ಡಾ!! ಭೀಮರಾವ್ ರಾಮಜಿ ಅಂಬೇಡ್ಕರ್ ಜಯಂತಿ!!
ಇಂದು ಭೀಮ ಜಯಂತಿ
ಭಾರತರತ್ನ ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಎಂಬ ಮಹಾತ್ಮನ ೧೨೯ ನೇ ಜನ್ಮದಿನದ ಸಂಭ್ರಮ..
ಅರ್ಥಶಾಸ್ತ್ರದಲ್ಲಿ ವಿದೇಶೀ ವಿಶ್ವವಿದ್ಯಾಲಯವೊಂದರಲ್ಲಿ ಭಾರತಕ್ಕೆ ಮಾತ್ರವಲ್ಲ ಪೂರ್ತಿ ದಕ್ಷಿಣ ಏಷ್ಯಾಕ್ಕೇ ಮೊಟ್ಟಮೊದಲ ಪಿ.ಎಚ್.ಡಿ ಪದವಿ ಪಡೆದ ಮಹಾನ್ ಜ್ಞಾನಿ ಆತ. ಅಮೆರಿಕಾದ ಕೊಲಂಬಿಯನ್ ವಿಶ್ವವಿದ್ಯಾಲಯದ ಜೊತೆಗೆ ಪ್ರಖ್ಯಾತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲೂ ಅಧ್ಯಯನ ನಡೆಸಿ ಅರ್ಥ ಶಾಸ್ತ್ರದಲ್ಲಿ ಎರಡೆರಡು ಡಾಕ್ಟರೇಟ್ ಪದವಿ ಪಡೆದ ಪೂಜ್ಯ ಡಾ. ಅಂಬೇಡ್ಕರ್ ಅದೇ ಸಮಯಕ್ಕೆ ಲಂಡನ್ನಿನ ಪ್ರಖ್ಯಾತ ಕಾನೂನು ಮಹಾವಿದ್ಯಾಲಯ ಗ್ರೇಸ್ ಇನ್ನ್ ನಲ್ಲಿ ಕಾನೂನು ಓದು ಮುಗಿಸಿ ಬ್ಯಾರಿಸ್ಟರ್ ಎಟ್ ಲಾ ಪದವಿಯನ್ನೂ ಪಡೆದರು. ಅದಾದ ಬಳಿಕ ಅದೇ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಡಾಕ್ಟರ್ ಆಫ್ ಸಯನ್ಸ್ ( D.Sc) ಪದವಿಯನ್ನೂ ಪಡೆದರು. ಹೀಗೆ ಮೂರು ಡಾಕ್ಟರೇಟ್ ಪದವಿಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪೂರೈಸಿದ ಪ್ರಚಂಡ ವಿದ್ವಾಂಸರು ಅವರು. ಕೊಲಂಬಿಯಾ ವಿಶ್ವವಿದ್ಯಾಲಯ ಜಗತ್ತಿನ ಅತ್ಯಂತ ಶ್ರೇಷ್ಠರಾದ ನೂರು ವಿದ್ವಾಂಸರ ಪಟ್ಟಿ ತಯಾರಿಸಿದಾಗ ಮೊತ್ತ ಮೊದಲ ಹೆಸರು ಡಾ. ಅಂಬೇಡ್ಕರ್ ದಾಗಿತ್ತು. ಸಂಸ್ಕೃತ, ಪಾಲಿ, ಹಿಂದೀ, ಮರಾಠಿ, ಗುಜರಾತಿ, ಮುಂತಾದ ಭಾರತೀಯ ಭಾಷೆಗಳ ಜೊತೆಗೆಯೇ ಇಂಗ್ಲಿಷ್, ಫ್ರೆಂಚ್, ಜರ್ಮನ್, ಹೀಗೆ ಹಲವಾರು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದ ಬಹುಭಾಷಾ ಕೋವಿದ ಡಾ. ಅಂಬೇಡ್ಕರ್ ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕೆಂದು ಬಲವಾಗಿ ಪ್ರತಿಪಾದಿಸಿದ್ದರು. ಸಂಸ್ಕೃತವೇ ರಾಷ್ಟ್ರಭಾಷೆಯಾದರೆ ಭಾರತದ ಪುರಾತನ ಇತಿಹಾಸವನ್ನು ತಿರುಚುವ ಕೆಲಸ ಯಾರಿಂದಲೂ ಸಾಧ್ಯವಿಲ್ಲವೆಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.
ಈ ದೇಶಕ್ಕೊಂದು ಸಂಸ್ಕೃತ ಆಯೋಗದ ಬೇಕು ಎಂಬುದನ್ನು ಪ್ರತಿಪಾದಿಸಿದ್ದು ಕೂಡಾ ಬಾಬಾ ಸಾಹೇಬರೇ. ಭಾರತ ದೇಶವನ್ನು ಭಾಷಾವಾರು ರಾಜ್ಯಗಳನ್ನಾಗಿ ವಿಂಗಡಿಸಬೇಕೆಂದು ಪ್ರತಿಪಾದಿಸಿದ್ದ ಬಾಬಾ ಸಾಹೇಬ ಆ ಬಗ್ಗೆ "ಥಾಟ್ಸ್ ಆನ್ ಲಿಂಗ್ವಿಸ್ಟಿಕ್ ಸ್ಟೇಟ್ಸ್ " ಎಂಬ ಒಂದು ಪುಸ್ತಕವನ್ನೇ ಬರೆದಿದ್ದರು. ಭಾಷಾ ವಿಜ್ಞಾನಿಯೂ ಆಗಿದ್ದ ಡಾ. ಅಂಬೇಡ್ಕರ್. ಪಾಲಿ - ಇಂಗ್ಲಿಷ್ ನಿಘಂಟನ್ನೂ ರಚಿಸಿದ್ದಾರೆ. ಭಾರತದ ವಿತ್ತ ಆಯೋಗ ಸ್ಥಾಪನೆಯನ್ನು ಮಾಡಿದ್ದೂ ಕೂಡಾ ಭಾರತದ ಎರಡನೆಯ ಅರ್ಥಶಾಸ್ತ್ರಜ್ಞ ಡಾ. ಅಂಬೇಡ್ಕರ್. ೧೯೩೫ ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ರೂಪುರೇಷೆ ಹಾಕಿಕೊಟ್ಟವರೇ ಡಾ. ಅಂಬೇಡ್ಕರ್. ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿ ಗಾಂಧೀಜಿಯ ಚರಕದ ಬದಲಿಗೆ ನೀಲಿ ಬಣ್ಣದಲ್ಲಿ ಅಶೋಕನ ಧರ್ಮಚಕ್ರ ಇರುವಂತೆ ಮಾಡಿದ್ದೂ ಕೂಡಾ ಡಾ.ಅಂಬೇಡ್ಕರ್. ಅಷ್ಟೇ ಅಲ್ಲ ಅವರು ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಪರಿಸರ ತಜ್ಞರೂ ಆಗಿದ್ದರು. ಭಾರತದ ಮೊಟ್ಟಮೊದಲ ಜಲ ಸಂರಕ್ಷಣಾ ನೀತಿಯನ್ನು ನಿರೂಪಿಸುವಲ್ಲಿಯೂ ಅಂಬೇಡ್ಕರ್ ಕಾಣಿಕೆ ಬಹಳ ದೊಡ್ಡದು. ಹಾಗಾಗಿ ಭಾರತರತ್ನ ಬಾಬಾಸಾಹೇಬ ಕೇವಲ ಓರ್ವ ಕಾನೂನು ತಜ್ಞ ಮತ್ತು ಸಂವಿಧಾನ ತಜ್ಞ ಮಾತ್ರ ಆಗಿರಲಿಲ್ಲ ಬದಲಿಗೆ ಬಹುಶಾಸ್ತ್ರ ಪಾರಂಗತರಾದ ನಮ್ಮ ದೇಶದ ನಿಜವಾದ ಪಂಡಿತನಾಗಿದ್ದರು.
ಇವತ್ತು ಇಂಥಾ ಪ್ರಖಾಂಡ ಬುದ್ಧಿಮತ್ತೆಯ ಅಸಾಮಾನ್ಯ ಪಂಡಿತೋತ್ತಮ ಜನಿಸಿದ ಪುಣ್ಯ ದಿನ. ಆ ಮಹಾತ್ಮನನ್ನೂ ಮತ್ತು ಈ ದೇಶಕ್ಕೆ ಆತ ನೀಡಿದ ಕೊಡುಗೆಗಳನ್ನೂ ಸ್ಮರಿಸೋಣ..... .... ಜೈ ಭೀಮ್
#ಅನಂತಕುಮಾರಹೆಗಡೆ