Infinite Thoughts

Thoughts beyond imagination

ಇಂದು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ

ಇಂದು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ.... 

ಈ ವಿಷಮ ಸ್ಥಿತಿಯ ಮಧ್ಯೆ ಅತ್ಯಂತ ಶುಭಪ್ರದ ಸುದಿನ... 

ವೈಶಾಖ ಮಾಸದ ಶುಕ್ಲ ಪಕ್ಷದ ಇವತ್ತಿನ ದಿನವನ್ನು "ಅಕ್ಷಯ ತೃತೀಯ" ಅಂತನ್ನೋ ಹೆಸರಿನಿಂದ ಕರೆಯುತ್ತಾರೆ... ಅಕ್ಷಯ ಅಂದರೆ ಕ್ಷಯವಿಲ್ಲದ್ದು ಅಂತ ಅರ್ಥ... ಅಂದರೆ ಈ ದಿನ ಯಾವುದೇ ವಸ್ತು ಕೊಂಡರೂ ಅದು ಕ್ಷಯವಾಗದೆ ವೃದ್ಧಿಯಾಗುತ್ತದೆ ಎಂಬುದು ಪ್ರತೀತಿ. ಹಾಗಾಗಿಯೇ ಇವತ್ತಿನ ದಿನ ಎಲ್ಲರೂ ಬಂಗಾರದ ಆಭರಣ ಕೊಳ್ಳುತ್ತಾರೆ. ಅಂದ ಹಾಗೆ ಈ ಬಾರಿಯ ಅಕ್ಷಯ ತೃತೀಯದ ದಿನ ಇನ್ನೆರಡು ವಿಶೇಷವಾದ ದಿನಗಳೂ ಮೇಳೈಸಿವೆ.

ರೇಣುಕಾ ದೇವಿ ಮತ್ತು  ಜಮದಗ್ನಿ ಮಹರ್ಷಿಯ ಪುತ್ರರಾಗಿ ಜನಿಸಿದ ಪರಶುರಾಮ ಭಗವಾನ್ ವಿಷ್ಣುವಿನ ದಶಾವತಾರದಲ್ಲಿ ಆರನೆಯ ಅವತಾರ. ಸಪ್ತ ಅಮರ್ತ್ಯರ ಪೈಕಿ ಓರ್ವರಾದ ಪರಶುರಾಮ ಬ್ರಾಹ್ಮಣರಾಗಿ ಜನಿಸಿದರೂ ಕ್ಷತ್ರಿಯರಂತೆ ಯುದ್ಧವಿದ್ಯಾ ಪಾರಂಗತರಾಗಿ ಮಹಾನ್ ಪರಾಕ್ರಮಿಯಾದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರು ಪಡೆದವರು. ಇವತ್ತು ಅವರ ಜನ್ಮ ಜಯಂತಿ.  

ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ೧೧೩೪ ರಲ್ಲಿ ಜನಿಸಿದ ಬಸವಣ್ಣ ಮಹಾನ್ ಜ್ಞಾನಿ, ಜಾತಿ ಮತ ಲಿಂಗ ಬೇಧಗಳನ್ನು ತಿರಸ್ಕರಿಸಿ ಸಮಾನತೆಯನ್ನು ಸಾರಿ ಕ್ರಾಂತಿಯೋಗಿಯಾದರು. ಕೂಡಲ ಸಂಗಮನ ಆರಾಧಕರಾಗಿ ಭಕ್ತಿ ಭಂಡಾರಿಯೆನಿಸಿಕೊಂಡರು. ವಚನಗಳೆಂಬ ವಿಶಿಷ್ಟ ಆಧ್ಯಾತ್ಮಿಕ ಸಾಹಿತ್ಯ ಪ್ರಕಾರದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಮೌಲಿಕ ಕೊಡುಗೆ ಕೊಟ್ಟರು. ಹನ್ನೆರಡನೆಯ ಶತಮಾನದಲ್ಲಿಯೇ ಅನುಭವ ಮಂಟಪವೆಂಬ ಅಪೂರ್ವ ಪರಿಕಲ್ಪನೆಯಿಂದ ಪ್ರಜಾಪ್ರಭುತ್ವದ ಮೊದಲ ಅಡಿಪಾಯ ಹಾಕಿದರು. ಇವತ್ತು ಅವರ ಜನ್ಮ ಜಯಂತಿ. 

ಭಗವಾನ್ ಪರಶುರಾಮ ಮತ್ತು ಭಕ್ತಿ ಭಂಡಾರಿ ಬಸವಣ್ಣ ಇಬ್ಬರೂ ಜನಿಸಿದ್ದು ನಮ್ಮ ಹೆಮ್ಮೆಯ ಕರುನಾಡಿನಲ್ಲೇ.... ಹಾಗಾಗಿ ಇವತ್ತಿನ ಈ ಶುಭದಿನ ಈ ಇಬ್ಬರೂ ಮಹನೀಯ ಮಹಾಮಹಿಮರನ್ನು ಶ್ರದ್ಧಾ ಭಕ್ತಿಯಿಂದ ಸ್ಮರಿಸಿ ಅಕ್ಷಯ ತೃತೀಯದ ಈ ಶುಭ ದಿನದಂದು ಪೂರ್ತಿ ಜಗತ್ತನ್ನೇ ಆವರಿಸಿರುವ ವಿಪತ್ಕಾರೀ ಮಹಾಮಾರಿ ಕೊರೋನಾದ ಸೋಂಕಿನಿಂದ ಸರ್ವರೂ ಪಾರಾಗಲಿ... ಎಲ್ಲರಿಗೂ ಅಕ್ಷಯವಾದ ಅರೋಗ್ಯ ಭಾಗ್ಯ ಲಭಿಸಲಿ ಅಂತ ಪ್ರಾರ್ಥಿಸೋಣ....

#ಅನಂತಕುಮಾರಹೆಗಡೆ

Related posts