Infinite Thoughts

Thoughts beyond imagination

ಕನಕ ಜಯಂತಿಯ ಶುಭಾಶಯಗಳು!

ದಾಸ ಪರಂಪರೆಯ ೨೫೦ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು (೧೫೦೮-1606) ಪ್ರಮುಖರು. ದಂಡನಾಯಕರಾಗಿದ್ದ ತಿಮ್ಮಪ್ಪನಾಯಕ ಯುದ್ಧದಲ್ಲಿ ಸೋತಾಗ ವೈರಾಗ್ಯವುಂಟಾಗಿ ಹರಿಭಕ್ತರಾಗಿ, ವ್ಯಾಸರಾಯರ ಮೆಚ್ಚಿನ ಶಿಷ್ಯರು ಆದರೂ.

ಕನಕದಾಸರು ೧೫-೧೬ನೆಯ ಶತಮಾನದಲ್ಲೇ ಜಾತಿವ್ಯವಸ್ಥೆಯ ಬಗ್ಗೆ ಸಮರ ಸಾರಿದವರು. ಜಾತಿ-ನೀತಿಯ ಉಡದ ಪಟ್ಟಿನ ಮದ್ಯೆಯೂ, ಜನತೆಯಲ್ಲಿ ಸಾಮಾಜಿಕ ಚಿಂತನೆ ನಡೆಸಿದವರು. ಅವರಿಗೆ ಕೆಳವರ್ಗದವರ ನೋವು-ತಲ್ಲಣದ ಅರಿವಿದ್ದು, ವೃತ್ತಿಯಿಂದಾಗಿ ಮೇಲ್ವರ್ಗದವರ ಜೀವನದ ಅರಿವು ಮತ್ತು ಅನುಭವ ಸಹ ಅವರದಾಗಿತ್ತು. ಒಮ್ಮೆ ಭೂಮಿ ಅಗೆಯುತ್ತಿದ್ದಾಗ ಸಿಕ್ಕಿದ ನಿಧಿಯನ್ನು ದೇವಾಲಯಗಳ ಜೀರ್ಣೋದ್ಧಾರ ಮತ್ತು ಬಡ-ಬಗ್ಗರ ಆಹಾರಕ್ಕೆ ವ್ಯವಸ್ಥೆ ಮಾಡುವ ಮೂಲಕ ಅಂದೆ ಸಮಾಜಮುಖಿಯಾಗಿದ್ದರು.

ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನುಭವಿಸಿದ ನೋವು ಅವರ ಪದ್ಯ ರಚನೆಯಲ್ಲಿ ಹರಿದಿದೆ. ಭಕ್ತಿ ಪ್ರಧಾನ, ನೀತಿ ಬೋಧಕ, "ರಾಮಧಾನ್ಯ ಚರಿತೆ" ಯಲ್ಲಿ ಧನಿಕರ ಆಹಾರ ಅಕ್ಕಿ, ಬಡವರ ಆಹಾರ ರಾಗಿಯ ನಡುವಿನ ಸಂಭಾಷಣೆಯ ಮೂಲಕ, ರಾಗಿ ತನ್ನ ಔನ್ನತ್ಯವನ್ನು ಸಾಬೀತುಪಡಿಸಿತು. ಅಹಂಕಾರಿ ಅಕ್ಕಿ - ವಿನೀತ ರಾಗಿ, ಶ್ರೀ ರಾಮನ ತೀರ್ಮಾನದಂತೆ ರಾಗಿ "ರಾಮಧಾನ್ಯ" ವೆನಿಸಿಕೊಳ್ಳುತ್ತದೆ.

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಎನ್ನುವ ಸಾರ್ವಕಾಲಿಕ ಸತ್ಯವನ್ನು ಅವರಂತೆ ಮನಮುಟ್ಟುವಂತೆ ಇನ್ಯಾರಾದರು ನಮಗೆ ತಿಳಿಸಿದ್ಧರೇ? ೨೧ನೆಯ ಶತಮಾನದಲ್ಲಿರುವ ನಮಗೆ ಇದು ಅತ್ಯಗತ್ಯವಾದ ಸಂದೇಶವಿದು. ದೀನದಲಿತ ಮೌಢ್ಯ ರೂಢಿಗಳನ್ನು ಕಂಡು ಕಳವಳ ವ್ಯಕ್ತಪಡಿಸಿ, ಸಮಾಜದ ಓರೆ-ಕೊರೆಗಳನ್ನು ಬಿಚ್ಚು ಮಾತುಗಳಿಂದ ತಿವಿದು ಎಚ್ಚರಿಸುತ್ತಾರೆ.

ಎಲ್ಲ ಮತೀಯ ಬಂಧನಗಳಿಂದ ದೂರವಾಗಿ, ಸಮಾಜದ ಕಟ್ಟು-ಪಾಡುಗಳಿಂದ ಮುಕ್ತರಾಗಿ, ಆಧ್ಯಾತ್ಮ ಶಿಖರವನ್ನೇರಿದ ವಿಶ್ವ-ಬಂಧು, ಸಂತಕವಿ!

"ನಾವು ಕುರುಬರು, ನಮ್ಮ ದೇವರು ಬೀರಯ್ಯ, ಕಾವ ನಮ್ಮಜ್ಜ ನರಕುರಿ ಹಿಂಡುಗಳ" ಎಂದು ವಿನೀತರಾಗಿ ನುಡಿದ ಕನಕರು, "ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ" ಎನ್ನುವ ಮಟ್ಟಕ್ಕೆ ಬೆಳೆದರು! ಅಂತಹ ಕನಕದಾಸರನ್ನು ಜಾತಿಯ ಬಂಧನದಲ್ಲಿ ಕೂರಿಸದೆ, ಸಮಸ್ತ ಹಿಂದುಗಳ ಸಾಕ್ಷಿ ಪ್ರಜ್ಞೆ ಎಂಬಂತೆ ಕಾಪಡಿಕೊಳ್ಳುವುದು ಇಂದು ನಮ್ಮ ತುರ್ತು ಅಗತ್ಯಗಳಲ್ಲಿ ಒಂದು.

ಇಂದು ಕನಕದಾಸರ ೫೨೫ನೆಯ ಜಯಂತಿ, ಅವರನ್ನು ಅರಿವಿನಿಂದ ಸ್ಮರಿಸೋಣ!

#ಕನಕಜಯಂತಿ

#ಅನಂತಕುಮಾರಹೆಗಡೆ

Related posts