Infinite Thoughts

Thoughts beyond imagination

ಸ್ಥಿರ ಹಾಗು ಸುಭದ್ರ ಸರ್ಕಾರ!

ರಾಜ್ಯದ ಜನತೆ ಸ್ಥಿರ ಹಾಗು ಸುಭದ್ರ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.  ಒಂದೂವರೆ ವರ್ಷದ ಹಿಂದೆ ಅತಂತ್ರ ಸರ್ಕಾರ ರಚನೆಗೆ ಕಾರಣರಾದ ರಾಜ್ಯದ ಮತದಾರ ಪ್ರಭು, ಎಚ್ಛೆತ್ತುಗೊಂಡು ಸ್ಥಿರ ಸರ್ಕಾರಕ್ಕೆ ಮುದ್ರೆ ಒತ್ತಿ ಅಭಿವೃದ್ಧಿಗೆ ಆದೇಶ ನೀಡಿದ್ದಾನೆ.  ಕಾಂಗ್ರೆಸ್ ಹಾಗು ಜನತಾದಳದ ಮೈತ್ರಿ ಕುತಂತ್ರವನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.  ಸಿದ್ಧರಾಮಯ್ಯನವರ ಘರ್ಜನೆಗಾಗಲಿ ಅಥವಾ ಎಂದಿನ ಕುಮಾರಸ್ವಾಮಿಯ ಕಣ್ಣೀರಿಗೆ ಜನತೆ ಮಾರು ಹೋಗಲಿಲ್ಲ.  ೨೦೧೮ರಲ್ಲೇ ಜನತೆಯ ಒಲವು ಬಿಜೆಪಿ ಪರವಾಗಿದ್ದರು, ನಿರ್ಣಾಯಕವಾಗಿ ಸ್ಪಷ್ಟ ಆದೇಶ ದೊರಕದಿರುವ ಕಾರಣ, ಕಾಂಗ್ರೆಸ್ ಮತ್ತು ಜನತಾದಳ ತಂತ್ರಗಾರಿಕೆಯ ಅವಕಾಶದದ ಮೈತ್ರಿಯನ್ನು ಮಾಡಿಕೊಂಡು ಸರ್ಕಾರ ರಚಿಸಿತು.  ಆದರೆ ಈ ಮೈತ್ರಿಗೆ ಯಾವುದೇ ಮೌಲ್ಯಾಧಾರಿತ ರಾಜಕಾರಣವಾಗಲಿ ಅಥವಾ ಉತ್ತಮವಾಗಿ ಸರ್ಕಾರ ಕಾರ್ಯ ನಿರ್ವಹಣೆ ಕೂಡ ಮಾಡಲು ಸಾಧ್ಯವಾಗಲಿಲ್ಲ.  ಒಂದೂವರೆ ವರ್ಷ ಕಳೆದರು ಸರ್ಕಾರ take-off ಆಗಲೆ ಇಲ್ಲ.  ಸಿದ್ಧರಾಮಯ್ಯ ಮತ್ತು ದೇವೇಗೌಡರ ರಾಜಕೀಯ ಮೇಲಾಟದಲ್ಲಿ, ಬಡವಾಗಿದ್ದು ರಾಜ್ಯ ಹಾಗು ರಾಜ್ಯದ ಜನತೆ ಮಾತ್ರ.  ಕೊನೆಗೆ ಅವರ ಪಕ್ಷದ ಶಾಸಕರೇ ಬಂಡೆದ್ದು ಅಂದಿನ CoJa ಸರ್ಕಾರಕ್ಕೆ ಇತಿಶ್ರೀ ಹಾಡಿದ್ದು ಈಗ ಇತಿಹಾಸ. 
 
ಇದರ ನಡುವೆ ಮಹಾರಾಷ್ಟ್ರದ ಪ್ರಹಸನ, ವಿಚ್ಛೇದಿತಗೊಂಡ ರಾಜ್ಯದ ಪ್ರೇತಾತ್ಮಗಳಿಗೆ ಮತ್ತೊಮ್ಮೆ ಅಧಿಕಾರದ ಜೊಲ್ಲು ಸುರಿಯಲಾರಂಭಿಸಿತು.  ಚುನಾವಣೆಯ ಪ್ರಚಾರ ಸಂದರ್ಭದಲ್ಲೇ ಮತ್ತೆ ಒಟ್ಟುಗೂಡುವ ಸೂಚನೆ ನೀಡಿದ್ದರಿಂದ ಮತದಾರ ಪ್ರಭುಗಳು ಇವರ ಹುನ್ನಾರವನ್ನು ಸೂಕ್ತವಾಗಿ ಅರ್ಥೈಸಿಕೊಂಡರು.  ಎರಡು ಪಕ್ಷಗಳ ನಾಯಕತ್ವದಲ್ಲೇ ತೀವ್ರ ಭಿನ್ನಾಭಿಪ್ರಾಯವಿರುವಾಗಲೇ, ಕೇವಲ ಕೆಲವೇ ವ್ಯಕ್ತಿ ಹಾಗು ಕುಟುಂಬಗಳ ಅಧಿಕಾರದ ಆಸೆಗಾಗಿ ಮತ್ತೊಮ್ಮೆ ಮೈತ್ರಿ ಕುದುರಿಸಿಕೊಳ್ಳುವುದನ್ನು ಜನತೆ ಹಾಗು ಪಕ್ಷದ ಕಾರ್ಯಕರ್ತರಾರು ಸಹಿಸಿಕೊಳ್ಳಲಿಲ್ಲ.  ಮಹಾರಾಷ್ಟ್ರದಲ್ಲಿ ನಡೆದ ಘೋರ ಅಪಚಾರವನ್ನು ಮಾದರಿಯನ್ನಾಗಿ ಮಾಡಿಕೊಳ್ಳುತ್ತೇವೆ ಎಂದವರಿಗೆ ಮತದಾರ ಸ್ಪಷ್ಟವಾಗಿ ಕಪಾಳಮೋಕ್ಷ ಮಾಡಿದ್ದಾನೆ.  
 
ಕೇವಲ ತಂತ್ರಗಾರಿಕೆಯಿಂದಲೇ ಅಧಿಕಾರ ಹಿಡಿಯುವ ಮೂರ್ಖ ನಾಯಕರುಗಳು, ಜನರ ಆಶೋತ್ತರಗಳನ್ನು ಅರಿಯಲು ಸಂಪೂರ್ಣ ವಿಫಲಗೊಂಡರು.  ಜನತೆ ಮೋದಿ ಮತ್ತು ಯಡಿಯೂರಪ್ಪನವರ ನಾಯಕತ್ವಕ್ಕೆ ಜೈಕಾರದ ಆದೇಶವನ್ನು ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪಷ್ಟವಾಗಿ ನೀಡಿ ಕಾಂಗ್ರೆಸ್ ಹಾಗು ಜನತಾದಳ ಪಕ್ಷಗಳೆರಡನ್ನು ತಿರಸ್ಕರಿಸದ್ದಾನೆ.  ಆದರೂ ವಾಮಮಾರ್ಗದಲ್ಲಿ ತುಳಿದು ಜನರ ತೀರ್ಪನ್ನು ದಮನಿಸಿದರೆ, ಮತ್ತೊಮ್ಮೆ ೧೫ರಲ್ಲಿ ೧೨ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಗೆ ದೊರಕುವಂತೆ ಮತದಾರ ತೀರ್ಪನ್ನು ನೀಡಿದ.  ಈ ಪ್ರಕ್ರಿಯೆಯಲ್ಲಿ ಮತದಾರ ಜಾತಿ ಪ್ರೇಮವನ್ನು ಸಹ ದೂರವಿಟ್ಟು, ರಾಜ್ಯ ಹಾಗು ರಾಷ್ಟ್ರದ ಎಲ್ಲ ವಿದ್ಯಮಾನಗಳನ್ನು ಅಳೆದು ತೂಗಿ ಸೂಕ್ತವಾಗಿ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾನೆ.
 
ಈ ಬೆಂಬಲ ಸೂಚಿಸುವುದರೊಂದಿಗೆ ಮತದಾರರು ಸಹ ನಮ್ಮ ಪಕ್ಷದ ನಾಯಕತ್ವಕ್ಕೂ ನಿರ್ಧಿಷ್ಟವಾದ ಆದೇಶವನ್ನೇ ನೀಡಿದ್ದಾರೆ.  ಅಧಿಕಾರವನ್ನು ಸರಿಯಾಗಿ ನಿರ್ವಹಿಸಿ ಅಥವಾ ನಿಮ್ಮನ್ನು ಸಹ ಆಪೋಶಣೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.  ಈಗ ರಾಜ್ಯವಾಳುತ್ತಿರುವ ನಮ್ಮ ಪಕ್ಷದ ಸರ್ಕಾರ, ಮತದಾರನ ಆದೇಶಕ್ಕೆ ಸೂಕ್ತವಾಗಿ ಸ್ಪಂದಿಸಿ ತನ್ನ ಜವಾಬ್ದಾರಿಯನ್ನು ಮೆರೆಯುತ್ತದೆ ಎಂದೇ ಭಾವಿಸಿದ್ದೇನೆ.  ಕೇಂದ್ರದಲ್ಲಿ ಮೋದಿಯವರ ಜನಪರ ಆಡಳಿತ ಯಡಿಯೂರಪ್ಪನವರಿಗೆ ಮಾರ್ಗದರ್ಶಿಯಾಗಲಿದೆ.  ಸಂಘಟನಾತ್ಮಕವಾಗಿ ಅವರು ಪಕ್ಷವನ್ನು ಮುನ್ನೆಡಿಸಿ, ಈ ಚುನಾವಣೆಯ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಅವರ ಪರಿ ಅನನ್ಯ.  
 
ಅವರ ನೇತ್ರತ್ವದ ಸರ್ಕಾರ ಭದ್ರಗೊಂಡಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಇನ್ನಷ್ಟು ಜನಸೇವೆಯ ಚೈತನ್ಯ ದೊರೆಯಲಿ ಹಾಗು ರಾಜ್ಯದ ಜನತೆಗೆ ಸುಭೀಕ್ಷೆಯ ಹಾಗು ಸುದಿನಗಳು ಆಗಮಿಸಲಿವೆ ಎಂದು ಶುಭ ಹಾರೈಸುತ್ತೇನೆ. 
 
#ಅನಂತಕುಮಾರಹೆಗಡೆ 
IC: Google

Related posts