತದೆ.  ದೇಶದ ಮೊಟ್ಟಮೊದಲ ಗುರಿ-ನಿರ್ದೇಶಿತ ಬ್ಯಾಲಿಸ್ಟಿಕ್ ಮಿಸೈಲ್ ಅಗ್ನಿ ಮತ್ತು ಪೃಥ್ವಿಯನ್ನು ರೂಪಿಸಿದ ಕೀರ್ತಿಯೂ ಕೂಡಾ ಅಬ್ದುಲ್ ಕಲಾಂರಿಗೆ ಸಲ್ಲುತ್ತದೆ.   Integrated Guided Missile Development Programme (IGMDP) ಎಂಬ ಯೋಜನೆಯಡಿ ಭಾರತ ಗುರಿ-ನಿರ್ದೇಶಿತ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ (ಇದು ಭೂಮಿಯ ವಾತಾವರಣವನ್ನು ಭೇದಿಸಿ ಅಂತರಿಕ್ಷದಲ್ಲಿ ಸಂಚರಿಸಿ ಬಳಿಕ ನಿರ್ದೇಶಿತ ಗುರಿಯೆಡೆಗೆ ಧುಮುಕುವ, ಸಾವಿರಾರು ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯವಿರುವ ಖಂಡಾಂತರ ಕ್ಷಿಪಣಿಗಳು) ಗಳನ್ನ ಅಭಿವೃದ್ಧಿಪಡಿಸಲೆಂದೇ ವಿಜ್ಞಾನಿಗಳ ತಂಡ ಕಟ್ಟಿದಾಗ ಅದರ ನೇತೃತ್ವ ವಹಿಸಿದ್ದೂ ಕೂಡಾ ಇದೇ ಅಬ್ದುಲ್ ಕಲಾಂರು. 
 
ಆದರೆ ಇದೆಲ್ಲಕ್ಕೂ ಮೊದಲೇ ಭಾರತ ಸರಕಾರ ೧೯೭೦ರಲ್ಲಿ ಭೂಮಿಯಿಂದ ಆಕಾಶಕ್ಕೆ ಹಾರಿಸಬಲ್ಲ ಸ್ಯಾಮ್ (surface-to-air missileಅನ್ನು ಅಭಿವೃದ್ಧಿಪಡಿಸಲೆಂದು ಎರಡು ರಹಸ್ಯ ಯೋಜನೆಗಳನ್ನು ರೂಪಿಸಿತ್ತು . "ಪ್ರಾಜೆಕ್ಟ್ ಡೆವಿಲ್" ಮತ್ತು "ಪ್ರಾಜೆಕ್ಟ್ ವೇಲಿಯೆಂಟ್" ಎಂಬ ಈ ಎರಡೂ ರಹಸ್ಯ ಯೋಜನೆಗಳ ಮೂಲಕ ಭಾರತ ಮೊದಲ ಬಾರಿಗೆ ಕ್ಷಿಪಣಿ ತಂತ್ರಜ್ಞಾನವನ್ನು ಸ್ವದೇಶಿಯಾಗಿ ಅಭಿವೃದ್ಧಿಪಡಿಸುವ ಮಹತ್ತರ ಕೆಲಸಕ್ಕೆ ಕೈಹಾಕಿತು... ಆಗಲೂ ಇದರ ಹಿಂದೆ ಇದ್ದ ಪ್ರೇರೇನಾ ಶಕ್ತಿ ಇದೇ ಅಬ್ದುಲ್ ಕಲಾಂ!!!
 
ಕ್ಷಿಪಣಿ ತಂತ್ರಜ್ಞ ಮತ್ತು ವಿಜ್ಞಾನಿ ಅಬ್ದುಲ್ ಕಲಾಂ ರಾಕೆಟ್ ಮತ್ತು ಕ್ಷಿಪಣಿಗಳನ್ನು ಮಾತ್ರ ಅಭಿವೃದ್ಧಿ ಪಡಿಸಲಿಲ್ಲ.  ಹೃದಯತಜ್ಞ ಡಾ ಸೋಮರಾಜು ಜೊತೆಗೆ ಸೇರಿಕೊಂಡು ಹೃದಯಕ್ಕೆ ಅಳವಡಿಸುವ ತುಂಬಾ ಕಡಿಮೆ ಬೆಲೆಯ  ಸ್ಟೆಂಟ್ ಅನ್ನು ಕಂಡು ಹಿಡಿದರು.  ಇದು ಕಲಾಂ-ರಾಜು ಸ್ಟೆಂಟ್ ಅಂತಲೇ ಹೆಸರಾಗಿದೆ.  ಗ್ರಾಮೀಣ ಭಾಗದಲ್ಲಿ ಅರೋಗ್ಯ ವ್ಯವಸ್ಥೆಗೆಂದೇ ಕಡಿಮೆ ಖರ್ಚಿನಲ್ಲಿ ಡಾ ಸೋಮರಾಜು ಜೊತೆಗೆ ಸೇರಿಕೊಂಡು ಕಲಾಂ-ರಾಜು ಟ್ಯಾಬ್ಲೆಟ್ ಕೂಡಾ ಕಂಡುಹಿಡಿದರು. 
 
 
ತಂದೆ, ತಾತ, ಮುತ್ತಾತ ಹೀಗೆ ತಲೆತಲಾಂತರದಿಂದಲೂ ದೋಣಿ ನಡೆಸುತ್ತಾ ಜನರನ್ನೂ, ಸಾಮಾನು ಸರಂಜಾಮುಗಳನ್ನೂ ಸಮುದ್ರ ದಾಟಿಸುತ್ತಿದ್ದ ಮನೆತನದಿಂದ ಬಂದ ಅಬ್ದುಲ್ ಕಲಾಂ ದೊಡ್ಡ ಕನಸುಗಳನ್ನು ಕಂಡರು.  ಕಷ್ಟಪಟ್ಟು ದುಡಿದು ಇಷ್ಟದ ಕ್ಷೇತ್ರದಲ್ಲಿ ತಾವು ಕಂಡ ಕನಸುಗಳನ್ನೆಲ್ಲಾ ಸಾಕಾರಗೊಳಿಸಲು ಶ್ರಮಿಸಿ ಯಶಸ್ವಿಯೂ ಆದರು.  ತನ್ನ ತಂದೆ ಮತ್ತು ಮುತ್ತಾತರು ದೋಣಿ ನಡೆಸಿ ಜನರನ್ನು ದಾಟಿಸಿದರೆ, ಈ ಮನುಷ್ಯ ರಾಕೆಟ್ಟು ಮತ್ತು ಕ್ಷಿಪಣಿಗಳನ್ನು ನಿರ್ಮಿಸಿ ನಮ್ಮ ಉಪಗ್ರಹಗಳನ್ನು ಭೂಮಿಯ ವಾತಾವರವನ್ನೇ ದಾಟಿಸಿ ಅಂತರಿಕ್ಷಕ್ಕೇ ಸಾಗಿಸಿದರು..! ರಾಮೇಶ್ವರ ಎಂಬ ಪುಣ್ಯ ಭೂಮಿ ಸಮುದ್ರಕ್ಕೇ ಸೇತುವೆ ನಿರ್ಮಿಸಿದ ಭಗವಾನ್ ಶ್ರೀರಾಮನ ಸಾಹಸಕ್ಕೆ, ಪವಾಡಕ್ಕೆ ಹೆಸರುವಾಸಿ. ಅಂತ ಪುಣ್ಯ ಭೂಮಿಯಲ್ಲಿ ಜನಿಸಿದ ಈ ಅಬ್ದುಲ್ ಕಲಾಂ ಅಂತರಿಕ್ಷಕ್ಕೆ ಸೇತುವೆ ನಿರ್ಮಿಸಿ ಹೆಸರಾದರು..! 
 
ವೀಣೆ ನುಡಿಸುವ ವಿಜ್ಞಾನಿ ಎಂದೇ ಪ್ರಸಿದ್ಧರಾಗಿದ್ದ ರಾಮೇಶ್ವರದ ಈ ಪಕೀರ, ವೈಜ್ಞಾನಿಕ ರಂಗದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಸರದಾರನೆನಿಸಿಕೊಂಡಿದ್ದರು.  ಅವರು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಮೊತ್ತ ಮೊದಲ ವಿಜ್ಞಾನಿಯೂ ಹೌದು ಮತ್ತು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯಾಗಿ ವಾಸಿಸಿದ ಮೊತ್ತ ಮೊದಲ ಬ್ರಹ್ಮಚಾರಿಯೂ ಹೌದು..! 
 
ಅಂದ ಹಾಗೆ ಇವತ್ತು ಅಬ್ದುಲ್  ಕಲಾಂ ಎಂಬ ವಿಜ್ಞಾನಿ ನಮ್ಮನ್ನೆಲ್ಲ ಆಗಲಿ ನಾಲ್ಕು ವರ್ಷ ಸಂದಿತು.  ೨೦೧೫ರ ಜುಲೈ ೨೭ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ "ವಾಸಯೋಗ್ಯವಾದ ಭೂಮಿಯನ್ನು ನಿರ್ಮಿಸೋಣ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ವೇದಿಕೆಯಲ್ಲೇ ತೀವ್ರ ಹೃದಯಾಘಾತವಾಗಿ ನಿಧನರಾದರು.  ಆ ಮಹಾನ್ ಚೇತನ ಬಿಟ್ಟು ಹೋದ ಆ ಜಾಗವನ್ನು ಮತ್ತಿನ್ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ.  ಇವತ್ತು ಅವರು ನಮ್ಮನ್ನೆಲ್ಲಾ ಬಿಟ್ಟು ಅಗಲಿದ ದಿನ.  ಅವರ ಪುಣ್ಯಸ್ಮರಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.  ಅಗಲಿ ಹೋದ ಆ ಮಹಾನ್ ಚೇತನಕ್ಕೆ  ಶ್ರದ್ದೆಯ ನಮನ..!!  
 
#ಅನಂತಕುಮಾರಹೆಗಡೆ 

Related posts