Infinite Thoughts

Thoughts beyond imagination

ತುಂಬು ಹೃದಯದ ಸಾಕ್ಷಾತ ಮಾತೃ ಸ್ವರೂಪಿ!

ತುಂಬು ಹೃದಯದ ಸಾಕ್ಷಾತ ಮಾತೃ ಸ್ವರೂಪಿ!  
ಸಮಗ್ರ ವಿಶ್ವ ನಾಯಕತ್ವದ ಮನಗೆದ್ದ ಅಪ್ರತಿಮ ಅಜಾತಶತ್ರು!
ಎಂತಹ ಕಲ್ಲುಹೃದಯವನ್ನು ಕರಗಿಸುವ ಅತ್ಯುತ್ತಮ ವಾಗ್ಪಟು!
ನಿಷ್ಕಲ್ಮಶ ಮನಸ್ಸಿನೊಂದಿಗೆ ಧಾರಾಳತನ ಮೆರೆದ ಅಪ್ಪಟ ಸಂಘ ಜೀವಿ!  
ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಜನಪರವಾಗಿ ರೂಪಿಸಿದ ಮುತ್ಸದಿ ಜೀವಿ!
ಜನಸೇವೆಗೆ ಸದಾ ಮಿಡಿಯುತ್ತ ಅವರ ಆಶೋತ್ತರ ಮತ್ತು ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದ ಮಹಾನ್ ಚೇತನ!  
ದೈಹಿಕವಾಗಿ ಸಾಕೆನಿಸುವಷ್ಟು ನೋವು ಉಂಡರೂ ಸುತ್ತಲಿನ ಪ್ರಪಂಚಕ್ಕೆ ಸಂತಸವನ್ನೇ ಹಂಚಿದ ಮೇರು ಭಗಿನಿ!
 
ಹೀಗಿದ್ದರೂ ನಮ್ಮ ಸುಷ್ಮಾ-ಜೀ!!
 
ಪ್ರಾರಂಭದ ಅಂದಿನಗಳಲ್ಲಿ ಕೇವಲ ಸೀಮಿತ ಸಂಪನ್ಮೂಲಗಳೊಂದಿಗೆ ತತ್ವ-ಸಿದ್ಧಾಂತದ ಮೂಲಕವೇ ಸಂಘಟನೆ ಮಾಡಿ ಪಕ್ಷ ಬೆಳೆಸಿದ ಆ ಮಹಾನ್ ನಾಯಕತ್ವದ ಪರಂಪರೆಯ ಒಂದು ಪ್ರಬಲ ಶಕ್ತಿಯೇ ಶ್ರೀಮತಿ ಸುಷ್ಮಾ ಸ್ವರಾಜ್.  ಇಂದು ಪಕ್ಷ ವ್ಯಾಪಕವಾಗಿ ಬೆಳೆದು ಜನಮನ್ನಣೆಗಳಿಸಿಕೊಂಡಿದೆ.  ಅಧಿಕಾರದ ಪ್ರಾಪ್ತಿಯೂ ದೊರೆತಿದೆ; ಪೂರಕವಾಗಿ ಜನಬಲ-ಸಂಪನ್ಮೂಲಗಳು ಸ್ವಾಭಾವಿಕವಾಗಿ ಬೆಳೆದುಬಂದಿದೆ.  ಹೀಗೆ ಏಕಾಏಕಿ ಪಕ್ಷ ಬೆಳೆಯಲಿಲ್ಲ!   ಅದರ ಹಿಂದೆ ಅನೇಕ ನಾಯಕರ ಹಲವು ವರ್ಷಗಳ ಕಾಲ ನಿಸ್ವಾರ್ಥ ಕರ್ಮ ಧಾರೆಯೆರೆದ ಫಲ, ಇಂದು ಪಕ್ಷ-ದೇಶ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುತ್ತಿದೆ.  ಸುಷ್ಮಾ-ಜೀ ಸಹ ಇಂತಹ ಪ್ರಾರ್ಥಸ್ಮರಣೀಯ ಸಾಧಕಿಯರ  ಸಾಲಿನಲ್ಲಿ ನಿಲ್ಲುವ ಅಗ್ರಪಂಕ್ತಿಯ ನಾಯಕಿ.  ಅಂದು ಅವರು ತಮ್ಮೆಲ್ಲ ಶ್ರಮವನ್ನು ಧಾರೆಯೆರೆದು ಸೋತು; ಇಂದು ನಮ್ಮನ್ನು ಜಯಶೀಲರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.  ಅವರು ಅಂದು ಸೋತು ಇಂದು ನಮ್ಮನ್ನು ಗೆಲ್ಲಿಸಿದ್ದಾರೆ!  
 
ವ್ಯಯಕ್ತಿಕವಾಗಿ ನನಗೆ ಸಂಸತ್ತಿಗೆ ಆಯ್ಕೆಗೊಂಡ ಪ್ರಾರಂಭದಲ್ಲಿ  ಯಾವುದೇ ರೀತಿಯ ಸಂಸತ್ತಿನ ಅನುಭವ ಹಾಗು ಅದರ ಕಾರ್ಯಸ್ವರೂಪದ ಬಗ್ಗೆ ಅರಿವೇ ಇರಲಿಲ್ಲ.  ಇಂತಹ ಸಂದರ್ಭದಲ್ಲಿ ತಾಯಿ ಸ್ವರೂಪವಾಗಿ ಬಂದು ನನಗೆ ಮಾರ್ಗದರ್ಶನ ನೀಡಿ ಬೆಳೆಸಿದ್ದು ಸುಶ್ಮಾ-ಜೀ!  ಒಬ್ಬ ಸಂಸದನ ಕಾರ್ಯಸ್ವರೂಪ ಮತ್ತು ಆತನ ಜವಾಬ್ದಾರಿಗಳನ್ನು ಕೂಲಂಕುಷವಾಗಿ ಅಧ್ಯಯನಕ್ಕೆ ನನ್ನನು ಮುಖಮಾಡಿಸಿದ್ದು ಸುಷ್ಮಾ-ಜೀ ಮತ್ತು ಸನ್ಮಾನ್ಯ ಮುರಳಿಮನೋಹರ್ ಜೋಶಿ-ಜೀ ಯವರು.  ಸದಾ ಮಂದಸ್ಮಿತರಾಗಿ ಎಲ್ಲೇ ಭೇಟಿಯಾದರು ಆತ್ಮೀಯವಾಗಿ ನಡೆಸಿಕೊಳ್ಳುತ್ತಿದ್ದ ಆ ಮಹಾನ್ ತಾಯಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ಸ್ಮರಣೆಯೇ ನಮಗೆ ಶ್ರೀ ರಕ್ಷೆ!  
 
ಕೇವಲ ರಾಜತಾಂತ್ರಿಕ ಶಿಷ್ಟಾಚಾರದ ಆಡಂಬರದಲ್ಲಿದ್ದ ವಿದೇಶಾಂಗ ಖಾತೆಯನ್ನು ಪ್ರಪಂಚದ ಯಾವುದೇ ಮೂಲೆಯಲ್ಲೂ ನಮ್ಮ ಜನರಿಗೆ, ಅದರಲ್ಲೂ ಜನಸಾಮಾನ್ಯರಿಗೆ ಸೇವೆಯ ಪ್ರತಿಬಿಂಬಗೊಳಿಸಿದ ಅವರ ಪ್ರಯತ್ನ ಮತ್ತು ಶ್ರಮ ಸದಾ ಸ್ಮರಣೀಯ.  ವಿಶ್ವದಾದ್ಯಂತ ಇರುವ ನಮ್ಮ ರಾಯಭಾರಿ ಕಚೇರಿಗಳು ಇದ್ದಕಿದ್ದ ಹಾಗೆ ಎಚ್ಛೆತ್ತುಗೊಂಡು ಕ್ರಿಯಾಶೀಲ ವಿಧಾನಕ್ಕೆ ಅಣಿಗೊಳಿಸಿದ ಕೀರ್ತಿ ಸುಷ್ಮಾ-ಜೀಗೆ ಸಲ್ಲುತ್ತದೆ.  Twitter ಮೂಲಕವೇ ಅವರು ಜನರ ಕೂಗಿಗೆ ಸ್ಪಂದಿಸಿದ ಪರಿ ಅನನ್ಯ.   ಸೀಮಿತ ಅಧಿಕಾರವಿದ್ದ ಸಂದರ್ಭದಲ್ಲೂ ಸಹ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಯಶಸ್ವಿ ಎನಿಸಿಕೊಂಡ್ಡಿದ್ದರು.  ರಾಜಕಾರಣ ಜನರ ಸೇವೆಗೆ ಮೀಸಲು ಎಂದು ಸಾರಿ ಅದರಂತೆ ಜೀವನ ತೇಯ್ದರು ಆ ಮಹಾನ್ ತಾಯಿ!
 
ಅವರನ್ನು ಕಳೆದುಕೊಂಡ ಅನಾಥ ಭಾವದೊಂದಿಗೆ, ಸುಷ್ಮಾ-ಜೀಯವರಿಗೆ ನನ್ನ ಹೃದಯಾಳದ ಶ್ರದ್ದೆಯ ಭಾಷ್ಫಾ೦ಜಲಿ!!!   
 
ಓಂ ಶಾಂತಿ ಶಾಂತಿ ಶಾಂತಿಃ 
 
#ಅನಂತಕುಮಾರಹೆಗಡೆ 

Related posts