ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಧಾನ್ಯ ಲಕ್ಷ್ಮಿ ಮನೆಗೆ ಬರುವ ಸುಗ್ಗಿ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಸಂಕ್ರಾಂತಿ. ಪ್ರತ್ಯಕ್ಷ ಭಗವಾನ್ ಸೂರ್ಯದೇವನು ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭಗಳಿಗೆ. ಇದರಿಂದ ಹಗಲು ಹೆಚ್ಚಾಗಿ, ಕತ್ತಲಿನ ಸಮಯ ಕಡಿಮೆಯಾಗುತ್ತದೆ. ಹಾಗೆಯೇ ಮಹಾಭಾರತದ ಕಥೆಯಲ್ಲಿ ಇಚ್ಛಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಈ ಸಂಕ್ರಾಂತಿಯ ಉತ್ತರಾಯಣ ಪರ್ವ ಕಾಲಕ್ಕೆ ಕಾದಿದ್ದರು ಎಂದು ಹೇಳಲಾಗುತ್ತದೆ.
ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ಹಾಗು ಅದರ ವೈಶಿಷ್ಟ್ಯವನ್ನು ನಮ್ಮ ಬದುಕಿನಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ಪ್ರಕೃತಿ ದೇವತೆಯನ್ನು ಆರಾಧಿಸುವುದೇ ಹಬ್ಬಗಳ ಪರಮಾರ್ಥ.
ರೈತರಿಗೆ ಈ ದಿನ ಶ್ರೇಷ್ಠವಾದ ದಿನ, ಇಂತಹ ಪುಣ್ಯ ಘಳಿಗೆಯಂದು ರೈತನು ತನ್ನ ಜೀವನಕ್ಕೆ ಅತ್ಯಮೂಲ ಆಧಾರವಾದ ಗೋವುಗಳನ್ನು ಸಿಂಗರಿಸಿ ಪೂಜಿಸುತ್ತಾನೆ. ವರ್ಷಪೂರ್ತಿ ಮೈಮುರಿದು ದುಡಿದ ರೈತನ ಮೊಗದಲ್ಲಿ ಮಂದಹಾಸ ಮೂಡುವ ಸಡಗರದ ಸಂದರ್ಭ. ಆದರೆ ಹಿಂದಿನಂತೆ ಸಂಭ್ರಮದ ಬದಲಾಗಿ ಇಳಿಮುಖವಾಗಿರುವ ರೈತರು ಕೃಷಿಯಮೇಲಿನ ತಮ್ಮ ಪ್ರೀತಿ ಹಾಗು ನಂಬಿಕೆ. ಈ ರೀತಿಯ ನಿರಾಸಕ್ತಿಯಿಂದ ಸಂಕ್ರಾಂತಿ ಸವಕಲಾಗುತ್ತಿದೆ ಹಾಗು ಅರ್ಥಹೀನವಾಗುತ್ತಿದೆ.
ಹೊಸ ತಂತ್ರಜ್ಞಾನದ ಜೊತೆಗೆ ಕೃಷಿಯಬಗೆಗಿನ ಹೆಚ್ಚು ಆಸಕ್ತಿ ಕೃಷಿಯನ್ನು ಮತ್ತೊಮ್ಮೆ ಉತ್ತುಂಗಕ್ಕೆ ಕೊಂಡೊಯ್ಯುವಂತಾದೀತೆಂಬುದೇ ನನ್ನ ಭಾವನೆ ಹಾಗೂ ಆಶಯ.
ಈ ಮಕರ ಸಂಕ್ರಾಂತಿಯ ಶುಭ ಪರ್ವದಂದು ಸರ್ವರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಭಾಸ್ಕರನು ತನ್ನ ಪಥ ಬದಲಾಯಿಸಿದ ಹಾಗೆ ನಿಮ್ಮ ಜೀವನದಲ್ಲಿ ಕಷ್ಟದ ಪಥ ಬದಲಾಗಿ ಸದಾ ಸುಗ್ಗಿಯ ಕಾಲ ನಮ್ಮದಾಗಲಿ ಎಂದು ಹಾರೈಸುತ್ತೇನೆ.
#ಅನಂತಕುಮಾರಹೆಗಡೆ