Infinite Thoughts

Thoughts beyond imagination

ಶಿಕ್ಷಕರ ದಿನಾಚರಣೆಯ ಶುಭಾಶಯಗಳು !

ನಮ್ಮಲ್ಲಿ ಚಿಂತನಶೀಲತೆಯನ್ನು ಬೆಳೆಸುವವರೇ ನಿಜವಾದ ಶಿಕ್ಷಕರು! 

-ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ 

 

"ಮಾತೃ ದೇವೋ ಭವ

ಪಿತೃ ದೇವೋ ಭವ

ಗುರು ಆಚಾರ್ಯ ದೇವೋ ಭವ"  

ಎಂಬ ಸಂಸ್ಕೃತಿ ನಮ್ಮದು.  

ಜೀವ ಹೆತ್ತ ತಾಯಿ, ಬದುಕು ಕಲಿಸಿದ ತಂದೆ ಮತ್ತು ಸಂಸ್ಕಾರ ನೀಡಿದ ಗುರು ಮೂವರನ್ನೂ ಒಟ್ಟಿಗೆ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯೂ ಹೌದು.

ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷರ ನೆನಕೆಗಾಗಿ ಸೆಪ್ಟೆಂಬರ್ ೫ರನ್ನು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತದ ಮೊದಲ ಉಪರಾಷ್ಟ್ರಪತಿಯಾಗಿಯು ಹಾಗೂ ಎರಡನೇ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ ಮಹಾನ್ ಶಿಕ್ಷಕ ಡಾ.ಸರ್ವಪಳ್ಳಿ ರಾಧಾಕೃಷ್ಣನ್ (೫ ಸೆಪ್ಟೆಂಬರ್ ೧೮೮೮ - ೧೭ ಏಪ್ರಿಲ್ ೧೯೭೫) ಗೌರವಾರ್ಥವಾಗಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಸಮಸ್ತ ಗುರುವೃಂದಕ್ಕೆ ನಮನ ಸಲ್ಲಿಸುತ್ತೇವೆ.

ಶಿಕ್ಷಣ ಕೇವಲ ಪಠ್ಯ-ಪುಸ್ತಕದ ವಿಷಯವನ್ನು ತಿಳಿಸುವುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ.  ನಮ್ಮ ಬದುಕಿನ ದಾರಿಯನ್ನು ತಿಳಿಸುವ ಮೊದಲ ಮಾರ್ಗದರ್ಶಕರೇ ಶಿಕ್ಷಕರು.  ಮುಂದಿನ ಹಲವು ವರ್ಷಗಳ ಕಾಲ ನಮ್ಮ ಬದುಕಿನ ಪ್ರಯಾಣದಲ್ಲಿ ನಮ್ಮ ಕೈಹಿಡಿದು ನಡೆಸುವ ಪ್ರಕ್ರಿಯೆಯ ಸಂಪೂರ್ಣ ಹೊಣೆ ಹೊತ್ತುಕೊಳ್ಳುವವರು ಶಿಕ್ಷಕ-ವೃಂದ.

ಈ ಶಿಕ್ಷಕ ಸಮುದಾಯವು ನಿರಂತರವಾಗಿ ನಮ್ಮಲ್ಲಿ ಜ್ಞಾನದ ಕಿಡಿಯನ್ನು ಹೊತ್ತಿಸಿ, ಸುಜ್ಞಾನದ ದಾರಿಯಲ್ಲಿ ನಡೆಯುವಂತೆ ಉತ್ತೇಜಿಸಿ ಪ್ರೇರೇಪಣೆ ಮಾಡುತಿರುತ್ತಾರೆ.  ಇಂತಹ ವಿಶಿಷ್ಟ ಕಾಯಕ-ಯೋಗಿಗಳನ್ನು ಗುರುವೆಂದು ಪರಿಗಣಿಸಿ ಅವರಿಗೆ ನಮ್ಮ ಗೌರವ ಸೂಚಿಸುವುದು ಆದ್ಯ ಕರ್ತವ್ಯ.

ಜಾಗತೀಕರಣದ ಈ ಯುಗದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಾ ಸಾಗಿದೆ.  ಹೀಗಾಗಿ ಮತ್ತೆ ಈ ಪವಿತ್ರ ಸಂಬಂಧವನ್ನು ಬಲಪಡಿಸುವ ಮೂಲಕ ನಾವು ಸ್ವಸ್ಥ ಸಮಾಜವನ್ನು ರೂಪಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ.  ಇಂದಿನ ಈ  ಸುದಿನದಂದು  ನಮ್ಮಲ್ಲಿ ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವ ಎಲ್ಲಾ ಗುರುವೃಂದಕ್ಕೂ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

ಶಿಕ್ಷಕರಿಗೆ ಜಯವಾಗಲಿ!

#ಅನಂತಕುಮಾರಹೆಗಡೆ

Related posts