ವಿಜಯದಶಮಿಯ ಶುಭಾಶಯಗಳು!
ನವರಾತ್ರಿ ಹಬ್ಬವು ಭಾರತದ ಅತ್ಯಂತ ಅರ್ಥಪೂರ್ಣ ಹಾಗು ದೊಡ್ಡ ಮಟ್ಟದ ಸಡಗರದ ಹಬ್ಬಗಳಲ್ಲಿ ಒಂದು. ನವರಾತ್ರಿ ಅಂತ್ಯದೊಂದಿಗೆ, ಆಗಮಿಸುವ ವಿಜಯ ದಶಮಿಯು ದುಷ್ಟರ ಸಂಹಾರ ಮತ್ತು ಶಿಷ್ಠರ ರಕ್ಷಣೆಯನ್ನು ಸೂಚಿಸುತ್ತದೆ. ಈ ವಿಶಿಷ್ಟ ದಿನದಂದು ಎಲ್ಲಾ ದುಷ್ಟತೆಯನ್ನು ನಿವಾರಿಸುವ ಸಾಕಾರ ಶಕ್ತಿಯಾಗಿರುವ ಶ್ರೀ ದುರ್ಗೆಯನ್ನು ಆರಾಧಿಸುವ ದಿನ. ನಮ್ಮ ಜೀವನದಲ್ಲಿ ಎದುರಾಗುವ ದುಷ್ಟ ಶಕ್ತಿಗಳನ್ನು ದಮನಿಸಿ, ಜಯದ ಮಾರ್ಗವನ್ನು ದಯೆಪಾಲಿಸುವವಳು ದುರ್ಗೆಯಾದರಿಂದ, ಅವಳನ್ನು ಜಯದುರ್ಗೆ ಎಂದು ಸಹ ಕರೆಯುತ್ತೇವೆ.
ಈ ದಿನದ ಮಹತ್ವ ಬಹುತೇಕರಿಗೆ ತಿಳಿದಂತೆ, 'ಮಹಿಷಾಸುರ'ನನ್ನು ವಧಿಸುವ ಸಲುವಾಗಿ ತಾಯಿ ಪಾರ್ವತಿಯು ಒಂಬತ್ತು ದುರ್ಗೆಯರ ಅವತಾರ ಧರಿಸಿ, ರಾಕ್ಷಸನನ್ನು ಸಂಹರಿಸಲು ಹೋರಾಡುತ್ತಾಳೆ ಹಾಗೂ ಕೊನೆಯ ದಿವಸ ಮಹಿಷಾಸುರನನ್ನು ಸಂಹರಿಸಿ ವಿಜಯ ಸಾಧಿಸುತ್ತಾಳೆ. ಅಂದಿಗೆ ತಾಯಿ ಯುದ್ದ ಪ್ರಾರಂಭಿಸಿ ಹತ್ತನೆಯ ದಿನ. ಆದ್ದರಿಂದಲೇ ಆ ದಿನವನ್ನು 'ವಿಜಯ ದಶಮಿ' ಎಂದು ಕರೆಯಲಾಗುತ್ತದೆ.
ನವರಾತ್ರಿಯ ಉದ್ದೇಶವೇ ಅಪ್ರಕಟಿತವಾದ ಮತ್ತು ಅಗೋಚರವಾದ ದುರ್ಗಾ ಶಕ್ತಿಯನ್ನು ಪ್ರಕಟಿಸುವುದು. ಈ ದುರ್ಗಾ ಶಕ್ತಿಯ ಕೃಪೆಯಿಂದ ದುಷ್ಟ ಗುಣಗಳನ್ನು ದಾಟಿ ಪರಮ, ಅವಿಭಾಜ್ಯ, ಶುದ್ಧ ಹಾಗೂ ಅನಂತವಾದ ಚೇತನವನ್ನು ಪಡೆಯುವುದು.
ಇಂತಹ ವಿಶಿಷ್ಟ ಪರ್ವದಂದು ಕತ್ತಲು - ಬೆಳಕು, ರಾತ್ರಿ- ಬೆಳಿಗ್ಗೆ, ಸುಖ-ದುಃಖ ಎಂಬ ವೈರುದ್ಯ ತುಂಬಿರುವ ಈ ಪ್ರಕೃತಿಯಲ್ಲಿ, ಇವೆಲ್ಲವನ್ನೂ ದಾಟಿ ಶಿವತ್ವದೆಡೆಗೆ, ದುರ್ಗಾದೇವಿಯು ನಮ್ಮೆಲ್ಲರನ್ನು ಕೈಹಿಡಿದು ನಡೆಸಲಿ ಎಂದು ಹಾರೈಸುತ್ತೇನೆ.
#ಅನಂತಕುಮಾರಹೆಗಡೆ