ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ||
ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ||
ಈ ಬಾರಿ ಸ್ವರ್ಣ ಗೌರಿ ಪೂಜೆ ಹಾಗು ಗಣೇಶ ಚತುರ್ಥಿ ಒಂದೇ ದಿನದಲ್ಲಿ ಆಚರಿಸಬೇಕಾಗಿದೆ. ದೇಶದೆಲ್ಲೆಡೆ ಈ ಹಬ್ಬವನ್ನು ಜಾತಿ ಧರ್ಮದ ಬೇಧವನ್ನು ಮೀರಿ ಐಕ್ಯತೆಯ ಸ್ವರೂಪದಲ್ಲಿ ಆಚರಿಸುತ್ತೇವೆ. ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಗಜಾನನನು ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಅಧಿದೇವತೆಯೂ ಹೌದು. ಮಾತ್ರವಲ್ಲ, ಸಕಲ ಜನಕೋಟಿಗೆ, ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವನೂ ಹೌದು.
ಪಾರ್ವತೀದೇವಿ ಸಮಗ್ರ ಚರಾಚರವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿವೀ ಎಂದು ಕರೆಸಿಕೊಳ್ಳುತ್ತಾಳೆ ಎಂದು ಶ್ರೀ ಮಧ್ವಾಚಾರ್ಯರು ಉಲ್ಲೇಖಿಸಿದ್ದಾರೆ. ಆ ತಾಯಿ ಪಾರ್ವತಿ, ತನ್ನ ಸುಪುತ್ರನಾದ ಶ್ರೀ ಗಣೇಶನೊಂದಿಗೆ ಸಕಲ ಚರಾಚರಗಳನ್ನು ಅನುಗ್ರಹಿಸಲು ಕೈಲಾಸದಿಂದ ಕೆಳಗಿಳಿದು ಬರುತ್ತಾಳೆಂಬುದು ಈ ದಿನದ ವಿಶೇಷತೆ.
ವರ್ಷಗಾಲದ ಈ ಸಮಯದಲ್ಲಿ ಮಳೆಯ ಮುಖಾಂತರ ಧರೆಗಿಳಿದು ಮಣ್ಣಿನ ಕಣಕಣದಲ್ಲಿಯೂ ಅವಳು ವ್ಯಾಪಿಸಿರುತ್ತಾಳೆ. ಹೀಗಾಗಿ ಮಳೆ ಬಿದ್ದು ಮೆತ್ತಗಾದ ಕೆರೆಯ ಜೇಡಿ ಮಣ್ಣನ್ನು ತಂದು ಕುಂಬಾರರು ಪ್ರತಿಮೆಗಳನ್ನು ಮಾಡುತ್ತಾರೆ. ಕುಂಬಾರರು ಮಾಡಿದ ಪ್ರತಿಮೆಯೇ ಪೂಜೆಗೆ ಅರ್ಹವಾದದ್ದು.
ನಮ್ಮ ಸನಾತನ ಹಿಂದೂಧರ್ಮ ಪರಮ ಪರಿಶುದ್ಧವಾದದ್ದು. ಜಾತಿ, ಜಾತಿ ಎಂದು ಇವತ್ತಿನ ಕಲುಷಿತ ದೊಂಬ್ಬರಾಟವನ್ನು ಆಡುತ್ತ, ನೋಡುತ್ತಲಿದ್ದೇವೆ. ಆದರೆ ಪ್ರತಿಯೊಂದು ಜಾತಿಗೂ ಒಂದೊಂದು ವಿಶಿಷ್ಟ ಕರ್ಮ-ಕರ್ತವ್ಯಗಳನ್ನು ಹಾಗೂ ಅದರದೇ ಆದ ವಿಶಿಷ್ಟ ಗೌರವವನ್ನು ಎಲ್ಲ ವರ್ಗದ ಜನರಿಗೂ ನಮ್ಮ ಸನಾತನ ಧರ್ಮ ಕಲ್ಪಿಸಿದೆ.
ನಮ್ಮ ಶಾಸ್ತ್ರದ ಪ್ರಕಾರ ಕುಂಬಾರರು ಮಾಡಿದ ಮಣ್ಣಿನ ಪ್ರತಿಮೆಯಲ್ಲಿಯೇ ದೇವರ ಸನ್ನಿಧಾನಗೊಳ್ಳುವುದು. ಇಂದು ನಾವು ಹಣದ ದರ್ಪದಲ್ಲಿ ಅಥವಾ ಶಾಸ್ತ್ರವರಿಯದೆ ಹಣವನ್ನು ಕೊಟ್ಟು ವ್ಯಾಪಾರದ ರೀತಿಯಲ್ಲಿ ನಾವು ಗಣೇಶನ ಹಾಗು ಪಾರ್ವತಿಯ ಪ್ರತಿಮೆಗಳನ್ನು ಕೊಂಡು ತರುತ್ತೇವೆ. ಆದರೆ ಶಾಸ್ತ್ರೋತ್ತವಾಗಿ ನಾವು ಇಂದು ವಿಲ್ಯೆದೆಲೆ, ಅಡಿಕೆ, ಫಲ ಪುಷ್ಪಗಳ ಜೊತೆಯಲ್ಲಿ ಕುಂಬಾರರ ಕುಟುಂಬದವರಿಗೆ ಸೀರೆ, ರವಿಕೆ, ಪಂಚೆ, ಶಲ್ಯಗಳನ್ನು ನೀಡಿ ಹಣವನ್ನು ನೀಡಬೇಕು.
ಈ ರೀತಿ ನಮ್ಮ ಮನೆಗೆ ದೇವರನ್ನು ಕರೆತರುವಲ್ಲಿ ಮಹತ್ತರ ಪಾತ್ರವಹಿಸಿದ ಕುಂಬಾರರ ವಿರಾಗಗಳಿಗೆ ನಾವು ಗೌರವ ಸಲ್ಲಿಸಬೇಕಾಗಿರುವುದು ಸಹ ಅಷ್ಟೇ ಮುಖ್ಯವಾಗಿದೆ.
ಇಂದಿನ ಈ ಶುಭ ಪರ್ವದಂದು ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ.
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!
#ಅನಂತಕುಮಾರಹೆಗಡೆ