ಇಂದು ಶಂಕರ - ರಾಮಾನುಜರ ಜಯಂತಿಯ ದಿನ
ಇಂದು ಶಂಕರ - ರಾಮಾನುಜರ ಜಯಂತಿಯ ದಿನ
ಶ್ರೇಷ್ಠ ಆಚಾರ್ಯದ್ವಯರ ಸಂಭ್ರಮದ ಜನುಮದಿನ
ಈ ದಿನ ಅತ್ಯಂತ ವಿಶೇಷವಾದ ದಿನ. ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಇಬ್ಬರು ಶ್ರೇಷ್ಠ ಆಚಾರ್ಯರ ಜಯಂತಿಯ ದಿನ. ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ರಾಮಾನುಜಾಚಾರ್ಯರ ಜಯಂತಿಗಳು ಒಂದೇ ದಿನ ಮೇಳೈಸಿದೆ.
ಎಂಟನೆಯ ಶತಮಾನದಲ್ಲಿ ಜನಿಸಿದ ಶ್ರೀ ಶಂಕರಾಚಾರ್ಯರದು ೧೨೩೨ನೇ ಜನುಮ ಜಯಂತಿಯಾದರೆ, ಹನ್ನೊಂದನೆಯ ಶತಮಾನದಲ್ಲಿ ಜನಿಸಿದ ಶ್ರೀ ರಾಮಾನುಜಾಚಾರ್ಯರದು ೧೦೦೩ನೇ ಜನುಮ ಜಯಂತಿ. ಈ ಇಬ್ಬರೂ ಪರಮ ಶ್ರೇಷ್ಠ ಆಚಾರ್ಯರಿಗೂ ನಮ್ಮ ಕರುನಾಡಿಗೂ ಒಂದು ವಿಶಿಷ್ಟವಾದ ನಂಟಿದೆ.
ಆಚಾರ್ಯ ಶಂಕರರು ಕೇರಳದ ಕಾಲಡಿಯಲ್ಲಿ ಜನಿಸಿ ಬಳಿಕ ಭಾರತದಾದ್ಯಂತ ಸಂಚರಿಸಿ ಹಿಂದೂ ಧರ್ಮದ ಪುನರುತ್ಥಾನಕ್ಕೆಂದೇ ದೇಶದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಉತ್ತರಾಮ್ನಾಯ ಪೀಠವನ್ನು ಬದರಿಯಲ್ಲೂ, ಪೂರ್ವಾಮ್ನಾಯ ಪೀಠವನ್ನು ಪುರಿಯಲ್ಲೂ, ಪಶ್ಚಿಮಾಮ್ನಾಯ ಪೀಠವನ್ನು ದ್ವಾರಕೆಯಲ್ಲೂ ಸ್ಥಾಪಿಸಿದ ಶ್ರೀ ಶಂಕರ ಭಗವತ್ಪಾದರು ದಕ್ಷಿಣಾಮ್ನಾಯ ಪೀಠ ಸ್ಥಾಪನೆಗೆ ಆಯ್ದುಕೊಂಡದ್ದು ನಮ್ಮ ರಾಜ್ಯ ಕರುನಾಡಿನ, ಅದರಲ್ಲೂ ನಮ್ಮಶೃಂಗೇರಿಯನ್ನು! ಇದು ನಮ್ಮ ಭಾಗ್ಯ ವಿಶೇಷ...!
ಆಚಾರ್ಯ ರಾಮಾನುಜರು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜನಿಸಿ ಬಳಿಕ ವೇದಾಂತವನ್ನು ಆಳವಾಗಿ ಅಭ್ಯಸಿಸಿ, ಅದ್ವೈತ ಸಿದ್ಧಾಂತವನ್ನೊಪ್ಪದೆ ತನ್ನದೇ ಆದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿದರು. ಆದರೆ ತಮ್ಮ ಜೀವನದ ಒಂದು ಹಂತದಲ್ಲಿ ತಮಿಳುನಾಡಿನ ಚೋಳ ರಾಜ್ಯವನ್ನು ತೊರೆದ ಆಚಾರ್ಯರು ಕರ್ನಾಟಕಕ್ಕೆ ಬಂದು ಇಲ್ಲಿನ ಹೊಯ್ಸಳ ರಾಜ್ಯದಲ್ಲಿ ಹದಿನಾಲ್ಕು ವರ್ಷಗಳ ಕಾಲ ಇದ್ದು ಇಲ್ಲಿಯೂ ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತ ವನ್ನು ನೆಲೆಗೊಳಿಸಿದರು. ಮೇಲುಕೋಟೆಯಲ್ಲಿನ ಚೆಲುವನಾರಾಯಣ ಸ್ವಾಮಿ ದೇವಾಲಯ ಸ್ಥಾಪಿಸಿದ್ದು ರಾಮಾನುಜರೇ...
ಹೀಗೆ ಈ ಇಬ್ಬರೂ ಆಚಾರ್ಯ ಶ್ರೇಷ್ಠರಿಗೆ ನಮ್ಮ ಕರುನಾಡಿನ ಜೊತೆಗೊಂದು ಅವಿನಾಭಾವ ಸಂಬಂಧ ಇದೆ....
ಇಂದು ಅವರಿಬ್ಬರ ಜನ್ಮ ಜಯಂತಿಯ ಶುಭಸಂದರ್ಭದಲ್ಲಿ ಈ ಆಚಾರ್ಯ ಶ್ರೇಷ್ಠರನ್ನು ಸ್ಮರಿಸುತ್ತಾ ಅವರಿಗೆ ಶತಕೋಟಿ ಪ್ರಣಾಮಗಳನ್ನರ್ಪಿಸುತ್ತೇನೆ.....